ರಜನಿಕಾಂತ್ ತಾವು ಮದ್ಯ ಸೇವಿಸುವಾಗ ಸ್ನೇಹಿತನಿಗೆ ಕೂಲ್ ಡ್ರಿಂಕ್ಸ್ ಕೊಡುತ್ತಿದ್ದರು ಯಾಕೆ?
ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ಸಿನಿಮಾಗಳಿಂದ ಮಾತ್ರವಲ್ಲ, ಸರಳ, ಸಜ್ಜನ ವ್ಯಕ್ತಿತ್ವದಿಂದ ಜನರಿಗೆ ಹೆಚ್ಚು ಹತ್ತಿರವಾಗಿದ್ದಾರೆ. ತಲೈವಾ ತಮಗಿರುವ ಮದ್ಯ ಸೇವನೆ, ಸಿಗರೇಟ್ ಚಟದ ಬಗ್ಗೆಯೂ ಸಾಕಷ್ಟು ವೇದಿಕೆಗಳಲ್ಲಿ ಮಾತನಾಡಿದ್ದಾರೆ. ನಾನು ಮಾಡಿದ್ದು ತಪ್ಪು. ನೀವು ಅದನ್ನು ಮಾಡಬೇಡಿ ಎಂದು ಸಲಹೆ ನೀಡುತ್ತಾರೆ. ಬೆಂಗಳೂರಿನಲ್ಲಿ ಬಸ್ ಕಂಡೆಕ್ಟರ್ ಆಗಿದ್ದ ಸಮಯದಲ್ಲೇ ಶಿವಾಜಿರಾವ್ ಗಾಯಕ್‌ವಾಡ್‌ಗೆ ಮದ್ಯ, ಸಿಗರೇಟ್‌ಗೆ ಚಟ ಶುರುವಾಗಿತ್ತು.
ತೆಲುಗು ನಟ ಸುಮನ್ ಸಂದರ್ಶನವೊಂದರಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ವ್ಯಕ್ತಿತ್ವದ ಬಗ್ಗೆ ಮಾತನಾಡಿದ್ದಾರೆ. ತಲೈವಾ ಗುಣ ಎಂಥದ್ದು ಎಂದು ಕೊಂಡಾಡಿದ್ದಾರೆ. ಯಾರಿಗೂ ಗೊತ್ತಿಲ್ಲದೇ ಸೂಪರ್ ಸ್ಟಾರ್ ಸಹಾಯ ಮಾಡುವುದು, ಮತ್ತೊಬ್ಬರನ್ನು ಮೆಚ್ಚಿ ಪ್ರೋತ್ಸಾಹಿಸುವ ಗುಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 38 ವರ್ಷಗಳಿಂದ ತಮ್ಮಿಬ್ಬರ ನಡುವಿನ ಒಡನಾಟ, ಬಾಂಧವ್ಯ ಹಾಗೂ ಸ್ನೇಹದ ಬಗ್ಗೆ ಸುಮನ್ ಮಾತನಾಡಿದ್ದಾರೆ. 'ಶಿವಾಜಿ' ಚಿತ್ರದಲ್ಲಿ ರಜನಿಕಾಂತ್ ಎದುರು ಸುಮನ್ ವಿಲನ್ ಆಗಿ ಅಬ್ಬರಿಸಿದ್ದರು. ಆಗ ತಮ್ಮಿಬ್ಬರ ನಡುವೆ ನಡೆಯುತ್ತಿದ್ದ ಸಂಭಾಷಣೆ ಬಗ್ಗೆಯೂ ಸುಮನ್ ವಿವರಿಸಿದ್ದಾರೆ.

"1979ರಲ್ಲಿ ನೀವಿಬ್ಬರೂ ಸಹೋದರರಾಗಿ ಒಟ್ಟಿಗೆ ನಟಿಸಿದ್ದೆವು. ಅಂದಿನಿಂದ ನಾವು ತುಂಬಾ ಆತ್ಮೀಯರಾದೆವು. 'ನ್ಯಾಯಂ ಮೀರೆ ಚೆಪ್ಪಾಲಿ' ಚಿತ್ರದಲ್ಲಿ ನಾನು ಹೀರೊ. ರಜನಿಕಾಂತ್ ಅತಿಥಿ ಪಾತ್ರದಲ್ಲಿ ನಟಿಸಿದ್ದರು. 'ಶಿವಾಜಿ' ಮೊದಲ ಸಹ ನಾನು ಖಳನಟನಾಗಿ ನಟಿಸಿದ್ದೆ. ನನಗೆ ಆ ಸಿನಿಮಾ ಒಳ್ಳೆ ಹೆಸರು ತಂದುಕೊಟ್ಟಿತ್ತು. ತಮಿಳುನಾಡು ರಾಜ್ಯ ಪ್ರಶಸ್ತಿ ಕೂಡ ಸಿಕ್ಕಿತ್ತು. ರಜನಿಕಾಂತ್ ನನಗೆ ಮಾಡ್ರನ್ ಗುರು ರೀತಿ. ಅವರಂದ್ರೆ ನನಗೆ ವಿಶೇಷವಾದ ಗೌರವ ಎಂದು ಸುಮನ್ ಹೇಳಿದ್ದಾರೆ.
"ನಾನು, ರಜನಿಕಾಂತ್ ಆಗಾಗ್ಗೆ ಭೇಟಿ ಆಗುತ್ತೇವೆ. ಕೆಲವೊಮ್ಮೆ ಮದ್ಯ ಸೇವಿಸುವಾಗ ನನಗೆ ಫೋನ್ ಮಾಡುವುದು ಅವರ ಅಭ್ಯಾಸ. ಮದ್ಯದ ಬಾಟಲಿ ಇಡುತ್ತಾರೆ. ಎರಡು ಗ್ಲಾಸ್ ಇಡ್ತಾರೆ. ನೀರು ಇಟ್ಟಿರುತ್ತಾರೆ. ಕೋಕ್ ಕೂಡ ಇರುತ್ತದೆ. ಒಂದು ಲೋಟಕ್ಕೆ ಮದ್ಯ ಹಾಕಿಕೊಳ್ಳುತ್ತಾರೆ. ನಮ್ಮ ಲೋಟಕ್ಕೆ ಕೋಕ್ (ತಂಪು ಪಾನೀಯ) ಹಾಕುತ್ತಾರೆ. ಹೀಗೆ ಹಲವು ಬಾರಿ ಮಾಡಿದ್ದ. ಯಾಕೆ ಹೀಗೆ ಮಾಡುತ್ತಿದ್ದೀಯಾ ಎಂದು ಕೇಳಿದಾಗ. ಇದು ನನ್ನ ದೇಹ, ಇದನ್ನು ಹಾಳು ಮಾಡಿಕೊಳ್ಳುತ್ತಿದ್ದೇನೆ. ನಾನು ನಿನ್ನ ದೇಹವನ್ನು ಏಕೆ ಹಾಳು ಮಾಡಲಿ? ನಾನು ನಿನ್ನನ್ನು ಕರೆದಿದ್ದು ಮಾತನಾಡಲು. ಇನ್ನ ದೇಹ ಹಾಳು ಮಾಡಲು ಅಲ್ಲ. ಕೋಕ್ ಕುಡಿ ಎನ್ನುತ್ತಿದ್ದರು. ನಾನು ಕುಡಿದರೂ, ಸಿಗರೇಟ್ ಸೇದಿದರೂ ಅದು ನನ್ನ ಆಯ್ಕೆ. ನಿನ್ನನ್ನು ಕರೆದು ಯಾಕೆ ಹಾಳು ಮಾಡಲಿ ಎನ್ನುತ್ತಿದ್ದರು, ಇದು ರಜನಿಕಾಂತ್ ಮನಸ್ಥಿತಿ" ಎಂದು ಸುಮನ್ ಹೇಳಿದ್ದಾರೆ.

"ಶಿವಾಜಿ' ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣ ಬೆಂಗಳೂರಿನ ಎಂಎಸ್ ರಾಮಯ್ಯ ಕಾಲೇಜಿನಲ್ಲಿ ನಡೆಯುತ್ತಿತ್ತು. ಒಂದು ದಿನ ಟೆರೇಸ್ ಮೇಲೆ ಶೂಟಿಂಗ್ ನಡೆಯುತ್ತಿದ್ದಾಗ ನನ್ನ ಕೈ ಹಿಡಿದು ಮೇಲಿಂದ ಒಂದು ಜಾಗ ತೋರಿಸಿದರು. ಒಂದು ಸಣ್ಣ ಶಾಪ್ ಕಾಣಿಸುತ್ತಿತ್ತು. ಏನದು ಎಂದು ಕೇಳಿದಾಗ.. 'ಇಲ್ಲಿ ನಾನು ಮೂಟೆಗಳನ್ನು ಹೊರುತ್ತಿದ್ದೆ. ಸಂಜೆ ಕಂಡಕ್ಟರ್ ಕೆಲಸ ಮುಗಿಸಿ ನಾನು ಸಿಗರೇಟ್ ಸೇದಲು, ಮದ್ಯ ಸೇವಿಸಲು ಬೇಕಾದ ಹಣಕ್ಕೆ ಇಲ್ಲಿ ಮೂಟೆಗಳನ್ನು ಹೊರುವ ಕೆಲಸ ಮಾಡುತ್ತಿದ್ದೆ ಎಂದರು. ಆ ಮಟ್ಟಕ್ಕೆ ಏರಿದರೂ ರಜನಿಕಾಂತ್ ಹಳೆಯದ್ದನ್ನು ಮರೆತವರಲ್ಲ" ಎಂದು ಸುಮನ್ ವಿವರಿಸಿದ್ದಾರೆ.
"ನಟನೆ ವಿಚಾರದಲ್ಲಿ ರಜನಿಕಾಂತ್ ಇನ್‌ಸೆಕ್ಯುರಿಟಿ ಫೀಲ್ ಆಗುತ್ತಿರಲಿಲ್ಲ. 'ಶಿವಾಜಿ' ಸಿನಿಮಾ ಮಾಡುವಾಗ ನಾನು ಚೆನ್ನಾಗಿ ನಟಿಸಿದರೆ ಶಹಬ್ಬಾಶ್ ಎನ್ನುತ್ತಿದ್ದರು. ಸುಮನ್ ಮೊದಲ ಬಾರಿಗೆ ನನಗಾಗಿ ವಿಲನ್ ಆಗಿ ನಟಿಸುತ್ತಿದ್ದಾರೆ ಎಂದು ನಿರ್ದೇಶಕ ಶಂಕರ್ ಬಳಿ ಕೂಡ ಹೇಳುತ್ತಿದ್ದರು. ನನ್ನ ಸ್ಥಾನವನ್ನು ಯಾರಾದರೂ ಕಿತ್ತುಕೊಳ್ಳುತ್ತಾರೆ ಎಂಬ ಭಯ ಅವರಿಗಿಲ್ಲ. ಯಾಕೆಂದರೆ ಅವರ ಸ್ಥಾನವೇ ಬೇರೆ. ಆದಾಗ್ಯೂ, ಇದು ತುಂಬಾ ತಗ್ಗಿ ಬಗ್ಗಿ ಇರುತ್ತಾರೆ. ಇನ್ನೊಂದು ವಿಷಯವೆಂದರೆ ಆತ ಎಂದಿಗೂ ಯಾವುದೇ ಶಿಫಾರಸ್ಸು ಮಾಡುವುದಿಲ್ಲ. ಹೀರೋ, ಹೀರೋಯಿನ್ ಅನ್ನೋದು ನಿರ್ದೇಶಕ, ನಿರ್ಮಾಪಕರಿಗೆ ಬಿಟ್ಟ ವಿಚಾರ. ಸಮಯ ಪಾಲನೆಯಲ್ಲೂ ಮುಂದಿರುತ್ತಾರೆ. ನೂರಕ್ಕೆ ನೂರಷ್ಟು ವಾಸ್ತವ ಮಾತನಾಡುತ್ತಾರೆ. ಸುಳ್ಳು ಮಾತನಾಡುವರಲ್ಲ" ಎಂದು ರಜನಿಕಾಂತ್ ಬಗ್ಗೆ ಸುಮನ್ ಹೇಳಿದ್ದಾರೆ.


Click it and Unblock the Notifications











