ಚಿತ್ರರಂಗಕ್ಕೆ ವಾಪಸ್ ಬರಲು ಮೈಸೂರು ಚೆಲುವೆ ಸಾಂಘವಿ ಸಿದ್ಧತೆ: ಶೀಘ್ರದಲ್ಲೇ ಸಿಹಿಸುದ್ದಿ
ಮೈಸೂರಿನಲ್ಲಿ ಹುಟ್ಟಿಬೆಳೆದ ನಟಿ ಸಾಂಘವಿ ಮುಂದೆ ತಮಿಳು, ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾದರು. ಆಗೊಮ್ಮೆ ಈಗೊಮ್ಮೆ ಕನ್ನಡ ಸಿನಿಮಾಗಳಲ್ಲೂ ನಟಿಸಿ ಗಮನ ಸೆಳೆದರು. ಬೋಲ್ಡ್ ಪಾತ್ರಗಳಲ್ಲಿ ಮಾತ್ರವಲ್ಲದೇ ಅಭಿನಯಕ್ಕೆ ಅವಕಾಶ ಇರುವ ಸಿನಿಮಾಗಳಲ್ಲೂ ಸೈ ಎನಿಸಿಕೊಂಡರು. ಮದುವೆ, ಮಗು ಅಂತ ವೈಯಕ್ತಿಕ ಜೀವನದಲ್ಲಿ ಬ್ಯುಸಿಯಾಗಿದ್ದ ಸಾಂಘವಿ ಮತ್ತೆ ಚಿತ್ರಗಳಲ್ಲಿ ನಟಿಸೋ ಬಗ್ಗೆ ಸುಳಿವು ನೀಡಿದ್ದಾರೆ.
ಸಾಂಘವಿ ಅಂದಾಕ್ಷಣ ನಮಗೆ ದಿಗ್ಗಜರು, ಅನಾಥರು ಸಿನಿಮಾಗಳು ನೆನಪಾಗುತ್ತದೆ. 90ರ ದಶಕದಲ್ಲಿ ದಕ್ಷಿಣ ಭಾರತ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿ ಆಕೆ ಮೆರೆದರು. ಬಿಂದಾಸ್ ರೋಲ್‌ಗಳಲ್ಲಿ ನಟಿಸಿ ಅಭಿಮಾನಿಗಳನ್ನು ರಂಜಿಸಿದರು. ಸಾಕಷ್ಟು ಹಿರಿಯ ನಟಿಯರು ನಿಧಾನವಾಗಿ ಮತ್ತೆ ಚಿತ್ರರಂಗದತ್ತ ವಾಪಸ್ ಬರುತ್ತಿದ್ದಾರೆ. ವಯಸ್ಸಿಗೆ ತಕ್ಕ ಪಾತ್ರಗಳಲ್ಲಿ ನಟಿಸೋ ಪ್ರಯತ್ನ ಮಾಡುತ್ತಿದ್ದಾರೆ. ಇದೀಗ ಸಾಂಘವಿ ಕೂಡ ಅದೇ ಹಾದಿಯಲ್ಲಿದ್ದಾರೆ.

2016ರಲ್ಲಿ ಸಾಂಘವಿ ವೆಂಕಟೇಶ್ ಎಂಬುವರ ಕೈ ಹಿಡಿದರು. ಬೆಂಗಳೂರಿನಲ್ಲೇ ಇವರ ಮದುವೆ ನಡೆದಿತ್ತು. 2020ರಲ್ಲಿ ದಂಪತಿಗೆ ಒಬ್ಬ ಮಗಳು ಹುಟ್ಟಿದಳು. 2019ರಲ್ಲಿ ಕೊನೆಯದಾಗಿ ಸಾಂಘವಿ ತಮಿಳು ಸಿನಿಮಾವೊಂದರಲ್ಲಿ ನಟಿಸಿದ್ದರು. ನಂತರ ಸಂಪೂರ್ಣವಾಗಿ ಚಿತ್ರರಂಗದಿಂದ ದೂರ ಉಳಿದರು.
ತಿಮ್ಮಪ್ಪನ ದರ್ಶನ ಪಡೆದ ಸಾಂಘವಿ
ಮದುವೆ ನಂತರ ಸಾಂಘವಿ ಅಷ್ಟಾಗಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿಲ್ಲ. ಸಿನಿಮಾ ಕಾರ್ಯಕ್ರಮಗಳಿಂದಲೂ ದೂರವೇ ಉಳಿದರು. ಕನ್ನಡದಲ್ಲಿ 'ಅನಾಥರು', 'ಇಂದ್ರ' ನಂತರ ಯಾವುದೇ ಸಿನಿಮಾಗಳಲ್ಲಿ ನಟಿಸಿರಲಿಲ್ಲ. 10 ವರ್ಷಗಳ ಬಳಿಕ ಮದುವೆ ನಂತರ 'ಕೊಳಂಜಿ' ಎನ್ನುವ ಚಿತ್ರದಲ್ಲಿ ಸಮುದ್ರಖನಿ ಪತ್ನಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇತ್ತೀಚೆಗೆ ಸಾಂಘವಿ ಫ್ಯಾಮಿಲಿ ಸಮೇತ ತಿರುಪತಿ ತಿಮ್ಮಪ್ಪನ ದರ್ಶನ ಪಡೆದರು.
ರೀಎಂಟ್ರಿ ಬಗ್ಗೆ ನಟಿ ಸುಳಿವು
ಇತ್ತೀಚೆಗೆ ಯಾವುದೇ ಸಿನಿಮಾಗಳಲ್ಲಿ ನಟಿಸಲಿಲ್ಲ. ಮತ್ತೆ ಯಾವಾಗ ನಿಮ್ಮನ್ನು ತೆರೆಮೇಲೆ ನೋಡಬಹುದು ಎನ್ನುವ ಪ್ರಶ್ನೆಗೆ ಸಾಂಘವಿ ಪ್ರತಿಕ್ರಿಯಿಸಿದ್ದಾರೆ. ಕಿರುತೆರೆ ಕಾರ್ಯಕ್ರಮಗಳಲ್ಲಿ ತೀರ್ಪುಗಾರ್ತಿಯಾಗಿ ಭಾಗವಹಿಸುತ್ತಿದ್ದೇನೆ. ಒಳ್ಳೆ ಅವಕಾಶ ಸಿಕ್ಕರೆ ಸಿನಿಮಾಗಳಲ್ಲೂ ನಟಿಸುತ್ತೀನಿ ಎಂದು ಹೇಳಿದ್ದಾರೆ. ಆ ಮೂಲಕ ಮತ್ತೆ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ.

15 ವರ್ಷಗಳಲ್ಲಿ 80 ಚಿತ್ರಗಳಲ್ಲಿ ನಟನೆ
1993ರಲ್ಲಿ ಬಂದ ತಮಿಳಿನ 'ಅಮರಾವತಿ' ಚಿತ್ರದಲ್ಲಿ ಅಜಿತ್ ಜೋಡಿಯಾಗಿ ಸಾಂಘವಿ ಮೊದಲಿಗೆ ಬಣ್ಣ ಹಚ್ಚಿದ್ದರು. ಮರು ವರ್ಷವೇ ಕನ್ನಡದ 'ರಾಯರ ಮಗ', 'ಲವ್ 94' ಸಿನಿಮಾಗಳಲ್ಲಿ ಮಿಂಚಿದರು. ಅಲ್ಲಿಂದ ಮುಂದೆ ತಮಿಳು, ತೆಲುಗು ಸಿನಿಮಾಗಳಲ್ಲೇ ಬ್ಯುಸಿಯಾಗಿಬಿಟ್ಟರು. 15 ವರ್ಷಗಳ ಸಿನಿಕರಿಯರ್‌ನಲ್ಲಿ 38 ತೆಲುಗು, 35 ತಮಿಳು, 6 ಕನ್ನಡ ಹಾಗೂ 2 ಮಲಯಾಳಂ ಸಿನಿಮಾಗಳಲ್ಲಿ ಸಾಂಘವಿ ಬಣ್ಣ ಹಚ್ಚಿದ್ದಾರೆ.
ಕನ್ನಡದಲ್ಲಿ ಸಾಂಘವಿ ಮಿಂಚು
'ದಿಗ್ಗಜರು' ಚಿತ್ರದಲ್ಲಿ ವಿಷ್ಣುವರ್ಧನ್ ಜೋಡಿಯಾಗಿ ಮಿಂಚಿದ್ದ ಸಾಂಘವಿ 'ಅನಾಥರು' ಚಿತ್ರದಲ್ಲಿ ಉಪ್ಪಿಗೆ ಜೊತೆಯಾಗಿದ್ದರು. ಇನ್ನು 'ಇಂದ್ರ' ಚಿತ್ರದಲ್ಲಿ ದರ್ಶನ್ ಡಬಲ್ ರೋಲ್ ಪ್ಲೇ ಮಾಡಿದ್ದರು. ರಾಯಣ್ಣನ ಮಡದಿಯಾಗಿ ಪುಟ್ಟ ಪಾತ್ರದಲ್ಲಿ ಆಕೆ ಕಾಣಿಸಿಕೊಂಡಿದ್ದರು. 'ಅನಾಥರು' ಚಿತ್ರದಲ್ಲಿ ಪಾರ್ವತಿಯಾಗಿ ಸಾಂಘವಿ ನಟನೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು.


Click it and Unblock the Notifications











