"ಜಸ್ಟ್ ಮಿಸ್.. ಅವತ್ತು ನಾನು ಕೂಡ ಸೌಂದರ್ಯ ಜೊತೆ ಹೋಗಬೇಕಿತ್ತು"- ನಟಿ ಮೀನಾ
ಬಹುಭಾಷಾ ನಟಿ ಮೀನಾ ಮತ್ತೆ ಸಿನಿಮಾಗಳಲ್ಲಿ ಬ್ಯುಸಿ ಆಗುತ್ತಿದ್ದಾರೆ. ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ ಮೀನಾ ಬಳಿಕ ನಾಯಕಿಯಾಗಿ ಮೆರೆದರು. ಈಗ ಪೋಷಕ ಪಾತ್ರಗಳಲ್ಲಿ ಮಿಂಚುತ್ತಿದ್ದಾರೆ. ರಜನಿಕಾಂತ್ ಜೊತೆ ಬಾಲನಟಿಯಾಗಿ ಮಿಂಚಿದ್ದ ಮೀನಾ ಬಳಿಕ ಅವರೊಟ್ಟಿಗೆ ನಾಯಕಿಯಾಗಿ ತೆರೆ ಹಂಚಿಕೊಂಡಿದ್ದರು.
ಪಂಚಭಾಷೆ ತಾರೆಯಾಗಿ ಮಿಂಚಿರುವ ಮೀನಾ 100ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿಷ್ಣುವರ್ಧನ್, ರಜನಿಕಾಂತ್, ಚಿರಂಜೀವಿ, ಬಾಲಕೃಷ್ಣ, ಮೋಹನ್ ಲಾಲ್ ಹೀಗೆ ದಕ್ಷಿಣ ಭಾರತದ ಖ್ಯಾತ ನಟರೊಟ್ಟಿಗೆ ನಾಯಕಿಯಾಗಿ ಹೆಜ್ಜೆ ಹಾಕಿದವರು. ದಿವಂಗತ ನಟಿ ಸೌಂದರ್ಯ ಹಾಗೂ ಮೀನಾ ನಡುವೆ ಆತ್ಮೀಯ ಒಡನಾಟವಿತ್ತು. ಅವತ್ತು ಸೌಂದರ್ಯ ಜೊತೆ ನಾನು ಪ್ರಚಾರಕ್ಕೆ ಹೋಗಬೇಕಿತ್ತು ಎಂದು ಮೀನಾ ಶಾಕಿಂಗ್ ಸಂಗತಿ ಬಿಚ್ಚಿಟ್ಟಿದ್ದಾರೆ.

2004, ಏಪ್ರಿಲ್ 17 ರಂದು ನಟಿ ಸೌಂದರ್ಯ ಬೆಂಗಳೂರಿನಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾಗಿದ್ದರು. ಅಂದು ಬಿಜೆಪಿ ಪರ ಪ್ರಚಾರಕ್ಕಾಗಿ ಸಹೋದರ ಅಮರ್‌ನಾಥ್ ಜೊತೆ ಸಣ್ಣ ವಿಮಾಮ ಏರಿ ಆಕೆ ಹೊರಟಿದ್ದರು. ಜಕ್ಕೂರು ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಿದ್ದ ಏರ್‌ಕ್ರಾಫ್ಟ್ ಕೆಲವೇ ನಿಮಿಷಗಳಲ್ಲಿ ನೆಲಕ್ಕಪ್ಪಳಿಸಿ ಸುಟ್ಟು ಭಸ್ಮವಾಗಿತ್ತು. ಪೈಲೆಟ್ ಸೇರಿ ವಿಮಾನದಲ್ಲಿದ್ದ ನಾಲ್ವರು ಸುಟ್ಟು ಕರಕಲಾಗಿದ್ದರು.
ಸ್ನೇಹಿತೆ ಸೌಂದರ್ಯ ಬಗ್ಗೆ 'ಜಯಮ್ಮು ನಿಶ್ಚಯಮುರಾ' ಕಿರುತೆರೆ ಕಾರ್ಯಕ್ರಮದಲ್ಲಿ ಮೀನಾ ಮಾತನಾಡಿದ್ದಾರೆ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಶೈಲಿಯ ಈ ಕಾರ್ಯಕ್ರಮವನ್ನು ನಟ ಜಗಪತಿ ಬಾಬು ನಿರೂಪಣೆ ಮಾಡುತ್ತಾರೆ. ಈ ವೇಳೆ ಸೌಂದರ್ಯ ಜೊತೆಗಿನ ಮೀನಾ ಫೋಟೊವನ್ನು ಜಗಪತಿ ಬಾಬು ತೋರಿಸಿದ್ದಾರೆ. ಆಗ ತಮ್ಮ ಸ್ನೇಹಿತೆ ಬಗ್ಗೆ ಮೀನಾ ಪ್ರತಿಕ್ರಿಯಿಸಿದ್ದಾರೆ. ಅವತ್ತು ನಾನು ಅವಳೊಟ್ಟಿಗೆ ಹೋಗಬೇಕಿತ್ತು. ಅದೃಷ್ಟವಶಾತ್ ಹೋಗಲಿಲ್ಲ ಎಂದಿದ್ದಾರೆ.

"ಸೌಂದರ್ಯ ಹಾಗೂ ನಾನು ಒಳ್ಳೆ ಸ್ನೇಹಿತೆಯರಾಗಿದ್ದೆವು. ಆಕೆ ಬಹಳ ಒಳ್ಳೆ ಹುಡುಗಿ. ಚುನಾವಣೆ ಪ್ರಚಾರಕ್ಕಾಗಿ ತೆರಳುವಾಗ ಆಕೆ ದುರಂತ ಅಂತ್ಯ ಕಂಡಿದ್ದು ದುರಾದೃಷ್ಟಕರ. ನಿಜ ಹೇಳಬೇಕು ಅಂದ್ರೆ ಅವತ್ತು ಆ ಪ್ರಚಾರಕ್ಕೆ ನಾನು ಕೂಡ ಹೋಗಬೇಕಿತ್ತು. ನನ್ನನ್ನು ಕರೆದಿದ್ದರು. ಆದರೆ ನಾನು ಚಿತ್ರೀಕರಣದಲ್ಲಿ ಬ್ಯುಸಿ ಇದ್ದೆ. ನನಗೆ ಚುನಾವಣೆ ಪ್ರಚಾರದ ಬಗ್ಗೆ ಹೆಚ್ಚು ಆಸಕ್ತಿ ಇರಲಿಲ್ಲ. ಹಾಗಾಗಿ ಹೋಗಲಿಲ್ಲ. ಅವತ್ತು ವಿಮಾನ ದುರಂತದಲ್ಲಿ ಸೌಂದರ್ಯಳನ್ನು ಕಳೆದುಕೊಂಡಿದ್ದು ನೋವು ತಂದಿತ್ತು" ಎಂದು ಹೇಳಿ ಮೀನಾ ಭಾವುಕರಾಗಿದ್ದಾರೆ.
ಮೀನಾ ಪತಿ ವಿದ್ಯಾಸಾಗರ್ 3 ವರ್ಷಗಳ ಹಿಂದೆ ಅನಾರೋಗ್ಯದಿಂದ ನಿಧನರಾಗಿದ್ದರು. ಬಳಿಕ ಆಕೆ 2ನೇ ಮದುವೆ ಆಗ್ತಾರೆ ಅಂತೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ಊಹಾಪೋಹ ಹಚ್ಚಿಸಲಾಗಿತ್ತು. ಈ ಬಗ್ಗೆ ಮೀನಾ ಬೇಸರ ವ್ಯಕ್ತಪಡಿಸಿದ್ದಾರೆ. "ನನ್ನ ಪತಿ ನಿಧನರಾದ ವಾರಕ್ಕೆ ನಾನು 2ನೇ ಮದುವೆ ಆಗ್ತಿದ್ದೀನಿ ಎಂದು ಸುದ್ದಿ ಹಬ್ಬಿಸಿದರು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಆಯ್ತು. ಅವರಿಗೆ ಮನಸ್ಸು ಇಲ್ವಾ? ಫ್ಯಾಮಿಲಿ ಇರಲ್ವಾ? ಹೀಗೆಲ್ಲಾ ಯಾಕೆ ಬರಿತ್ತಿದ್ದಾರೆ ಅನ್ನಿಸ್ತಿತ್ತು. ಆ ಬಳಿಕ ಕೂಡ ವದಂತಿ ಮುಂದುವರೆಯಿತು" ಎಂದಿದ್ದಾರೆ.
ಯಾರಾದರೂ ಡಿವೋರ್ಸ್ ತಗೊಂಡ್ರೆ ನನ್ನೊಟ್ಟಿಗೆ 2ನೇ ಮದುವೆ ಆಗ್ತಾರೆ ಅಂತೆಲ್ಲಾ ಬರೆದ್ರು. ನನ್ನ ಪತಿಯನ್ನು ಕಳೆದುಕೊಂಡು ಬಹಳ ನೋವುಂಡೆ. ಅಂತಹ ಸಮಯದಲ್ಲಿ ಸ್ನೇಹಿತರು ನನ್ನ ಬೆಂಬಲಕ್ಕೆ ನಿಂತರು. ಆ ನೋವಿನಿಂದ ಹೊರಬರಲು ಶಕ್ತಿ ತುಂಬಿದರು. ಅಂತಹ ಸ್ನೇಹಿತರು ಸಿಕ್ಕಿರುವುದು ನನ್ನ ಪುಣ್ಯ ಎಂದು ಮೀನಾ ಹೇಳಿದ್ದಾರೆ. ಸದ್ಯ 'ಮೂಕುಟ್ಟಿ ಅಮ್ಮನ್- 2' ಚಿತ್ರದಲ್ಲಿ ನಟಿ ಮೀನಾ ಬಣ್ಣ ಹಚ್ಚಿದ್ದಾರೆ.


Click it and Unblock the Notifications











