"ನಿಹಾರಿಕಾ ಡಿವೋರ್ಸ್, ತಪ್ಪು ನಂದೇ, ಮಗಳಿಗೆ ಮತ್ತೆ ಮದುವೆ ಮಾಡ್ತೀನಿ"- ನಾಗಬಾಬು
ತೆಲುಗು ನಟ ಚಿರಂಜೀವಿ ಸಹೋದರ ನಾಗಬಾಬು ಕೂಡ ಸಿನಿರಸಿಕರಿಗೆ ಚಿರಪರಿಚಿತ. ಕನ್ನಡ ಸಿನಿಮಾದಲ್ಲಿ ಕೂಡ ಬಣ್ಣ ಹಚ್ಚಿದ್ದಾರೆ. ನಾಗಬಾಬು ಪುತ್ರಿ ನಿಹಾರಿಕಾ ಕೂಡ ಬಣ್ಣದಲೋಕದಲ್ಲಿ ಗುರ್ತಿಸಿಕೊಂಡಿದ್ದಾರೆ. ಚೈತನ್ಯಾ ಜೊನ್ನಲಗಡ್ಡ ಎಂಬುವವರ ಕೈಹಿಡಿದಿದ್ದ ನಿಹಾರಿಕಾ ಬಳಿಕ ಡಿವೋರ್ಸ್ ಪಡೆದಿದ್ದರು.
ಮಗಳು ನಿಹಾರಿಕಾ ಡಿವೋರ್ಸ್ ಬಗ್ಗೆ ಇದೀಗ ನಾಗಬಾಬು ಪ್ರತಿಕ್ರಿಯಿಸಿದ್ದಾರೆ. ಆ ವಿಚಾರದಲ್ಲಿ ನಮ್ಮದೇ ತಪ್ಪಿದೆ ಎಂದಿದ್ದಾರೆ. ಒಂದೆರಡು ಸಿನಿಮಾಗಳಲ್ಲಿ ನಟಿಸಿದ್ದ ನಿಹಾರಿಕಾ 5 ವರ್ಷಗಳ ಹಿಂದೆ ಅರೇಂಜ್ಡ್ ಮ್ಯಾರೇಜ್ ಆಗಿದ್ದರು. ರಾಜಸ್ಥಾನದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ನಡೆದಿತ್ತು. ಕೆಲವೇ ಆಪ್ತರು ಈ ಕಲ್ಯಾಣೋತ್ಸವದಲ್ಲಿ ಭಾಗಿ ಆಗಿದ್ದರು.

ಗುಂಟೂರು ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಪ್ರಭಾಕರ ರಾವ್ ಜೊನ್ನಲಗಡ್ಡ ಪುತ್ರ ಚೈತನ್ಯಾ. ಹಿರಿಯರು ನಿಶ್ಚಯಿಸಿದ್ದ ಮದುವೆ ಇದು. ನಿಹಾರಿಕಾ ಕೂಡ ಒಪ್ಪಿ ಮದುವೆ ಆಗಿದ್ದರು. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಬಳಿಕ ಇಬ್ಬರೂ ದೂರಾಗುವ ನಿರ್ಧಾರಕ್ಕೆ ಬಂದಿದ್ದರು. ಮೊದಲಿಗೆ ಸೋಶಿಯಲ್ ಮೀಡಿಯಾದಲ್ಲಿ ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡಿದ್ದರು. ಫೋಟೊಗಳನ್ನು ಡಿಲೀಟ್ ಮಾಡಿದ್ದರು. ಬಳಿಕ ಡಿವೋರ್ಸ್ ಕೋರಿ ಕೋರ್ಟ್ ಮೆಟ್ಟಿಲೇರಿದ್ದರು.
ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಡಿವೋರ್ಸ್ ಬಗ್ಗೆ ನಿಹಾರಿಕಾ ಪೋಸ್ಟ್ ಮಾಡಿದ್ದರು. ಬಳಿಕ ಸಂದರ್ಶನಗಳಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ್ದರು. ಎರಡನೇ ಮದುವೆ ಬಗ್ಗೆಯೂ ಮೌನ ಮುರಿದಿದ್ದರು. ಇದೀಗ ಮಗಳ ಡಿವೋರ್ಸ್ ಬಗ್ಗೆ ಸಂದರ್ಶನವೊಂದರಲ್ಲಿ ನಾಗಬಾಬು ಪ್ರತಿಕ್ರಿಯಿಸಿದ್ದಾರೆ. ಮಕ್ಕಳ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಪೋಷಕರು ಇರಬೇಕು. ಅವರ ಮೇಲೆ ಒತ್ತಡ ಹೇರಬಾರದು. ಅವರು ಸರಿ ಅನ್ನಿಸಿದ್ದನ್ನು ಮಾಡಲು ಬಿಡಬೇಕು. ನಾನು ನನ್ನ ಮಕ್ಕಳ ವಿಚಾರದಲ್ಲಿ ಇದೇ ರೀತಿ ಇರ್ತೀನಿ ಎಂದಿದ್ದಾರೆ.

"ನಿಹಾರಿಕಾ ಮದುವೆ ವಿಚಾರದಲ್ಲಿ ತಪ್ಪು ನಮ್ಮದೇ. ನಮ್ಮ ಜಡ್ಜ್‌ಮೆಂಟ್ ಸರಿ ಇರಲಿಲ್ಲ. ಯಾಕೋ ಅವರಿಬ್ಬರಿಗೆ ಸಿಂಕ್ ಆಗಲಿಲ್ಲ. ಇಬ್ಬರೂ ಪರಸ್ಪರ ಒಪ್ಪಿ ಡಿವೋರ್ಸ್ ಪಡೆದರು. ಮದುವೆಗೆ ಹುಡುಗನನ್ನು ತೋರಿಸಿದ್ದು ನಾವೇ. ಆಕೆ ಕೂಡ ಒಪ್ಪಿದ್ದಳು. ಆದರೆ ಬಳಿಕ ದೂರಾದರು. ನಾನು ಅವರಿಬ್ಬರನ್ನು ಒಂದು ಮಾಡಲು ಯಾವುದೇ ಸಂಧಾನ ಮಾಡುವ ಗೋಜಿಗೆ ಹೋಗಲಿಲ್ಲ. ಹೋಗುವುದು ಇಲ್ಲ. ಇಬ್ಬರೂ ಒಟ್ಟಿಗಿರಲು ಸಾಧ್ಯವಿಲ್ಲ ಎಂದರು. ಸರಿ ಎಂದು ಒಪ್ಪಿಕೊಂಡೆ" ಎಂದು ನಾಗಬಾಬು ಹೇಳಿದ್ದಾರೆ.
ಸದ್ಯ ನಿಹಾರಿಕಾ ನಿರ್ಮಾಪಕಿಯಾಗಿ ಸಿನಿಮಾ, ವೆಬ್ ಸೀರಿಸ್ ಮಾಡುತ್ತಿದ್ದಾಳೆ. ಮುಂದಿನ ದಿನಗಳಲ್ಲಿ ಒಳ್ಳೆ ಹುಡುಗನನ್ನು ನೋಡಿ ಮದುವೆ ಮಾಡಿಕೊಳ್ಳುತ್ತಾಳೆ ಎಂದು ನಾಗಬಾಬು ತಿಳಿಸಿದ್ದಾರೆ. ಮಗ ವರುಣ್ ಹಾಗೂ ನಟಿ ಲಾವಣ್ಯ ಬಂದು ಇಬ್ಬರೂ ಮದುವೆ ಆಗ್ತೀವಿ ಎಂದಾಗ ಆಕೆ ಜೊತೆ ನೀನು ಸಂತೋಷವಾಗಿ ಇರ್ತೀಯಾ? ಭವಿಷ್ಯದಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲ ಅಲ್ವಾ? ಎಂದು ಕೇಳಿದ್ದೆ. ಇಲ್ಲ, ಖುಷಿಯಾಗಿ ಇರ್ತೀವಿ ಎಂದರು. ಮದುವೆ ಮಾಡ್ದೆ. ಅವರಿಬ್ಬರ ಜೀವನ ಚೆನ್ನಾಗಿದೆ ಎಂದು ನಾಗಬಾಬು ವಿವರಿಸಿದ್ದಾರೆ.
ಚಿರಂಜೀವಿ ಸಹೋದರ ನಾಗಬಾಬು ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಪೋಷಕ ಪಾತ್ರಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಮತ್ತೊಬ್ಬ ಸಹೋದರ ಪವನ್ ಕಲ್ಯಾಣ್ ರಾಜಕೀಯರಂಗದಲ್ಲಿ ಗುರ್ತಿಸಿಕೊಂಡಿದ್ದು ಆಂಧ್ರ ಡಿಸಿಎಂ ಆಗಿದ್ದಾರೆ. ನಾಗಬಾಬು ಕೂಡ ಪವನ್ ಕಲ್ಯಾಣ್ ಜೊತೆ ರಾಜಕೀಯರಂಗದಲ್ಲಿ ಕೈ ಜೋಡಿಸಿದ್ದಾರೆ. ಜನಸೇನಾ ಪಕ್ಷದಲ್ಲಿ ಗುರ್ತಿಸಿಕೊಂಡಿದ್ದಾರೆ.
ಕನ್ನಡದಲ್ಲಿ 'ಧೈರ್ಯ', 'ಹಬ್ಬ' ಹಾಗೂ 'ಕೆಂಪೇಗೌಡ-2' ಸಿನಿಮಾಗಳಲ್ಲಿ ನಾಗಬಾಬು ನಟಿಸಿದ್ದಾರೆ. ಇನ್ನು ನಿರ್ಮಾಪಕರಾಗಿ ತೆಲುಗಿನಲ್ಲಿ ಕೆಲ ಸಿನಿಮಾಗಳನ್ನು ನಿರ್ಮಿಸಿದ್ದಾರೆ. 'ರುದ್ರವೀಣ', 'ಮುಗ್ಗುರು ಮುನಗಾಳ್ಲು', 'ಭಾವಗಾರು ಬಾಗುನ್ನಾರಾ?', 'ಸ್ಟಾಲಿನ್' ಹಾಗೂ 'ಆರೆಂಜ್' ಅವರು ನಿರ್ಮಿಸಿ ಚಿತ್ರಗಳು.


Click it and Unblock the Notifications











