ಕನ್ನಡ ಆಯ್ತು.. ತೆಲುಗು ಆಯ್ತು.. ಶ್ರೀಲೀಲಾಗೆ ತಮಿಳು ಸಿನಿಮಾದಲ್ಲಿ ನಟಿಸೋ ಆಸೆಯಂತೆ!
ಶ್ರೀಲೀಲಾ ಸದ್ಯ ದಕ್ಷಿಣ ಭಾರತದ ಅತೀ ಹೆಚ್ಚು ಚರ್ಚೆಯಾಗುತ್ತಿರುವ ನಟಿ. ಕನ್ನಡ ಚಿತ್ರರಂಗದಿಂದ ವೃತ್ತಿ ಜೀವನ ಆರಂಭ ಮಾಡಿದ್ದರು. ಇತ್ತೀಚೆಗೆ ಹೆಚ್ಚಾಗಿ ತೆಲುಗು ಚಿತ್ರರಂಗದ ಮೂಲಕವೇ ಗುರುತಿಸಿಕೊಳ್ಳುತ್ತಿದ್ದಾರೆ. ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ನಟಿಸಿದ 'ಗುಂಟೂರು ಖಾರಂ' ಸಿನಿಮಾದಲ್ಲೂ ನಾಯಕಿಯಾಗಿ ಕಾಣಿಸಿಕೊಂಡಿದ್ದರು.
ತೆಲುಗು ಚಿತ್ರರಂಗದಲ್ಲಿ ಶ್ರೀಲೀಲಾಗೆ ಹೆಚ್ಚು ಆಫರ್ ಸಿಕ್ಕಿದ್ದವು. ಸ್ಟಾರ್ ನಟರೊಂದಿಗೆ ನಟಿಸುವ ಅವಕಾಶಗಳು ಸಿಕ್ಕಿದ್ದವು. ಆದರೂ ತೆಲುಗು ಸಿನಿಮಾಗಳು ಇವರ ಕೈ ಹಿಡಿಯಲಿಲ್ಲ. ಇತ್ತೀಚೆಗೆ ನಟಿಸಿದ 'ಗುಂಟೂರು ಖಾರಂ' ಸಿನಿಮಾ ಕೂಡ ಬಾಕ್ಸಾಫೀಸ್‌ನಲ್ಲಿ ಹೇಳಿಕೊಳ್ಳುವಂತಹ ಮೋಡಿ ಮಾಡಲಿಲ್ಲ.

ಈ ಬೆನ್ನಲ್ಲೇ ನಟಿ ಶ್ರೀಲೀಲಾ ತಮಿಳು ಸಿನಿಮಾಗಳಲ್ಲಿ ನಟಿಸುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ತಮಿಳುನಾಡಿನಲ್ಲಿ ಕಾರ್ಯಕ್ರಮವೊಂದರಲ್ಲಿ ಹೇಳಿದ ಮಾತು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಶ್ರೀಲೀಲಾ ತಮಿಳು ಸಿನಿಮಾದಲ್ಲಿ ನಟಿಸುವ ಆಸೆ ವ್ಯಕ್ತಪಡಿಸಿದ್ದು ಯಾವ ಸಂದರ್ಭದಲ್ಲಿ ಅಂತ ತಿಳಿಯಲು ಮುಂದೆ ಓದಿ.
ಶ್ರೀಲೀಲಾ ಸದ್ಯ ಸಿನಿಮಾದಿಂದ ಬ್ರೇಕ್ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಮೆಡಿಕಲ್ ವಿದ್ಯಾರ್ಥಿ ಕೂಡ ಆಗಿರುವುದರಿಂದ ಶಿಕ್ಷಣ ಮುಗಿಸುವ ಹಿನ್ನೆಲೆಯಲ್ಲಿ ನಟನೆಯಿಂದ ಕೊಂಚ ಮಟ್ಟಿಗೆ ಬ್ರೇಕ್ ತೆಗೆದುಕೊಂಡಿದ್ದಾರೆ ಅಂತ ಕೆಲವು ದಿನಗಳ ಹಿಂದಷ್ಟೇ ಓಡಾಡಿತ್ತು. ಅಲ್ಲದೆ 'ಗುಂಟೂರು ಖಾರಂ' ಸಿನಿಮಾ ರಿಲೀಸ್ ಬಳಿಕ ಕಾಣಿಸಿಕೊಂಡಿರಲಿಲ್ಲ. ಇತ್ತೀಚೆಗೆ ತಮಿಳುನಾಡಿನ ವೈದ್ಯಕೀಯ ಕಾಲೇಜು ಕಾರ್ಯಕ್ರಮವೊಂದರಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ನಟಿ ಶ್ರೀಲೀಲಾಗೆ ಸಿಕ್ಕಿದ್ದ ಅದ್ಧೂರಿ ಸ್ವಾಗತಕ್ಕೆ ಮರುಳಾಗಿದ್ದಾರೆ. ಒಂದೇ ಒಂದು ತಮಿಳು ಸಿನಿಮಾದಲ್ಲಿ ನಟಿಸಿದ ನಟಿಗೆ ಈ ಮಟ್ಟಿಗೆ ಸ್ವಾಗತ ಸಿಗುತ್ತೆ ಎಂದು ನಿರೀಕ್ಷೆ ಮಾಡಿರಲಿಲ್ಲ. ನಿಮ್ಮ ಸ್ವಾಗತವನ್ನು ಕಂಡು ಖುಷಿಯಾಗಿದ್ದೇನೆ. ನಿಮ್ಮ ಪ್ರೀತಿ ನೋಡಿದ ಮೇಲೆ ಒಂದಾದರೂ ತಮಿಳು ಸಿನಿಮಾದಲ್ಲಿ ನಟಿಸಬೇಕು ಎಂದು ಎನಿಸುತ್ತಿದೆ ಎಂದು ಹೇಳಿದ್ದಾರೆ.
ತಮಿಳುನಾಡಿನ ಮೆಡಿಕಲ್ ಕಾಲೇಜ್‌ನಲ್ಲಿ ಕಾರ್ಯಕ್ರಮದಲ್ಲಿ ಶ್ರೀಲೀಲಾ ಜೊತೆಗೆ ನಟ ಶಿವಕಾರ್ತಿಕೇಯನ್ ಕೂಡ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಒಟ್ಟಿನಲ್ಲಿ ತಮಿಳುನಾಡಿ ಮೆಡಿಕಲ್ ವಿದ್ಯಾರ್ಥಿಗಳು ನೀಡಿದ ಸ್ವಾಗತಕ್ಕೆ ನಟಿ ಮರುಳಾಗಿದ್ದು, ಸತತ ಸೋಲುಗಳ ಬಳಿಕ ತಮಿಳು ಚಿತ್ರರಂಗದ ಕಡೆ ಮುಖ ಮಾಡುತ್ತಿದ್ದಾರೆ ಅಂತ ಟೀಕೆ ಮಾಡುತ್ತಿದ್ದಾರೆ.
ಶ್ರೀಲೀಲಾ ಸದ್ಯ ಹೊಸ ಪ್ರಾಜೆಕ್ಟ್ ಅನ್ನು ಒಪ್ಪಿಕೊಂಡಿಲ್ಲ. ಅವರ ಕೈಯಲ್ಲಿ ಪವರ್‌ಸ್ಟಾರ್ ಪವನ್ ಕಲ್ಯಾಣ್ ನಟಿಸುತ್ತಿರುವ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ಇದೆ. ಈ ಸಿನಿಮಾ ಇನ್ನೇನು ರಿಲೀಸ್ ಆಗಬೇಕಿದೆಯಷ್ಟೇ. ಅದು ಬಿಟ್ಟರೆ, ಶ್ರೀಲೀಲಾ ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದು, ಶಿಕ್ಷಣದ ಕಡೆಗೆ ಹೆಚ್ಚು ಗಮನ ಹರಿಸಿದ್ದಾರೆ ಎನ್ನಲಾಗಿದೆ.


Click it and Unblock the Notifications











