ನಾಸ್ತಿಕನ ಆಧ್ಯಾತ್ಮಿಕ ಪಯಣ: ವಿಷ್ಣು ಮಂಚು ನಟನೆಯ 'ಕನ್ನಪ್ಪ' ಫಸ್ಟ್ ಲುಕ್ ಔಟ್, ಶಿವಣ್ಣ ಇರೋದು ಪಕ್ಕ!
ತೆಲುಗು ನಟ ವಿಷ್ಣು ಮಂಚು ಅವರ ಅತ್ಯಂತ ಮಹತ್ವಾಕಾಂಕ್ಷೆಯ ಚಿತ್ರ 'ಕನ್ನಪ್ಪ' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ನವೆಂಬರ್ 23 ರಂದು ವಿಷ್ಣು ಮಂಚು ಹುಟ್ಟುಹಬ್ಬವಿದ್ದು, ಇದರ ಹಿನ್ನೆಲೆ ಪೋಸ್ಟರ್ ರಿಲೀಸ್ ಆಗಿದೆ. ಇಂಗ್ಲಿಷ್, ತೆಲುಗು, ತಮಿಳು, ಮಲಯಾಳಂ, ಹಿಂದಿ ಮತ್ತು ಕನ್ನಡದಲ್ಲಿ ಪೋಸ್ಟರ್‌ಗಳನ್ನು ಹಂಚಿಕೊಳ್ಳಲಾಗಿದೆ.
ಸಿನಿಮಾ ಪೋಸ್ಟರ್‌ನಲ್ಲಿ ವಿಷ್ಣು ಮಂಚು ಯೋಧನಾಗಿ ಕಾಣಿಸಿಕೊಂಡಿದ್ದು, ಹಚ್ಚಹಸಿರಿನ ಪ್ರದೇಶದಲ್ಲಿ ಇರುವ ದೊಡ್ಡ ಶಿವಲಿಂಗದ ಕಡೆಗೆ ತನ್ನ ಬಾಣವನ್ನು ಗುರಿಯಾಗಿಸಿಕೊಂಡಿದ್ದಾನೆ. ವಿಷ್ಣು ಮಂಚು ಬೆನ್ನು ಕಾಣುತ್ತಿದ್ದು, ಮುಖ ಶಿವಲಿಂಗದ ಕಡೆಗಿದೆ. ಇನ್ನು, ಪೋಸ್ಟರ್‌ಗೆ ಕನ್ನಪ್ಪನ ಜಗತ್ತಿಗೆ ಹೆಜ್ಜೆ ಹಾಕಿ. ಅಲ್ಲಿ ಒಬ್ಬ ನಾಸ್ತಿಕ ಯೋಧ ಶಿವನ ಪರಮ ಭಕ್ತರಾಗುವ ಪಯಣವನ್ನು ಕಣ್ತುಂಬಿಕೊಳ್ಳಿ ಎಂದು ಆಹ್ವಾನಿಸಿದ್ದಾರೆ.

'ಕನ್ನಪ್ಪ' ಸಿನಿಮಾದಲ್ಲಿ ಶಿವರಾಜ್‌ಕುಮಾರ್ ಅತಿಥಿ
ಡಾ. ರಾಜ್‌ಕುಮಾರ್ ನಟಿಸಿದ್ದ 'ಬೇಡರ ಕಣ್ಣಪ್ಪ' ಕತೆಯನ್ನೇ ಹೊಸ ರೂಪದಲ್ಲಿ ಮತ್ತೆ ಪ್ರೇಕ್ಷಕರ 'ಕನ್ನಪ್ಪ' ರೂಪದಲ್ಲಿ ತರಲಾಗುತ್ತಿದೆ. ವಿಷ್ಣು ಹೀರೊ ಆಗಿ 'ಕನ್ನಪ್ಪ'ದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಈ ಪೌರಾಣಿಕ ಚಿತ್ರದಲ್ಲಿ ನಟ ಶಿವರಾಜ್ ಕುಮಾರ್ ಕೂಡ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಯಿತ್ತು. ಅದು ಈಗ ಪಕ್ಕ ಆಗಿದೆ.
'ಕನ್ನಪ್ಪ' ಸಿನಿಮಾ ಪೋಸ್ಟರ್ ಜೊತೆಗೆ, ಶಿವ ರಾಜ್‌ಕುಮಾರ್ ಅವರನ್ನು ಟ್ಯಾಗ್ ಮಾಡಲಾಗಿದೆ. ಹೀಗಾಗಿ ಅವರು ಕನ್ನಪ್ಪದಲ್ಲಿ ನಟಿಸುವುದು ಪಕ್ಕ ಆಗಿದೆ. ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಳ್ಳಲಿದ್ದಾರೆ. ಇದರ ಜೊತೆಗೆ ಮೋಹನ್ ಬಾಬು, ಮೋಹನ್ ಲಾಲ್, ಪ್ರಭಾಸ್ ಕೂಡ ಇದ್ದಾರೆ. ಪ್ರಭಾಸ್ ಶಿವನ ಪಾತ್ರದಲ್ಲಿ ನಟಿಸುತ್ತಾರೆ ಎನ್ನುವ ಸುದ್ದಿಯಿದೆ.
ವರದಿ ಪ್ರಕಾರ ನಯನತಾರಾ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಈ ಐತಿಹಾಸಿಕ ಸಿನಿಮಾದ ಚಿತ್ರೀಕರಣವು ಪ್ರಸ್ತುತ ನ್ಯೂಜಿಲೆಂಡ್‌ನ ಸುಂದರವಾದ ಪ್ರದೇಶದಲ್ಲಿ ನಡೆಯುತ್ತಿದೆ. ಕೆಲವು ವಾರಗಳ ಹಿಂದೆ, ವಿಷ್ಣು ಮಂಚು ಮತ್ತು ಅವರ ತಂಡವು ಚಿತ್ರದ ಕೆಲವು ಪ್ರಮುಖ ಭಾಗಗಳ ಚಿತ್ರೀಕರಣಕ್ಕಾಗಿ ನ್ಯೂಜಿಲೆಂಡ್‌ಗೆ ತೆರಳಿದ್ದರು.
ಕನ್ನಪ್ಪ ಚಿತ್ರೀಕರಣದಲ್ಲಿ ಗಾಯಗೊಂಡಿದ್ದ ವಿಷ್ಣು ಮಂಚು
ಕೆಲವು ವಾರಗಳ ಹಿಂದೆ ನಟ ವಿಷ್ಣು ಮಂಚು ಅವರು ಸಿನಿಮಾದ ಆಕ್ಷನ್ ಸೀಕ್ವೆನ್ಸ್‌ನ ಚಿತ್ರೀಕರಣದ ಸಮಯದಲ್ಲಿ ಅಪಘಾತಕ್ಕೆ ಈಡಾಗಿದ್ದರು. ನ್ಯೂಜಿಲೆಂಡ್‌ನಲ್ಲಿ ಈ ಘಟನೆ ಸಂಭವಿಸಿದ್ದು, ಶೂಟಿಂಗ್ ವೇಳೆ ಡ್ರೋನ್ ಅಸಮರ್ಪಕವಾಗಿ ಕಾರ್ಯನಿರ್ವಹಿಸಿ ವಿಷ್ಣು ಅವರ ಕೈಗೆ ಡಿಕ್ಕಿ ಹೊಡೆದು ಗಾಯಗಳಾಗಿವೆ. ಈ ಅವಘಡದಿಂದಾಗಿ ಶೂಟಿಂಗ್ ವೇಳಾಪಟ್ಟಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
ಮಂಚು ವಿಷ್ಣು ಕನ್ನಪ್ಪ ಆಗಿದ್ದು, ಚಿತ್ರಕತೆಯಲ್ಲಿಯೂ ಕೆಲಸ ಮಾಡಿದ್ದಾರೆ ಎನ್ನಲಾಗಿದೆ. ಬಾಲಿವುಡ್ ನಿರ್ದೇಶಕ ಮುಖೇಶ್ ಕುಮಾರ್ ಸಿಂಗ್ ಚಿತ್ರಕ್ಕೆ ಆಕ್ಷನ ಕಟ್ ಹೇಳಿದ್ದಾರೆ. ಚಿತ್ರದ ಕಥೆಯನ್ನು ಪರುಚೂರಿ ಗೋಪಾಲಕೃಷ್ಣ, ಬುರ್ರಾ ಸಾಯಿ ಮಾಧವ್ ಮತ್ತು ತೋಟ ಪ್ರಸಾದ್ ಜಂಟಿಯಾಗಿ ಬರೆದಿದ್ದಾರೆ. ಅವಾ ಎಂಟರ್‌ಟೈನ್‌ಮೆಂಟ್ ಮತ್ತು 24 ಫ್ರೇಮ್ಸ್ ಫ್ಯಾಕ್ಟರಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈ ಚಿತ್ರಕ್ಕೆ ಮಣಿ ಶರ್ಮಾ ಮತ್ತು ಸ್ಟೀಫನ್ ದೇಸಿ ಸಂಗೀತ ಸಂಯೋಜನೆ ಮಾಡಲಿದ್ದಾರೆ.
ಈ ಮೊದಲು ಕೃತಿ ಸನೋನ್ ಅವರ ಸಹೋದರಿ ನೂಪುರ್ ಸನೋನ್ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು. ನಂತರ ಡೇಟ್ ಸಮಸ್ಯೆಯಿಂದಾಗಿ ಅವರು ಹೊರ ಬಂದಿದ್ದಾರೆ.


Click it and Unblock the Notifications











