ಮದುವೆ ಬಗ್ಗೆ ಚಿರಂಜೀವಿ ಸೋದರಳಿಯ ಮಾತು; ತಿರುಪತಿಯಲ್ಲಿ ಸಿಹಿಸುದ್ದಿ ಕೊಟ್ಟ ನಟ
ಟಾಲಿವುಡ್ ಮೆಗಾ ಫ್ಯಾಮಿಲಿಯಿಂದ ಏಳೆಂಟು ಮಂದಿ ನಟರು ಚಿತ್ರರಂಗಕ್ಕೆ ಬಂದಿದ್ದಾರೆ. ಚಿರಂಜೀವಿ ಬಳಿಕ ನಾಗಬಾಬು, ಪವನ್ ಕಲ್ಯಾಣ್, ಅಲ್ಲು ಅರ್ಜುನ್, ರಾಮ್ ಚರಣ್, ಸಾಯಿ ಧರಮ್ ತೇಜ್, ವರುಣ್ ತೇಜ್ ಹೀಗೆ ಲಿಸ್ಟ್ ದೊಡ್ಡದಿದೆ. ಚಿರು ಸೋದರಳಿಯ ಸಾಯಿ ಧರಮ್ ತೇಜ್ ಮದುವೆಗೆ ವೇದಿಕೆ ಸಿದ್ಧವಾಗ್ತಿದೆ.
ಸಾಯಿ ಧರಮ್ ತೇಜ್ ಯಾವುದೇ ದೊಡ್ಡ ಹಿಟ್ ಸಿನಿಮಾಗಳನ್ನು ಕೊಟ್ಟಿಲ್ಲ. ಮಾವನ ಹಾದಿಯಲ್ಲಿ ಚಿತ್ರರಂಗ ಪ್ರವೇಶಿಸಿದ ತೇಜ್ 15 ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಸದ್ಯ 'ಸಂಬರಾಲ ಏಟಿ ಗಟ್ಟು' ಎಂಬ ಚಿತ್ರದಲ್ಲಿ ನಟಿಸ್ತಿದ್ದು ಶೀಘ್ರದಲ್ಲೇ ತೆರೆಗೆ ಬರಲಿದೆ. ಇತ್ತೀಚೆಗೆ ತಿರುಪತಿಗೆ ಭೇಟಿ ನೀಡಿ ಸಾಯಿ ಧರಮ್ ತೇಜ್ ದೇವರ ದರ್ಶನ ಪಡೆದಿದ್ದಾರೆ. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡುತ್ತಾ ಮದುವೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.

ವಯಸ್ಸು 40ರ ಸಮೀಪದಲ್ಲಿದ್ದು ಇದೀಗ ಮದುವೆಗೆ ಸಾಯಿ ಧರಮ್ ತೇಜ್ ಮುಂದಾಗಿದ್ದಾರೆ. ಮುಂದಿನ ವರ್ಷ ಮದುವೆ ಆಗುತ್ತೇನೆ ಎಂದು ಹೇಳಿದ್ದಾರೆ. ಇತ್ತೀಚೆಗೆ ಅಲ್ಲು ಅರ್ಜುನ್ ಸಹೋದರ ಅಲ್ಲು ಶಿರೀಷ್ ಮದುವೆ ನಿಶ್ಚಿತಾರ್ಥ ನಡೆದಿತ್ತು. ಅದರ ಬೆನ್ನಲ್ಲೇ ಚಿರಂಜೀವಿ ಅವರ ಸಹೋದರಿ ಪುತ್ರ ಮದುವೆಗೆ ಅಣಿಯಾಗುತ್ತಿದ್ದಾರೆ. ಮೆಗಾ ಫ್ಯಾಮಿಲಿಯಲ್ಲಿ ಮದುವೆ, ಡಿವೋರ್ಸ್ ವಿಚಾರಗಳು ಪದೇ ಪದೆ ಸುದ್ದಿ ಆಗುತ್ತಿರುತ್ತದೆ. ಈಗ ಎರಡೆರಡು ಮದುವೆ ಸಮಾರಂಭಗಳಿಗೆ ಸಿದ್ಧತೆ ನಡೀತಿದೆ.
10 ವರ್ಷಗಳ ಹಿಂದೆ 'ಪಿಲ್ಲ ನುವ್ವು ಲೆನಿ ಜೀವಿತಮ್' ಎಂಬ ಸಿನಿಮಾ ಮೂಲಕ ಸಾಯಿ ಧರಮ್ ತೇಜ್ ಚಿತ್ರರಂಗಕ್ಕೆ ಬಂದಿದ್ದರು. ಬಳಿಕ 'ರೇಯ್', 'ಸುಪ್ರೀಂ', 'ಜವಾನ್', 'ಇಂಟೆಲಿಜೆಂಟ್' ಹೀಗೆ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. ಆತ ನಟಿಸಿದ 'ಸುಬ್ರಮಣ್ಯಂ ಫಾರ್ ಸೇಲ್' ಸಿನಿಮಾ ಕೊಂಚಮಟ್ಟಿಗೆ ಸದ್ದು ಮಾಡಿತ್ತು.
2021ರಲ್ಲಿ ನಟ ಸಾಯಿ ಧರಂ ತೇಜ್ ಗಂಭೀರವಾಗಿ ಗಾಯಗೊಂಡಿದ್ದರು. ಮೋಟಾರ್ ಬೈಕ್‌ನಲ್ಲಿ ವೇಗವಾಗಿ ಚಲಿಸುತ್ತಿದ್ದ ತೇಜ್ ಆಯತಪ್ಪಿ ಬಿದ್ದಿದ್ದರು. ಕೋಮಾಗೆ ಹೋಗಿದ್ದ ನಟ ಬದುಕಿ ಬಂದಿದ್ದೇ ಪವಾಡ ಎನ್ನುವಂತಾಗಿತ್ತು. 'ಬ್ರೋ' ಎಂಬ ಚಿತ್ರದಲ್ಲಿ ಮಾವ ಪವನ್ ಕಲ್ಯಾಣ್ ಜೊತೆ ತೆರೆ ಹಂಚಿಕೊಂಡಿದ್ದರು. ಈ ಹಿಂದೆ ಕೂಡ ಸಾಯಿ ಧರಮ್ ತೇಜ್ ಲವ್, ಡೇಟಿಂಗ್ ಬಗ್ಗೆ ವದಂತಿ ಹರಿದಾಡಿತ್ತು. ಬ್ರೇಕಪ್ ಬಗ್ಗೆ ಕೂಡ ಮಾತನಾಡಿದ್ದರು.
ಇನ್ನು ಮನೆಯಲ್ಲಿ ಸಾಯಿ ಧರಮ್ ಮದುವೆಗೆ ಹುಡುಗಿ ಹುಡುಕುವ ಕೆಲಸ ನಡೀತಿದೆ ಎನ್ನಲಾಗ್ತಿದೆ. ಚಿರಂಜೀವಿ ಮುಂದೆ ನಿಂತು ಮದುವೆ ಮಾಡಿಸುತ್ತಾರೆ ಎನ್ನುವ ಚರ್ಚೆ ಫಿಲ್ಮ್ ನಗರ್‌ನಲ್ಲಿ ಶುರುವಾಗಿದೆ. "ಒಳ್ಳೆ ಸಿನಿಮಾಗಳು, ಒಳ್ಳೆ ಜೀವನ ಕೊಟ್ಟ ದೇವರಿಗೆ ಕೃತಜ್ಞತೆ ಸಲ್ಲಿಸಲು ತಿರುಪತಿ ತಿರುಮಲ ದೇವಸ್ಥಾನಕ್ಕೆ ಬಂದೆ. ಹೊಸ ವರ್ಷಕ್ಕೂ ಮುನ್ನ ದೇವರ ಆಶೀರ್ವಾದ ಪಡೆದೆ. ಮುಂದಿನ ವರ್ಷ 'ಸಂಬರಾಲ ಏಟಿ ಗಟ್ಟು' ಸಿನಿಮಾ ಬಿಡುಗಡೆ ಆಗಲಿದೆ. ನನ್ನ ಮದುವೆ ಕೂಡ ನಡೆಯಲಿದೆ" ಎಂದು ಹೇಳಿದ್ದಾರೆ.


Click it and Unblock the Notifications











