ಪ್ರಭಾಸ್ ಹುಟ್ಟುಹಬ್ಬ ಸಂಭ್ರಮಾಚರಣೆ ಆರಂಭಿಸಿದ ಅಭಿಮಾನಿಗಳು; ಆಂಧ್ರದಲ್ಲಿ ಬೈಕ್ ರ‍್ಯಾಲಿ
ಸಾಲು ಸಾಲು ಸಿನಿಮಾಗಳು ಸೋಲು ಕಾಣುತ್ತಿದ್ದರೂ ನಟ ಪ್ರಭಾಸ್ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಬಾಹುಬಲಿ ಸಿನಿಮಾದಿಂದ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಪ್ರಭಾಸ್‌ಗೆ ತೆಲುಗು ರಾಜ್ಯಗಳ ಹೊರತಾಗಿಯೂ ಹಲವು ರಾಜ್ಯಗಳಲ್ಲಿ ಫ್ಯಾನ್ ಬೇಸ್ ಹೆಚ್ಚಿಸಿಕೊಂಡಿದ್ದಾರೆ. ಇನ್ನೇನು ಅವರ ಹುಟ್ಟುಹಬ್ಬ ಬರುತ್ತಿದ್ದು, ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.
ಪ್ರಭಾಸ್ ಹುಟ್ಟುಹಬ್ಬ ಅವರ ಅಭಿಮಾನಿಗಳಿಗೆ ಹಬ್ಬವಾಗಿದೆ. ದೇಶಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವ ಪ್ರಭಾಸ್ ಅಕ್ಟೋಬರ್ 23 ರಂದು 44 ವರ್ಷಕ್ಕೆ ಕಾಲಿಡುತ್ತಿದ್ದಾರೆ. ಆಂಧ್ರಪ್ರದೇಶದಲ್ಲಿ ಪ್ರಭಾಸ್ ಹುಟ್ಟುಹಬ್ಬದ ಆಚರಣೆಗಳು ಈ ವರ್ಷ ಸ್ವಲ್ಪ ಮುಂಚಿತವಾಗಿಯೇ ಪ್ರಾರಂಭವಾಗಿವೆ.

ಸಲಾರ್ ಮೊದಲ ಭಾಗ ಬಿಡುಗಡೆಯಾಗಲಿದ್ದು, ಈ ಬಾರಿ ಪ್ರಭಾಸ್ ಅಭಿಮಾನಿಗಳಿಗೆ ಸಂಭ್ರಮಿಸಲು ಎರಡು ಕಾರಣಗಳಿವೆ. ಆಂಧ್ರ ಪ್ರದೇಶದಲ್ಲಿ ನಟನ ಹುಟ್ಟುಹಬ್ಬದ ನೆನಪಿಗಾಗಿ ಬೃಹತ್ ಬೈಕ್ ರ‍್ಯಾಲಿಯನ್ನು ಆಯೋಜಿಸಿದ್ದರು. ಪ್ರಭಾಸ್ ಹುಟ್ಟುಹಬ್ಬಕ್ಕೆ ಇನ್ನೂ ಐದು ದಿನಗಳು ಬಾಕಿಯಿದ್ದರೂ, ಈಗಾಗಲೇ ನಗರದಾದ್ಯಂತ ಬೃಹತ್ ಆಚರಣೆಗಳು ಪ್ರಾರಂಭವಾಗಿವೆ.
ಪ್ರಭಾಸ್ ಹುಟ್ಟುಹಬ್ಬಕ್ಕೆ ವಿದ್ಯಾರ್ಥಿಗಳ ಬೈಕ್ ರ‍್ಯಾಲಿ
ಆಂಧ್ರಪ್ರದೇಶದ ಹೃದಯಭಾಗದಲ್ಲಿನ ನರಸಾಪುರ ವೈ ಎನ್ ಕಾಲೇಜಿನ ವಿದ್ಯಾರ್ಥಿಗಳು ನಟನ ಮೇಲಿನ ತಮ್ಮ ಪ್ರೀತಿಯನ್ನು ತೋರಿಸಲು ಬೀದಿಗಳಲ್ಲಿ ಬೈಕ್ ರ‍್ಯಾಲಿ ಆಯೋಜಿಸಿದ್ದಾರೆ. ಪ್ರಭಾಸ್ ಬ್ಯಾನರ್‌ಗಳು, ಕಟೌಟ್‌ಗಳು ಮತ್ತು ಪೋಸ್ಟರ್‌ಗಳು ಬೀದಿಗಳಲ್ಲಿ ರಾರಾಜಿಸಿವೆ. ಬೈಕ್‌ಗಳಲ್ಲಿಯೇ ಡಿಜೆ ಹಾಡಿಗೆ ನರ್ತಿಸುತ್ತಾ ಪ್ರಭಾಸ್ ಹೆಸರು ಮತ್ತು ಸಿನಿಮಾಗಳ ಹೆಸರು ಕೂಗುತ್ತಾ ಅಭಿಮಾನಿಗಳು ಸಂಭ್ರಮಿಸಿದ್ದಾರೆ.
ಪ್ರಭಾಸ್ ಮತ್ತು ಸಲಾರ್
ನಟ ಪ್ರಭಾಸ್ ಅವರ ಬಹುನಿರೀಕ್ಷಿತ ಸಿನಿಮಾ ಸಲಾರ್. ಈಗಾಗಲೇ ಬಿಡುಗಡೆಯಾಗಬೇಕಿದ್ದ ಸಲಾರ್: ಭಾಗ 1 ಇನ್ನು ಮುಂದೂಡಿಕೆಯಾಗುತ್ತಲೇ ಇದೆ. ಸಲಾರ್ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು ಪ್ರಶಾಂತ್ ನೀಲ್ ಬರೆದು ನಿರ್ದೇಶಿಸಿದ್ದಾರೆ. ಇದಕ್ಕೆ ಹೊಂಬಾಳೆ ಫಿಲ್ಮಂ ನ ವಿಜಯ್ ಕಿರಗಂದೂರ್ ಬಂಡವಾಳ ಹೂಡಿದ್ದಾರೆ.

ಸಲಾರ್ ಸಿನಿಮಾದಲ್ಲಿ ಪ್ರಭಾಸ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್, ಜಗಪತಿ ಬಾಬು, ಆನಂದ್, ಈಶ್ವರಿ ರಾವ್, ಶ್ರೀಯಾ ರೆಡ್ಡಿ ಮತ್ತು ರಾಮಚಂದ್ರರಾಜು ಕಾಣಿಸಿಕೊಳ್ಳಲಿದ್ದಾರೆ. ಚಿತ್ರವನ್ನು ಡಿಸೆಂಬರ್ 2020 ರಲ್ಲಿ ಘೋಷಿಸಲಾಗಿತ್ತು.
ಜನವರಿ 2021 ರಲ್ಲಿ ತೆಲಂಗಾಣದ ಗೋದಾವರಿಖಾನಿಯಲ್ಲಿ ಚಿತ್ರೀಕರಣ ಪ್ರಾರಂಭವಾಗಿದ್ದು, ಸಿನಿಮಾ ಬಿಡುಗಡೆ ಇನ್ನೂ ಮುಂದಕ್ಕೆ ಹೋಗುತ್ತಿದೆ. ಚಿತ್ರಕ್ಕೆ ರವಿ ಬಸ್ರೂರು ಸಂಗೀತ ನೀಡಿದ್ದು, ಭುವನ್ ಗೌಡ ಅವರ ಛಾಯಾಗ್ರಹಣವಿದೆ. ಸಿನಿಮಾ ಡಿಸೆಂಬರ್ 22, 2023 ರಂದು ಶಾರುಖ್ ಖಾನ್ ಅವರ ಡಂಕಿ ಸಿನಿಮಾದೊಂದಿಗೆ ಬಿಡುಗಡೆಯಾಗಲಿದೆ ಎನ್ನಲಾಗುತ್ತಿದೆ.
ಸಲಾರ್ ಜೊತೆಗೆ, ಪ್ರಭಾಸ್ ನಾಗ್ ಅಶ್ವಿನ್ ಅವರ ಕಲ್ಕಿ 2898 AD ವೈಜ್ಞಾನಿಕ ಕಾಲ್ಪನಿಕ ಚಲನಚಿತ್ರದಲ್ಲಿ ನಟಿಸಲಿದ್ದಾರೆ. ವೈಜಯಂತಿ ಮೂವೀಸ್ ಬ್ಯಾನರ್‌ನಲ್ಲಿ ಸಿ.ಅಸ್ವನಿ ದತ್ ನಿರ್ಮಾಣ ಮಾಡಲಿದ್ದಾರೆ. ಪ್ರಭಾಸ್, ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ ಮತ್ತು ದಿಶಾ ಪಟಾನಿ ಚಿತ್ರದ ಭಾಗವಾಗಲಿದ್ದಾರೆ.


Click it and Unblock the Notifications











