ನಾನು ಮದುವೆ ಆಗುವ ಹುಡುಗನಿಗೆ 100 ಎಕರೆ ಜಮೀನು ಇರಬೇಕು; ಮೀನಾಕ್ಷಿ ಚೌಧರಿ ಹೇಳಿಕೆ ವೈರಲ್
ಚಿತ್ರರಂಗದಲ್ಲಿ ಈಗ ಮದುವೆ ಸಂಭ್ರಮ ಜೋರಾಗಿದೆ. ತೆಲುಗು ಚಿತ್ರರಂಗದಲ್ಲಿ ಸಾಲು ಸಾಲಾಗಿ ನಟ, ನಟಿಯರು ಮದುವೆ ಆಗುತ್ತಿದ್ದಾರೆ. ನಟಿ ಸಮಂತಾ ಹಾಗೂ ನಿರ್ದೇಶಕ ರಾಜ್ ನಿಡುಮೊರು ಬಳಿಕ ನಟ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಹಸೆಮಣೆ ಏರಿದ್ದಾರೆ. ಅಲ್ಲು ಅರ್ಜುನ್ ಸಹೋದರ ಅಲ್ಲು ಶಿರೀಷ್ 2 ದಿನಗಳ ಹಿಂದೆ ಮದುವೆ ಆಗಿದ್ದಾರೆ.
ಮತ್ತೊಬ್ಬ ತೆಲುಗು ನಟ ಬೆಲ್ಲಂಕೊಂಡ ಶ್ರೀನಿವಾಸ್ ಶೀಘ್ರದಲ್ಲೇ ಮದುವೆ ಆಗುತ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಮದುವೆ ಎನ್ನುವುದು ಜೀವನದ ಪ್ರಮುಖ ಘಟ್ಟ. ತಾವು ಮದುವೆ ಆಗುವ ಹುಡುಗ ಹೀಗಿರಬೇಕು, ಹಾಗಿರಬೇಕು, ಸ್ಥಿತಿವಂತನಾಗಿರಬೇಕು, ನೋಡಲು ಚೆನ್ನಾಗಿರಬೇಕು, ತನ್ನನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು ಹೀಗೆ ಹೆಣ್ಣು ಮಕ್ಕಳ ಕನಸು ಸಾಕಷ್ಟು ಇರುತ್ತದೆ. ಅದೇ ರೀತಿ ತಾವು ಮದುವೆ ಆಗುವ ಹುಡುಗಿ ಹೇಗಿರಬೇಕು ಎಂದು ಹುಡುಗರಿಗೂ ಒಂದಷ್ಟು ಆಸೆ ಇರುತ್ತದೆ.

ಸಿನಿಮಾ ನಟ, ನಟಿಯರಿಗೆ ಈ ಬಗ್ಗೆ ಆಗಾಗ್ಗೆ ಪ್ರಶ್ನೆಗಳು ಎದುರಾಗುತ್ತದೆ. ನಟಿಯರಿಗೆ ನೀವು ಮದುವೆ ಆಗುವ ಹುಡುಗ ಹೇಗಿರಬೇಕು ಎನ್ನುವ ಪ್ರಶ್ನೆ ಆಗಾಗ್ಗಾ ಎದುರಾಗುತ್ತದೆ. ಹರ್ಯಾಣ ಮೂಲದ ನಟಿ ಮೀನಾಕ್ಷಿ ಚೌಧರಿ ಸದ್ಯ ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. 'ಕಿಲಾಡಿ', 'ಹಿಟ್, 'ಗುಂಟೂರು ಖಾರಂ', 'ಲಕ್ಕಿ ಭಾಸ್ಕರ್' ಹೀಗೆ ಒಂದಷ್ಟು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಸಂದರ್ಶನವೊಂದರಲ್ಲಿ ನೀವು ಮದುವೆ ಆಗುವ ಹುಡುಗ ಹೇಗಿರಬೇಕು ಎನ್ನುವ ಪ್ರಶ್ನೆಗೆ ಮೀನಾಕ್ಷಿ ಉತ್ತರಿಸಿದ್ದಾರೆ. "ನಾನು ಮದುವೆ ಆಗುವ ಹುಡುಗನಿಗೆ 100 ಎಕರೆ ಜಮೀನು ಇರಬೇಕು" ಎಂದು ಆಕೆ ಹೇಳಿರುವುದು ವೈರಲ್ ಆಗ್ತಿದೆ. ಮೀನಾಕ್ಷಿ ತಮಾಷೆಯಾಗಿಯೇ ಈ ಮಾತು ಹೇಳಿದ್ದಾರೆ. ಕೊನೆಯದಾಗಿ 'ಅನಗನಗ ಒಕರೋಜು' ಎಂಬ ಸಿನಿಮಾದಲ್ಲಿ ಆಕೆ ನಟಿಸಿದ್ದರು.
'ವೃಷಕರ್ಮ' ಎಂಬ ಮತ್ತೊಂದು ಚಿತ್ರದಲ್ಲಿ ಮೀನಾಕ್ಷಿ ನಟಿಸುತ್ತಿದ್ದಾರೆ. ನಿಮ್ಮ ಸಹ ಕಲಾವಿದರು ಮದುವೆ ಆಗುತ್ತಿದ್ದಾರೆ. ನಿಮ್ಮ ಮದುವೆ ಯಾವಾಗ? ಮದುವೆ ಆಗುವ ಹುಡುಗ ಹೇಗಿರಬೇಕು ಎನ್ನುವ ಪ್ರಶ್ನೆಗೆ ಮೀನಾಕ್ಷಿ ಉತ್ತರಿಸಿದ್ದಾರೆ. "ನಾನು ಮದುವೆ ಆಗುವ ಹುಡುಗ ದೊಡ್ಡ ಬ್ಯುಸಿನೆಸ್‌ಮನ್ ಆಗಿರಬೇಕು ಅಂತ ಏನಿಲ್ಲ. ನನ್ನನ್ನು ಮದುವೆ ಆಗುವವನಿಗೆ 100 ಎಕರೆ ಆಸ್ತಿ ಇರಬೇಕು. ಅಡುಗೆ ಮಾಡಲು ಬರಬೇಕು. ಬಟ್ಟೆ ಒಗೆಯವುದು, ಐರನ್ ಮಾಡುವುದು ಗೊತ್ತಿರಬೇಕು, ಮನೆ ಕೆಲಸಗಳನ್ನು ನೋಡಿಕೊಳ್ಳಬೇಕು. ಅಂತಹ ವ್ಯಕ್ತಿ ಸಿಕ್ಕರೆ ಮದುವೆ ಸಿದ್ಧ" ಎಂದು ತಮಾಷೆಯಾಗಿ ಹೇಳಿದ್ದಾರೆ.
ಸದ್ಯ ಮೀನಾಕ್ಷಿ ಬಾಲಿವುಡ್ ಪ್ರವೇಶಿಸಲು ಅಣಿಯಾಗುತ್ತಿದ್ದಾರೆ. ಅಕ್ಷಯ್ ಕುಮಾರ್ ಜೊತೆ 'ಭಾಗಂ ಭಾಗ್-2' ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ತಿರುಚನೂರ್ ಪದ್ಮಾವತಿ ದೇವಸ್ಥಾನಕ್ಕೆ ಮೀನಾಕ್ಷಿ ಭೇಟಿ ನೀಡಿದ್ದರು. ದಳಪತಿ ವಿಜಯ್ ನಟನೆಯ 'GOAT' ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಬಳಿಕ ಚಿತ್ರದಲ್ಲಿ ನನ್ನ ಪಾತ್ರ ಅಷ್ಟು ಚಿಕ್ಕದು ಎನ್ನುವುದು ಗೊತ್ತಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.
ಚಂಡಿಘರ್‌ನಲ್ಲಿ ಓದಿ ಬೆಳೆದ ಮೀನಾಕ್ಷಿ ರಾಜ್ಯಮಟ್ಟದ ಸ್ವಿಮ್ಮಿಂಗ್ ಹಾಗೂ ಬ್ಯಾಡ್ಮಿಟರ್ ಪ್ಲೇಯರ್ ಆಗಿದ್ದರು. ಪಂಜಾಬ್‌ನಲ್ಲೇ ಪದವಿ ಪಡೆದ ಚೆಲುವೆ ಬಳಿಕ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ಕೆಲ ಸೌಂದರ್ಯ ಸ್ಪರ್ಧೆಗಳಲ್ಲಿ ಗೆದ್ದಿದ್ದರು. 2019ರಲ್ಲಿ ಬಾಲಿವುಡ್ ಸಿನಿಮಾ 'ಅಪ್‌ಸ್ಟಾರ್ಟ್ಸ್' ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು.
'ಇಚಾಟ ವಾಹನಮುಲು ನಿಲುಪರದು' ತೆಲುಗಿನಲ್ಲಿ ಮೀನಾಕ್ಷಿ ನಟಿಸಿದ ಮೊದಲ ಸಿನಿಮಾ. ರವಿತೇಜಾ ಜೊತೆ ನಟಿಸಿದ 'ಕಿಲಾಡಿ' ಸಿನಿಮಾ ಬ್ರೇಕ್ ಕೊಟ್ಟಿತ್ತು. ಆದರೂ ದೊಡ್ಡದಾಗಿ ಆಕೆಗೆ ಅವಕಾಶಗಳು ಸಿಗಲಿಲ್ಲ.


Click it and Unblock the Notifications











