ತೆಲುಗಿನಲ್ಲಿ ಬೆಳೆಯಬೇಕು ಅಂದರೆ 'ಸೈಜ್' ದೊಡ್ಡದಿರಬೇಕು ಎಂದ ನಿರ್ದೇಶಕನ ಯುಟರ್ನ, ಬೇಸತ್ತ ನಟಿ ಹೇಳಿದ್ದೇನು?
ಬಾಯಿಂದ ಹೊರಗೆ ಹೋದ ಮಾತು ಬಿಟ್ಟ ಬಾಣದಂತೆ, ಒಮ್ಮೆ ಚಿಮ್ಮಿದ ಮೇಲೆ ಆಯ್ತು. ಮತ್ತೆ ಹಿಂದಿರುಗಲಾರದು. ಹೀಗಾಗಿ ಆಡಬೇಕಾದ ಮಾತನ್ನು ಸಂದರ್ಭವನ್ನರಿತು, ಪರಿಣಾಮವನ್ನು ಆಲೋಚಿಸಿ, ಹದದಲ್ಲಿ ಮಾತನಾಡಬೇಕು ಎನ್ನುತ್ತಾರೆ ಹಿರಿಯರು. ಆದರೆ, ಇದನ್ನರಿಯದ ಕೆಲವರು ಬಾಯಿಗೆ ಬಂದಂತೆ ಮಾತನಾಡುವುದನ್ನೇ ರೂಢಿಸಿಕೊಂಡಿರುತ್ತಾರೆ. ಉದಾಹರಣೆಗೆ ತ್ರಿನಾಧ ರಾವ್ ನಕ್ಕಿನ್.
ಹೌದು, ಮೊನ್ನೆ .. ಮೊನ್ನೆಯಷ್ಟೇ .. ತಮ್ಮ ಚಿತ್ರ ಮಜಾಕಾ ಚಿತ್ರದ ಟೀಸರ್ ಬಿಡುಗಡೆ ಸಮಾರಂಭದಲ್ಲಿ ತ್ರಿನಾಧ ರಾವ್ ನಕ್ಕಿನ್ ಚಿತ್ರದ ನಾಯಕಿ ಅಂಶು ಅವರ ಕುರಿತು ಅಸಹ್ಯಕರ ಹೇಳಿಕೆಯನ್ನು ನೀಡಿದ್ದರು. ಮನ್ಮಥುಡು ಚಿತ್ರ ನೋಡುವ ಸಮಯದಲ್ಲಿ ಈ ಹುಡುಗಿ ಲಡ್ಡು ತರ ಇದ್ದಳು ಆದರೆ ಈಗ ತಳ್ಳಗಾಗಿದ್ದಾಳೆ. ಹೀಗಿದ್ದರೆ ತೆಲುಗು ಚಿತ್ರರಂಗಕ್ಕೆ ಸಾಕಾಗುವುದಿಲ್ಲ. ನಮ್ಮಲ್ಲಿ ದೊಡ್ಡದಾಗಿರಬೇಕು ಎಂದು ಹೇಳಿದ್ದರು. ಮುಂದುವರೆದು ಈ ಕಾರಣಕ್ಕೆ ನಾನು ತೂಕ ಜಾಸ್ತಿ ಮಾಡ್ಕೋ ಚೆನ್ನಾಗಿ ತಿನ್ನುವುದನ್ನು ಕಲಿ ಎಂದು ಹೇಳಿದ್ದೆ, ಪರವಾಗಿಲ್ಲ ಈಗ ಸುಧಾರಿಸಿದ್ದಾಳೆ ಮುಂದೆ ಇನ್ನೂ ಹೆಚ್ಚು ಸುಧಾರಿಸುತ್ತಾಳೆ ಎಂದು ಹೇಳಿದ್ದರು. ತ್ರಿನಾಧ ರಾವ್ ನಕ್ಕಿನ್ ಅವರ ಈ ಹೇಳಿಕೆಯಿಂದ ಅಲ್ಲಿಯೇ ಎದುರು ಕುಳಿತಿದ್ದ ಅಂಶು ಮುಜುಗರಕ್ಕೀಡಾದರು. ನಕ್ಕು ಸುಮ್ಮನಾದರು.

ಆದರೆ. ಸಾಮಾಜಿಕ ಜಾಲತಾಣದ ಸುಮ್ಮನಾಗಲಿಲ್ಲ. ತ್ರಿನಾಧ ರಾವ್ ಅವರ ಈ ಹೇಳಿಕೆಗೆ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ತ್ರಿನಾಧ ಅವರ ಕೀಳು ಮನಸ್ಥಿತಿಗೆ ಇವರಾಡಿದ ಈ ಮಾತುಗಳೇ ಸಾಕ್ಷಿ ಎಂದಿದ್ದ ಅನೇಕರು ತ್ರಿನಾಧ ಅವರ ಅಶ್ಲೀಲ ಮತ್ತು ಅವಹೇಳನಾಕಾರಿ ಹೇಳಿಕೆಯನ್ನು ಖಂಡಿಸಿದ್ದರು. ಇನ್ನು, ತ್ರಿನಾಧ ರಾವ್ ನಕ್ಕಿನ್ ಅವರ ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಮಹಿಳಾ ಆಯೋಗ ಆ ನಂತರ ತ್ರಿನಾಧ ಅವರಿಗೆ ನೋಟಿಸ್ ನೀಡಿತ್ತು.
ಈ ಹಿನ್ನೆಲೆ ಈಗ ತ್ರಿನಾಧ ರಾವ್ ನಕ್ಕಿನ್ ಈಗ ಕ್ಷಮೆ ಕೋರಿದ್ದಾರೆ. ನಾನು ಮಾತನಾಡಿದ್ದು ತಪ್ಪು ಎನ್ನುವ ಜ್ಞಾನೋದಯ ನನಗೆ ಆಗಿದೆ ಕ್ಷಮೆ ಇರಲಿ ಎಂದು ಹೇಳಿದ್ದಾರೆ. ಮಜಾಕಾ ಚಿತ್ರದ ಟೀಸರ್ ಬಿಡುಗಡೆ ಸಮಯದಲ್ಲಿ ನನ್ನ ಮಾತುಗಳಿಂದ ಹಲವರಿಗೆ ನೋವಾದ ವಿಚಾರ ನನ್ನ ಗಮನಕ್ಕೆ ಬಂದಿದೆ. ನಾನು ಬೇಕೆಂದು ಆ ಮಾತುಗಳನ್ನು ಹೇಳಿಲ್ಲ. ನೋವು ಮಾಡುವ ಉದ್ದೇಶ ಕೂಡ ನನಗೆ ಇರಲಿಲ್ಲ ಎಂದಿರುವ ತ್ರಿನಾಧ ರಾವ್ ನಕ್ಕಿನ್ ಅಲ್ಲಿದ್ದ ಎಲ್ಲರನ್ನು ನಗೆಗಡಲಿನಲ್ಲಿ ತೇಲಿಸುವ ಉದ್ದೇಶದಿಂದ ಆ ಮಾತುಗಳನ್ನು ನಾನು ಹೇಳಿದ್ದೇ ಹೊರತು ಅದರ ಹಿಂದೆ ಬೇರೆ ಯಾವುದೇ ದುರುದ್ದೇಶ ಇರಲಿಲ್ಲ ಎಂದು ಹೇಳಿದ್ದಾರೆ. ನನ್ನ ಬಾಯಿಂದ ಆ ಮಾತುಗಳು ಬಂದಿದ್ದು ದುರದೃಷ್ಟಕರ ಎಂದಿದ್ದಾರೆ. ನಿಮ್ಮೆಲ್ಲರ ಬಳಿ ನಾನು ಕ್ಷಮೆಯಾಚಿಸುತ್ತೇನೆ ಎಂದಿರುವ ನಿರ್ದೇಶಕ ತ್ರಿನಾಧ ನಾಯಕಿ ಅಂಶು ಅವರಲ್ಲಿ ಕೂಡ ಸಾರಿ ಕೇಳಿದ್ದಾರೆ.
ಇನ್ನು, ಈ ವಿಚಾರದ ಕುರಿತು ತಮ್ಮ ಮೌನವನ್ನು ಮುರಿದಿರುವ ನಾಯಕಿ ಅಂಶು ಈ ವಿಚಾರವನ್ನು ಇಲ್ಲಿಗೆ ಬಿಟ್ಟುಬಿಡುವಂತೆ ವಿಡಿಯೋ ಮೂಲಕ ಮನವಿಯನ್ನು ಮಾಡಿಕೊಂಡಿದ್ದಾರೆ. ಇದೆಲ್ಲವೂ ನಡೆದಿದ್ದು ದುರದೃಷ್ಟಕರ ಎಂದಿರುವ ಅಂಶು ಚಿತ್ರದ ನಿರ್ದೇಶಕ ತ್ರಿನಾಧ ರಾವ್ ನಕ್ಕಿನ್ ನಿಜವಾಗಿಯೂ ತುಂಬಾ ಒಳ್ಳೆಯ ವ್ಯಕ್ತಿ, ನನ್ನನ್ನೂ ತಮ್ಮ ಕುಟುಂಬದ ಸದಸ್ಯರಂತೆ ಅವರು ನೋಡಿಕೊಂಡಿದ್ದಾರೆ. ಈ ಚಿತ್ರಕ್ಕೆ ನಾನು 60 ದಿನ ಕೆಲಸ ಮಾಡಿದ್ದೇನೆ ಈ 60 ದಿನಗಳಲ್ಲಿ ನನಗೆ ಅವರು ಅಪಾರವಾದ ಗೌರವ ಮತ್ತು ಪ್ರೀತಿಯನ್ನು ನೀಡಿದ್ದಾರೆ ಎಂದು ಹೇಳಿದ್ದಾರೆ. ತ್ರಿನಾಧ ರಾವ್ ನಕ್ಕಿನ್ ಅವರ ಮಾತುಗಳನ್ನೆಲ್ಲ ಮನಸಿಗೆ ತೆಗೆದುಕೊಳ್ಳಬೇಡಿ ಎಲ್ಲವನ್ನೂ ಇಲ್ಲಿಗೆ ಬಿಡಿ ಎಂದು ತಮ್ಮ ಅಭಿಮಾನಿಗಳಲ್ಲಿ, ಹಿತೈಶಿಗಳಲ್ಲಿ ಮನವಿಯನ್ನು ಮಾಡಿರುವ ಅಂಶು ಚಿತ್ರ ಶೀಘ್ರದಲ್ಲಿಯೇ ತೆರೆಗೆ ಬರಲಿದೆ ಹೀಗಾಗಿ ಚಿತ್ರದ ಕುರಿತು ಮಾತನಾಡೋಣ ಎಂದಿದ್ದಾರೆ. ನನ್ನನ್ನೂ ಚಿತ್ರರಂಗಕ್ಕೆ ಮಜಾಕ ಚಿತ್ರದ ಮೂಲಕ ತ್ರಿನಾಧ ರಾವ್ ಅವರು ಕರೆತಂದಿದ್ದಾರೆ ಅವರಿಗೆ ನಾನು ಸದಾ ಆಭಾರಿ ಎಂದು ಹೇಳಿದ್ದಾರೆ.


Click it and Unblock the Notifications











