ಅಬ್ಬಬ್ಬಾ.. ಇದೇನ್ ನಾಯಿನಾ ಸಿಂಹನಾ? ಯಾವ್ ತಳಿ? ಚಾರ್ಮಿ ಮುದ್ದಿನ ಸಂಗಾತಿ ಹೆಸರೇನು?
ಸಿನಿಮಾ ತಾರೆಯರ ಕ್ರೇಜ್ ಒಂದೆರಡಲ್ಲ. ಕೆಲವರಿಗೆ ಕಾರ್, ಬೈಕ್ ಅಂದ್ರೆ ಕ್ರೇಜ್. ಮತ್ತೆ ಕೆಲವರಿಗೆ ನಾಯಿ, ಬೆಕ್ಕು ಸಾಕುವ ಹವ್ಯಾಸವೂ ಇದೆ. ಎಂತಹವರಿಗೆ ಸಾಕು ಪ್ರಾಣಿಗಳು ಉತ್ತಮ ಸಂಗಾತಿಗಳಾಗಿಬಿಡುತ್ತವೆ. ಸಿನಿಮಾ ತಾರೆಯರಲ್ಲಿ ಹಲವರು ನಾಯಿಗಳನ್ನು ಸಾಕುತ್ತಿದ್ದಾರೆ.
ಹರಿಪ್ರಿಯಾ, ರಮ್ಯಾ ಸೇರಿದಂತೆ ಹಲವು ನಟಿಯರು ಶ್ವಾನಗಳನ್ನು ಸಾಕುತ್ತಿದ್ದಾರೆ. ಹಿಂದೆ ರೆಬಲ್ ಸ್ಟಾರ್ ಅಂಬರೀಶ್ ಕೂಡ ಮನೆಯಲ್ಲಿ ನಾಯಿಗಳನ್ನು ಸಾಕಿ ಸಲಹಿದ್ದರು. ಕನ್ವರ್‌ಲಾಲ್ ಹೆಸರಿನ ಸೇಂಟ್ ಬರ್ನಾರ್ಡ್ ತಳಿಯ ನಾಯಿಯೊಂದು ಇತ್ತು. ಅಂಬಿ ಅಗಲಿದ ಸಮಯಲ್ಲಿ ಊಟ ಬಿಟ್ಟು ಅದು ಕಣ್ಣೀರಿಟ್ಟಿತ್ತು. ಹಿಂದೆ ಒಮ್ಮೆ ರಮ್ಯಾ ನನಗೆ ಮಕ್ಕಳಿಲ್ಲ. ಶ್ವಾನಗಳೇ ಮಕ್ಕಳ ಸಮಾನ ಎಂದಿದ್ದರು. ಕಳೆದ ವರ್ಷ ಕೂಡ ತಮ್ಮ ಸಾಕು ನಾಯಿ ಕಳೆದು ಹೋಗಿದೆ ಹುಡುಕಿಕೊಡಿ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಮನವಿ ಮಾಡಿದ್ದರು.

ಸದ್ಯ ತೆಲುಗು ನಟಿ, ನಿರ್ಮಾಪಕಿ ಚಾರ್ಮಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಪೋಸ್ಟ್ ಮಾಡಿದ್ದಾರೆ. ಪ್ರೀತಿಯ ಶ್ವಾನದ ಜೊತೆಗಿರುವ ಫೋಟೊಗಳನ್ನು ಹಂಚಿಕೊಂಡಿದ್ದಾರೆ. "ನನ್ನ ಆತ್ಮೀಯನ ಜೊತೆ ಮತ್ತೆ ಸೇರಿಕೊಂಡೆ" ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಚಾರ್ಮಿ ತಮ್ಮ ಮುಂಬೈ ಮನೆಯಲ್ಲಿ ಈ ಶ್ವಾನವನ್ನು ಸಾಕುತ್ತಿದ್ದಾರೆ. ಸಿನಿಮಾ ಕೆಲಸಗಳ ನಿಮಿತ್ತ ಸಾಕಷ್ಟು ಸಮಯ ಹೈದರಾಬಾದ್‌ನಲ್ಲಿ ಕಳೆಯುತ್ತಾರೆ. ಇತ್ತೀಚೆಗೆ ಮನೆಗೆ ಹೋದಾಗ ಪ್ರೀತಿ ಶ್ವಾನವನ್ನು ಕಂಡು ಖುಷಿಯಾಗಿ ಈ ರೀತಿ ಪೋಸ್ಟ್ ಮಾಡಿದ್ದಾರೆ.
ಸಿಂಹದ ರೀತಿ ಕಾಣುವ ಈ ಶ್ವಾನವನ್ನು ಕಂಡು ಕೆಲವರು ಹುಬ್ಬೇರಿಸಿದ್ದಾರೆ. ಅಬ್ಬಬ್ಬಾ ಇದ್ಯಾವ ತಳಿಯ ನಾಯಿ? ಇಷ್ಟು ದೊಡ್ಡದಾಗಿದೆ? ಒಬ್ಬ ವ್ಯಕ್ತಿಯ ಎತ್ತರವಿದೆ, ಇದಕ್ಕೆ ಏನು ಊಟ ಹಾಕುತ್ತಾರಾ? ಅಂತೆಲ್ಲಾ ತಲೆಕೆಡಿಸಿಕೊಂಡಿದ್ದಾರೆ. ಕೆಲವರು ಕಾಮೆಂಟ್ ಬಾಕ್ಸ್‌ನಲ್ಲಿ ಇದೇ ವಿಚಾರದ ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ. ಈ ಹಿಂದೆ ಕೂಡ ಕೆಲ ಬಾರಿ ಚಾರ್ಮಿ ತಮ್ಮ ಪ್ರೀತಿಯ ಶ್ವಾನದ ಫೋಟೊಗಳನ್ನು ಹಂಚಿಕೊಂಡಿದ್ದರು. ಕಳೆದ ನಾಲ್ಕೈದು ವರ್ಷಗಳಿಂದ ಈ ನಾಯಿಯನ್ನು ಅವರ ಬಳಿಯಿದೆ. ಈ ಹಿಂದೆ ಪ್ರಭಾಸ್, ವಿಜಯ್ ದೇವರಕೊಂಡ ಮುಂಬೈನಲ್ಲಿರುವ ಚಾರ್ಮಿ ಕಚೇರಿಗೆ ಹೋದಾಗ ಈ ನಾಯಿ ಜೊತೆ ಪೋಸ್ ಕೊಟ್ಟಿದ್ದರು.
ಅಂದಹಾಗೆ ಇದು ಅಲಾಸ್ಕನ್ ಮಲಾಮುಟ್ ತಳಿಯ ಶ್ವಾನ. ಗಾತ್ರದಲ್ಲಿ ಇವು ದೊಡ್ಡದಾಗಿರುತ್ತವೆ. ಬಹಳ ಬೇಗ ದೊಡ್ಡದಾಗಿ ಬೆಳೆದುಬಿಡುತ್ತವೆ. ಈ ಶ್ವಾನದ ಜೊತೆಗೆ ಮತ್ತೆರಡು ಪುಟ್ಟ ಶ್ವಾನಗಳನ್ನು ಕೂಡ ಚಾರ್ಮಿ ಕೌರ್ ಸಾಕಿ ಸಲಹುತ್ತಿದ್ದಾರೆ. ಮುಂಬೈ ಬೆಡಗಿ ಚಾರ್ಮಿ ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಆದರೆ ತೆಲುಗಿನಲ್ಲಿ ಹೆಚ್ಚು ಸಿನಿಮಾಗಳಲ್ಲಿ ಮಿಂಚಿದವರು. ನಿರ್ದೇಶಕ ಪೂರಿ ಜಗನ್ನಾಥ್ ಜೊತೆ ಸೇರಿ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ.
2 ವರ್ಷಗಳ ಹಿಂದೆ ಪೂರಿ ಜಗನ್ನಾಥ್ ನಿರ್ದೇಶನದ 'ಲೈಗರ್' ಸಿನಿಮಾ ಹೀನಾಯವಾಗಿ ಸೋತಿತ್ತು. ಹಾಗಾಗಿ ಸಾಕಷ್ಟು ನಷ್ಟ ಎದುರಿಸಿದ್ದರು. ಮತ್ತೆ ಗೆಲ್ಲಬೇಕು ಎನ್ನುವ ಹಠಕ್ಕೆ ಬಿದ್ದಿದ್ದು 'ಡಬಲ್ ಇಸ್ಮಾರ್ಟ್ ಶಂಕರ್' ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ರಾಮ್ ಪೊತಿನೇನಿ ಹೀರೊ ಆಗಿ ನಟಿಸುತ್ತಿದ್ದಾರೆ. 'ಲವ-ಕುಶ' ಸಿನಿಮಾ ಮೂಲಕ ಚಾರ್ಮಿ ಚಂದನವನಕ್ಕೆ ಎಂಟ್ರಿ ಕೊಟ್ಟಿದ್ದರು. ಬಳಿಕ 'ದೇವ್ ಸನ್ ಆಫ್ ಮುದ್ದೇಗೌಡ' ಚಿತ್ರದಲ್ಲಿ ನಟಿಸಿದ್ದರು. 'ಯಾರೇ ಕೂಗಾಡಲಿ' ಚಿತ್ರ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದರು.


Click it and Unblock the Notifications











