ಚಿಕಿತ್ಸೆಗೆ ಹಣ ಇಲ್ಲದೇ ಪರದಾಟ, ಜೀವನ್ಮರಣದ ಹೋರಾಟದಲ್ಲಿ ಖ್ಯಾತ ನಟಿ ; ಸಹಾಯಕ್ಕೆ ಕೈಚಾಚಿದ ಬಿಗ್ ಬಾಸ್ ಸ್ಫರ್ಧಿ
ಬಣ್ಣದ ಲೋಕ ಅನೇಕರ ಆಕರ್ಷಣೆಯ ಕ್ಷೇತ್ರ. ಕಿರುತೆರೆ ಇರಲಿ.. ಬೆಳ್ಳಿತೆರೆ ಇರಲಿ .. ಕನಸೆಂಬ ಕುದುರೆಯನ್ನೇರಿದ ಅನೇಕರು ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಳ್ಳಲು ಈ ಕಡೆ ಬರುತ್ತಾರೆ. ಕೆಲವರು ಗೆಲ್ಲುತ್ತಾರೆ. ಕೆಲವರು ಸೋಲುತ್ತಾರೆ. ಜನಸಾಮಾನ್ಯರ ದೃಷ್ಟಿಯಲ್ಲಿ ಸಿನಿಮಾರಂಗ ಅಂದ ತಕ್ಷಣ ಕಣ್ತುಂಬ ಬಣ್ಣಗಳೇ ತುಂಬಿಕೊಳ್ಳುತ್ತವೆ. ಆದರೆ, ಹಾಗೆ ನೋಡಿದರೆ ಬೇರೆಲ್ಲ ಉದ್ಯಮಕ್ಕಿಂತಾ ಅನಿಶ್ಚಿತತೆ, ಅಭದ್ರತೆ ಇಲ್ಲಿ ಸ್ವಲ್ಪ ಹೆಚ್ಚೇ ಇದೆ.
ಸಾಧನೆಯ ಶಿಖರಕ್ಕೇರಲೇಬೇಕೆಂಬ ಶಪಥ ಮಾಡಿ ಹಗಲಿರುಳು ಪ್ರಯತ್ನ ಮಾಡಿದರೂ ಕೂಡ ಕೆಲ ಒಮ್ಮೆ ಈ ಪ್ರಯಾಣದಲ್ಲಿ ಅಗ್ನಿ ಪರೀಕ್ಷೆಗಳು ಎದುರಾಗುತ್ತಾವೆ. ಇದರಿಂದ ಕೆಲವರ ಕನಸು ಕಮರಿ ಹೋದರೆ, ಇನ್ನು ಕೆಲವರಿಗೆ ಆರೋಗ್ಯ ಕೈ ಕೊಡುತ್ತೆ. ಉದಾಹರಣೆಗೆ ''ವಾಹಿನಿ'' ಅವರ ಬದುಕನ್ನೇ ತೆಗೆದುಕೊಳ್ಳಿ.

ಹೌದು ವಾಹಿನಿ ತೆಲುಗು ಕಿರುತೆರೆಯ ಪ್ರಖ್ಯಾತ ಹೆಸರು. ಜಯ ವಾಹಿನಿ ಎಂದೇ ಇವರು ಚಿರಪರಿಚಿತ. ಕೆಲವರು ಇವರನ್ನು ಪದ್ಮಕ್ಕ ಎಂದು ಕೂಡ ಕರೆಯುತ್ತಾರೆ. ಹತ್ ಹತ್ರ 25 ವರ್ಷಗಳಿಂದ ಕಲಾ ಸೇವೆ ಮಾಡಿಕೊಂಡು ಬಂದಿರುವ ವಾಹಿನಿ 2004ರಲ್ಲಿ ತೆರೆಗೆ ಬಂದಿದ್ದ ಸೌಂದರ್ಯ ಅಭಿನಯದ "ಶ್ವೇತನಾಗು" ಚಿತ್ರದಲ್ಲಿ ವಾಸುಕಿ ಪಾತ್ರ ನಿರ್ವಹಿಸಿದ್ದರು. ಈ ಪಾತ್ರ ಇವರಿಗೆ ಅಪಾರವಾದ ಜನಪ್ರಿಯತೆಯನ್ನು ನೀಡಿತ್ತು. ತೀರಾ ಇತ್ತೀಚೆಗಷ್ಟೇ ''ಬಹಿರ್ಭೂಮಿ'' ಚಿತ್ರದಲ್ಲೂ ಅಭಿನಯಿಸಿದ್ದರು ವಾಹಿನಿ.
ಇಂಥಾ ವಾಹಿನಿ ಸದ್ಯ ಸಾವು ಬದುಕಿನ ಹೋರಾಟ ಮಾಡುತ್ತಿದ್ದಾರೆ. ಹೌದು. ಸ್ತನ ಕ್ಯಾನ್ಸರ್ ವಿರುದ್ಧ ವಾಹಿನಿ ಹೋರಾಡುತ್ತಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಅವರ ಆರೋಗ್ಯದಲ್ಲಿ ಚೇತರಿಕೆ ಮಾತ್ರ ಕಂಡು ಬಂದಿಲ್ಲ. ಬದಲಿಗೆ ವಾಹಿನಿ ಅವರ ಆರೋಗ್ಯ ಇನ್ನೂ ಹಾಳಾಗಿದೆ.
ವೈದ್ಯರ ಪ್ರಕಾರ.. ಕ್ಯಾನ್ಸರ್ ಕೊನೆಯ ಹಂತ ತಲುಪಿದೆ. ಬಹು-ಅಂಗಾಂಗ ವೈಫಲ್ಯದ ಲಕ್ಷಣಗಳು ಕೂಡ ಕಾಣಿಸಿಕೊಂಡಿವೆ. ಕಿಮೊಥೆರಪಿ ಮತ್ತು ಇನ್ನುಳಿದ ಶಸ್ತ್ರ ಚಿಕಿತ್ಸೆಗೆ ಕಡಿಮೆ ಅಂದರೂ 25 ರಿಂದ 35 ಲಕ್ಷದ ಅವಶ್ಯಕತೆ ಸದ್ಯ ಇದೆ. ಆದರೆ ದುರಂತ ಅಂದರೆ ಕಲೆಯನ್ನೇ ಉಸಿರಾಗಿಸಿಕೊಂಡ ವಾಹಿನಿ ಬಳಿ ಈ ಹೋರಾಟದಲ್ಲಿ ಬದುಕುಳಿಯಲು ಹಣ ಇಲ್ಲ. ಈ ಹಿನ್ನೆಲೆ ತೆಲುಗು "ಬಿಗ್ ಬಾಸ್" ಕಾರ್ಯಕ್ರಮದ ಮೂಲಕ ಆಂಧ್ರದೆಲ್ಲೆಡೆ ಫೈರ್ ಬ್ರ್ಯಾಂಡ್ ಎಂದೇ ಪ್ರಖ್ಯಾತರಾದ ಕರಾಟೆ ಕಲ್ಯಾಣಿ ಆರ್ಥಿಕ ನೆರವು ನೀಡುವಂತೆ ಮನವಿ ಮಾಡಿದ್ದಾರೆ. ವಾಹಿನಿ ಅವರನ್ನು ಉಳಿಸಿ ಎಂದು ಅಂಗಲಾಚಿ ಬೇಡಿಕೊಂಡಿದ್ದಾರೆ.
ವಾಹಿನಿ ಅವರ ಗಂಭೀರ ಆರೋಗ್ಯ ಸ್ಥಿತಿಯ ಕುರಿತು, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿಯನ್ನು ಹಂಚಿಕೊಂಡಿರುವ ಕಲ್ಯಾಣಿ , ನಮ್ಮ ಮನೆಯ ಪಕ್ಕವೇ ವಾಹಿನಿಯವರು ವಾಸ ಮಾಡುತ್ತಿದ್ದರು ಎಂದು ಹೇಳಿದ್ದಾರೆ. ನಾನು ಬಾಲ್ಯದಿಂದಲೇ ಅವರನ್ನು ನೋಡುತ್ತಾ ಬೆಳೆದೆ, ನಮಗೆ ಅವರು ತುಂಬಾನೇ ಪರಿಚಯಸ್ಥರು ಎಂದು ಹೇಳಿರುವ ಕಲ್ಯಾಣಿ ಈ ಪರಿಸ್ಥಿತಿಯಲ್ಲಿ ಅವರನ್ನು ನೋಡಲು ತುಂಬಾ ಕಷ್ಟವಾಗುತ್ತಿದೆ ಎಂದು ಹೇಳಿದ್ದಾರೆ.

ನಮ್ಮೆಲ್ಲರನ್ನು ತಮ್ಮ ಅಭಿನಯದಿಂದ ನಗಿಸಿದ ಮತ್ತು ಕಣ್ಣೀರು ಹಾಕಿಸಿದ ವಾಹಿನಿ ಸದ್ಯ ಜೀವನ್ಮರಣದ ಹೋರಾಟ ಮಾಡುತ್ತಿದ್ದಾರೆ ಎಂದು ಹೇಳಿರುವ ಕಲ್ಯಾಣಿ, ದಯಮಾಡಿ ವಾಹಿನಿ ಅವರನ್ನು ನಾವೆಲ್ಲರೂ ಉಳಿಸಿಕೊಳ್ಳೋಣ ಅದಕ್ಕೆ ಸಹಾಯ ಮಾಡಿ ಎಂದು ಅಂಗಲಾಚಿದ್ದಾರೆ. ನಿಮ್ಮ ಚಿಕ್ಕ ಸಹಾಯ ಅವರಿಗೆ ಜೀವದಾನ ಕೊಡಬಹುದು ಎಂದು ಭಾವುಕರಾಗಿರುವ ಕರಾಟೆ ಕಲ್ಯಾಣಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ವಾಹಿನಿಯವರ ಯುಪಿಯ ನಂಬರ್ ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ಹಂಚಿಕೊಂಡಿದ್ದಾರೆ. ದಯಮಾಡಿ ಸಹಾಯ ಮಾಡಿ ಎಂದು ಮನವಿಯನ್ನು ಮಾಡಿಕೊಂಡಿದ್ದಾರೆ.
ಕರಾಟೆ ಕಲ್ಯಾಣಿ ಅವರ ಈ ಮನವಿಗೆ ಹಲವಾರು ಜನ ಸದ್ಪ ಸ್ಪಂದಿಸಿದ್ದು, ವಾಹಿನಿ ಅವರಿಗೆ ಹಲವರು ನೆರವಿನ ಹಸ್ತ ಚಾಚುತ್ತಿದ್ದಾರೆ. ಇನ್ನೂ ಕೆಲವರು ಮೆಗಾಸ್ಟಾರ್ ಚಿರಂಜೀವಿ ಅವರನ್ನೊಳಗೊಂಡು ತೆಲುಗು ಚಿತ್ರರಂಗದ ಹಲವು ಕಲಾವಿದರಲ್ಲಿ ವಾಹಿನಿ ಅವರಿಗೆ ಸಹಾಯ ಮಾಡುವಂತೆ ಮನವಿಯನ್ನು ಕೂಡ ಮಾಡಿಕೊಳ್ಳುತ್ತಿದ್ದಾರೆ. ಹಲವರು ಮಾಡುತ್ತಿರುವ ಸಹಾಯ ಮತ್ತು ಪ್ರಾರ್ಥನೆಯ ಫಲದಿಂದ ವಾಹಿನಿ ಬದುಕುಳಿಯಲಿ, ಈ ಹೋರಾಟದಲ್ಲಿ ಗೆದ್ದು ಬರಲಿ ಎನ್ನುವುದೇ ಹಲವರ ಆಶಯ.



Click it and Unblock the Notifications











