"ಆ ನಟನ ಫೋಟೊಗಳು ಈಗಲೂ ನನ್ನ ಬೆಡ್‌ರೂಮ್‌ನಲ್ಲಿವೆ.. ಆತನೊಟ್ಟಿಗೆ ತೆರೆಮೇಲೆ ರೊಮ್ಯಾನ್ಸ್ ಮಾಡೋ ಆಸೆ ಇದೆ": ಖುಷ್ಬು
ದಶಕಗಳ ಹಿಂದೆ ದಕ್ಷಿಣ ಭಾರತ ಚಿತ್ರರಂಗದ ಟಾಪ್ ನಟಿಯಾಗಿ ಮೆರೆದ ಖುಷ್ಬು ಈಗ ಪೋಷಕ ಪಾತ್ರಗಳಲ್ಲಿ ನಟಿಸ್ತಿದ್ದಾರೆ. ಬಿಜೆಪಿ ಪಕ್ಷದಲ್ಲೂ ಗುರ್ತಿಸಿಕೊಂಡಿರುವ ಚೆಲುವೆ ಜೊತೆ ಜೊತೆಗೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಖ್ಯಾತ ನಟರ ಜೊತೆ ನಟಿಸಿರುವ ಈ ಮುಂಬೈ ನಟಿಗೆ ಪಾತ್ರಗಳ ವಿಚಾರದಲ್ಲಿ ಇನ್ನು ಕೊರಗು ಇದೆಯಂತೆ. ಈ ಬಗ್ಗೆ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
80ರ ದಶಕದ ಕೊನೆಯಲ್ಲೇ ಸಿನಿಮಾಗಳಲ್ಲಿ ನಟಿಸಲು ಖುಷ್ಬು ಆರಂಭಿಸಿದರು. ಆದರೆ ಆ ಮೂವರು ಹೀರೊಗಳ ನಟಿಸೋಕೆ ಅದ್ಯಾಕೋ ಅವಕಾಶಗಳು ಸಿಗಲೇಯಿಲ್ಲ. ಇದೇ ವಿಚಾರವನ್ನು ಖುಷ್ಬು ಈಗ ರಿವೀಲ್ ಮಾಡಿದ್ದಾರೆ. 90ರ ದಶಕದಲ್ಲಿ ಖುಷ್ಬು ಕ್ರೇಜ್ ಹೇಗಿತ್ತು ಅಂದ್ರೆ ಬಾಲಿವುಡ್ ಮಂದಿ ಕೂಡ ಕರೆದು ಅವಕಾಶ ಕೊಡುತ್ತಿದ್ದರು. ಆದರೂ ಖುಷ್ಬುಗೆ ಯಾಕೋ ಚಿರಂಜೀವಿ ಹಾಗೂ ಬಾಲಕೃಷ್ಣಗೆ ಜೊತೆ ನಾಯಕಿಯಾಗಿ ನಟಿಸುವ ಅವಕಾಶ ಸಿಗಲಿಲ್ಲ.

'ಸ್ಟಾಲಿನ್' ಚಿತ್ರದಲ್ಲಿ ಚಿರು ಸಹೋದರಿಯ ಪಾತ್ರದಲ್ಲಿ ಖುಷ್ಬು ನಟಿಸಿದ್ದರು. ಇನ್ನು ಬಾಲಯ್ಯ ಜೊತೆ ನಟಿಸುವ ಅವಕಾಶ ಒಲಿದು ಬರಲಿಲ್ಲ. ಇದು ಆಕೆಗೂ ಆ ಕೊರಗು ಇದೆ. ಈ ವಿಚಾರವನ್ನು ಸ್ವತಃ ಖುಷ್ಬು ಸಂದರ್ಶನದಲ್ಲಿ ಹೇಳಿದ್ದಾರೆ. ಇವರ ಜೊತೆ ನಟಿಸೋಕೆ ಇವತ್ತಿಗೂ ಇಷ್ಟಪಡ್ತೀನಿ. ಅಂತಹ ಅವಕಾಶಕ್ಕಾಗಿ ಕಾಯುತ್ತಿದ್ದೇನೆ ಎಂದಿದ್ದಾರೆ. ಇನ್ನು ಬಾಲಿವುಡ್ ನಟ ಅಮಿತಾಬ್ ಅಂದ್ರೆ ಬಹಳ ಇಷ್ಟ. ಆತನ ದೊಡ್ಡ ಅಭಿಮಾನಿ ನಾನು ಎಂದು ಖುಷ್ಬು ವಿವರಿಸಿದ್ದಾರೆ.

"ಅಮಿತಾಬ್ ಬಚ್ಚನ್ ಫೋಟೊಗಳನ್ನು ಇವತ್ತಿಗೂ ನನ್ನ ಬೆಡ್ ರೂಮ್‌ನಲ್ಲಿ ಅಂಟಿಸಿಕೊಂಡಿದ್ದೇನೆ. ಅವರೊಟ್ಟಿಗೆ ಬಾಲನಟಿಯಾಗಿ ನಟಿಸಿದ್ದೇನೆ. ಆದರೆ ಹೀರೊಯಿನ್ ಆಗಿ ನಟಿಸೋ ಅವಕಾಶ ಸಿಗಲಿಲ್ಲ. 'ಚೀನಿ ಕಮ್' ಚಿತ್ರದಲ್ಲಿ ಅಮಿತಾಬ್ ಜೊತೆ ಟಬು ನಟಿಸಿದ್ದರು. ಈ ವಿಚಾರ ಗೊತ್ತಾಗಿ ಆಕೆಗೆ ಫೋನ್ ಮಾಡಿ ಬೈದೆ. ಅವರೊಟ್ಟಿಗೆ ಹೇಗೆ ನಟಿಸಿದೆ ಎಂದು ಸರಿಯಾಗಿ ಕ್ಲಾಸ್ ತಗೊಂಡೆ(ನಗುತ್ತಾ) ಎಂದಿದ್ದಾರೆ. ಸದ್ಯ ಗೋಪಿಚಂದ್ ನಟನೆಯ 'ರಾಮಬಾಣಂ' ಚಿತ್ರದಲ್ಲಿ ಖುಷ್ಬು ನಟಿಸಿದ್ದಾರೆ.

ಖುಷ್ಬು ಕನ್ನಡದಲ್ಲಿ ರವಿಚಂದ್ರನ್ ಸಿನಿಮಾಗಳಲ್ಲಿ ಹೆಚ್ಚು ನಟಿಸಿದ್ದಾರೆ. 'ರಣಧೀರ', 'ಅಂಜದ ಗಂಡು', 'ಯುಗಪುರುಷ' ಚಿತ್ರಗಳಲ್ಲಿ ಕ್ರೇಜಿಸ್ಟಾರ್‌ಗೆ ನಾಯಕಿಯಾಗಿ ನಟಿಸಿದ್ದರು. 3 ದಶಕಗಳ ನಂತರ ಆಕೆ ಮತ್ತೆ ರವಿಚಂದ್ರನ್ ಜೋಡಿಯಾಗಿ ನಟಿಸುವ ಬಗ್ಗೆ ಸ್ಯಾಂಡಲ್‌ವುಡ್‌ನಲ್ಲಿ ಚರ್ಚೆ ನಡೀತಿದೆ. ಹೊಸ ನಿರ್ದೇಶಕರೊಬ್ಬರು ಕಥೆ ಹೇಳಿ ಒಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈ ಸುದ್ದಿ ಕೇಳಿ ಅಭಿಮಾನಿಗಳು ಖುಷಿಯಾಗಿದ್ದಾರೆ.
ಇತ್ತೀಚೆಗೆ ನಟಿ ತಮ್ಮ ವೈಯಕ್ತಿಕ ಜೀವನದ ಕುರಿತು ಹಂಚಿಕೊಂಡಿದ್ದ ಮಾಹಿತಿ ಹಲವರಿಗೆ ಶಾಕ್ ತಂದಿತ್ತು."ನಾನು 8 ವರ್ಷದ ಹುಡುಗಿಯಾಗಿದ್ದಾಗ ಸ್ವಂತ ತಂದೆ ಲೈಂಗಿಕವಾಗಿ, ಶಾರೀರಿಕವಾಗಿ ಹಿಂಸಿಸಿದ್ದರು. ಹುಡುಗಿ ಆಗ್ಲಿ, ಹುಡುಗ ಆಗ್ಲಿ ಚಿಕ್ಕಂದಿನಲ್ಲಿ ದೌರ್ಜನ್ಯ ಎದುರಾದರೆ ಅವರ ಜೀವನ ಭಯಂಕರ ಎನಿಸುತ್ತದೆ. ನಮ್ಮ ತಾಯಿ ಬಗ್ಗೆ ಹೇಳಬೇಕು ಅಂದರೆ ಆಕೆ ಮದುವೆಯಾಗಿ ಬಹಳ ಚಿತ್ರಹಿಂಸೆ ಅನುಭವಿಸಿದರು. ಒಬ್ಬ ಪುರುಷ ಪತ್ನಿಯನ್ನು, ಮಕ್ಕಳನ್ನು ಹೊಡೆಯುವುದು, ಕೊನೆಗೆ ಮಗಳನ್ನು ಕೂಡ ಕೆಟ್ಟದಾಗಿ ಬೈಯ್ಯುವುದು, ಹಿಂಸಿಸುವುದನ್ನು ತನ್ನ ಜನ್ಮಸಿದ್ಧ ಹಕ್ಕು ಎಂದುಕೊಂಡಿದ್ದ ದಿನಗಳವು"
ಆಗಿನ್ನು ನನಗೆ 8 ವರ್ಷ ವಯಸ್ಸು. ಆಗಲೇ ತಂದೆಯಿಂದ ಹಿಂಸೆ ಆರಂಭವಾಯಿತು. ಆತನನ್ನು ಎದುರಿಸುವ ಧೈರ್ಯ ನನಗೆ 15 ವರ್ಷಕ್ಕೆ ಬಂತು. ಈ ವಿಚಾರವನ್ನು ತಾಯಿಗೆ ಹೇಳಿದ್ರು ಆಕೆ ನಂಬುತ್ತಿರಲಿಲ್ಲ. ಕಾರಣ ಪತಿಯೇ ದೈವ ಎಂದು ಭಾವಿಸುವ ಪರಿಸರದಲ್ಲಿ ಬೆಳೆದವಳು ಆಕೆ. ಏನೇ ಆದರೂ, ಆತ ಏನೇ ಮಾಡಿದರೂ ನನ್ನ ಪತಿ ದೇವರು ಎನ್ನುವ ಭಾವನೆಯಲ್ಲಿ ಇರುತ್ತಿದ್ದಳು. ಆದರೆ 15 ವರ್ಷಕ್ಕೆ ನಾನು ನಮ್ಮ ತಂದೆ ವಿರುದ್ಧ ತಿರುಗಿಬಿದ್ದೆ. ನನಗೆ 16 ವರ್ಷ ವಯಸ್ಸಾಗಿದ್ದಾಗ ತಂದೆ ತೀರಿಕೊಂಡರು. ಆಗ ಒಂದೊತ್ತು ಕಳೆಯುವುದು ನಮಗೆ ಕಷ್ಟವಾಗುತ್ತಿತ್ತು" ಎಂದು ಖುಷ್ಬು ವಿವರಿಸಿದ್ದರು.


Click it and Unblock the Notifications











