ಆದಿಪುರುಷ್: ಪ್ರಭಾಸ್ ಚಿತ್ರದ ರಿಲೀಸ್ ದಿನಾಂಕ ಪ್ರಕಟ!
ನಟ ಪ್ರಭಾಸ್ ಅಭಿನಯದ ಸಿನಿಮಾದಿಂದ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಪ್ರಭಾಸ್ ಸಾಲು, ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಆದರೆ ಸಿನಿಮಾಗಳು ಮಾತ್ರ ರಿಲೀಸ್ ಆಗುತ್ತಿಲ್ಲವಲ್ಲ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಕೊನೆಗೂ ಸಿಹಿ ಸುದ್ದಿ ಸಿಕ್ಕಿದೆ. 'ಆದಿಪುರುಷ್' ಚಿತ್ರತಂಡ ರಿಲೀಸ್ ದಿನಾಂಕವನ್ನು ಪ್ರಕಟ ಮಾಡಿ ಶಿವರಾತ್ರಿ ಹಬ್ಬದಂದು ಶುಭ ಸಮಾಚಾರ ಕೊಟ್ಟಿದೆ.
ಸೋಮವಾರ ಸಂಜೆ (ಫೆ.28) ಭೂಷಣ್ ಕುಮಾರ್ ಮತ್ತು ಓಂ ರೌತ್ ನಿರ್ದೇಶನದ ಸಂಪೂರ್ಣ 'ಆದಿಪುರುಷ್' ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಮಾರ್ಚ್ 1 ರಂದು ಬೆಳಿಗ್ಗೆ 7.11 ಕ್ಕೆ ದೊಡ್ಡ ಘೋಷಣೆ ಮಾಡಲಾಗುತ್ತದೆ ಎಂದು ತಿಳಿಸಲಾಗಿತ್ತು. ಈ ಪೋಸ್ಟರ್ ಸಾಕಷ್ಟು ಕುತೂಹಲ ಹುಟ್ಟು ಹಾಕಿತ್ತು. ಅಂತೆಯೇ ಚಿತ್ರ ತಂಡ ಮಾರ್ಚ್ 1 ಬೆಳ್ಳಂಬೆಳಗ್ಗೆ ಶುಭ ಸಮಾಚಾರ ಹಂಚಿಕೊಂಡಿದೆ.
ನಟ ಪ್ರಭಾಸ್, ಸೈಫ್ ಅಲಿ ಖಾನ್ ಮತ್ತು ಕೃತಿ ಸನೊನ್ ಮುಖ್ಯ ಪಾತ್ರದಲ್ಲಿ ನಟಿಸಿರುವ 'ಆದಿಪುರುಷ್' ಮುಂದಿವ ವರ್ಷ ತೆರೆಗೆ ಬರಲಿದೆ ಎನ್ನುವ ವಿಚಾರವನ್ನು ಚಿತ್ರ ತಂಡ ಪ್ರಕಟ ಮಾಡಿದೆ. 2023 ಸಂಕ್ರಾಂತಿ ಹಬ್ಬದ ಪ್ರಯುಕ್ತ ಪ್ರಭಾಸ್ ಮುಂದಿನ ಸಿನಿಮಾ ದೊಡ್ಡ ಪರದೆಯ ಮೇಲೆ ಬರಲಿದೆ.

'ಆದಿಪುರುಷ್' ರಿಲೀಸ್ ದಿನಾಂಕ ಪ್ರಕಟ: 12/1/2023!
'ಆದಿಪುರುಷ್' ಚಿತ್ರತಂಡ ಈಗಾಗಲೇ ರಿಲೀಸ್ ದಿನಾಂಕವನ್ನು ಹಲವು ಬಾರಿ ಪ್ರಕಟಿಸಿ ಅದನ್ನು ಹಿಂಪಡೆದಿದೆ. ಕೊರೊನಾ ಕಾರಣಕ್ಕೆ ಚಿತ್ರದ ಕೆಲಸಗಳು ಬಾಕಿ ಉಳಿದ ಕಾರಣ ಸಿನಿಮಾ 2023ಕ್ಕೆ ಹೋಗಿದೆ. ಈ ವರ್ಷ ದಸರಾ, ದೀಪಾವಳಿಯಿಂದ ಹಿಡಿದು ಕ್ರಿಸ್ಮಸ್ ಮತ್ತು ಮುಂದಿನ ವರ್ಷದ ಸಂಕ್ರಾಂತಿವರೆಗೆ ಹಲವಾರು ಬಿಡುಗಡೆ ದಿನಾಂಕ ಆಯ್ಕೆಗಳನ್ನು ಚರ್ಚೆ ಮಾಡಿ ಮತ್ತು ಎಲ್ಲಾ ಸಾಧಕ ಬಾಧಕಗಳನ್ನು ಅಳೆದು ತೂಗಿದ ನಂತರ ಅಂತಿಮವಾಗಿ ಜನವರಿ 12 ರಂದು 2023ರಂದು ಚಿತ್ರವನ್ನು ರಿಲೀಸ್ ಮಾಡುವ ನಿರ್ಧಾರ ಚಿತ್ರತಂಡ ತೆಗೆದುಕೊಂಡಿದೆ.

ಅದ್ಭುತ ಲೋಕ ಸೃಷ್ಟಿಸಲು ಚಿತ್ರತಂಡ ಪಣ!
ಈ ದಿನಾಂಕಕ್ಕೆ ಇಲ್ಲಿಯವರೆಗೆ ಯಾವುದೇ ಹಿಂದಿ, ತಮಿಳು ಅಥವಾ ತೆಲುಗಿನಲ್ಲಿ ದೊಡ್ಡ ಚಿತ್ರಗಳು ಬಿಡುಗಡೆಯನ್ನು ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಹಾಗಾಗಿ ಪ್ಯಾನ್ ಇಂಡಿಯಾ ಸಿನಿಮಾ 'ಆದಿಪುರುಷ್' ಚಿತ್ರಕ್ಕೆ ಇದು ಉತ್ತಮ ಸಮಯ ಎಂದು ಚಿತ್ರತಂಡ ನಿರ್ಧಾರ ಮಾಡಿದೆ. ಸದ್ಯ ಚಿತ್ರದ ಶೂಟಿಂಗ್ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಚಿತ್ರೀಕರಣಕ್ಕಿಂತಲೂ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಹೆಚ್ಚಾಗಿವೆ. ಗ್ರಾಫಿಕ್ಸ್, ವಿಎಫ್‌ಎಕ್ಸನ್ನು ಹೆಚ್ಚಿನ ಪ್ರಮಾಣದಲ್ಲಿ ಚಿತ್ರದಲ್ಲಿ ಅಳವಡಿಸಲಾಗುತ್ತದೆ.

'ಆದಿಪುರುಷ್' ಚಿತ್ರದಲ್ಲಿ ರಾಮಾಯಣದ ಗತವೈಭವ!
ಪ್ರಭಾಸ್ ಮತ್ತು ಸೈಫ್ ಅಲಿಖಾನ್ ಅವರ ಪಾತ್ರಗಳು 'ಆದಿಪುರುಷ್' ಚಿತ್ರದಲ್ಲಿನ ಮುಖ್ಯ ಹೈಲೈಟ್. ಚಿತ್ರದಲ್ಲಿ ಅದ್ಭುತವಾದ ದೃಶ್ಯ ವೈಭವ ಇರಲಿದೆಯಂತೆ. ರಾಮಾಯಣದ ಒಂದು ಭಾಗವನ್ನು ಆಯ್ದು ಸಿನಿಮಾ ಮಾಡಲಾಗಿದೆ. ಈ ಚಿತ್ರ ಪೌರಾಣಿಕ ಕಥೆಯ ಅದ್ಭುತ ಲೋಕವನ್ನೇ ತೆರೆದಿಡುತ್ತದೆ ಎನ್ನುವುದು ಚಿತ್ರತಂಡದ ಅಭಿಪ್ರಾಯ.
ಚಿತ್ರ ತಂಡವು ಮೇಕಿಂಗ್‌ನಲ್ಲಿ ಯಾವುದೇ ರೀತಿಯಲ್ಲಿ ರಾಜಿ ಮಾಡಿಕೊಳ್ಳಲು ಸಿದ್ಧವಿಲ್ಲ. ಇದೇ ಕಾರಣಕ್ಕೆ ಚಿತ್ರದ ಬಿಡುಗಡೆಯನ್ನು ಕೆಲವು ತಿಂಗಳುಗಳವರೆಗೆ ವಿಳಂಬ ಆಗಲಿದೆ. ಚಿತ್ರದಲ್ಲಿ ವಿಎಫ್‌ಎಕ್ಸ್ ಕೆಲಸಗಳು ಹೆಚ್ಚಾಗಿವೆಯಂತೆ. ಹಾಗಾಗಿ ಆತುರ ಮಾಡದೇ, ಎಲ್ಲಾ ಕೆಲಸಗಳನ್ನು ಸರಿಯಾಗಿ ಮುಗಿಸಿ, ಮುಂದಿವ ವರ್ಷ ಚಿತ್ರ ರಿಲೀಸ್ ಮಾಡಲು ತಯಾರಿ ನಡೆಸಿದೆ ಚಿತ್ರ ತಂಡ.

2022ರಲ್ಲಿ ಪ್ರಭಾಸ್ ಅಭಿನಯದ 'ಸಲಾರ್' ತೆರೆಗೆ?
ಇನ್ನು ಪ್ರಭಾಸ್ ಅಭಿನಯದ 'ರಾಧೆ ಶ್ಯಾಮ್' ಚಿತ್ರ ಬಿಡುಗಡೆಗೆ ಪ್ರಭಾಸ್ ಸಜ್ಜಾಗಿದ್ದಾರೆ. ಈ ಚಿತ್ರ ಜಗತ್ತಿನಾದ್ಯಂತ ಮಾರ್ಚ್ 11 ರಂದು ಬಿಡುಗಡೆಯಾಗಲಿದೆ. ಇದರ ಜೊತೆಗೆ ಸಲಾರ್, ಪ್ರಾಜೆಕ್ಟ್ ಕೆ ಮತ್ತು ದಿಲ್ ರಾಜು ಅವರೊಂದಿಗಿನ ಹೊಸ ಚಿತ್ರ, ಪ್ರಭಾಸ್ ಕೈಯಲ್ಲಿ ಇದೆ. 2022ರ ಸೆಪ್ಟೆಂಬರ್‌ನಿಂದ ಅಕ್ಟೋಬರ್ ನಡುವೆ 'ಸಲಾರ್' ಸಿನಿಮಾ ಬಿಡುಗಡೆಯಾಗುವ ಸಾಧ್ಯತೆಯಿದೆ. ಆದರೆ ಸಲಾರ್ ಬಿಡುಗಡೆಯ ಬಗ್ಗೆ ಚಿತ್ರ ತಂಡ ನಿಖರವಾದ ಮಾಹಿತಿ ಹಂಚಿಕೊಂಡಿಲ್ಲ.


Click it and Unblock the Notifications











