ನಿಮ್ಮ ಅಂದ ಸೀರೆಯಲ್ಲಿರುತ್ತೆ, ಅಂಗಾಂಗ ಪ್ರದರ್ಶನದಲ್ಲಿ ಅಲ್ಲ; ನಟಿಯರ ಬಗ್ಗೆ ವಿವಾದಾತ್ಮಕ ಹೇಳಿಕೆ
ಸಿನಿಮಾ ನಟಿಯರು ಉಡುಗೆ ತೊಡುಗೆ ಇತ್ತೀಚೆಗೆ ಭಾರೀ ಚರ್ಚೆ ಹುಟ್ಟಾಕುತ್ತಿದೆ. ತುಂಡು ಬಟ್ಟೆ ಅಥವಾ ಡೀಪ್ ನೆಕ್ ಗೌನ್ ಧರಿಸಿ ನಟಿಯರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ವಿಡಿಯೋ, ಫೋಟೊಗಳು ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿ ಸದ್ದು ಮಾಡ್ತಿದೆ. ಇದೇ ವಿಚಾರದ ಬಗ್ಗೆ ತೆಲುಗು ನಟ ಶಿವಾಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿವಾಜಿ ನಟನೆಯ 'ದಂಡೋರ' ಸಿನಿಮಾ ಈ ವಾರ ತೆರೆಗೆ ಬರ್ತಿದೆ. ಚಿತ್ರದ ಪ್ರೀ ರಿಲೀಸ್ ಈವೆಂಟ್‌ನಲ್ಲಿ ಭಾಗಿಯಾಗಿ ಸಾಕಷ್ಟು ವಿಚಾರಗಳ ಬಗ್ಗೆ ಅವರು ಮಾತನಾಡಿದ್ದಾರೆ. ಇದ್ದಕ್ಕಿದ್ದಂತೆ ನಟಿಯರ ಕಾಸ್ಟ್ಯೂಮ್ ಬಗ್ಗೆ ಶಿವಾಜಿ ಮಾತನಾಡಿದ ಮಾತುಗಳು ಸಖಯ್ ವೈರಲ್ ಆಗ್ತಿದೆ. ಇದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ವಿಚಾರ ವಿವಾದಕ್ಕೆ ಕಾರಣವಾಗಿದೆ.

ನಟಿಯರು ಅಂಗಾಂಗ ಪ್ರದರ್ಶನ ಮಾಡುವಂತಹ ಬಟ್ಟೆ ಧರಿಸುವ ಬಗ್ಗೆ ನಟ ಶಿವಾಜಿ ಕಟು ಪದಗಳಿಂದ ಟೀಕಿಸಿದ್ದಾರೆ. ಇತ್ತೀಚೆಗೆ ಹಿರಿಯ ನಟಿ ಇಂದ್ರಜಾ ಕೂಡ ಇದೇ ವಿಚಾರದ ಬಗ್ಗೆ ಮಾತನಾಡಿದ್ದರು. ಎಲ್ಲಿ ಯಾವ ಬಟ್ಟೆ ತೊಡಬೇಕು ಎನ್ನುವ ಪರಿಜ್ಞಾನ ಇರಬೇಕು. ಒಂದು ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಬಟ್ಟೆ ಹಾಕಿಕೊಂಡು ಬಂದರೆ ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಕಾಮೆಂಟ್ ಮಾಡುತ್ತಾರೆ. ಅದನ್ನು ಎದುರಿಸುವ ಧೈರ್ಯ ಇರುವವರು ಹೇಗೆ ಬೇಕಾದರೂ ಬಟ್ಟೆ ಹಾಕಿ. ನಿಮ್ಮ ಇಷ್ಟದಂತೆ ನೀವು ಬಟ್ಟೆ ಹಾಕಿದ್ರೆ, ಕಾಮೆಂಟ್ ಮಾಡುವುದು ಅವರಿಷ್ಟ, ಅದನ್ನು ತಪ್ಪು ಎನ್ನಲು ಸಾಧ್ಯವಿಲ್ಲ ಎಂದು ಇಂದ್ರಜಾ ಹೇಳಿದ್ದರು.
ಇದೀಗ ನಟ ಶಿವಾಜಿ ಮಾತನಾಡಿ "ಹೀರೊಯಿನ್ಸ್ ಹೀಗೆ ಕೆಟ್ಟದಾಗಿ ಬಟ್ಟೆ ಹಾಕಿಕೊಂಡು ಹೋದ್ರೆ ದರಿದ್ರ ಅನುಭವಿಸಬೇಕಾಗುತ್ತದೆ. ನಟಿಯರು ಯಾರು ನನ್ನ ಮಾತನ್ನು ಕೆಟ್ಟದಾಗಿ ಭಾವಿಸಬೇಡಿ. ನೀವು ಕೇಳಿದ್ರೂ ತಿರುಗೇಟು ಕೊಡ್ತೀನಿ. ನಿಮ್ಮ ಅಂದ ಸೀರೆಯಲ್ಲಿ, ಮೈತುಂಬಾ ತೊಡವ ಬಟ್ಟೆಯಲ್ಲಿರುತ್ತೆ. ಅಂಗಾಂಗ ಪ್ರದರ್ಶನದಲ್ಲಿ ಏನೂ ಇರಲ್ಲ. ಇಂತಹ ಬಟ್ಟೆ ಹಾಕಿಕೊಂಡಾಗ ಕೆಲವರು ನಗುತ್ತಾ ಚೆನ್ನಾಗಿದೆ ಅನ್ನಬಹುದು. ಮನಸ್ಸಿನಲ್ಲಿ ಥೂ ಇಂದೆಂಥಾ ಬಟ್ಟೆ ಹಾಕ್ಕೊಂಡಿದ್ದೀಯಾ? ಚೆನ್ನಾಗಿರೋ ಬಟ್ಟೆ ಹಾಕಿಕೊಳ್ಳಬಹುದಿಲ್ಲಾ, ಅಂತ ಹೇಳಬೇಕು ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾರೆ, ಆದ್ರೆ ಹೇಳೋಕ್ಕಾಗಲ್ಲ" ಎಂದಿದ್ದಾರೆ.
ಸ್ತ್ರೀ ಸ್ವಾತಂತ್ರ್ಯ ಇಲ್ವಾ? ಸ್ವೇಚ್ಚೆ ಇಲ್ವಾ? ಎಂದು ಕೇಳಬಹುದು. ಸ್ತ್ರೀ ಅಂದ್ರೆ ಪ್ರಕೃತಿ. ಎಷ್ಟು ಅಂದವಾಗಿದ್ದರೆ ಅಷ್ಟು ಗೌರವ ಹೆಚ್ಚಾಗುತ್ತದೆ ಎಂದು ಶಿವಾಜಿ ಹೇಳಿದ್ದಾರೆ. "ನಮ್ಮ ಅಮ್ಮ ಯಾವಾಗಲೂ ಮನಸ್ಸಿನಲ್ಲಿ ಇರುತ್ತಾರೆ. ನಟಿ ಸಾವಿತ್ರಿ, ಸೌಂದರ್ಯ, ರಶ್ಮಿಕಾ ಹೀಗೆ ಸಾಕಷ್ಟು ಜನ ಇದ್ದಾರೆ. ಇವರೆಲ್ಲಾ ಆ ರೀತಿ ಇಂಪ್ಯಾಕ್ಟ್ ಕ್ರಿಯೇಟ್ ಮಾಡಿದ್ದಾರೆ. ಅದಕ್ಕೆ ಹೇಳ್ತಿದ್ದೀನಿ. ಗ್ಲಾಮರ್ ಒಂದು ಹಂತದವರೆಗೆ ಇರಬೇಕು, ಅತಿಯಾಗಬಾರದು. ಸೀರೆ ಉಟ್ಟು ನಮ್ಮ ಸಂಸ್ಕೃತಿಯನ್ನು ಕಾಪಾಡಿ" ಎಂದು ಶಿವಾಜಿ ಸಲಹೆ ನೀಡಿದ್ದಾರೆ.
ನಟ ಶಿವಾಜಿ ಹೇಳಿಕೆಗೆ ಗಾಯಕಿ ಚಿನ್ಮಯಿ ಶ್ರೀಪಾದ ತಿರುಗೇಟು ನೀಡಿದ್ದಾರೆ. ಶಿವಾಜಿ ಮಹಿಳೆಯ ಬಗ್ಗೆ ಬಳಸಿದ ಪದಗಳ ಬಗ್ಗೆ ಆಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಸ್ವತಃ ಶಿವಾಜಿ ಜೀನ್ಸ್ ಮತ್ತು ಹೂಡಿ ಧರಿಸಿದ್ದಾರೆ. ಅವರು ಧೋತಿಗಳನ್ನು ಮಾತ್ರ ಧರಿಸಬೇಕು, ಭಾರತೀಯ ಸಂಸ್ಕೃತಿಯನ್ನು ಅನುಸರಿಸಬೇಕು. ಬೊಟ್ಟು ಇಟ್ಟುಕೊಳ್ಳಬೇಕು, ವಿವಾಹಿತರಾಗಿದ್ದರೆ ಅವರು ಅದನ್ನು ಸೂಚಿಸಲು ಕಂಕಣ ಮತ್ತು ಕಾಲುಂಗರ ಧರಿಸಬೇಕು" ಎಂದು ಚಿನ್ಮಯಿ ತಿರುಗೇಟು ನೀಡಿದ್ದಾರೆ.
ಸ್ಯಾಂಡಲ್‌ವುಡ್‌ನಲ್ಲೇ ಇತ್ತೀಚೆಗೆ ಇಂತಾದೊಂದು ವಿವಾದ ಸೃಷ್ಟಿಯಾಗಿತ್ತು. 'ಲವ್ ಯೂ ಮುದ್ದು' ಚಿತ್ರದ ಸೆಲೆಬ್ರೆಟಿ ಶೋಗೆ ಕಿರುತೆರೆ ನಟಿ ವೈಷ್ಣವಿ ಕೌಂಡಿನ್ಯ ಡೀಪ್ ನೆಕ್ ಗೌನ್ ಧರಿಸಿ ಬಂದಿದ್ದರು. ಆ ವೀಡಿಯೋಗಳು ವೈರಲ್ ಆಗಿತ್ತು. ಈ ಬಗ್ಗೆ ಯೂಟ್ಯೂಬರ್ ಮಾಡಿದ್ದ ಕಾಮೆಂಟ್ ಬಗ್ಗೆ ನಟಿ ನಿಶ್ವಿಕಾ ನಾಯ್ಡು ಆಕ್ರೋಶ ಹೊರ ಹಾಕಿದ್ದರು. "ಈ ವಿಡಿಯೋ ಮಾಡುವಾಗ ನಿಮಗೆ ನಾಚಿಕೆಯಾಗಿಲ್ವಾ ..? ಹೆಣ್ಣು ಮತ್ತು ಆಕೆ ಧರಿಸುವ ಬಟ್ಟೆಯ ಬಗ್ಗೆ ಠೀಕೆ ಮಾಡುವ ನಿಮಗೆ ನಾಚಿಕೆಯಾಗಬೇಕು, ಹೆಣ್ಣು ಬೆ*ತ್ತಲೆ ಇದ್ದರೂ ನೀನು ಕಣ್ಣೆತ್ತಿ ನೋಡಬಾರದು, ಮಹಿಳೆಯರಿಗೆ ಯಾವ ಬಟ್ಟೆ ಹಾಕಿಕೊಳ್ಳಬೇಕು ಎಂದು ಹೇಳುವುದನ್ನು ನಿಲ್ಲಿಸಿ, ತಮ್ಮ ದೃಷ್ಟಿಕೋನ ಬದಲಿಸುವಂತೆ ಗಂಡಸರಿಗೆ ಹೇಳಿ ಎಂದಿದ್ದರು.


Click it and Unblock the Notifications











