ರಸ್ತೆ ಬದಿಯ ಅಂಗಡಿಯಲ್ಲಿ ಚಹಾ ಹೀರಿದ ಶ್ರೀಲೀಲಾ,ನಿಮ್ಮ ಸರಳತೆಗೆ ಸಲಾಂ ಎಂದ ಫ್ಯಾನ್ಸ್, ವಿಡಿಯೋ ವೈರಲ್...!
ಲಕ್ ಅಂದ್ರೆ ಇದೇ ಇರಬೇಕು. ಅಭಿನಯಿಸಿದ ಸಿನಿಮಾವೊಂದು ಸಕ್ಸಸ್ ಆಗಿಬಿಟ್ಟರೆ ಸಾಕು ಅವಕಾಶಗಳು ಬೇಡವೆಂದರೂ ಬರುತ್ತಲೇ ಇರುತ್ತವೆ ಎಂಬುದಕ್ಕೆ ಶ್ರೀಲೀಲಾನೇ ಸಾಕ್ಷಿ. ಹೌದು.. 2019ರ ಕೆಲವೇ ಸೂಪರ್ ಹಿಟ್ ಚಿತ್ರಗಳಲ್ಲಿ 'ಕಿಸ್' ಸಿನಿಮಾ ಕೂಡಾ ಒಂದು. ಶ್ರೀಲೀಲಾ ಅವರ ಬಣ್ಣದ ಕನಸು ಆರಂಭವಾಗಿದ್ದು ಇದೇ ಚಿತ್ರದಿಂದ.
ಹೀರೋ ಹೀರೋಯಿನ್ ಇಬ್ಬರೂ ಹೊಸಬರಾಗಿದ್ದರೂ ಆ ಕಾಲದಲ್ಲಿ ಹತ್ ಹತ್ರ 90 ಚಿತ್ರಮಂದಿರದಲ್ಲಿ 25 ದಿನ ಪೂರೈಸಿದ್ದ 'ಕಿಸ್' ಚಿತ್ರದಿಂದ ಶ್ರೀಲೀಲಾ ಅದೃಷ್ಟದ ಬಾಗಿಲು ತೆರೆಯಿತು. ಅಲ್ಲಿಂದಾಚೆ ಭರಾಟೆ.. ಬೈ ಟು ಲವ್.. ಚಿತ್ರಗಳನ್ನು ಮಾಡಿದ ಶ್ರೀಲೀಲಾ ಆ ನಂತರ ಸೀದಾ ಹೋಗಿದ್ದು ಆಂಧ್ರ ಪ್ರದೇಶಕ್ಕೆ.

ಹಾಗೇ ನೋಡಿದರೆ ಧಮಾಕಾ ಚಿತ್ರಕ್ಕೂ ಮುನ್ನ, ರೋಶನ್ ಜೊತೆ ಶ್ರೀಲೀಲಾ ಸಿನಿಮಾ ಮಾಡಿದ್ದರು. ಆದರೆ .. ಆ ಸಿನಿಮಾ ಅಷ್ಟಕಷ್ಟೇ ಅನ್ನುವ ವ್ಯಾಪಾರ ಮಾಡಿತು. ಟಆದರೆ ರವಿತೇಜಾ ಅವರ 'ಧಮಾಕಾ' ಶ್ರೀಲೀಲಾ ಅವರ ಹೆಸರನ್ನ ಹೈದ್ರಾಬಾದ್‌ನೆಲ್ಲೆಡೆ ಜನಪ್ರಿಯತೆ ತಂದು ಕೊಡ್ತು.
ಆ ನಂತರ ಒಂದಾದ ಮೇಲೊಂದು ಸಿನಿಮಾ ಮಾಡಿದ ಶ್ರೀಲೀಲಾ ಸದ್ಯಕ್ಕೆ ತೆಲುಗು ಚಿತ್ರರಂಗದ ಬಹುಬೇಡಿಕೆಯ ನಾಯಕಿ. ಆದರೆ, ಟಾಲಿವುಡ್‌ನಲ್ಲಿ ಚಿನ್ನದ ಬೇಡಿಕೆ ಇರುವಾಗ್ಲೇ ಶ್ರೀಲೀಲಾ ಈಗ ರಶ್ಮಿಕಾ ಅವರಂತೆಯೇ ಬಾಲಿವುಡ್‌ಗೆ ತಲುಪುವ ರಸ್ತೆಯಲ್ಲಿ ಪ್ರಯಾಣ ಮಾಡಲು ಶುರು ಮಾಡಿದ್ದಾರೆ. ಒಂದಲ್ಲ ಬದಲಿಗೆ ಎರಡು ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಅನ್ನುವ ಸುದ್ದಿ ಇದೆ. ಆ ಪೈಕಿ ಸೈಫ್ ಅಲಿ ಖಾನ್ ಪುತ್ರನ ಮೊದಲ ಚಿತ್ರಕ್ಕೆ ಶ್ರೀಲೀಲಾ ನಾಯಕಿಯಾಗಿರುವುದು ನಿಜಾ ಎನ್ನುವ ಮಾತು ಮುಂಬೈನಲ್ಲಿ ಕೇಳಿ ಬರುತ್ತಿದೆ. ಮತ್ತೊಂದು ಚಿತ್ರಕ್ಕೆ ವರುಣ್ ಧವನ್ ನಾಯಕ ಎನ್ನುವ ಸುದ್ದಿ ಕೂಡ ಚಾಲ್ತಿಯಲ್ಲಿದೆ. ಇದರ ನಡುವೆ ಶ್ರೀಲೀಲಾ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಹೌದು, ಅಸಲಿಗೆ ಕರುನಾಡಿನಿಂದ ಕಣ್ಮರೆಯಾಗಿ ಆಂಧ್ರದಲ್ಲಿಯೇ ಬಿಡಾರ ಹೂಡಿರುವ ಶ್ರೀಲೀಲಾ, ಚಿತ್ರದ ಚಿತ್ರೀಕರಣಕ್ಕೆಂದು ತೆರಳುತ್ತಿದ್ದರು. ಈ ಸಮಯದಲ್ಲಿ ಶ್ರೀಲೀಲಾ ತಮ್ಮ ತಾಯಿಯ ಜೊತೆ ರಸ್ತೆ ಬದಿಯ ಅಂಗಡಿಗೆ ತೆರಳಿ ಬಿಸಿ ಬಿಸಿ ಟೀ ಕುಡಿದಿದ್ದಾರೆ. ಅಲ್ಲಿದ್ದವರ ಜೊತೆ ಆತ್ಮೀಯವಾಗಿ ಬೆರೆತಿದ್ದಾರೆ. ಕೆಲ ಸಮಯ ಹರಟೆ ಹೊಡೆದಿದ್ದಾರೆ. ಇನ್ನೂ.. ಶ್ರೀಲೀಲಾ ಆಂಧ್ರದ ಸಿನಿಪ್ರಿಯರಿಗೆ ಚಿರಪರಿಚಿತವಾದ ಮುಖ. ಅದರಲ್ಲಿಯೂ ಶ್ರೀಲೀಲಾ ಡ್ಯಾನ್ಸ್‌ಗೆ ಅಭಿಮಾನಿಗಳ ದೊಡ್ಡ ದಂಡೇ ಇದೆ. ಹೀಗಾಗಿ ಶ್ರೀಲೀಲಾ ಅವರನ್ನು ಪ್ರೀತಿಯಿಂದ ಸ್ವಾಗತವನ್ನು ಅಲ್ಲಿದ್ದವರು ಕೋರಿದ್ದಾರೆ. ನೆನಪಿಗೆ ಫೋಟೊವನ್ನು ಕೂಡ ಕ್ಲಿಕಿಸಿಕೊಂಡಿದ್ದಾರೆ.
ಸದ್ಯಕ್ಕೆ ಶ್ರೀಲೀಲಾ ಅವರ ಈ ಸರಳತೆಗೆ ಅನೇಕರು ಶರಣಾಗಿದ್ದಾರೆ. ಬಾಯ್ತುಂಬ ಶ್ರೀಲೀಲಾ ಅವರನ್ನು ಹೊಗಳುತ್ತಿದ್ದಾರೆ. ಇನ್ನೂ ಕೆಲವರು ರಶ್ಮಿಕಾ ಮಂದಣ್ಣ ಮತ್ತು ಶ್ರೀಲೀಲಾ ಅವರನ್ನು ಹೋಲಿಕೆ ಮಾಡುತ್ತಿದ್ದಾರೆ. ಇಬ್ಬರು ಪ್ಯಾನ್ ಇಂಡಿಯಾ ಲೆವಲ್‌ನಲ್ಲಿ ಗುರುತಿಸಿಕೊಂಡಿದ್ದಾರೆ, ಆದರೆ ಇಬ್ಬರ ನಡುವಳಿಕೆಯಲ್ಲಿ ಎಷ್ಟೊಂದು ವ್ಯತ್ಯಾಸ ಇದೆ ಎನ್ನುತ್ತಿದ್ದಾರೆ.
ಅಂದ್ಹಾಗೇ ಶ್ರೀಲೀಲಾ ಸದ್ಯಕ್ಕೆ ನಿತಿನ್ ಅಭಿನಯದ ರಾಬಿನ್ ಹುಡ್ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರವನ್ನು ಹೊರತು ಪಡಿಸಿದರೆ ರವಿತೇಜಾ ಅವರ ಜೊತೆ ಪಕ್ಕದ ಮನೆಯ ಮಾಸ್ ಮಹಾರಾಜ ರವಿತೇಜಾ ಜೊತೆ ಮತ್ತೊಂದು ಚಿತ್ರವನ್ನು ಮಾಡುತ್ತಿದ್ದಾರೆ. ಭಾನು ಬೋಗವರಪು ಈ ಚಿತ್ರವನ್ನ ನಿರ್ದೇಶಿಸಲಿದ್ದಾರೆ. ಇನ್ನೂ ಇದು ರವಿತೇಜ ಅಭಿನಯದ 75ನೇ ಚಿತ್ರ ಅನ್ನುವುದು ಇನ್ನೊಂದು ವಿಶೇಷ. ಇವೆರಡು ಚಿತ್ರ ಹೊರತು ಪಡಿಸಿದರೆ ಪವನ್ ಕಲ್ಯಾಣ್ ಅವರ ಉಸ್ತಾದ್ ಭಗತ್ ಸಿಂಗ್ ಚಿತ್ರಕ್ಕೂ ಶ್ರೀಲೀಲಾ ನಾಯಕಿ. ಆದರೆ ಪವನ್ ಕಲ್ಯಾಣ್ ಸದ್ಯ ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ. ಈ ಕಾರಣಕ್ಕೆ ಈ ಚಿತ್ರ ಅದ್ಯಾವ ಕಾಲಕ್ಕೆ ಬರುತ್ತೆ ಎಂದು ಹೇಳುವುದು ಕಷ್ಟ.
ಒಟ್ನಲ್ಲಿ ಸೆಲೆಬ್ರಿಟಿಗಳು ಏನೇ ಮಾಡಲಿ, ಅದು ಬಹುತೇಕರಿಗೆ ತುಂಬಾನೇ ಸ್ಪೆಷಲ್ ಅನಸುತ್ತೆ. ಹೀಗಾಗಿಯೇ ವಿಡಿಯೋ.. ಫೋಟೋ.. ಕಣ್ ಮುಚ್ಚಿ ಕಣ್ಣು ತೆರೆಯುವಷ್ಟರಲ್ಲಿ ವೈರಲ್ ಆಗ್ತಾವೆ. ಚರ್ಚೆಗೀಡಾಗುತ್ತಾವೆ. ಇದಕ್ಕೆ ಶ್ರೀಲೀಲಾ ಅವರ ಈ ವಿಡಿಯೋ ಮತ್ತೊಂದು ಸಾಕ್ಷಿ.


Click it and Unblock the Notifications











