Brahmanandam: ಖ್ಯಾತ ಹಾಸ್ಯನಟ ಬ್ರಹ್ಮಾನಂದಂ ಅವರ ಆತ್ಮಕಥೆ 'ನೇನು'ಗೆ ಸಾಥ್ ನೀಡಿದ ರಾಮ್ ಚರಣ್
ಹಲವು ದಶಕಗಳಿಂದ ಸಿನಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಾಡಿಸುತ್ತಿರುವ ಖ್ಯಾತ ಹಾಸ್ಯನಟ ಬ್ರಹ್ಮಾನಂದಂ ಅವರು ತಮ್ಮ ಆತ್ಮಕಥೆಯನ್ನು ಬಿಡುಗಡೆ ಮಾಡಿದ್ದಾರೆ. ತಮ್ಮ ಆತ್ಮಕಥೆಗೆ 'ನೇನು' ಎಂದು ಹೆಸರಿಟ್ಟಿದ್ದಾರೆ. ಈ ಪುಸ್ತಕಕ್ಕೆ ಬಹಳ ಮೆಚ್ಚುಗೆ ವ್ಯಕ್ತವಾಗಿದ್ದು, ಚಿರಂಜೀವಿ ಕುಟುಂಬ ಇದಕ್ಕೆ ಪ್ರಚಾರ ಕೊಡುತ್ತಿದ್ದಾರೆ.
ಇತ್ತೀಚೆಗೆ ಬ್ರಹ್ಮಾನಂದಂ ಅವರು ತಮ್ಮ ಆತ್ಮಚರಿತ್ರೆಯ ಪ್ರತಿಯನ್ನು ಚಿರಂಜೀವಿ ಅವರಿಗೆ ನೀಡಿದ್ದರು. ಅವರು ಕೂಡ ಪುಸ್ತಕಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸುವ ಸಂಕ್ಷಿಪ್ತ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಹಲವು ದಶಕಗಳಿಂದ ತೆಲುಗು ಪ್ರೇಕ್ಷಕರಿಗೆ ತಮ್ಮ ನಟನೆ ಮೂಲಕ ನಗೆ ಬುಗ್ಗೆ ಉಕ್ಕಿಸಿರುವವರಲ್ಲಿ ಬ್ರಹ್ಮಾನಂದಂ ಅವರ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಚಿರಂಜೀವಿ ಹೇಳಿದ್ದರು.

ಬ್ರಹ್ಮಾನಂದಂ ವೈಯಕ್ತಿಕ ಅನುಭವಗಳು ಇತರರಿಗೆ ಪಾಠ
ಬ್ರಹ್ಮಾನಂದಂ ಅವರ ಆತ್ಮಕಥೆ 'ನೇನು'ನಲ್ಲಿ ಬ್ರಹ್ಮಾನಂದಂ ಅವರ ಜೀವನ ಅನುಭವಗಳು ಮತ್ತು ಅವರ ಪ್ರಸಿದ್ಧ ಸಿನಿಮಾ ವೃತ್ತಿಜೀವನದಲ್ಲಿ ಕಲಿತ ಪಾಠಗಳನ್ನು ಬಿಚ್ಚಿಡುತ್ತದೆ. ಚಿರಂಜೀವಿ ಪುಸ್ತಕವನ್ನು ಶ್ಲಾಘಿಸಿದ್ದು, ಬ್ರಹ್ಮಾನಂದಂ ಅವರ ವೈಯಕ್ತಿಕ ಅನುಭವಗಳು ಇತರರಿಗೆ ಪಾಠ ಮತ್ತು ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತವೆ ಎಂದು ಹೇಳಿದ್ದಾರೆ. ಬ್ರಹ್ಮಾನಂದಂ ಅವರ ಜೀವನದ ಭಾಗವನ್ನು ಓದುವಾಗ ಓದುಗರು ಕೂಡ ಸ್ಫೂರ್ತಿ ಪಡೆಯುತ್ತಾರೆ ಎಂದಿದ್ದಾರೆ.
ಬ್ರಹ್ಮಾನಂದಂ ಆತ್ಮಚರಿತ್ರೆಗೆ ರಾಮ್ ಚರಣ್ ಸಾಥ್
ಚಿರಂಜೀವಿ ಬಳಿಕ ಅವರ ಪುತ್ರ ಮತ್ತು ನಟ ರಾಮ್ ಚರಣ್ ಕೂಡ ಬ್ರಹ್ಮಾನಂದಂ ಅವರ 'ನೇನು'ಗೆ ಸಾಥ್ ನೀಡಿದ್ದಾರೆ. ಬ್ರಹ್ಮಾನಂದಂ ಅವರ ಆತ್ಮಕಥೆಯನ್ನು ಪ್ರಚಾರ ಮಾಡಲು ರಾಮ್ ಚರಣ್ ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಟಿಪ್ಪಣಿಯನ್ನು ಹಂಚಿಕೊಂಡಿದ್ದಾರೆ. ಬ್ರಹ್ಮಾನಂದಂ ಮತ್ತು ರಾಮ್ ಚರಣ್ ಹಲವು ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ.
ಜನವರಿ 10ರ ಬುಧವಾರ, ರಾಮ್ ಚರಣ್ 'ನೇನು' ಪುಸ್ತಕವನ್ನು ಬ್ರಹ್ಮಾನಂದಂ ಅವರಿಂದ ತೆಗೆದುಕೊಳ್ಳುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ. ಜೊತೆಗೆ, "'NENU' ನಲ್ಲಿ ಬ್ರಹ್ಮಾನಂದಂ ಗಾರು ಅವರ ಅದ್ಭುತ ಜೀವನದ ಮೂಲಕ ಪ್ರಯಾಣಿಸಬಹುದು. ಅವರ ಆತ್ಮಕಥೆಯನ್ನು ಹಾಸ್ಯ ಮತ್ತು ತುಂಬು ಹೃದಯದಿಂದ ಬರೆಯಲಾಗಿದೆ. ಈ ಪುಟಗಳು ನಗುವಿನ ಸಾರವನ್ನು ಹಿಡಿದಿಟ್ಟುಕೊಳ್ಳುತ್ತವೆ, ಜೀವನ ಪಾಠಗಳು ಮತ್ತು ಅವರು ನಮಗೆಲ್ಲರಿಗೂ ತಂದ ಸಿನಿಮಾ ಮೋಡಿಯನ್ನು ಒಳಗೊಂಡಿದೆ" ಎಂದು ಟಿಪ್ಪಣಿ ಬರೆದಿದ್ದಾರೆ.
ನಟ ಬ್ರಹ್ಮಾನಂದಂ
ತೆಲುಗು ಶಿಕ್ಷಕರಾಗಿದ್ದ ಬ್ರಹ್ಮಾನಂದಂ ಆಕಸ್ಮಿಕವಾಗಿ ಚಿತ್ರರಂಗಕ್ಕೆ ಬಂದವರು. ತೆಲುಗು ಚಿತ್ರರಂಗದ ಮೇಲೆ ಮಹತ್ವದ ಪ್ರಭಾವ ಬೀರಿದ್ದಾರೆ. ದಶಕಗಳಿಂದ ಸಿನಿಮಾ ರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಸಾಟಿಯಿಲ್ಲದ ನಟನೆ ಮತ್ತು ಹಾಸ್ಯ ಪ್ರತಿಭೆಗಾಗಿ ಪ್ರಶಂಸೆ ಗಳಿಸಿದ್ದಾರೆ. ರಾಮ್ ಚರಣ್ ಮತ್ತು ಬ್ರಹ್ಮಾನಂದಂ ಅವರು 'ಬ್ರೂಸ್ ಲೀ: ದಿ ಫೈಟರ್', 'ಆರೆಂಜ್', 'ರಚ್ಚ', 'ಚಿರುತಾ', 'ನಾಯಕ್' ಮತ್ತು 'ಬೆಟ್ಟಿಂಗ್ ರಾಜ' ಸೇರಿದಂತೆ ಹಲವು ಸಿನಿಮಾಗಳಲ್ಲಿ ಕೈ ಜೋಡಿಸಿದ್ದಾರೆ. ಇನ್ನು, ಬ್ರಹ್ಮಾನಂದಂ ಅಅವರ ಆತ್ಮಚರಿತ್ರೆ ಈಗ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ 275 ರೂಪಾಯಿಗೆ ಲಭ್ಯವಿದೆ.
ನಟ ರಾಮ್ ಚರಣ್
ನಟ ರಾಮ್ ಚರಣ್ 'ಗೇಮ್ ಚೇಂಜರ್' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದಲ್ಲಿ ಕಿಯಾರಾ ಅಡ್ವಾಣಿ ನಾಯಕಿಯಾಗಿದ್ದಾರೆ. ಪೊಲಿಟಿಕಲ್ ಥ್ರಿಲ್ಲರ್ ಚಿತ್ರವಾಗಿರುವ ಈ ಚಿತ್ರವನ್ನು ಎಸ್ ಶಂಕರ್ ನಿರ್ದೇಶಿಸಿದ್ದಾರೆ. ಇದರ ಚಿತ್ರಕಥೆಯನ್ನು ತಮಿಳು ಚಲನಚಿತ್ರ ನಿರ್ಮಾಪಕ ಕಾರ್ತಿಕ್ ಸುಬ್ಬರಾಜ್ ಬರೆದಿದ್ದಾರೆ.
'ಗೇಮ್ ಚೇಂಜರ್' ಜೊತೆಗೆ, ರಾಮ್ ಚೇಂಜರ್ 'RC 16' ಗಾಗಿ ಎದುರು ನೋಡುತ್ತಿದ್ದಾರೆ. 'ಉಪ್ಪೇನ' ಚಿತ್ರವನ್ನು ನಿರ್ದೇಶಿಸಿದ್ದ ಬುಚ್ಚಿ ಬಾಬು ಸನಾ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಈ ಚಿತ್ರದಲ್ಲಿ ಹ್ಯಾಟ್ರಿಕ್ ಹಿರೋ ಶಿವರಾಜ್‌ಕುಮಾರ್ ಕೂಡ ನಟಿಸಲಿದ್ದಾರೆ ಎಂಬ ಮಾಹಿತಿಯಿದೆ.


Click it and Unblock the Notifications










