ಸೋತು ಸುಣ್ಣವಾಗಿರುವ ಸನ್‌ರೈಸರ್ಸ್ ಪರ ಆಡಿ ಗೆಲ್ಲಿಸುತ್ತೇನೆ ತಂಡಕ್ಕೆ ಸೇರಿಸಿಕೊಳ್ಳಿ ಎಂದ ನಟ ನಾನಿ!

ಸದ್ಯ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಜರುಗುತ್ತಿದ್ದು, ಸದ್ಯ ಟೂರ್ನಿ ಶುರುವಾಗಿ ವಾರ ಮಾತ್ರ ಕಳೆದಿದೆ. ಮೊದಲ ವಾರದಲ್ಲಿ ಕೆಲ ತಂಡಗಳು ಮೂರು ಪಂದ್ಯಗಳನ್ನು ಆಡಿದ್ದರೆ, ಕೆಲ ತಂಡಗಳು ಕೇವಲ ಎರಡು ಪಂದ್ಯಗಳನ್ನು ಆಡಿವೆ. ಈ ಪೈಕಿ ತೆಲುಗು ರಾಜ್ಯಗಳ ತಂಡವಾದ ಸನ್ ರೈಸರ್ಸ್ ಹೈದರಾಬಾದ್ ಎರಡು ಪಂದ್ಯಗಳನ್ನು ಆಡಿ ಎರಡೂ ಪಂದ್ಯಗಳಲ್ಲಿಯೂ ಸೋತು ಮಕಾಡೆ ಮಲಗಿದೆ.
ಹೌದು, ರಾಜಸ್ಥಾನ್ ರಾಯಲ್ಸ್ ವಿರುದ್ಧ 72 ರನ್‌ಗಳ ಹೀನಾಯ ಸೋಲನ್ನು ಕಂಡ ಸನ್ ರೈಸರ್ಸ್ ಹೈದರಾಬಾದ್ ತಂಡ ತನ್ನ ಎರಡನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ವಿರುದ್ಧವೂ ಸಹ ಹೀನಾಯ ಸೋಲನ್ನು ಕಂಡಿದೆ. ಹೀಗೆ ಆಡಿರುವ ಎರಡು ಪಂದ್ಯಗಳ ಪೈಕಿ ಎಲ್ಲವನ್ನೂ ಸಹ ಸೋತು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ ಸನ್ ರೈಸರ್ಸ್ ಹೈದರಾಬಾದ್.
ಇನ್ನು ಸನ್ ರೈಸರ್ಸ್ ಹೈದರಾಬಾದ್ ತಂಡದ ಮಾಲೀಕತ್ವವನ್ನು ಸನ್ ಟಿವಿ ನೆಟ್‌ವರ್ಕ್ಸ್ ಸಂಸ್ಥೆಯ ಮಾಲೀಕರು ಹೊಂದಿದ್ದು, ಕಳೆದ ಹಲವಾರು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗಳಲ್ಲಿ ತಂಡ ಮಕಾಡೆ ಮಲಗಿದೆ. ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಆರಂಭದ ಎರಡೂ ಪಂದ್ಯಗಳನ್ನು ಸೋತು ಕೆಟ್ಟ ಆರಂಭ ಪಡೆದುಕೊಂಡಿರುವ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ದಸರಾ ಚಿತ್ರತಂಡದ ನಿರ್ಮಾಪಕರು ಆಫರ್ ನೀಡಿದ್ದಾರೆ.
ಹೌದು, ನಾನಿ ನಟನೆಯ ಸೂಪರ್ ಬ್ಲಾಕ್‌ಬಸ್ಟರ್ ಚಿತ್ರ ದಸರಾ ಚಿತ್ರಕ್ಕೆ ಬಂಡವಾಳ ಹೂಡಿರುವ ಎಸ್ ಎಲ್ ವಿ ಸಿನಿಮಾಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಚಿತ್ರದ ನಾಯಕ ನಾನಿ ನಿರ್ವಹಿಸಿರುವ ಧರಣಿ ಪಾತ್ರದ ದೃಶ್ಯವೊಂದನ್ನು ಹಂಚಿಕೊಂಡಿದ್ದು, ಈತನನ್ನು ನಿಮ್ಮ ತಂಡಕ್ಕೆ ಸೇರಿಸಿಕೊಳ್ತೀರ ಎಂದು ಆಫರ್ ನೀಡಿದ್ದಾರೆ. "ಯಾರಾದರೂ ನಮ್ಮ ಧರಣಿನ್ನು ತಂಡಕ್ಕೆ ಸೇರಿಸಿಕೊಳ್ಳಲು ಇಚ್ಛಿಸುತ್ತಿದ್ದೀರ? ಸನ್ ರೈಸರ್ಸ್ ಹೈದರಾಬಾದ್ ತಂಡದವರೇ ಇಂಪ್ಯಾಕ್ಟ್ ಪ್ಲೇಯರ್‌ಗಾಗಿ ಎದುರು ನೋಡ್ತಿದ್ದೀರ? ಈತ ಈಗಷ್ಟೇ ಬಾಕ್ಸ್ ಆಫೀಸ್‌ನಲ್ಲಿ ಶತಕ ಬಾರಿಸಿದ್ದಾನೆ" ಎಂದು ಬರೆದುಕೊಂಡು ಟ್ವೀಟ್ ಮಾಡಿದೆ.
ಈ ಮೂಲಕ ತಮ್ಮ ಚಿತ್ರ ಈಗಷ್ಟೇ ಶತಕ ಬಾರಿಸಿರುವುದನ್ನು ಚಿತ್ರತಂಡ ಹೇಳಿಕೊಂಡಿದ್ದು, ಚಿತ್ರದಲ್ಲಿ ನಾಯಕ ಧರಣಿ ಕ್ರಿಕೆಟರ್ ಆಡುವುದರಲ್ಲಿ ನಿಸ್ಸೀಮನಾಗಿರುವುದರಿಂದ ಈ ರೀತಿ ಟ್ವೀಟ್ ಮಾಡಲಾಗಿದೆ. ಹೌದು, ವೀರ್ಲಪಲ್ಲಿ ಎಂಬ ಗ್ರಾಮದ ನಿವಾಸಿಯಾಗಿರುವ ನಾಯಕ ಧರಣಿ ಕಲ್ಲಿದ್ದಲು ಕದ್ದು, ಕೂಲಿ ಮಾಡಿ ಬದುಕುವ ಬಡ ಹಳ್ಳಿ ಹೈದ. ಈತ ತನ್ನ ಸ್ನೇಹಿತ ಸೂರಿಗಾಗಿ ಏನನ್ನು ಬೇಕಾದರೂ ಮಾಡುವವ. ಸ್ನೇಹಕ್ಕೆ ಅಷ್ಟು ಬೆಲೆ ಕೊಡುವ ಧರಣಿ ತನ್ನ ಸ್ನೇಹಿತನ ಒಳಿತಿಗಾಗಿ ಪಂದ್ಯ ಗೆಲ್ಲಲೇಬೇಕಾದಾಗ ಮೈದಾನದಲ್ಲಿ ಬ್ಯಾಟ್ ಹಿಡಿದು ಸಿಕ್ಸರ್, ಬೌಂಡರಿಗಳನ್ನು ಚಚ್ಚಿ ಪಂದ್ಯವನ್ನು ಗೆಲ್ಲಿಸಿರುತ್ತಾನೆ.
ಮದ್ಯಪಾನ ಮಾಡಿ, ಮೈದಾನದಲ್ಲಿಯೇ ಬೀಡಿ ಹಚ್ಚಿ ಎರ್ರಾಬಿರ್ರಿ ಬ್ಯಾಟ್ ಬೀಸಿದ್ದ ಧರಣಿ ಪಾತ್ರ ನಿರ್ವಹಿಸಿದ್ದ ನಾನಿ ಸಹ ಈ ಟ್ವೀಟ್ ಅನ್ನು ಶೇರ್ ಮಾಡಿಕೊಂಡಿದ್ದು, ಏನಂತೀರ ಸನ್ ರೈಸರ್ಸ್ ಹೈದರಾಬಾದ್? ಮೈದಾನದಲ್ಲಿ ಖಂಡಿತವಾಗಿಯೂ ಧೂಮಪಾನ ಮಾಡುವುದಿಲ್ಲ, ಪ್ರಾಮಿಸ್ ಎಂದು ಟ್ವೀಟ್ ಮಾಡಿದ್ದಾರೆ. ಸದ್ಯ ಈ ಟ್ವೀಟ್ ತೆಲುಗು ಸಿನಿ ರಸಿಕರು ಹಾಗೂ ಕ್ರಿಕೆಟ್ ಪ್ರೇಮಿಗಳಿಗೆ ಮೋಜು ನೀಡುತ್ತಿದ್ದು ನೆಟ್ಟಿಗರು ಭಿನ್ನ ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡಿ ಮನರಂಜನೆ ತೆಗೆದುಕೊಳ್ಳುತ್ತಿದ್ದಾರೆ.


Click it and Unblock the Notifications











