Sreeleela: ಬರೋಬ್ಬರಿ 8 ತೆಲುಗು ಚಿತ್ರಗಳಲ್ಲಿ ಶ್ರೀಲೀಲಾ: ಪವನ್ ಕಲ್ಯಾಣ್ ಜೊತೆಗೂ ನಟಿಸೋ ಛಾನ್ಸ್
ಕನ್ನಡ ನಟಿಯರು ಪರಭಾಷಾ ಸಿನಿಮಾಗಳಲ್ಲಿ ಸದ್ದು ಮಾಡೋದು ಹೊಸದೇನು ಅಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಅದು ಕೊಂಚ ಹೆಚ್ಚಾಗಿದೆ. ರಶ್ಮಿಕಾ ಮಂದಣ್ಣ ನಂತರ ಶ್ರೀಲೀಲಾ ಅದೇ ಹಾದಿಯಲ್ಲಿ ಸಾಗುತ್ತಿದ್ದಾರೆ. ಟಾಲಿವುಡ್‌ನಲ್ಲಿ ಈ ಬೆಂಗಳೂರು ಚೆಲುವೆ ಕ್ರೇಜ್ ಜೋರಾಗಿದೆ. ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸೋ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಶ್ರೀಲೀಲಾ ನಟನೆಯ 'ಪೆಳ್ಳಿ ಸಂದಡಿ', 'ಧಮಾಕ' ಸಿನಿಮಾಗಳು ರಿಲೀಸ್ ಆಗಿದೆ.
'ಕಿಸ್' ಬೆಡಗಿಯ ಗ್ಲಾಮರ್, ಅಭಿನಯ ನೋಡಿ ತೆಲುಗು ಸಿನಿರಸಿಕರು ಫಿದಾ ಆಗಿದ್ದಾರೆ. ಇನ್ನು ಆಕೆಯ ಡ್ಯಾನ್ಸ್‌ಗೂ ಒಳ್ಳೆ ಕ್ರೇಜ್ ಇದೆ. ತಮನ್ನಾ, ಕಾಜಲ್ ಕ್ರೇಜ್ ಕಮ್ಮಿ ಆಗುತ್ತಿದ್ದಂತೆ ರಶ್ಮಿಕಾ, ಪೂಜಾ ಹೆಗ್ಡೆ, ಶ್ರೀಲೀಲಾ ಹವಾ ಶುರುವಾಗಿದೆ. ಈಗಾಗಲೇ 4 ತೆಲುಗು ಸಿನಿಮಾಗಳಲ್ಲಿ 'ಕಿಸ್' ಚೆಲುವೆ ನಟಿಸೋದು ಪಕ್ಕಾ ಆಗಿದೆ. ಇದರೊಟ್ಟಿಗೆ ಮತ್ತೆ ಮೂರ್ನಾಲ್ಕು ಸಿನಿಮಾಗಳ ಬಗ್ಗೆ ಚರ್ಚೆ ನಡೀತಿದೆ. ಅದರಲ್ಲಿ ಬಹುತೇಕ ಎಲ್ಲಾ ಸಿನಿಮಾಗಳಲ್ಲೂ ಶ್ರೀ ನಟಿಸೋದು ಬಹುತೇಕ ಪಕ್ಕಾ ಆಗಿದೆ. ಆ ಲೆಕ್ಕದಲ್ಲಿ 8 ಸಿನಿಮಾಗಳಲ್ಲಿ ಆಕೆ ಮಿಂಚಲಿದ್ದಾರೆ.

ತ್ರಿವಿಕ್ರಮ್ ಶ್ರೀನಿವಾಸ್, ಮಹೇಶ್ ಬಾಬು ಕಾಂಬಿನೇಷನ್ ಚಿತ್ರದಲ್ಲಿ 2ನೇ ನಾಯಕಿಯಾಗಿ ಶ್ರೀಲೀಲಾ ನಟಿಸುತ್ತಿದ್ದಾರೆ. NBK108 ಚಿತ್ರದಲ್ಲಿ ಬಾಲಕೃಷ್ಣ ಸಹೋದರಿ ಪಾತ್ರ ಮಾಡುತ್ತಿದ್ದಾರೆ. ಬೋಯಪಾಟಿ ಶ್ರೀನಿ- ರಾಮ್ ಕಾಂಬಿನೇಷನ್ ಚಿತ್ರಕ್ಕೂ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ನಿತಿನ್ ನಟನೆಯ 32ನೇ ಚಿತ್ರದಲ್ಲೂ ನಾಯಕಿ ಆಗುವ ಅವಕಾಶ ಸಿಕ್ಕಿದೆ. ಒಟ್ನಲ್ಲಿ ಶ್ರೀಲೀಲಾ ದರ್ಬಾರ್ ಟಾಲಿವುಡ್‌ನಲ್ಲಿ ಜೋರಾಗಿದೆ. ಸ್ಟಾರ್ ನಟರು ಕೂಡ ತಮ್ಮ ಸಿನಿಮಾಗೆ ಶ್ರೀಲೀಲಾ ನಾಯಕಿ ಆಗಬೇಕು ಎಂದು ಬೇಡಿಕೆ ಇಡುತ್ತಿದ್ದಾರೆ.
ನವೀನ್ ಪೊಲಿಶೆಟ್ಟಿ ನಟನೆಯ 'ಅನಗನಗಾ ಒಕ ರೋಜು' ಚಿತ್ರಕ್ಕೂ ಶ್ರೀಲೀಲಾ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಪಂಜಾ ವೈಷ್ಣವ್ ತೇಜ್ ಜೊತೆಗೂ ಶ್ರೀ ರೊಮ್ಯಾನ್ಸ್ ಮಾಡಲಿದ್ದಾರೆ. ಇನ್ನು ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ನಟನೆಯ ದ್ವಿಭಾಷಾ ಸಿನಿಮಾ 'ಜ್ಯೂನಿಯರ್'ಗೂ ಕಿಸ್ ಬೆಡಗಿಯೇ ನಾಯಕಿ ಆಗಿದ್ದಾರೆ. ಇದೆಲ್ಲದರ ನಡುವೆ ಪವರ್ ಸ್ಟಾರ್ ಪವನ್ ಕಲ್ಯಾಣ್ ನಟನೆಯ 'ಉಸ್ತಾದ್ ಭಗತ್ ಸಿಂಗ್' ಚಿತ್ರಕ್ಕೂ ಶ್ರೀಲೀಲಾ ನಾಯಕಿಯಾಗುವ ಬಗ್ಗೆ ಚರ್ಚೆ ಶುರುವಾಗಿದೆ.
ಹರೀಶ್ ಶಂಕರ್ ಆಕ್ಷನ್ ಕಟ್ ಹೇಳುತ್ತಿರುವ 'ಉಸ್ತಾದ್ ಭಗತ್ ಸಿಂಗ್' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಈ ಚಿತ್ರದಲ್ಲಿ ಶ್ರೀಲೀಲಾ ನಾಯಕಿ ಆಗಿ ನಟಿಸೋದು ಬಹುತೇಕ ಕನ್ಫರ್ಮ್ ಎನ್ನಲಾಗುತ್ತಿದೆ. ಅದೇ ನಿಜವಾದರೆ ಶ್ರೀ ಕ್ರೇಜ್ ಟಾಲಿವುಡ್‌ನಲ್ಲಿ ಡಬಲ್ ಆಗುವುದು ಗ್ಯಾರೆಂಟಿ. ಇತ್ತೀಚಿನ ವರ್ಷಗಳಲ್ಲಿ ಕನ್ನಡದ ಯಾವುದೇ ನಟಿಯರು ತೆಲುಗು ಚಿತ್ರರಂಗದಲ್ಲಿ ಈ ಪಾಟಿ ಕ್ರೇಜ್ ಪಡೆದುಕೊಂಡಿರಲಿಲ್ಲ. ಶ್ರೀಲೀಲಾ ಮಾತ್ರ ಟಾಲಿವುಡ್‌ನಲ್ಲೇ ಸೆಟ್ಲ್ ಆಗುವ ಸುಳಿವು ಸಿಗುತ್ತಿದೆ. ಸದ್ಯ ಇತ್ತೀಚೆಗೆ ಕನ್ನಡದ ಯಾವುದೇ ಚಿತ್ರಕ್ಕೂ ಆಕೆ ಸಹಿ ಮಾಡಿಲ್ಲ.

ಎ. ಪಿ ಅರ್ಜುನ್ ನಿರ್ದೇಶನದ 'ಕಿಸ್' ಸಿನಿಮಾ ಮೂಲಕ ನಟಿ ಶ್ರೀಲೀಲಾ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದರು. ನಂತರ 'ಭರಾಟೆ' ಚಿತ್ರದಲ್ಲಿ ಶ್ರೀಮುರಳಿ ಜೋಡಿಯಾಗಿ ಮಿಂಚಿದರು. ಅಷ್ಟರಲ್ಲಿ ತೆಲುಗಿನ 'ಪೆಳ್ಳಿ ಸಂದಡಿ' ಸಿನಿಮಾ ಅವಕಾಶ ಅರಸಿ ಬಂದಿತ್ತು. ಖ್ಯಾತ ನಿರ್ದೇಶಕ ಕೆ. ರಾಘವೇಂದ್ರ ರಾವ್ ಮಾರ್ಗದರ್ಶನದಲ್ಲಿ ಈ ಸಿನಿಮಾ ನಿರ್ಮಾಣವಾಗಿತ್ತು. ಚಿತ್ರದಲ್ಲಿ ರೋಷನ್ ಮೇಕ ಜೋಡಿಯಾಗಿ ಗಮನ ಸೆಳೆದರು. ಆ ಸಿನಿಮಾ ಮುಗಿಯೋಕು ಮೊದ್ಲೆ ರವಿತೇಜಾ ನಟನೆಯ 'ಧಮಾಕ' ಚಿತ್ರದ ಅವಕಾಶ ಸಿಕ್ಕಿತ್ತು.


Click it and Unblock the Notifications











