ಶಿವನ ಮಗನ ಕಥೆಗಾಗಿ ಮತ್ತೆ ಜೊತೆಯಾದ್ರು Jr. ಎನ್‌ಟಿಆರ್ ಹಾಗೂ ತ್ರಿವಿಕ್ರಮ್ ಶ್ರೀನಿವಾಸ್
ಸ್ಟಾರ್ ನಟರು ಮಾತ್ರವಲ್ಲ, ಸ್ಟಾರ್ ನಿರ್ದೇಶಕರು ಕೂಡ ಹೆಚ್ಚು ಹೆಚ್ಚು ಸಿನಿಮಾಗಳನ್ನು ಕಟ್ಟಿಕೊಡಬೇಕು. ಆಗ ಮಾತ್ರ ಚಿತ್ರರಂಗ ಉಳಿಯಲು ಸಾಧ್ಯ. ತ್ರಿವಿಕ್ರಮ್ ಶ್ರೀನಿವಾಸ್ ತೆಲುಗಿಗೆ ಸ್ಟಾರ್ ನಿರ್ದೇಶಕ. ಹಿಟ್ ಸಿನಿಮಾಗಳ ಸರದಾರ. ಆದರೆ ಎರಡು ವರ್ಷಗಳಿಂದ ಸೈಲೆಂಟ್ ಆಗಿಬಿಟ್ಟಿದ್ದರು. ಅಂತೂ ಇಂತೂ ಜ್ಯೂ. ಎನ್‌ಟಿಆರ್ ಜೊತೆ ಹೊಸ ಸಿನಿಮಾ ಘೋಷಿಸಿದ್ದಾರೆ.
'ಅರವಿಂದ ಸಮೇತ' ಚಿತ್ರದಲ್ಲಿ ತಾರಕ್ ಹಾಗೂ ತ್ರಿವಿಕ್ರಮ್ ಒಟ್ಟಿಗೆ ಕೆಲಸ ಮಾಡಿದ್ದರು. ಇದೀಗ ಮತ್ತೊಂದು ಚಿತ್ರಕ್ಕಾಗಿ ಜೊತೆಯಾಗುತ್ತಿದ್ದಾರೆ. ಸಿನಿಮಾ ಘೋಷಣೆ ಆಗಿದೆ. ಚಿತ್ರೀಕರಣ ಮುಂದಿನ ವರ್ಷದಿಂದ ಶುರುವಾಗಲಿದೆ. ಸುಬ್ರಮಣ್ಯಂ ಸ್ವಾಮಿಯ ಹಿನ್ನೆಲೆಯಲ್ಲಿ ಸಿನಿಮಾ ಮೂಡಿ ಬರಲಿದೆ. 'ಗಾಡ್ ಆಫ್ ವಾರ್' ಹೆಸರಿನಲ್ಲಿ ಇವರಿಬ್ಬರ ಕಾಂಬಿನೇಷನ್ ಸಿನಿಮಾ ಬಗ್ಗೆ ಬಹಳ ದಿನಗಳಿಂದ ಚರ್ಚೆ ನಡೀತಿತ್ತು. ಈಗ ಅಧಿಕೃತವಾಗಿ ಕನ್ಫರ್ಮ್ ಆಗಿದೆ. ರಾಕ್‌ಸ್ಟಾರ್ ಅನಿರುದ್ಧ್ ರವಿಚಂದರ್ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ.

9 ವರ್ಷಗಳಿಂದ ಈ ಸಿನಿಮಾ ಬಗ್ಗೆ ಚರ್ಚೆ ನಡೀತಿತ್ತು. ಕೊನೆಗೂ ಈಗ ಘೋಷಣೆಯಾಗಿದೆ. ಹಾರಿಕಾ & ಹಾಸಿನಿ ಕ್ರಿಯೇಷನ್ಸ್ ಹಾಗೂ ಎನ್‌ಟಿಆರ್ ಆರ್ಟ್ಸ್ ಬ್ಯಾನರ್‌ಗಳ ಅಡಿಯಲ್ಲಿ ರಾಧಾಕೃಷ್ಣ ಹಾಗೂ ಕಲ್ಯಾಣ್ ರಾಮ್ ಈ ಸಿನಿಮಾ ನಿರ್ಮಾಣ ಮಾಡಲಿದ್ದಾರೆ. ಟೈಟಲ್ ಘೋಷಣೆ ಆಗಿಲ್ಲ. ಯುದ್ಧ ಸನ್ನಿವೇಶದ ಹಿನ್ನೆಲೆ ವಿಚಿತ್ರ ಆಕಾರದ ತ್ರಿಶೂಲದ ಪೋಸ್ಟರ್ ಬಿಟ್ಟು ಸಿನಿಮಾ ಬಗ್ಗೆ ಕುತೂಹಲ ಮೂಡಿಸಲಾಗಿದೆ.
ಎನ್‌ಟಿಆರ್ ಹಾಗೂ ತ್ರಿವಿಕ್ರಮ್ ಕಾಂಬಿನೇಷನ್‌ನಲ್ಲಿ ದೈವಿಕ ಹಿನ್ನೆಲೆಯ ಅದ್ಭುತ ದೃಶ್ಯ ಕಾವ್ಯ ಎಂದು ಪ್ರೆಸ್ ನೋಟ್ ರಿಲೀಸ್ ಮಾಡಲಾಗಿದೆ. ಅದ್ಧೂರಿಯಾಗಿ ನಿರ್ಮಾಣವಾಗಲಿರುವ ಈ ಚಿತ್ರಕ್ಕೆ ದೈವಿಕ ಹಿನ್ನೆಲೆ ಕಥೆಯಿದೆ. ಪುರಾಣಗಳಿಂದ ಪ್ರೇರಿತವಾದ ಕಥೆ, ಆಳವಾದ ಭಾವನೆಗಳು, ರೋಮಾಂಚಕ ಯುದ್ಧದ ದೃಶ್ಯಗಳು ಮತ್ತು ಅದ್ಭುತವಾದ ಹೊಸ ಪ್ರಪಂಚದ ರಚನೆಯೊಂದಿಗೆ, ಈ ಚಿತ್ರವು ಪ್ರೇಕ್ಷಕರಿಗೆ ಅಭೂತಪೂರ್ವ ಅನುಭವವನ್ನು ನೀಡಲಿದೆ ಎಂದು ಮಾಹಿತಿ ನೀಡಿದ್ದಾರೆ.
ತೆಲುಗು ಚಿತ್ರರಂಗದ ಅತ್ಯಂತ ಯಶಸ್ವಿ ನಟ ಹಾಗೂ ನಿರ್ದೇಶಕ ಮತ್ತೊಮ್ಮೆ ಜೊತೆಯಾಗುತ್ತಿದ್ದು ದೊಡ್ಡ ನಿರ್ಮಾಣ ಸಂಸ್ಥೆಗಳು ಕೈಜೋಡಿಸಿವೆ. ಈ ಚಿತ್ರವು ಭಾರತೀಯ ಚಿತ್ರರಂಗದಲ್ಲಿ ಅತಿದೊಡ್ಡ ದೃಶ್ಯಕಾವ್ಯಗಳಲ್ಲಿ ಒಂದಾಗಲಿದೆ. ಶೀಘ್ರದಲ್ಲೇ ಇತರ ನಟರು, ತಂತ್ರಜ್ಞರ ವಿವರಗಳು, ಚಿತ್ರೀಕರಣದ ವೇಳಾಪಟ್ಟಿ ಮತ್ತು ಈ ಚಿತ್ರಕ್ಕೆ ಸಂಬಂಧಿಸಿದ ಇತರ ವಿವರಗಳನ್ನು ಅಧಿಕೃತವಾಗಿ ಪ್ರಕಟಿಸಲಾಗುತ್ತದೆ ಎಂದು ಚಿತ್ರತಂಡ ತಿಳಿಸಿದೆ. ಈ ಸುದ್ದಿ ಕೇಳಿ ತಾರಕ್ ಫ್ಯಾನ್ಸ್ ಅಂತೂ ಥ್ರಿಲ್ ಆಗಿದ್ದಾರೆ.
"ಉತ್ತರದಲ್ಲಿ ಜನಿಸಿದನು. ಮಧ್ಯಭಾಗದಲ್ಲಿ ರೂಪುಗೊಂಡನು. ದಕ್ಷಿಣದಲ್ಲಿ ಪೂಜಿಸಲಾಗುತ್ತದೆ.. ಈಗ... ವಿಶ್ವಕ್ಕೆ ಸೇರಲು ಉದ್ದೇಶಿಸಲಾದ ಕಥೆ".. ಎಂದು ಬರೆದು ಸಿನಿಮಾ ಘೋಷಣೆ ಮಾಡಿದ್ದಾರೆ. ಇದೇ ಕಥೆಯಲ್ಲಿ ಅಲ್ಲು ಅರ್ಜುನ್ ನಟಿಸುತ್ತಾರೆ ಎನ್ನುವ ಊಹಾಪೋಹ ಕೇಳಿಬಂದಿತ್ತು. ಈಗ ಎಲ್ಲಾ ಅಂತೆಕಂತೆ ಸುದ್ದಿಗೆ ಬ್ರೇಕ್ ಬಿದ್ದಿದ್ದು ತಾರಕ್ ಹೀರೊ ಆಗಿ ನಟಿಸುವುದು ಖಚಿತವಾಗಿದೆ. ಸಂಪೂರ್ಣವಾಗಿ ಇದು ಪೌರಾಣಿಕ ಸಿನಿಮಾ ಆಗಿರುತ್ತಾ? ಕಾದು ನೋಡಬೇಕಿದೆ.
'ಗುಂಟೂರು ಖಾರಂ' ಬಳಿಕ ತ್ರಿವಿಕ್ರಮ್ ಶ್ರೀನಿವಾಸ್ ಸದ್ಯ 'ಆದರ್ಶ ಕುಟುಂಬಂ' ಎಂಬ ಸಿನಿಮಾ ಕಟ್ಟಿಕೊಡುತ್ತಿದ್ದಾರೆ. ಅತ್ತ ಜ್ಯೂ. ಎನ್‌ಟಿಆರ್ ಬಹುನಿರೀಕ್ಷಿತ 'ಡ್ರ್ಯಾಗನ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಪ್ರಶಾಂತ್ ನೀಲ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಎರಡು ಸಿನಿಮಾಗಳನ್ನು ಮುಗಿಸಿ ತಾರಕ್ ಹಾಗೂ ತ್ರಿವಿಕ್ರಮ್ ಒಂದಾಗಿ ಸಿನಿಮಾ ಆರಂಭಿಸಲಿದ್ದಾರೆ. ಅದಕ್ಕಾಗಿ ಇನ್ನು 6 ತಿಂಗಳು ಕಾಯಬೇಕಿದೆ. 2027ರಲ್ಲಿ ಚಿತ್ರೀಕರಣ ಶುರುವಾಗಿ 2028ರಲ್ಲಿ ಈ ಸಿನಿಮಾ ತೆರೆಗೆ ಬರುವ ನಿರೀಕ್ಷೆಯಿದೆ.


Click it and Unblock the Notifications