ಅನುಷ್ಕಾ ಶೆಟ್ಟಿಗೆ ವಿಚಿತ್ರ ಸಮಸ್ಯೆ: ಆ ಬಗ್ಗೆ ಸ್ವೀಟಿ ಹೇಳಿದ್ದಿಷ್ಟು
ಸಿನಿಮಾ ತಾರೆಯರು ತಮಗಿರುವ ಆರೋಗ್ಯ ಸಮಸ್ಯೆಗಳ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ನಟಿ ಸಮಂತಾ ಮಯೋಸೈಟಿಸ್ ಎನ್ನುವ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದರು. ಇದೀಗ ನಟಿ ಅನುಷ್ಕಾ ಶೆಟ್ಟಿ ತಮಗಿರುವ ವಿಚಿತ್ರ ಸಮಸ್ಯೆಯ ಬಗ್ಗೆ ಹೇಳಿಕೊಂಡಿದ್ದಾರೆ.
'ಸೈಜ್ ಜೀರೊ' ಚಿತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡು ನಟಿ ಸ್ವೀಟಿ ಎಡವಟ್ಟು ಮಾಡಿಕೊಂಡಿದ್ದರು. ಪಾತ್ರಕ್ಕಾಗಿ ತೂಕ ಹೆಚ್ಚಿಸಿಕೊಂಡು ಮತ್ತೆ ತೂಕ ಇಳಿಸಿಕೊಳ್ಳಲು ನಾನಾ ಕರಸತ್ತು ನಡೆಸುವಂತಾಯಿತು. ಇದೇ ಕಾರಣಕ್ಕೆ ಇತ್ತೀಚಿನ ವರ್ಷಗಳಲ್ಲಿ ಅನುಷ್ಕಾ ಸಿನಿಮಾಗಳಲ್ಲಿ ನಟಿಸೋದು ಕಮ್ಮಿ ಆಗಿತ್ತು. ಇದೀಗ ಅನುಷ್ಕಾ ತೂಕ ಇಳಿಸಿಕೊಂಡು ಮತ್ತೆ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಮೊದಲಿನ ಪಿಜಿಕ್ ಮಾತ್ರ ಮರಳಿ ಪಡೆಯಲು ಸಾಧ್ಯವಾಗಲಿಲ್ಲ.
ಸಂದರ್ಶನವೊಂದರಲ್ಲಿ ಅನುಷ್ಕಾ ಶೆಟ್ಟಿ ತಮಗಿರುವ ವಿಚಿತ್ರ ಸಮಸ್ಯೆಯ ಬಗ್ಗೆ ಹೇಳಿಕೊಂಡಿರುವುದಾಗಿ ವರದಿಯಾಗಿದೆ. ಇದೇ ವಿಚಾರ ಈಗ ಟಾಲಿವುಡ್‌ನಲ್ಲಿ ದೊಡ್ಡದಾಗಿ ಸದ್ದು ಮಾಡ್ತಿದೆ.

ಸ್ವೀಟಿಗೆ ವಿಚಿತ್ರ ಸಮಸ್ಯೆ
ನಟಿ ಅನುಷ್ಕಾ ಶೆಟ್ಟಿಗೆ ನಗುವ ಸಮಸ್ಯೆ ಇದೆಯಂತೆ. ಅರೇ ನಗುವುದರಲ್ಲಿ ಸಮಸ್ಯೆ ಏನು? ನಗು ಆರೋಗ್ಯಕ್ಕೆ ಒಳ್ಳೆಯದೇ ಅಲ್ಲವೇ ಅಂದರೆ, ಅಯ್ಯೋ ನಾನು ಒಮ್ಮೆ ನಗುವುದಕ್ಕೆ ಶುರು ಮಾಡಿದರೆ 15 ರಿಂದ 20 ನಿಮಿಷ ನಗುತ್ತಲೇ ಇರ್ತೀನಿ ಎಂದು ಸ್ವೀಟಿ ಹೇಳಿದ್ದಾರೆ. ಶೂಟಿಂಗ್ ಸೆಟ್‌ನಲ್ಲಿ ಜೋರಾಗಿ ನಗುವುದಕ್ಕೆ ಆರಂಭಿದರೆ ಎಲ್ಲರೂ ತಮ್ಮ ಕೆಲಸಗಳನ್ನು ನಿಲ್ಲಿಸಿ ನನ್ನನ್ನೇ ನೋಡುತ್ತಾ ನಿಂತುಬಿಡುತ್ತಾರೆ ಎಂದು ಆಕೆ ಹೇಳಿದ್ದಾರೆ. ಯಾವುದರರೂ ಫನ್ನಿ ಘಟನೆ ನೆನಪಿಸಿಕೊಂಡರೆ, ಯಾರಾದರೂ ಜೋಕ್ ಮಾಡಿದರೆ ಕಥೆ ಮುಗೀತು, ನಿರಂತರವಾಗಿ ನಗುತ್ತಲೇ ಇರ್ತೀನಿ ಎಂದಿದ್ದಾರೆ.

ನೀವು ನಕ್ಕರೆ ಚೆಂದ ಫ್ಯಾನ್ಸ್
ಶೂಟಿಂಗ್ ನಡುವೆ ನಾನು ನಗುವುದಕ್ಕೆ ಆರಂಭಿದರೆ ಕೆಲವರು ತಿಂಡಿ ತಿಂದು ಮುಗಿಸಿದರೂ ನನ್ನ ನಗು ಮಾತ್ರ ನಿಂತಿರುವುದಿಲ್ಲ ಎಂದು ಸ್ವೀಟಿ ಹೇಳಿದ್ದಾರೆ. ನನಗೆ ಕೂಡಲೇ ನಗುವನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಸಾಕಷ್ಟು ಸಂದರ್ಶನಗಳಲ್ಲಿ, ವೇದಿಕೆಗಳಲ್ಲಿ ಅನುಷ್ಕಾ ಶೆಟ್ಟಿ ಹೀಗೆ ನಗುವುದನ್ನು ನೋಡಿದ್ದೇವೆ. ಇನ್ನು ಸ್ವೀಟಿ ಮಾತು ಕೇಳಿದ ಅಭಿಮಾನಿಗಳು ನೀವು ನಕ್ಕರೆ ಕ್ಯೂಟ್ ಆಗಿ ಇರುತ್ತದೆ, ನೀವು ನಕ್ಕರೆ ನಮಗೂ ಸಂತೋಷ ಎಂದು ಕಾಮೆಂಟ್ ಮಾಡ್ತಿದ್ದಾರೆ.

ಮಿಸ್ ಶೆಟ್ಟಿ ಆಗಿ ನಟನೆ
ಸದ್ಯ ಯುವನಟ ನವೀನ್ ಪೊಲಿಶೆಟ್ಟಿ ಜೊತೆ ಅನುಷ್ಕಾ ಶೆಟ್ಟಿ ಸಿನಿಮಾವೊಂದರಲ್ಲಿ ನಟಿಸ್ತಿದ್ದಾರೆ. ಚಿತ್ರದಲ್ಲಿ ಶೆಫ್ ಪಾತ್ರದಲ್ಲಿ ಸ್ವೀಟಿ ಬಣ್ಣ ಹಚ್ಚಿದ್ದಾರೆ. ಈ ಚಿತ್ರದಲ್ಲಿ 40 ವರ್ಷ ವಯಸ್ಸಿನ ನಾಯಕಿ ಹಾಗೂ 20ರ ನಾಯಕನ ನಡುವಿನ ಪ್ರೇಮಕಥೆ ಇದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಚಿತ್ರಕ್ಕೆ ಸ್ವೀಟಿಯನ್ನು ಆಯ್ಕೆ ಮಾಡಿಕೊಂಡಿದ್ದಾರಂತೆ. ಬಹಳ ಇಷ್ಟಪಟ್ಟು ಆಕೆ ಸಿನಿಮಾ ಒಪ್ಪಿಕೊಂಡಿದ್ದಾರೆ. ಸದ್ದಿಲ್ಲದೇ ಸಿನಿಮಾ ಚಿತ್ರೀಕರಣ ನಡೀತಿದ್ದು, ಪಿ. ಮಹೇಶ್ ಬಾಬು ಎಂಬುವವರು ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ.

ಭೂತಕೋಲ ವೀಕ್ಷಿಸಿದ್ದ ಸ್ವೀಟಿ
ಮೂಲತಃ ತುಳುನಾಡಿನವರಾದ ಅನುಷ್ಕಾ ಶೆಟ್ಟಿ, ಹೆಚ್ಚು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದರಿಂದ ಹೈದರಾಬಾದ್‌ನಲ್ಲಿ ಉಳಿದುಕೊಳ್ಳುತ್ತಿದ್ದಾರೆ. ಆಗೊಮ್ಮೆ ಹೀಗೊಮ್ಮೆ ಹುಟ್ಟೂರು ಪುತ್ತೂರಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಕೆಲ ದಿನಗಳ ಹಿಂದೆ ಸ್ವೀಟಿ ತಮ್ಮೂರಿನಲ್ಲಿ ನಡೆದ ಭೂತಕೋಲದಲ್ಲಿ ಭಾಗಿ ಆಗಿದ್ದರು. ಭಕ್ತಿ ಭಾವದಿಂದ ಕೋಲ ವೀಕ್ಷಿಸಿದ್ದರು. ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿಯುತ್ತಾ ಕಾಣಿಸಿಕೊಂಡಿದ್ದರು. ಆ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇನ್ನು 'ಕಾಂತಾರ' ಸಿನಿಮಾ ನೋಡಿ ಮೆಚ್ಚಿ ಎಲ್ಲರೂ ಸಿನಿಮಾ ವೀಕ್ಷಿಸುವಂತೆ ಹೇಳಿದ್ದರು.


Click it and Unblock the Notifications











