ಆ ನಿರ್ಮಾಪಕ ನನ್ನ ಫೋಟೊಗಳನ್ನು ಜೂಮ್ ಮಾಡಿ ನೋಡ್ದ; ಈಶಾ ರೆಬ್ಬಾ ಅಳಲು
ಚಿತ್ರರಂಗದಲ್ಲಿ ಕೆಲ ನಟಿಯರಿಗೆ ಕಹಿ ಅನುಭವಗಳು ಎದುರಾಗುತ್ತಿರುತ್ತದೆ. ಇತ್ತೀಚೆಗೆ ಇಂತಹ ವಿಚಾರಗಳ ಬಗ್ಗೆ ಕೆಲವರು ಬಹಿರಂಗವಾಗಿ ಮಾತನಾಡುತ್ತಾರೆ. ಬಹುತೇಕ ಸಮಯದಲ್ಲಿ ಆ ಸಂದರ್ಭಗಳನ್ನು ವಿವರಿಸುತ್ತಾರೆ. ಆದರೆ ಯಾರಿಂದ ಹೀಗೆ ಕಸಿವಿಸಿ ಆಯಿತು ಎನ್ನುವುದನ್ನು ಹೇಳುವುದಿಲ್ಲ. ತೆಲುಗು ನಟಿ ಈಶಾ ರೆಬ್ಬಾ ತಮಗೆ ಎದುರಾಗಿದ್ದ ಕಹಿ ಅನುಭವ ಬಿಚ್ಚಿಟ್ಟಿದ್ದಾರೆ.
'ಲೈಫ್ ಈಸ್ ಬ್ಯೂಟಿಫುಲ್' ಸಿನಿಮಾ ಮೂಲಕ ಈಶಾ ಚಿತ್ರರಂಗ ಪ್ರವೇಶಿಸಿದ್ದರು. ಕಾಲೇಜು ದಿನಗಳಲ್ಲೇ ಐಟಿ ಕೆಲಸ ಮಾಡಲು ಆರಂಭಿಸಿದ್ದ ಚೆಲುವೆ ಬಳಿಕ ಮಾಡೆಲಿಂಗ್ ಮೂಲಕ ಬಣ್ಣಲೋಕ ಪ್ರವೇಶಿಸಿದ್ದರು. ತೆಲುಗು ಮಾತ್ರವಲ್ಲದೇ ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಕೂಡ ಆಕೆ ನಟಿಸಿದ್ದಾರೆ.

ಬಾಡಿ ಶೇಮಿಂಗ್ ಎನ್ನುವುದು ಚಿತ್ರರಂಗದಲ್ಲಿ ಕೂಡ ಇದೆ. ನಟ, ನಟಿಯರ ದೇಹಾಕೃತಿ, ಬಣ್ಣದ ಬಗ್ಗೆ ವಿಮರ್ಶೆ ಎದುರಾಗುತ್ತದೆ. ತಮ್ಮ ಮೈಬಣ್ಣದ ಬಗ್ಗೆ ನಿರ್ಮಾಪಕರೊಬ್ಬರ ಕಾಮೆಂಟ್ ನಾನು ಮರೆಯೋಕೆ ಸಾಧ್ಯವಿಲ್ಲ ಎಂದು ಪರ್ಮೀಟ್ ರೂಮ್ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಈಶಾ ನೆನಪಿಸಿಕೊಂಡಿದ್ದಾರೆ. ಆ ನಿರ್ಮಾಪಕ ನನ್ನ ಫೋಟೊಗಳನ್ನು ಜೂಮ್ ಮಾಡಿ ನೋಡಿ ಕಾಮೆಂಟ್ ಮಾಡಿದ್ದ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
"ಒಂದು ಚಿತ್ರಕ್ಕಾಗಿ ನಾನು ಫೋಟೊಶೂಟ್ ಮಾಡಿಸಿದ್ದೆ. ಆಗ ಚಿತ್ರದ ನಿರ್ಮಾಪಕ ಲ್ಯಾಪ್‌ಟಾಪ್‌ನಲ್ಲಿ ನಮ್ಮ ಫೋಟೊಗಳನ್ನು ಜೂಮ್ ಮಾಡಿ ನೋಡಿದ್ದ. ನನ್ನ ಮೊಣಕೈ ಕಪ್ಪಗೆ ಇದೆ. ಇನ್ನು ಚೆಂದವಾಗಿ ಕಾಣಬೇಕು ಎಂದು ಹೇಳಿದ್ರು. ಆತನ ಮಾತು ನನಗೆ ನೋವು ತಂದಿತ್ತು. ಬಹಳ ನಿರಾಸೆ ಮೂಡಿಸಿತ್ತು. ಆ ಸಮಯದಲ್ಲಿ ಆತನಿಗೆ ಹೇಗೆ ಉತ್ತರಿಸಬೇಕು ಎಂದು ಗೊತ್ತಾಗಲಿಲ್ಲ. ನಾನು ಹುಟ್ಟಿದ್ದೇ ಹೀಗೆ.. ಅದನ್ನು ಹೇಗೆ ಬದಲಿಸಲು ಸಾಧ್ಯ" ಎಂದು ಹೇಳಿದ್ದಾಗಿ ಈಶಾ ರೆಬ್ಬಾ ನೆನಪು ಮಾಡಿಕೊಂಡಿದ್ದಾರೆ.

ಮಾತು ಮುಂದುವರೆಸಿದ ಈಶಾ "ಚಿತ್ರರಂಗದಲ್ಲಿ ಇದೆಲ್ಲಾ ಸರ್ವೇಸಾಮಾನ್ಯ ಎನ್ನುವುದು ನನಗೆ ಆಗ ಗೊತ್ತಿರಲಿಲ್ಲ. ಆದರೆ ಆ ರೀತಿ ಹೇಳಿದ್ದು ಕೇಳಿ ನಾನು ಇನ್ನಷ್ಟು ಬೆಳ್ಳಗೆ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಅಂತ ಅನ್ನಿಸಿತ್ತು. ಆದರೂ ಅವರಿಗೋಸ್ಕರ ನನ್ನ ಮೈಬಣ್ಣ ಬದಲಿಸಲು ಸಾಧ್ಯವಿಲ್ಲ ಅಲ್ವಾ.. ಆ ಸಮಯದಲ್ಲಿಂದ ಮತ್ತಷ್ಟು ಆತ್ಮವಿಶ್ವಾಸದಿಂದ ಬದುಕಲು ಕಲಿತೆ" ಎಂದು ವಿವರಿಸಿದ್ದಾರೆ.
'ಓಯ್', 'ಅಮಿ ತುಮಿ', 'ದರ್ಶಕುಡು', 'ಬ್ರ್ಯಾಂಡ್ ಬಾಬು', 'ಸುಬ್ರಮಣ್ಯಪುರಂ', 'ಸವ್ಯಸಾಚಿ' ಸೇರಿ ಕೆಲ ಸಿನಿಮಾಗಳಲ್ಲಿ ಈಶಾ ನಟಿಸಿದ್ದಾರೆ. ಸಿನಿಮಾ ಮಾತ್ರವಲ್ಲ ವೆಬ್ ಸೀರಿಸ್‌ಗಳಲ್ಲಿ ಕೂಡ ಮಿಂಚಿದ್ದಾರೆ. 'ಥ್ರೀ ರೋಸಸ್' ವೆಬ್ ಸೀರಿಸ್ ಒಳ್ಳೆ ಹೆಸರು ತಂದುಕೊಟ್ಟಿತ್ತು. 'ಪಿಟ್ಟ ಕಥಲು', 'ದಯಾ' ಅನ್ನೋ ಮತ್ತೆರಡು ವೆಬ್ ಸೀರಿಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ವರಂಗಲ್‌ನಲ್ಲಿ ಹುಟ್ಟಿದ ಈಶಾ ಹೈದರಾಬಾದ್‌ನಲ್ಲಿ ಓದಿ ಬೆಳೆದವರು. ಕಾಲೇಜು ದಿನಗಳಲ್ಲೇ ಮಾಡೆಲಿಂಗ್ ಆರಂಭಿಸಿ ಬಳಿಕ ಆಡಿಷನ್ ಕೊಟ್ಟ ಸಿನಿಮಾ ಅವಕಾಶ ಪಡೆದಿದ್ದರು. ಇದೇ ಸಂದರ್ಶನದಲ್ಲಿ ತಮ್ಮ ವೈಯಕ್ತಿಯ ಹಾಗೂ ಸಿನಿ ಜೀವನದ ಬಗ್ಗೆ ಈಶಾ ಸಾಕಷ್ಟು ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಇದೇ ಶುಕ್ರವಾರ ಈಶಾ ನಟನೆಯ 'ಓಂ ಶಾಂತಿ ಶಾಂತಿ ಶಾಂತಿಹಿ' ಸಿನಿಮಾ ತೆರೆಗೆ ಬರಲಿದೆ.
ಸಾಕಷ್ಟು ಕಥೆಗಳನ್ನು ಕೇಳುತ್ತಿರುವ ಈಶಾ ನಾಯಕಿಯಾಗಿ ಮಾತ್ರ ನಟಿಸುತ್ತೇನೆ. ಬೇರೆ ಪಾತ್ರಗಳಲ್ಲಿ ನಟಿಸಲ್ಲ ಎಂದು ಹೇಳಿದ್ದಾರೆ. ಕೆಲ ಸಿನಿಮಾಗಳಲ್ಲಿ ಚಿಕ್ಕ ಪಾತ್ರಗಳಲ್ಲಿ ನಟಿಸಿ ಪ್ರಯೋಜನವಾಗಲಿಲ್ಲ. ನಾಯಕ, ನಾಯಕಿಯನ್ನು ಚಿತ್ರರಂಗದಲ್ಲಿ ನೋಡುವ ರೀತಿಯೇ ವಿಚಿತ್ರವಾಗಿರುತ್ತದೆ. ಸರಿಯಾದ ಸೌಲಭ್ಯ ಇರುವುದಿಲ್ಲ. ಹಾಗಾಗಿ ನಾಯಕಿ ಪಾತ್ರಗಳಲ್ಲೇ ನಟಿಸಬೇಕು ಎಂದುಕೊಂಡಿದ್ದೇನೆ ಎಂದು ಈಶಾ ರೆಬ್ಬಾ ವಿವರಿಸಿದ್ದಾರೆ.


Click it and Unblock the Notifications











