ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಸಲಾರ್ ಸಿನಿಮಾದ ಟ್ರೈಲರ್ ಬಿಡುಗಡೆಗೆ ಡೇಟ್ ಫಿಕ್ಸ್!
ಕೆಜಿಎಫ್ ಸಿನಿಮಾ ಬಳಿಕ ನಿರ್ದೇಶಕ ಪ್ರಶಾಂತ್ ನೀಲ್ 'ಸಲಾರ್'ನಲ್ಲಿ ತೊಡಗಿಸಿಕೊಂಡಿದ್ದು, ಅಭಿಮಾನಿಗಳಂತೂ ಕಾತುರದಿಂದ ಕಾಯುತ್ತಿದ್ದಾರೆ. ಆದರೆ, ಸಿನಿಮಾ ಬಿಡುಗಡೆ ಪದೇ ಪದೇ ಮುಂದೆ ಹೋಗುತ್ತಲೇ ಇದೆ. ಟ್ರೈಲರ್ ಆದರೂ ಬಿಡಿ ಎಂದು ಅಭಿಮಾನಿಗಳು ಕೇಳಿದ್ದೇ ಆಯಿತು. ಕಾದು ಕಾದು ಸುಸ್ತಾಗಿರುವ ಫ್ಯಾನ್ಸ್ ಆಸೆಗೆ ಚಿತ್ರತಂಡ ಜೀವ ನೀಡಿದೆ.
ಬಹು ನಿರೀಕ್ಷಿತ ಸಲಾರ್ ಭಾಗ 1 ರ ಟ್ರೈಲರ್ ಬಿಡುಗಡೆಗೆ ಸಿದ್ಧವಾಗಿದ್ದು, ಡಿಸೆಂಬರ್ 1 ರಂದು ಟ್ರೈಲರ್ ಮೂಲಕ ಸಿನಿಮಾದ ಅಂಶಗಳನ್ನು ಹಂಚಿಕೊಳ್ಳಲಿದೆ ಚಿತ್ರತಂಡ. ಸಿನಿಮಾ ನಿರ್ಮಾಪಕರು ಇದೀಗ ಟ್ರೇಲರ್ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದು, ಇದಕ್ಕಾಗಿ ಕಾತರರಾಗಿರುವ ಅಭಿಮಾನಿಗಳಿಗೆ ಭಾರಿ ಖುಷಿಯಾಗಿದೆ.

ಸಲಾರ್ ಭಾಗ 1 ರ ಟ್ರೈಲರ್ ಬಿಡುಗಡೆ
ಸಲಾರ್ ಚಿತ್ರವು ಡಿಸೆಂಬರ್ 22 ರಂದು ಬೆಳ್ಳಿತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ. ಬಿಡುಗಡೆ ದಿನಾಂಕ ಘೋಷಿಸಿದ ಬಳಿಕ ಚಿತ್ರದ ಬಗ್ಗೆ ಇರುವ ಹೈಪ್ ಇನ್ನು ಹೆಚ್ಚಾಗಿದೆ. ಈ ತಿಂಗಳ ಆರಂಭದಲ್ಲಿ, ಸಿನಿಮಾ ಚಿತ್ರಮಂದಿರಗಳಿಗೆ ಬರುವ ಸುಮಾರು 3 ವಾರಗಳ ಮೊದಲು ಅಂದರೆ, ನವೆಂಬರ್ ಕೊನೆಯಲ್ಲಿ ಅಥವಾ ಡಿಸೆಂಬರ್ ಆರಂಭದಲ್ಲಿ ಟ್ರೇಲರ್ ಅನ್ನು ಅನಾವರಣಗೊಳಿಸಲಾಗುವುದು ಎಂದು ನಿರ್ಮಾಪಕರು ಘೋಷಿಸಿದ್ದರು.
ಪದೇ ಪದೇ ಸಲಾರ್ ಬಿಡುಗಡೆ ದಿನಾಂಕ ಮುಂದೂಡಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿರುವ ಚಿತ್ರತಂಡ, ಟ್ರೈಲರ್ ಬಿಡುಗಡೆ ಬಗ್ಗೆ ಹಳಿದ್ದ ಹೇಳಿಕೆಗೆ ಬದ್ಧವಾಗಿದೆ. ಸಲಾರ್ ತಂಡವು ಈಗ ಡಿಸೆಂಬರ್ 1 ರಂದು ಟ್ರೇಲರ್ ಬಿಡುಗಡೆಯಾಗಲಿದೆ ಎಂದು ಖಚಿತಪಡಿಸಿದೆ. ಜುಲೈನಲ್ಲಿ ಚಿತ್ರದ ಟೀಸರ್ ಬಿಡುಗಡೆಯಾಗಿತ್ತು. ಆಗಿನಿಂದ ಸಲಾರ್ ಅಪ್‌ಡೇಟ್‌ಗಾಗಿ ಫ್ಯಾನ್ಸ್ ಕಾಯುತ್ತಿದ್ದರು.

ಪ್ರಭಾಸ್ ಅಭಿನಯದ ಸಲಾರ್
ಬಾಹುಬಲಿ ಸಿನಿಮಾದಿಂದ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ ನಟ ಪ್ರಭಾಸ್ ಅಭಿನಯದ ಸಲಾರ್ ಚಿತ್ರ ಪ್ರೇಮಿಗಳಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿದೆ. ಈ ಸಿನಿಮಾ ರಾಜ್‌ಕುಮಾರ್ ಹಿರಾನಿ ಅವರ ಬಹು ನಿರೀಕ್ಷಿತ ಶಾರುಖ್ ಖಾನ್ ಚಿತ್ರ, 'ಡಂಕಿ'ಯೊಂದಿಗೆ ಚಿತ್ರಮಂದಿರಗಳಿಗೆ ಕಾಲಿಡಲಿದೆ. ಈ ಬಾರಿ ಚಿತ್ರ ಬಿಡುಗಡೆಯಲ್ಲಿ ಯಾವುದೇ ಬದಲಾವಣೆಯಿಲ್ಲ. ಹೇಳಿದ ದಿನದಂದು ಸಲಾರ್ ರಿಲೀಸ್ ಆಗಲಿದೆ ಎಂದು ನಿರ್ಮಾಪಕರು ಖಚಿತಪಡಿಸಿದ್ದಾರೆ.
ಸಲಾರ್ ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಇಬ್ಬರ ಕಾಂಬಿನೇಷನ್‌ನ ಮೊದಲ ಸಿನಿಮಾ. ಚಿತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು, ಶ್ರುತಿ ಹಾಸನ್, ತಿನ್ನು ಆನಂದ್, ಬ್ರಹ್ಮಾಜಿ, ಈಶ್ವರಿ ರಾವ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ರವಿ ಬಸ್ರೂರು ಸಂಗೀತ ನೀಡಿದ್ದು, ಭುವನ್ ಗೌಡ ಅವರ ಛಾಯಾಗ್ರಹಣವಿದೆ. ಚಿತ್ರವು ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಸಲಾರ್ ನಂತರ ನಟ ಪ್ರಭಾಸ್, ನಾಗ್ ಅಶ್ವಿನ್ ನಿರ್ದೇಶನದ ವೈಜ್ಞಾನಿಕ ಕಾಲ್ಪನಿಕ ಚಲನಚಿತ್ರ ಕಲ್ಕಿ 2898 AD ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಕಮಲ್ ಹಾಸನ್, ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ, ದಿಶಾ ಪಟಾನಿ ಸೇರಿ ದೊಡ್ಡ ದೊಡ್ಡ ತಾರಾಬಳಗವೇ ಇರಲಿದೆ. ಚಿತ್ರಕ್ಕೆ ವೈಜಯಂತಿ ಮೂವೀಸ್ ಬ್ಯಾನರ್ ಅಡಿಯಲ್ಲಿ ಸಿ. ಅಸ್ವಾನಿ ದತ್ ಅವರು ಬಂಡವಾಳ ಹೂಡಿದ್ದಾರೆ. ಚಿತ್ರವು 2024 ರ ಆರಂಭದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.


Click it and Unblock the Notifications











