Vijayashanthi: 'ಕಮಲ' ಎಸೆದು 'ಕೈ' ಹಿಡಿದ ನಟಿ ವಿಜಯಶಾಂತಿ, ಮುಂದಿನ ನಡೆಯೇನು?
ಬಿಜೆಪಿಯ ಮಾಜಿ ನಾಯಕಿ, ಟಾಲಿವುಡ್ ನಟಿ ವಿಜಯಶಾಂತಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಈಗಾಗಲೇ ಬಿಜೆಪಿಗೆ ಗುಡ್ ಬೈ ಹೇಳಿರುವ ವಿಜಯಶಾಂತಿ ತೆಲಂಗಾಣಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷದ ವರಿಷ್ಠ ಮಲ್ಲಿಕಾರ್ಜುನ ಖರ್ಗೆ ಅವರ ಸಮ್ಮುಖದಲ್ಲಿ 'ಕೈ' ಹಿಡಿದಿದ್ದಾರೆ.
ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿಜಯಶಾಂತಿ ಅವರಿಗೆ ಶಾಲು ಹೊದ್ದಿಸಿ ಮತ್ತೆ ಪಕ್ಷಕ್ಕೆ ಆಹ್ವಾನಿಸಿದ್ದಾರೆ. ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿ ಕೆಲಸ ಮಾಡಿದ್ದ ಲೇಡಿ ಸೂಪರ್ ಸ್ಟಾರ್, ತೆಲಂಗಾಣ ರಾಜ್ಯ ಚುನಾವಣೆಗೆ ಸಿದ್ಧವಾಗುತ್ತಿರುವ ಹೊತ್ತಿನಲ್ಲೆ ಮತ್ತೊಮ್ಮೆ ತಮ್ಮದೇ ತಂಡ ಸೇರಿದ್ದಾರೆ. ಇದರಿಂದ ಕಾಂಗ್ರೆಸ್‌ಗೆ ಮತ್ತಷ್ಟು ಬಲ ಬಂದಿದೆ.

ಚುನಾವಣೆಗೆ ಸಿದ್ಧವಾಗುತ್ತಿರುವ ಕಾಂಗ್ರೆಸ್ 'ತೆಲಂಗಾಣ ಚುನಾವಣೆ'ಗೆ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಇದೇ ಕಾರಣಕ್ಕೆ ಮಲ್ಲಿಕಾರ್ಜುನ ಖರ್ಗೆ ಹೈದರಾಬಾದ್‌ಗೆ ಬಂದಿದ್ದರು. ಗಾಂಧಿ ಭವನದಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದ ಬಳಿಕ ಬಂಜಾರ ಹಿಲ್ಸ್‌ನ ತಾಜ್ ಕೃಷ್ಣ ಹೋಟೆಲ್‌ನಲ್ಲಿ ಇದ್ದ ಮಲ್ಲಿಕಾರ್ಜುನ ಖರ್ಗೆ ಅವರನ್ನು ವಿಜಯಶಾಂತಿ ಭೇಟಿ ಮಾಡಿದರು.
2020 ರಲ್ಲಿ ಕಾಂಗ್ರೆಸ್ ತೊರೆದಿದ್ದ ನಟಿ ವಿಜಯಶಾಂತಿ
ತೆಲಂಗಾಣ ರಾಜಕೀಯಕ್ಕೆ "ಲೇಡಿ ಸೂಪರ್ ಸ್ಟಾರ್" ಮತ್ತು "ಲೇಡಿ ಅಮಿತಾಭ್" ಎಂದು ಕರೆಯಲ್ಪಡುವ ನಟಿ ವಿಜಯಶಾಂತಿ ಅವರು 1997 ರಲ್ಲಿ ಬಿಜೆಪಿಯೊಂದಿಗೆ ತಮ್ಮ ರಾಜಕೀಯ ವೃತ್ತಿಜೀವನವನ್ನು ಪ್ರಾರಂಭಿಸಿದಾಗ ದಕ್ಷಿಣ ಭಾರತದ ಚಿತ್ರರಂಗದಲ್ಲಿ ದೊಡ್ಡ ತಾರೆಯಾಗಿದ್ದರು. ಅವರು ಪ್ರತ್ಯೇಕ ತೆಲಂಗಾಣಕ್ಕಾಗಿ ಹೋರಾಟದ ಸಮಯದಲ್ಲಿ ಪಕ್ಷವನ್ನು ತೊರೆದು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಗೆ ಸೇರಿದರು. 2009ರಲ್ಲಿ ಮೇದಕ್ ಕ್ಷೇತ್ರದಿಂದ ಬಿಆರ್‌ಎಸ್ ಅಭ್ಯರ್ಥಿಯಾಗಿ ಲೋಕಸಭೆಗೆ ಆಯ್ಕೆಯಾಗಿದ್ದರು.

2014 ರಲ್ಲಿ ತೆಲಂಗಾಣ ರಾಜ್ಯ ರಚನೆಯಾಗುವ ಮೊದಲು ಅವರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. ಟಿಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ನಟಿ ವಿಜಯಶಾಂತಿ ಅವರು ಡಿಸೆಂಬರ್ 2020 ರಲ್ಲಿ ಕಾಂಗ್ರೆಸ್ ತೊರೆದು, ಬಿಜೆಪಿಗೆ ಸೇರಿಕೊಂಡರು. ಈಗ ಬಿಜೆಪಿ ತಮ್ಮನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿ ಮತ್ತೆ ಕೈ ಹಿಡಿದಿದ್ದಾರೆ.
ಬಿಜೆಪಿ ಜೊತೆಗೆ ವಿಜಯಶಾಂತಿ ಮುನಿಸು
ಡಿಸೆಂಬರ್ 2020 ರಲ್ಲಿ, ವಿಜಯಶಾಂತಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಬಳಿಕ ಪಕ್ಷದಲ್ಲಿ ಪ್ರಮುಖ ಪಾತ್ರ ವಹಿಸಿದರು. ಆದರೆ, ಅವಿಭಜಿತ ಆಂಧ್ರಪ್ರದೇಶದ ಕೊನೆಯ ಮುಖ್ಯಮಂತ್ರಿಯಾಗಿದ್ದ ಎನ್ ಕಿರಣ್ ಕುಮಾರ್ ರೆಡ್ಡಿ ಎಂಬ ಕಟ್ಟಾ ಸಮೈಕ್ಯಂದ್ರ (ಯುನೈಟೆಡ್ ಆಂಧ್ರ ಪ್ರದೇಶ) ಬೆಂಬಲಿಗರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದರ ಬಗ್ಗೆ ಅವರು ಅಸಮಾಧಾನ ಹೊಂದಿದ್ದರು.
ಇದಾದ ನಂತರ ವಿಜಯಶಾಂತಿ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದರು. ಜೊತೆಗೆ ತಮ್ಮ ರಾಜೀನಾಮೆ ಪತ್ರವನ್ನು ಸಹ ಸಾರ್ವಜನಿಕವಾಗಿ ಹಂಚಿಕೊಳ್ಳಲಿಲ್ಲ. ಹೀಗಾಗಿ ಬಿಜೆಪಿ ಮತ್ತು ವಿಜಯಶಾಂತಿ ನಡುವೆ ತೀವ್ರತೆರನಾದ ಅಸಮಾಧಾನವಿದೆ ಎಂಬುದು ಜಗ್ಗಾಜಾಹೀರಾಗಿದೆ. ಸದ್ಯಕ್ಕೆ ತೆಲಂಗಾಣ ಚುನಾವಣೆ ಸಮೀಪಿಸುತ್ತಿದ್ದು, ನಟಿ ವಿಜಯಶಾಂತಿಗೆ ಕಾಂಗ್ರೆಸ್ ಎಂಪಿ ಟಿಕೆಟ್ ನೀಡುವ ಭರವಸೆ ನೀಡಿದೆ.
ನವೆಂಬರ್ 30 ರಂದು ನಡೆಯಲಿರುವ 2023 ರ ತೆಲಂಗಾಣ ಚುನಾವಣೆಗೆ ಕಾಂಗ್ರೆಸ್ ಈಗಾಗಲೇ ಆಕ್ರಮಣಕಾರಿ ಪ್ರಚಾರವನ್ನು ನಡೆಸುತ್ತಿದೆ. ಇದೇ ಸಮಯದಲ್ಲಿ ವಿಜಯಶಾಂತಿ ಕಾಂಗ್ರೆಸ್‌ಗೆ ಮರಳಿದ್ದಾರೆ. ವಿಜಯಶಾಂತಿ ಹಲವಾರು ತೆಲುಗು, ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಕರ್ತವ್ಯಂ ಚಿತ್ರದಲ್ಲಿ ಮಹಿಳಾ ಪೋಲೀಸ್ ಪಾತ್ರಕ್ಕಾಗಿ ಅವರು ಅತ್ಯುತ್ತಮ ನಟಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.


Click it and Unblock the Notifications










