ತೆಲುಗು ನಟ ವಿಜಯ್ ದೇವರಕೊಂಡ ಕಾರು ಅಪಘಾತ
ನಟ ವಿಜಯ್ ದೇವರಕೊಂಡ ಪ್ರಯಾಣಿಸುತ್ತಿದ್ದ ಕಾರು ಸೋಮವಾರ (ಅಕ್ಟೋಬರ್ 06) ಅಪಘಾತಕ್ಕೀಡಾಗಿದೆ. ಪುಟ್ಟಪರ್ತಿಯಿಂದ ತಮ್ಮ ಸ್ನೇಹಿತರೊಂದಿಗೆ ಹೈದರಾಬಾದ್‌ಗೆ ಹಿಂತಿರುಗುವಾಗ ಈ ಘಟನೆ ನಡೆದಿದೆ. ಜೋಗುಲಾಂಬ ಗದ್ವಾಲ್ ಜಿಲ್ಲೆಯ ಉಂಡವಳ್ಳಿ ಬಳಿ ಈ ಅಪಘಾತ ಸಂಭವಿಸಿದ್ದು ನಟ ವಿಜಯ್ ದೇವರಕೊಂಡ ಸುರಕ್ಷಿತವಾಗಿದ್ದಾರೆ.
ವಿಜಯ್ ಪ್ರಯಾಣಿಸುತ್ತಿದ್ದ ಕಾರಿಗೆ ಬೊಲೆರೋ ಕಾರ್ ಬಂದು ಡಿಕ್ಕಿ ಹೊಡೆದಿದೆ. ಅವರ ಕಾರಿಗೆ ಕೊಂಚ ಹಾನಿಯಾಗಿದೆ. ಕೂಡಲೇ ಸ್ನೇಹಿತರ ಕಾರಿನಲ್ಲಿ ವಿಜಯ್ ಹೊರಟು ಬಂದಿದ್ದಾರೆ. ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣ ಜೊತೆ ವಿಜಯ್ ಮದುವೆ ನಿಶ್ಚಿತಾರ್ಥ ನಡೆದಿದೆ ಎನ್ನುವ ಊಹಾಪೋಹ ಶುರುವಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಕೊನೆಯದಾಗಿ 'ಕಿಂಗ್‌ಡಮ್' ಎಂಬ ಚಿತ್ರದಲ್ಲಿ ವಿಜಯ್ ದೇವರಕೊಂಡ ನಟಿಸಿದ್ದರು. 'ಲೈಗರ್' ಸಿನಿಮಾ ಸೋಲಿನ ಬಳಿಕ ವಿಜಯ್ ನಟಿಸಿದ ಯಾವುದೇ ಸಿನಿಮಾ ಗೆಲ್ಲಲಿಲ್ಲ. ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದ 'ಕಿಂಗ್‌ಡಮ್' ಸಿನಿಮಾ ಕೂಡ ನಿರಾಸೆ ಅನುಭವಿಸಿತ್ತು. ಕಪ್ಪು ಬಣ್ಣದ ಲೆಕ್ಸಸ್ ಕಾರಿನಲ್ಲಿ ವಿಜಯ್ ದೇವರಕೊಂಡ ಪ್ರಯಾಣಿಸುತ್ತಿದ್ದರು. ಸದ್ಯ ಕಾರ್ ಹಾನಿಗೊಳಗಾಗಿರುವ ವೀಡಿಯೋ ವೈರಲ್ ಆಗುತ್ತಿದೆ.
ಪುಟ್ಟಪರ್ತಿ ಶಾಲೆಯಲ್ಲೇ ವಿಜಯ್ ದೇವರಕೊಂಡ ಹಾಗೂ ಸಹೋದರ ಆನಂದ್ ದೇವರಕೊಂಡು ಓದಿ ಬೆಳೆದವರು. ಇದೇ ಕಾರಣಕ್ಕೆ ಆಗಾಗ್ಗೆ ಅಲ್ಲಿಗೆ ಭೇಟಿ ನೀಡುತ್ತಾರೆ. ಕಾರ್ ಅಪಘಾತದ ಬಗ್ಗೆ ವಿಜಯ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. "ಯಾವುದೇ ಸಮಸ್ಯೆ ಇಲ್ಲ. ಕಾರು ಅಪಘಾತಕ್ಕೀಡಾಯಿತು, ಆದರೆ ನಾವೆಲ್ಲರೂ ಚೆನ್ನಾಗಿದ್ದೇವೆ. ಜಿಮ್‌ಗೆ ಹೋಗಿ ವರ್ಕ್‌ಔಟ್ ಕೂಡ ಮಾಡಿ ಬಂದೆ. ನನ್ನ ತಲೆ ನೋಯುತ್ತಿದೆ, ಆದರೆ ಬಿರಿಯಾನಿ, ನಿದ್ರೆ ಯಾವುದೂ ಸರಿಯಾಗಲ್ಲ. ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದ" ಎಂದು ಬರೆದುಕೊಂಡಿದ್ದಾರೆ.
"ನಟ ವಿಜಯ್ ದೇವರಕೊಂಡ ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಪುಟ್ಟಪರ್ತಿಯಿಂದ ಹೈದರಾಬಾದ್‌ಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ, ಮುಂದೆ ಚಲಿಸುತ್ತಿದ್ದ ಬೊಲೆರೊ ವಾಹನ ಇದ್ದಕ್ಕಿದ್ದಂತೆ ಬಲಕ್ಕೆ ತಿರುಗಿತು, ಇದರಿಂದಾಗಿ ವಿಜಯ್ ಪ್ರಯಾಣಿಸುತ್ತಿದ್ದ ಕಾರು ಬೊಲೆರೊದ ಎಡಭಾಗಕ್ಕೆ ಡಿಕ್ಕಿ ಹೊಡೆದಿದೆ. ಕಾರಿಗೆ ಎಡಭಾಗದಲ್ಲಿ ಹಾನಿಯಾಗಿದೆ, ಆದರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ವಿಜಯ್ ದೇವರಕೊಂಡ ಮತ್ತು ಇತರ ಇಬ್ಬರು ಕಾರಿನಲ್ಲಿದ್ದರು. ಅವರು ತಕ್ಷಣ ಮತ್ತೊಂದು ಕಾರಿನಲ್ಲಿ ಹೊರಟರು. ಅವರ ತಂಡ ಇನ್ಸ್‌ರೆನ್ಸ್ ಕಾರಣಕ್ಕೆ ಪೊಲೀಸರಿಗೆ ದೂರು ನೀಡಿದ್ದಾರೆ" ಎಂದು ಪೊಲೀಸ್ ಮೂಲಗಳು ತಿಳಿಸಿರುವುದಾಗಿ ANI ವರದಿ ಮಾಡಿದೆ.
'ಪೆಳ್ಳಿಚೂಪುಲು' ಚಿತ್ರದಲ್ಲಿ ಹೀರೊ ಆಗಿ ನಟಿಸಿ ಗೆದ್ದ ವಿಜಯ್ ದೇವರಕೊಂಡ ಬಳಿಕ 'ಅರ್ಜುನ್ ರೆಡ್ಡಿ' ಸಿನಿಮಾ ಮೂಲಕ ಸಂಚಲನ ಸೃಷ್ಟಿಸಿದ್ದರು. 'ಗೀತಾಗೋವಿಂದಂ' ಚಿತ್ರದಲ್ಲಿ ನಟಿಸಿ ಭರ್ಜರಿ ಸಕ್ಸಸ್ ಕಂಡಿದ್ದರು. ಆದರೆ ಬಳಿಕ ನಟಿಸಿದ ಯಾವುದೇ ಸಿನಿಮಾ ದೊಡ್ಡದಾಗಿ ಸದ್ದು ಮಾಡಲಿಲ್ಲ. ವಿಜಯ್ ಹಾಗೂ ರಶ್ಮಿಕಾ ಆತ್ಮೀಯ ಸ್ನೇಹಿತರು. ಇಬ್ಬರೂ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಪದೇ ಪದೆ ಗುಲ್ಲಾಗುತ್ತದೆ. ಆದರೆ ಇಬ್ಬರೂ ಅದನ್ನು ಒಪ್ಪುತ್ತಿಲ್ಲ.


Click it and Unblock the Notifications











