ಅನುಷ್ಕಾ ಶೆಟ್ಟಿ ಅಲ್ಲ, 'ಶಕುಂತಲಂ' ಸಿನಿಮಾದಲ್ಲಿ ನಟಿಸಲಿದ್ದಾರೆ ಈ ಸ್ಟಾರ್ ನಟಿ
ದಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ ಇತ್ತೀಚಿಗೆ 'ನಿಶಬ್ದಂ' ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಈ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿದ್ದು, ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಸಿನಿಮಾ ಬಳಿಕ ಅನುಷ್ಕಾ ಅಧಿಕೃತವಾಗಿ ಯಾವುದೇ ಸಿನಿಮಾವನ್ನು ಅನೌನ್ಸ್ ಮಾಡಿಲ್ಲ. ಆದರೆ ಅನುಷ್ಕಾ ಮುಂದಿನ ಸಿನಿಮಾದ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ.
ತೆಲುಗಿನ 'ಶಕುಂತಲಾಂ' ಸಿನಿಮಾಗೆ ನಟಿ ಅನುಷ್ಕಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತು ಕೇಳಿ ಬರುತಿತ್ತು. ಆದರೀಗ ಅನುಷ್ಕಾ ಬದಲಿಗೆ ಮತ್ತೋರ್ವ ನಟಿಯ ಹೆಸರು ಕೇಳಿಬರುತ್ತಿದೆ. ಹೌದು, ಶಕುಂತಲಾ ಆಗಿ ನಟಿ ಪೂಜಾ ಹೆಗ್ಡೆ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಸಿನಿಮಾತಂಡ ಈ ಬಗ್ಗೆ ಪೂಜಾ ಹೆಗ್ಡೆ ಜೊತೆ ಮಾತುಕತೆ ನಡೆಸಿದೆಯಂತೆ.
ಅಂದ್ಹಾಗೆ 'ಶಕುಂತಲಾಂ' ಗುಣಶೇಖರ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಗುಣಶೇಖರ್ ಈ ಮೊದಲು ಹಿರಣ್ಯಕಶ್ಯಪು ಸಿನಿಮಾ ಅನೌನ್ಸ್ ಮಾಡಿದ್ದರು. ಆದರೆ ಈ ಸಿನಿಮಾಗೂ ಮೊದಲೇ 'ಶಕುಂತಲಾಂ' ಸಿನಿಮಾ ಸೆಟ್ಟೇರಲಿದೆಯಂತೆ. ಮಹಿಳಾ ಪ್ರಧಾನ ಸಿನಿಮಾ ಇದಾಗಿದ್ದು, ಪೂಜಾ ಹೆಗ್ಡೆ ಈ ಪಾತ್ರಕ್ಕೆ ಸೂಕ್ತ ಆಯ್ಕೆ ಎಂದು ನಿರ್ಧರಿಸಿ ಚಿತ್ರತಂಡ ಪೂಜಾ ಜೊತೆ ಮಾತುಕತೆಯಲ್ಲಿದೆಯಂತೆ.

ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ. ಬಹುನಿರೀಕ್ಷೆಯ ಸಿನಿಮಾಗೆ ಮಣಿ ಶರ್ಮಾ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಪೂಜಾ ಹೆಗ್ಡೆ ಕಡೆಯಿಂದ ಗ್ರೀನ್ ಸಿಗ್ನಲ್ ಗಾಗಿ ಕಾಯುತ್ತಿದೆ ಸಿನಿಮಾತಂಡ. ಒಂದು ವೇಳೆ ಪೂಜಾ ಈ ಸಿನಿಮಾಗೆ ಸಹಿ ಮಾಡಿದರೆ ಶಕುಂತಲಾ ಆಗಿ ಅಭಿಮಾನಿಗಳ ಮುಂದೆ ಬರಲಿದ್ದಾರೆ.
ಪೂಜಾ ಹೆಗ್ಡೆ ಸದ್ಯ ರಾಧೆ ಶ್ಯಾಮ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ನಟಿ ಪ್ರಭಾಸ್ ಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಜೊತೆಗೆ ತೆಲುಗು ನಟ ಅಕಿಲ್ ಅಕ್ಕಿನೇನಿ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಬಾಲಿವುಡ್ ಮತ್ತು ತೆಲುಗು ಎರಡು ಚಿತ್ರರಂಗದಲ್ಲಿ ಪೂಜಾ ಬ್ಯುಸಿಯಾಗಿ ಪೂಜಾ, ರಾಧೆ ಶ್ಯಾಮ ಬಳಿಕ ಶಕುಂತಲಾ ಆಗಿ ಅಭಿಮಾನಿಗಳ ಮುಂದೆ ಬರ್ತಾರಾ ಎಂದು ಕಾದುನೋಡಬೇಕು.


Click it and Unblock the Notifications











