ತೆಲುಗು ಚಿತ್ರದ ಹಾಡಿನಲ್ಲಿ ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡ ಆಶಿಕಾ ರಂಗನಾಥ್!
ಕನ್ನಡದ ಚಿತ್ರರಂಗದಲ್ಲಿ ಮಿಲ್ಕಿ ಬ್ಯೂಟಿ ಎಂದೇ ಆಶಿಕಾ ರಂಗನಾಥ್ ಕನ್ನಡ ಮಾತ್ರವಲ್ಲದೆ, ತಮಿಳು-ತೆಲುಗು ಚಿತ್ರರಂಗದಲ್ಲೂ ಸಖತ್ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ. ತೆಲುಗಿನಲ್ಲಿ ನಂದಮೂರಿ ಕಲ್ಯಾಣ್ ರಾಮ್ ಅವರ ಜೊತೆ 'ಅಮಿಗೋಸ್' ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಹಾಡೊಂದು ಬಿಡುಗಡೆಯಾಗಿದ್ದು, ಆಶಿಕಾ ರಂಗನಾಥ್ ಸಖತ್ ರೋಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ.
2016ರಲ್ಲಿ ತೆರೆಕಂಡ ಕ್ರೇಜಿ ಬಾಯ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಆಶಿಕಾ ರಂಗನಾಥ್, ನಂತರ ಶಿವಣ್ಣ ಜೊತೆಗೆ ಮಾಸ್ ಲೀಡರ್ ಚಿತ್ರದಲ್ಲಿ ಕಾಣಿಸಿಕೊಂಡರು. ಆದರೆ, 2017ರಲ್ಲಿ ಬಿಡುಗಡೆಯಾದ ಗೋಲ್ಡನ್ ಸ್ಟಾರ್ ಗಣೇಶ್ ನಾಯಕನಾಗಿ ನಟಿಸಿರುವ ಮುಗುಳುನಗೆ ಸಿನಿಮಾದಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿದ ಆಶಿಕಾ ಖ್ಯಾತಿ ಪಡೆದರು. ನಂತರ ಹಲವು ಸಿನಿಮಾಗಳಲ್ಲಿ ನಟಿಸಿದ ಮಿಲ್ಕಿ ಬ್ಯೂಟಿ, ಕೈಯಲ್ಲಿ ಹಲವು ಕನ್ನಡ ಸಿನಿಮಾಗಳು ಇರುವಾಗಲೇ ತಮಿಳಿನ ಪಟ್ಟದು ಅರಸನ್ ಚಿತ್ರದಲ್ಲಿ ನಟಿಸಿದ್ದರು. ಆದರೆ, ಈ ಸಿನಿಮಾ ಸದ್ದು ಮಾಡಲಿಲ್ಲ. ಇದೀಗ ಆಶಿಕಾ ಅಭಿನಯದ ಮೊದಲ ತೆಲುಗು ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ನಂದಮೂರಿ ಕಲ್ಯಾಣ್ ರಾಮ್ ಅಭಿನಯದ 'ಅಮಿಗೋಸ್' ಸಿನಿಮಾದಲ್ಲಿ ಆಶಿಕಾ ರಂಗನಾಥ್ ನಾಯಕಿಯಾಗಿ ನಟಿಸಿದ್ದಾರೆ. ಸದ್ಯ ಸಿನಿಮಾದ 'ಎನ್ನೋ ರಾತ್ರುಲೋಸ್ತಾಯಿ' ಎಂಬ ಹಾಡು ಬಿಡುಗಡೆಯಾಗಿದ್ದು, ಈ ಹಾಡಿನಲ್ಲಿ ಆಶಿಕಾ ನಂದಮೂರಿ ಕಲ್ಯಾಣ್ ರಾಮ್ ಜೊತೆಗೆ ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಹಾಡು ಟ್ರೆಂಡಿಗ್ ನಲ್ಲಿದ್ದು, 1.8 ಮಿಲಿಯನ್ ವೀಕ್ಷಣೆ ಪಡೆದಿದೆ.

ರಿಮಿಕ್ಸ್ ಹಾಡಿಗೆ ಸೊಂಟ ಬಳುಕಿಸಿದ ಆಶಿಕಾ
1992ರಲ್ಲಿ ಬಿಡುಗಡೆಯಾಗಿದ್ದ ನಂದಮೂರಿ ಬಾಲಕೃಷ್ಣ ಮತ್ತು ನಟಿ ದಿವ್ಯಾ ಭಾರತಿ ಅಭಿನಯದ ಧರ್ಮಕ್ಷೇತ್ರಂ ಚಿತ್ರದ 'ಎನ್ನೋ ರಾತ್ರುಲೋಸ್ತಾಯಿ' ಸಖತ್ ಹಿಟ್ ಆಗಿತ್ತು. ಎಸ್.ಪಿ.ಬಾಲಸುಬ್ರಮಣ್ಯಂ ಮತ್ತು ಎಸ್ ಜಾನಕಿ ಹಾಡಿದ್ದ ಈ ಹಾಡಿಗೆ ಇಳಯರಾಜ ಸಂಗೀತ ನೀಡಿದ್ದರು. ಇದೀಗ ಮತ್ತೆ ಅದೇ ಹಾಡನ್ನು ಕಲ್ಯಾಣ ರಾಮ್ ನಟನೆಯ 'ಅಮಿಗೋಸ್' ಚಿತ್ರಕ್ಕೆ ಬಳಸಿಕೊಳ್ಳಲಾಗಿದೆ. ಈ ಹಾಡನ್ನು ಎಸ್.ಪಿ.ಚರಣ್ ಹಾಡಿದ್ದಾರೆ.

ಅಮಿಗೋಸ್ ಬಿಡುಗಡೆ ಯಾವಾಗ?
ಆಶಿಕಾ ಮತ್ತು ನಂದಮೂರಿ ಕಲ್ಯಾಣ್ ರಾಮ್ ಅಭಿನಯದ ಅಮಿಗೋಸ್ ಸಿನಿಮಾ ಫೆಬ್ರವರಿ ೧೦ರಂದು ಬಿಡುಗಡೆಯಾಗಲಿದೆ. ರಾಜೇಂದ್ರ ರೆಡ್ಡಿ ನಿರ್ದೇಶನದ ಈ ಸಿನಿಮಾವನ್ನು ಪ್ರತಿಷ್ಠಿತ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ನಿರ್ಮಾಣ ಮಾಡಿದೆ. ಆಶಿಕಾ ತಮ್ಮ ಮೊದಲ ತೆಲುಗು ಸಿನಿಮಾದಲ್ಲಿಯೇ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು, ಪಡ್ಡೆ ಹುಡುಗರು ಫಿದಾ ಆಗಿದ್ದಾರೆ. ಅಮಿಗೋಸ್ ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಪ್ರಚಾರ ಕಾರ್ಯ ನಡೆಯುತ್ತಿದ್ದು, ಸದ್ಯ ಆಶಿಕಾ ಹೈದ್ರಾಬಾದ್ ನಲ್ಲಿ ಬೀಡುಬಿಟ್ಟಿದ್ದಾರೆ.
2022ರಲ್ಲಿ ಆಶಿಕಾ ಅಭಿನಯದ ಸಾಲು-ಸಾಲು ಕನ್ನಡ ಸಿನಿಮಾಗಳು ಬಿಡುಗಡೆಯಾಗಿದ್ದವು. ಈ ವರ್ಷ ಮೊದಲು ರಿಲೀಸ್ ಆಗುತ್ತಿರುವ ಸಿನಿಮಾ ಅಮಿಗೋಸ್. ಇದರ ಜೊತೆಗೆ ಕನ್ನಡದ ಓ2 ಮತ್ತು ಗತವೈಭವ ಚಿತ್ರಗಳಲ್ಲಿ ಆಶಿಕಾ ನಟಿಸಿದ್ದಾರೆ. ಓ೨ ಚಿತ್ರ ಪಿಆರ್ ಕೆ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಲಾಗಿದೆ. ಗತವೈಭವ ಸಿನಿಮಾವನ್ನು ಸಿಂಪಲ್ ಸುನಿ ನಿರ್ದೇಶನ ಮಾಡಿದ್ದಾರೆ. ಸದ್ಯ ಅಮಿಗೋಸ್ ಸಿನಿಮಾ ಮೂಲಕ ಆಶಿಕಾ ಟಾಲಿವುಡ್ ನಲ್ಲಿ ಕಮಾಲ್ ಮಾಡಲು ಮುಂದಾಗಿದ್ದಾರೆ.


Click it and Unblock the Notifications











