ಶ್ರೀಲೀಲಾ ಅಷ್ಟು ಸ್ಲಿಮ್ ಆಗಿ ಇರೋಕೆ ಕಾರಣ ಏನು? ಫಿಟ್ನೆಸ್ ಸೀಕ್ರೆಟ್ ಬಿಚ್ಚಿಟ್ಟ 'ಕಿಸ್' ಬೆಡಗಿ
ಕನ್ನಡ ನಟಿ ಶ್ರೀಲೀಲಾ ಹವಾ ತೆಲುಗು ಚಿತ್ರರಂಗದಲ್ಲಿ ಜೋರಾಗಿದೆ. ಸದ್ಯ ಏಳೆಂಟು ಸಿನಿಮಾಗಳಲ್ಲಿ 'ಕಿಸ್' ಬೆಡಗಿ ಬ್ಯುಸಿಯಾಗಿದ್ದಾರೆ. ಬಹಳ ಕಡಿಮೆ ಸಮಯದಲ್ಲಿ ಪರಭಾಷೆಯಲ್ಲಿ ಕನ್ನಡ ನಟಿಗೆ ಈ ಮಟ್ಟಿಗೆ ಕ್ರೇಜ್ ಈ ಹಿಂದೆ ಸೃಷ್ಟಿ ಆಗಿರಲಿಲ್ಲ. ಪವನ್ ಕಲ್ಯಾಣ್, ಮಹೇಶ್ ಬಾಬು, ಬಾಲಕೃಷ್ಣರಂತಹ ಸೂಪರ್ ಸ್ಟಾರ್‌ಗಳ ಚಿತ್ರಗಳಲ್ಲಿ ಶ್ರೀ ಈಗ ಬಣ್ಣ ಹಚ್ಚಿದ್ದಾರೆ.
ಅಂತರಾಷ್ಟ್ರೀಯ ಯೋಗ ದಿನಾಚರಣೆಗೂ ಮುನ್ನ ಹೈದರಾಬಾದ್‌ನಲ್ಲಿ ಪ್ರವಾಸೋದ್ಯಮ ಸಚಿವಾಲಯ ಆಯೋಜಿಸಿದ್ದ ಯೋಗ ಮಹೋತ್ಸವದಲ್ಲಿ ನಟಿ ಶ್ರೀಲೀಲಾ ಭಾಗವಹಿಸಿದ್ದರು. ಎಲ್ಲರೊಂದಿಗೆ ಕೆಲ ಹೊತ್ತು ಯೋಗಾಸನ ಮಾಡಿದ ಚೆಲುವೆ ನಂತರ ಮಾತನಾಡಿ ಯೋಗದ ಮಹತ್ವವನ್ನು ವಿವರಿಸಿದ್ದಾರೆ. ನನಗೆ ದೈಹಿಕವಾಗಿ ಕಸರತ್ತು ಮಾಡುವುದು ಅಷ್ಟಾಗಿ ಇಷ್ಟವಿಲ್ಲ. ಯೋಗ ಮಾಡುವ ಮೂಲಕ ಸ್ಲಿಮ್ ಆಗಿದ್ದೇನೆ ಎಂಬ ಗುಟ್ಟನ್ನು ಬಿಚ್ಚಿಟ್ಟಿದ್ದಾಳೆ. ಎಲ್ಲರೂ ಯೋಗ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

ಪ್ರತಿದಿನ ಬೆಳಿಗ್ಗೆ ಸೂರ್ಯನಮಸ್ಕಾರದಂತಹ ಸಣ್ಣ ಹೆಜ್ಜೆಗಳೊಂದಿಗೆ ಯೋಗವನ್ನು ಪ್ರಾರಂಭಿಸಿದರೆ, ಅದು ಕ್ರಮೇಣ ನಿಮ್ಮ ದೈನಂದಿನ ಜೀವನದ ಭಾಗವಾಗುತ್ತದೆ ಎಂದು ಶ್ರೀಲೀಲಾ ಹೇಳಿದ್ದಾರೆ. ಉಸಿರಾಟದ ವ್ಯಾಯಾಮ, ಪ್ರಾಣಾಯಾಮ ಎಲ್ಲಾ ಗೊತ್ತೇಯಿದೆ. ಅದನ್ನು ನೆನಪಿಸಲು ಯೋಗ ಮಹೋತ್ಸವ, ದಿನಾಚರಣೆ ಮಾಡುತ್ತಾರೆ. ಮೊದಲು ಸಣ್ಣ ಸಣ್ಣ ಆಸನಗಳಿಂದ ಆರಂಭಿಸಿ ಆ ನಂತರ ನಿಧಾನವಾಗಿ ಹೆಚ್ಚಿನ ಯೋಗಾಸನಗಳನ್ನು ಅಭ್ಯಾಸ ಮಾಡುವಂತೆ ಸಲಹೆ ನೀಡಿದ್ದಾರೆ.

ಯೋಗ ಅಂದ್ರೆ ಅಚ್ಚುಮೆಚ್ಚು
"ಯೋಗ ಅನ್ನೋದು ಜೀವನಶೈಲಿ. ನನಗೆ ವರ್ಕೌಟ್ ಮಾಡಲು ಇಷ್ಟವಿಲ್ಲ. ಯೋಗ ಮಾಡಲು ಹೆಚ್ಚು ಸಮಯ ಮೀಸಲಿಡುತ್ತೇನೆ. ಯೋಗ ಮಾಡುವುದರಿಂದ ನಮ್ಮ ದೇಹದಲ್ಲಿ ಒಂದು ರೀತಿಯ ಇಂಜಿನಿಯರಿಂಗ್ ಪ್ರಕ್ರಿಯೆ ನಡೆಯುತ್ತದೆ. ಇದರಿಂದ ಅನೇಕ ಪ್ರಯೋಜನಗಳು ದೊರೆಯುತ್ತವೆ. ಪ್ರತಿದಿನ ಯೋಗ ಮಾಡುವುದರಿಂದ ನಮ್ಮ ಮನಸ್ಥಿತಿ ಮತ್ತು ದೇಹದ ಸಮತೋಲನ ಸುಧಾರಿಸುತ್ತದೆ" ಎಂದು ಶ್ರೀಲೀಲಾ ಹೇಳಿದ್ದಾರೆ.
ಯೋಗ ಮಾಡಲು ಬಿಡುವು ಮಾಡಿಕೊಳ್ಳುತ್ತೇನೆ
"ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಯೋಗ ಬಹಳ ಮುಖ್ಯ. ಇವತ್ತಿನ ಜಂಜಾಟದ ಜೀವನಲ್ಲಿ ಯೋಗ ನಿಜಕ್ಕೂ ಅತ್ಯಾವಶ್ಯಕ. ಅದು ಎಲ್ಲರಿಗೂ ಗೊತ್ತು ಕೂಡ. ಆದರೆ ಪ್ರತಿದಿನ ಎಲ್ಲರೂ ಅಭ್ಯಾಸ ಮಾಡಲು ಸಾಧ್ಯವಾಗುತ್ತಿಲ್ಲ. ನಾನು ಸಿನಿಮಾ ಕೆಲಸಗಳಲ್ಲಿ ಎಷ್ಟೇ ಬ್ಯುಸಿ ಇದ್ದರೂ ಬಿಡುವು ಮಾಡಿಕೊಂಡು, ಕೊನೆ ಪಕ್ಷ ಕ್ಯಾರವ್ಯಾನ್‌ನಲ್ಲೂ ಯೋಗ ಮಾಡುತ್ತೇನೆ" ಎಂದಿದ್ದಾರೆ.
ದೊಡ್ಡ ಚಿತ್ರಗಳಲ್ಲಿ ನಟನೆ
ಪವನ್ ಕಲ್ಯಾಣ್ ಜೊತೆ 'ಉಸ್ತಾದ್ ಭಗತ್ ಸಿಂಗ್', ಬಾಲಕೃಷ್ಣ ಜೊತೆ NBK108, ಮಹೇಶ್ ಬಾಬು #SSMB28 ಸೇರಿದಂತೆ ದೊಡ್ಡ ದೊಡ್ಡ ಸಿನಿಮಾಗಳು ಶ್ರೀಲೀಲಾ ಕೈಯಲ್ಲಿವೆ. ಇನ್ನುಳಿದಂತೆ ರಾಮ್ ಪೊತಿನೇನಿ, ವಿಜಯ್ ದೇವರಕೊಂಡ, ನಿತಿನ್ ಜೊತೆ ಕನ್ನಡ ನಟಿ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಟಾಲಿವುಡ್‌ನ ಬಹುಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ.
ಟಾಲಿವುಡ್‌ನಲ್ಲೇ ಸೆಟ್ಲ್!
2019ರಲ್ಲಿ ಕನ್ನಡದ 'ಕಿಸ್' ಸಿನಿಮಾ ಮೂಲಕ ಶ್ರೀಲೀಲಾ ಚಿತ್ರರಂಗ ಪ್ರವೇಶಿಸಿದರು. ನಂತರ 'ಭರಾಟೆ', 'ಬೈ ಟು ಲವ್' ಸಿನಿಮಾಗಳಲ್ಲಿ ಮಿಂಚಿದರು. 'ಪೆಳ್ಳಿ ಸಂದಡಿ' ಚಿತ್ರದಲ್ಲಿ ನಟಿಸಿ ಟಾಲಿವುಡ್ ಪ್ರವೇಶಿಸಿದರು. ಶ್ರೀ ಅಂದ ಹಾಗೂ ಡ್ಯಾನ್ಸ್‌ಗೆ ತೆಲುಗು ಪ್ರೇಕ್ಷಕರು ಫಿದಾ ಆಗಿದ್ದಾರೆ. ಜನಾರ್ಧನ ರೆಡ್ಡಿ ಮಗಲ ಕಿರೀಟಿ ನಟನೆಯ 'ಜ್ಯೂನಿಯರ್' ಚಿತ್ರದಲ್ಲಿ ಶ್ರೀಲೀಲಾ ಮಿಂಚಿದ್ದಾರೆ. ಈ ಸಿನಿಮಾ ಮಾತ್ರ ಕನ್ನಡದಲ್ಲೂ ರಿಲೀಸ್ ಆಗ್ತಿದೆ. ಉಳಿದಂತೆ ಬರೀ ತೆಲುಗು ಸಿನಿಮಾಗಳಲೇ ಶ್ರೀ ಬ್ಯುಸಿ ಆಗಿದ್ದಾರೆ.


Click it and Unblock the Notifications











