ಅಂತರ್ಜಾತಿ ಪ್ರೇಮಕತೆ ನೆಪದಲ್ಲಿ ಸಾಯಿ ಪಲ್ಲವಿ ಜಾತಿ ಕಂಡುಹಿಡಿದರು!
ನಟಿ ಸಾಯಿ ಪಲ್ಲವಿ ಮತ್ತು ನಾಗ ಚೈತನ್ಯ ಒಟ್ಟಿಗೆ 'ಲವ್ ಸ್ಟೋರಿ' ಸಿನಿಮಾದಲ್ಲಿ ನಟಿಸುತ್ತಿರುವುದು ಬಹುತೇಕರಿಗೆ ಗೊತ್ತಿರುವುದೇ. ಹೊಸ ವಿಷವೆಂದರೆ ಇದು ಅಂತರ್ಜಾತಿ ಯುವಕ-ಯುವತಿಯ ಪ್ರೇಮದ ವಸ್ತುವುಳ್ಳ ಸಿನಿಮಾವಂತೆ.
ಇದೇ ಸಾಕಾಯಿತು ನಮ್ಮ ಮಾಧ್ಯಮಗಳಿಗೆ ನಟಿ ಸಾಯಿ ಪಲ್ಲವಿಯ ಜಾತಿ ಹಿಂದೆ ಬೀಳಲು. ಸಾಯಿ ಪಲ್ಲವಿಯ ಯಾವುದೋ ಹಳೆಯ ಸಂದರ್ಶನವೊಂದರ ತುಣುಕೊಂದನ್ನು ತೆಗೆದುಕೊಂಡು ಸಾಯಿ ಪಲ್ಲವಿ ಅವರ ಜಾತಿಯನ್ನು ಜಗಜ್ಜಾಹೀರು ಮಾಡಿದ್ದಾರೆ.
ಹೌದು, ಕೆಲವು ದಿನಗಳ ಹಿಂದೆ ತೆಲುಗಿನ ಹಲವು ಮಾಧ್ಯಮಗಳಲ್ಲಿ ಅದರಲ್ಲಿಯೂ ಮನರಂಜನೆ ಆದ್ಯತೆಯುಳ್ಳ ಮಾಧ್ಯಮಗಳಲ್ಲಿ ಸಾಯಿ ಪಲ್ಲವಿ ಅವರ ಜಾತಿಯ ವಿಷಯ ಪ್ರಸ್ತಾಪವಾಯಿತು. ಸಾಮಾಜಿಕ ಜಾಲತಾಣದಲ್ಲಿಯೂ ಇದರ ಪ್ರತಿಫಲನ ಕಂಡು ಬಂದಿತು.

ನೀಲಗಿರಿ ಜಿಲ್ಲೆಯ ಕೂಟಗಿರಿ ಸಾಯಿ ಪಲ್ಲವಿ ಹುಟ್ಟೂರು
ಸಾಯಿ ಪಲ್ಲವಿ ಅವರು ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂಟಗಿರಿಯಲ್ಲಿ ಜನಿಸಿದವರು. ಊಟಿ, ಕೂನೂರಿಗೆ ಸಮೀಪವೇ ಇರುವ ತಾಲ್ಲೂಕು ಕೇಂದ್ರ ಇದು. ವಿದ್ಯಾವಂತೆ ಸಾಯಿ ಪಲ್ಲವಿ ಎಂಬಿಬಿಎಸ್ ಓದಿದ್ದಾರೆ. ಇದೆಲ್ಲಾ ಬಹುತೇಕರಿಗೆ ಗೊತ್ತಿರುವ ಸಂಗತಿಯೇ.

ಲಿಪಿ ಇಲ್ಲದ ಭಾಷೆಯೇ ಸಾಯಿ ಪಲ್ಲವಿ ಮಾತೃಭಾಷೆ
ಸಾಯಿ ಪಲ್ಲವಿ ಅವರು ನೀಲಗಿರಿ ಜಿಲ್ಲೆಯಲ್ಲಿ ಹೆಚ್ಚಿಗೆ ಕಂಡು ಬರುವ 'ಬಡಗ' ಜನಾಂಗಕ್ಕೆ ಸೇರಿದವರಂತೆ. ಅವರ ಮಾತೃಭಾಷೆಯೂ ಸಹ ಬಡಗ ಭಾಷೆಯೇ ಅದಕ್ಕೆ ಲಿಪಿ ಇಲ್ಲ. ಬಡಗ ಜಾತಿ ಅಲ್ಪಸಂಖ್ಯಾತ ಜಾತಿಗಳಲ್ಲಿ ಒಂದು. ಆಂಧ್ರ, ಕರ್ನಾಟದಲ್ಲೂ ಈ ಜಾತಿಯ ಜನರಿದ್ದಾರೆ.

ಎಸ್‌ಟಿ ಯಿಂದ ಬಡಗ ಜನಾಂಗವನ್ನು ಕೈಬಿಡಲಾಯಿತು
ಸಾಂಸ್ಕೃತಿಕವಾಗಿ ಗಟ್ಟಿ ನೆಲೆ ಹೊಂದಿರುವ ಬಡಗ ಸಮುದಾಯದವರು ಹಲವಾರು ಜನಪದ ಹಾಡುಗಳು, ಕತೆಗಳ ಜನಕರಾಗಿದ್ದಾರೆ. 1951 ರ ಜನಗಣತಿ ವೇಳೆಗೆ ಎಸ್‌ಟಿ ಸಮುದಾಯದಲ್ಲಿದ್ದ ಬಡಗ ಜನಾಂಗವನ್ನು ಆ ನಂತರ ಎಸ್‌ಟಿ ಪಟ್ಟಿಯಿಂದ ಕೈಬಿಡಲಾಯಿತು. ಈಗ ತಮ್ಮನ್ನು ಎಸ್‌ಟಿ ಗೆ ಸೇರಿಸುವಂತೆ ಹೋರಾಟಗಳನ್ನು ಸಮುದಾಯದವರು ಮಾಡುತ್ತಿದ್ದಾರೆ.

ಪ್ರತಿಭೆಯಿಂದ ಮೇಲಕ್ಕೇರಿದ ನಟಿ
ಸಾಯಿ ಪಲ್ಲವಿ ಅವರು ಕಡಿಮೆ ಅವಧಿಯಲ್ಲಿ ತಮ್ಮ ಪ್ರತಿಭೆಯಿಂದಾಗಿ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಹಿಂದೆ ರಿಯಾಲಿಟಿ ಶೋನಲ್ಲಿ ಡಾನ್ಸ್ ಮಾಡುತ್ತಿದ್ದ ಸಾಯಿ ಪಲ್ಲವಿ ಇಂದು ದಕ್ಷಿಣ ಭಾರತ ಸಿನಿಮಾ ರಂಗದಲ್ಲಿ ಪ್ರಮುಖ ನಟಿ. ಈಗ ಮಾಧ್ಯಮಗಳು ಅವರ ಜಾತಿ 'ಕಂಡು ಹಿಡಿದ' ಮೇಲೆ ಕೆಲವರು ಆಕೆ ನಮ್ಮ ಜಾತಿಯವರೆಂದು, ಇನ್ನು ಕೆಲವರು ಆಕೆ ಆ ಜಾತಿಯವರಾ ಎಂದು ಸಾಮಾಜಿಕ ಜಾಲತಾಣದಲ್ಲಿ ಮಾತನಾಡುತ್ತಿದ್ದಾರೆ.


Click it and Unblock the Notifications











