"ಎಲ್ಲರೂ ನಂಗೆ ಯಾವ್ದು ಮೈನಸ್ ಅಂದ್ರೋ ಅದೇ ಪ್ಲಸ್ ಅನ್ನೋದು ಗೊತ್ತಾಯಿತು": ಶ್ರುತಿ ಹಾಸನ್
ಜನ ಹೆಂಗೆ ಇದ್ರು ಮಾತನಾಡುತ್ತಾರೆ. ಕೆಲವರು ಮತ್ತೊಬ್ಬರ ಲೋಪಗಳನ್ನು ಹುಡುಕುವುದರಲ್ಲೇ ಕೆಲವರು ಜೀವನ ಸವೆಸಿಬಿಡ್ತಾರೆ. ಸಿನಿಮಾ ನಟಿಯರನ್ನು ನೋಡಿ ಕಾಮೆಂಟ್ ಮಾಡುವವರಿಗೆ ಲೆಕ್ಕವಿಲ್ಲ.
ತುಂಬಾ ಉದ್ದ ಇದ್ದಾಳೆ, ಸ್ವಲ್ಪ ಹೈಟ್ ಕಮ್ಮಿ ಆಯ್ತು, ಕಪ್ಪು ಬಣ್ಣ, ಬಿಳಿ ಜಿರಳೆ ತರ ಇದ್ದಾಳೆ ಹೀಗೆ ಚಿತ್ರರಂಗ ಬಂದ ಆರಂಭದಲ್ಲಿ ನಟಿಯರನ್ನು ನೋಡಿ ಕಾಮೆಂಟ್ ಮಾಡುತ್ತಾರೆ. ಚಿತ್ರರಂಗದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ಕನಸು ಹೊತ್ತು ಬಂದ ನಟಿಯರಿಗೆ ಇಂತಹ ಕಾಮೆಂಟ್‌ಗಳು ನೋವು ತರಿಸುತ್ತವೆ. ಇನ್ನು ಸಿನಿಮಾ ಹಿನ್ನಲೆಯಿಂದ ಬಂದವರು ಕೂಡ ಈ ರೀತಿ ಬಾಡಿ ಶೇಮಿಂಗ್‌ನಿಂದ ತಪ್ಪಿಸಿಕೊಳ್ಳೋಕೆ ಸಾಧ್ಯವಿಲ್ಲ. ಖ್ಯಾತ ನಟ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್‌ಗೂ ಇಂತಹ ಸನ್ನಿವೇಶಗಳು ಎದುರಾಗಿತ್ತಂತೆ.
ಶ್ರುತಿ ಹಾಸನ್ ಸದ್ಯ ದೊಡ್ಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಂಕ್ರಾಂತಿಗೆ ಶ್ರುತಿ ನಟನೆಯ 2 ಸಿನಿಮಾಗಳು ಬಿಡುಗಡೆ ಆಗುತ್ತಿರುವುದು ವಿಶೇಷ. ಪ್ರಭಾಸ್ ಜೊತೆ 'ಸಲಾರ್' ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. 'ದಿ ಐ' ಎನ್ನುವ ಇಂಗ್ಲೀಷ್ ಪ್ರಾಜೆಕ್ಟ್‌ನಲ್ಲೂ ಕೆಲಸ ಮಾಡ್ತಿದ್ದಾರೆ.

ಶ್ರುತಿ ಹೈಟ್ ಬಗ್ಗೆ ಕಾಮೆಂಟ್ಸ್
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಶ್ರುತಿ ಹಾಸನ್, "ಆರಂಭದ ದಿನಗಳಲ್ಲಿ ನನ್ನ ಹೈಟ್ ನನಗೆ ಮೈನಸ್ ಎಂದಿದ್ದರು" ಎಂದು ನೆನಪಿಸಿಕೊಂಡಿದ್ದಾರೆ. ತಮಿಳು ಚಿತ್ರರಂಗದಲ್ಲಿ ಗುರ್ತಿಸಿಕೊಳ್ಳಲು ಶ್ರುತಿ ಮೊದಲಿಗೆ ಪ್ರಯತ್ನಪಟ್ಟರು. ಆಗ ಕೆಲವರು "ಇಷ್ಟು ಹೈಟ್ ಇದ್ದೀಯಾ? ನಿನ್ನ ಹೈಟ್ ನಿನಗೆ ಮೈನಸ್, ಎಂದು ಹೇಳುತ್ತಿದ್ದರಂತೆ. ಇದು ಕೆಲವೊಮ್ಮೆ ನನಗೆ ಬಹಳ ನೋವು ತರುತ್ತಿತ್ತು" ಎಂದು ಕಮಲ್ ಪುತ್ರಿ ಹೇಳಿದ್ದಾರೆ.

ಹೈಟ್ ನನಗೆ ಪ್ಲಸ್ ಆಯ್ತು
"ಎಲ್ಲರೂ ನನ್ನ ಹೈಟ್ ನನಗೆ ಮೈನಸ್ ಅಂದರು. ಆದರೆ ಅದೇ ಹೈಟ್ ನನಗೆ ಪ್ಲಸ್ ಎನ್ನುವುದು ಆಮೇಲೆ ಗೊತ್ತಾಯಿತು. ತೆಲುಗಿನಲ್ಲಿ ಮಹೇಶ್ ಬಾಬು, ಪ್ರಭಾಸ್‌ರಂತಹ ಸ್ಟಾರ್‌ಗಳ ಜೊತೆ ನಟಿಸಲು ಅವಕಾಶ ಬರುವುದಕ್ಕೆ ನನ್ನ ಹೈಟ್ ಕಾರಣ ಆಯಿತು. ಆದಾಗ್ಯೂ ನನ್ನಲ್ಲಿ ಕೆಲ ನ್ಯೂನ್ಯತೆಗಳಿದ್ದು ಅದನ್ನು ತಿದ್ದಿ ತೀಡುವ ಕೆಲಸ ಮಾಡುತ್ತಿರುತ್ತೇನೆ" ಎಂದು ಶ್ರುತಿ ಹೇಳಿದ್ದಾರೆ.

ಸಂಕ್ರಾಂತಿಗೆ ಡಬಲ್ ಧಮಾಕ
ಸದ್ಯ ಶ್ರುತಿ ಹಾಸನ್ ತೆಲುಗಿನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಜೋಡಿಯಾಗಿ 'ವಾಲ್ತೇರು ವೀರಯ್ಯ' ಸಿನಿಮಾದಲ್ಲಿ ಮಿಂಚಿದ್ದಾರೆ. ಇನ್ನು 'ವೀರಸಿಂಹ ರೆಡ್ಡಿ' ಚಿತ್ರದಲ್ಲಿ ಬಾಲಕೃಷ್ಣಗೆ ಜೋಡಿಯಾಗಿದ್ದಾರೆ. ವಿಶೇಷ ಅಂದರೆ ಈ ಎರಡು ಸಿನಿಮಾಗಳು ಸಂಕ್ರಾತಿ ಸಂಭ್ರಮದಲ್ಲೇ ತೆರೆಗೆ ಬರಲಿವೆ. ಈಗಾಗಲೇ ಚಿತ್ರದ ಸಾಂಗ್ಸ್ ರಿಲೀಸ್ ಆಗಿ ಸೌಂಡ್ ಮಾಡ್ತಿವೆ. ಇಬ್ಬರು ಸ್ಟಾರ್ ನಟರ ಜೊತೆ ಶ್ರುತಿ ಬಿಂದಾಸ್ ಹೆಜ್ಜೆ ಹಾಕಿ ರಂಗೇರಿಸಿದ್ದಾರೆ.

ಆರಕ್ಕೇರಲಿಲ್ಲ ಮೂರಕ್ಕಿಳಿಯಲಿಲ್ಲ
'ಹೇ ರಾಮ್' ಚಿತ್ರದಲ್ಲಿ ಬಾಲನಟಿಯಾಗಿ ಚಿತ್ರರಂಗಕ್ಕೆ ಪರಿಚಿತರಾದ ಶ್ರುತಿ, ಬಾಲಿವುಡ್‌ನ 'ಲಕ್' ಸಿನಿಮಾ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಬಂದರು. '7ths ಸೆನ್ಸ್', 'ಗಬ್ಬರ್ ಸಿಂಗ್', 'ರೇಸುಗುರಂ' ಸೇರಿದಂತೆ ಒಂದಷ್ಟು ಹಿಟ್ ಸಿನಿಮಾಗಳಲ್ಲಿ ಶ್ರುತಿ ನಟಿಸಿದ್ದಾರೆ. ಆದರೆ ಕಾಲಿವುಡ್‌ನಲ್ಲಿ ಶ್ರುತಿಗೆ ದೊಡ್ಡಮಟ್ಟದ ಸಕ್ಸಸ್ ಮಾತ್ರ ಸಿಗಲಿಲ್ಲ. ಅಚ್ಚರಿ ಎನ್ನುವಂತೆ ಈ ತೆಲುಗಿನ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಗುತ್ತಿದೆ.

ಬಾಯ್‌ಫ್ರೆಂಡ್ ಜೊತೆ ಕ್ರಿಸ್‌ಮಸ್
ಶ್ರುತಿ ಹಾಸನ್ ಡೂಡಲ್ ಆರ್ಟಿಸ್ಟ್ ಸಂತನು ಹಜರಿಕಾ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ. ಇಬ್ಬರು ಮುಂಬೈನಲ್ಲಿ ಒಂದೇ ಫ್ಲಾಟ್‌ನಲ್ಲಿ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿ ಇದ್ದಾರೆ. ಇದಕ್ಕು ಮುನ್ನ ಶ್ರುತಿ ಲಂಡನ್ ಮೂಲಕ ಮೈಕೇಲ್ ಕೋರ್ಸ್‌ಲ್ ಎಂಬುವವರ ಜೊತೆ ಡೇಟಿಂಗ್ ಮಾಡಿದ್ದರು. ನಂತರ ಬ್ರೇಕಪ್ ಆಗಿ ಇಬ್ಬರು ದೂರಾಗಿದ್ದರು. ಶಾಂತನು ಹಜರಿಕಾ ಜೊತೆ ಶ್ರುತಿ ಕ್ರಿಸ್‌ಮಸ್ ಸೆಲೆಬ್ರೇಟ್ ಮಾಡಿದ್ದಾರೆ.


Click it and Unblock the Notifications











