ಆಂಧ್ರದಲ್ಲಿ ಮೈತ್ರಿಕೂಟ ಜಯಭೇರಿ; "ನಿಮ್ಮನ್ನು ಬೈದವರೆಲ್ಲಾ ಸೋತ್ರು" ಅಂದಿದ್ದಕ್ಕೆ ತಲೈವಾ ಏನಂದ್ರು?
ಈ ಬಾರಿ ಆಂಧ್ರ ವಿಧಾನಸಭೆ ಚುನಾವಣೆ ಭಾರೀ ಚರ್ಚೆ ಹುಟ್ಟುಹಾಕಿತ್ತು. ಕೊನೆಗೂ ವೈಎಸ್‌ಆರ್ ಕಾಂಗ್ರೆಸ್ ವಿರುದ್ಧ ಟಿಡಿಪಿ, ಜನಸೇನಾ, ಬಿಜೆಪಿ ಮೈತ್ರಿಕೂಟ ಗೆಲುವು ಸಾಧಿಸಿದೆ. ಹೊಸ ಸರ್ಕಾರ ರಚನೆ ಆಗುತ್ತಿದ್ದು ಚಂದ್ರಬಾಬು ನಾಯ್ಡು, ಪವನ್ ಕಲ್ಯಾಣ್ ಸೇರಿದಂತೆ ಹಲವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ಚಿರಂಜೀವಿ, ರಜನಿಕಾಂತ್ ಸಹ ಭಾಗಿ ಆಗಿದ್ದಾರೆ.
ಚಂದ್ರಬಾಬು ನಾಯ್ಡು ಮತ್ತೊಮ್ಮೆ ಆಂಧ್ರದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದು ಪವನ್ ಕಲ್ಯಾಣ್ ಉಪ ಮುಖ್ಯಮಂತ್ರಿ ಆಗಿದ್ದಾರೆ. ಇನ್ನು ಈ ಹಿಂದೆ ಚಂದ್ರಬಾಬು ನಾಯ್ಡು ಅವರನ್ನು ಹೊಗಳಿ ರಜನಿಕಾಂತ್ ಮಾಡಿದ್ದ ಕಾಮೆಂಟ್ಸ್ ವೈರಲ್ ಆಗಿತ್ತು. ಇದಕ್ಕೆ ವೈಸಿಪಿ ಮುಖಂಡರು ತಿರುಗೇಟು ನೀಡಿದ್ದರು. ತಲೈವಾ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಇದು ಅಭಿಮಾನಿಗಳ ಬೇಸರಕ್ಕೂ ಕಾರಣವಾಗಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಚಂದ್ರಬಾಬು ನಾಯ್ಡು ಪ್ರಮಾಣ ವಚನ ಕಾರ್ಯಕ್ರಮಕ್ಕೆ ತಲೈವಾ ಹಾಜರಾಗಿದ್ದಾರೆ.

ರಜನಿಕಾಂತ್ ಹಾಗೂ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸ್ನೇಹಿತರು. ತಮ್ಮ ಆತ್ಮೀಯ ಸ್ನೇಹಿತನ ಬಗ್ಗೆ ಸಾಕಷ್ಟು ಬಾರಿ ಮೆಚ್ಚಿ ಮಾತನಾಡಿದ್ದಾರೆ. ಎನ್‌ಟಿಆರ್ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲೂ ತಲೈವಾ ಭಾಗಿ ಆಗಿದ್ದರು. ಚಂದ್ರಬಾಬು ನಾಯ್ಡು ಬಗ್ಗೆ ಹಾಡಿ ಹೊಗಳಿದ್ದರು. ಆದರೆ ಇದು ವೈಸಿಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿತ್ತು. ರೋಜಾ, ಪೇರ್ನಿ ನಾನಿ ಸೇರಿದಂತೆ ಹಲವರು ತಿರುಗೇಟು ನೀಡಿದ್ದರು. ಇದಕ್ಕೆ ಪರೋಕ್ಷವಾಗಿ 'ಜೈಲರ್' ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಸೂಪರ್ ಸ್ಟಾರ್ ಕೌಂಟರ್ ಕೊಟ್ಟಿದ್ದರು.
"ಬೊಗಳದ ನಾಯಿ, ಟೀಕಿಸದ ಬಾಯಿ ಇರಲ್ಲ, ಇವೆರಡು ಇಲ್ಲದ ಊರು ಇರಲ್ಲ, ಆದರೆ ನಮ್ಮ ಕೆಲಸ ನಾವು ಮಾಡಿಕೊಂಡು ಹೋಗುತ್ತಿರಬೇಕು. ಗೊತ್ತಾಯ್ತಾ ರಾಜಾ" ಎಂದು ರಜನಿಕಾಂತ್ ವೇದಿಕೆಯಲ್ಲಿ ಹೇಳಿದ್ದರು. ಸದ್ಯ ಚಂದ್ರಬಾಬು ನಾಯ್ಡು ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗಿ ಆಗಲು ವಿಶಾಖಪಟ್ಟಣಂಗೆ ಹೋಗಿದ್ದಾರೆ. ಈ ವೇಳೆ ಮಚಿಲೀಪಟ್ಟಣ ಸಂಸದ ವಲ್ಲಭನೇನಿ ಬಾಲಶೌರಿ ಭೇಟಿಯಾಗಿ ಮಾತನಾಡಿದ್ದಾರೆ.
ಭೇಟಿ ವೇಳೆ ಬಾಲಶೌರಿ "ಸರ್, ಹಿಂದೆ ಚಂದ್ರಬಾಬು ನಾಯ್ಡುರನ್ನು ಹೊಗಳಿದಾಗ ವೈಸಿಪಿ ನಾಯಕರು ಗಂಭೀರವಾಗಿ ಪ್ರತಿಕ್ರಿಯಿಸಿದ್ದರು. ಈ ಚುನಾವಣೆಯಲ್ಲಿ ಅವರೆಲ್ಲಾ ಸೋತು ಹೋಗಿದ್ದಾರೆ" ಎಂದಿದ್ದಾರೆ. ಇದನ್ನು ಕೇಳಿ ಮುಗುಳ್ನಕ್ಕ ರಜನಿಕಾಂತ್, "ನನಗೆ ಇಷ್ಟ ಆಗಿದ್ದರ ಬಗ್ಗೆ ನಾವು ಮಾತನಾಡುತ್ತೇವೆ. ಅದಕ್ಕೆ ಬೈದರೆ ಹೇಗೆ?ಹಾಗೆಲ್ಲಾ ಬೈಯಬಾರದು ಅಲ್ವಾ?" ಎಂದು ಹೇಳಿರುವುದಾಗಿ ವರದಿಯಾಗಿದೆ. "ಜನಸೇನಾ ಜೊತೆ ಸೇರಿ ಒಳ್ಳೆಯ ಕೆಲಸ ಮಾಡಿದರು. ಪವನ್ ಕಲ್ಯಾಣ್ ಉತ್ತಮ ನಾಯಕನಾಗುತ್ತಾರೆ" ಎಂದು ತಲೈವಾ ಹೇಳಿದ್ದಾರೆ ಎನ್ನಲಾಗ್ತಿದೆ.

ಎನ್‌ಟಿಆರ್ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಜನಿಕಾಂತ್,"ದಿವಂಗತ ಎನ್‌ಟಿಆರ್ ಯುಗಪುರುಷ. ಅವರ ನಂತರ ಚಂದ್ರಬಾಬು ನಾಯ್ಡು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಸಾಕಷ್ಟು ಸಾಧನೆ ಮಾಡಿದ್ದಾರೆ. ಚಂದ್ರಬಾಬು ನನ್ನ 30 ವರ್ಷಗಳ ಗೆಳೆಯ.. ಚಂದ್ರಬಾಬು ಐಟಿ ವಿಷನ್ ಪ್ರಪಂಚಕ್ಕೆ ಗೊತ್ತು. ಅವರು ದೊಡ್ಡ ರಾಜಕೀಯ ನಾಯಕರಾಗುತ್ತಾರೆ ಎನ್ನುವುದು ಆಗಲೇ ಗೊತ್ತಿತ್ತು. ಚಂದ್ರಬಾಬು ಯಾವಾಗಲೂ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿದ್ದರು. ಹೈದರಾಬಾದ್‌ಗೆ ಬಂದ್ರೆ ಭಾರತದಲ್ಲಿ ಇದ್ದೀವಾ? ನ್ಯೂಯಾರ್ಕ್‌ನಲ್ಲಿ ಇದ್ದೀವಾ ಎನ್ನುವುದು ಅರ್ಥವಾಗುವುದಿಲ್ಲ. ಹೈದರಾಬಾದ್ ಅಭಿವೃದ್ಧಿಯಲ್ಲಿ ಚಂದ್ರಬಾಬು ಪಾತ್ರ ಅಪಾರ. ಸದ್ಯ ಚಂದ್ರಬಾಬು ಪ್ರತಿಪಕ್ಷದಲ್ಲಿದ್ದಾರೆ. ಚಂದ್ರಬಾಬು ವಿಷನ್ 2047 ನಿಜವಾಗಲಿದೆ" ಎಂದಿದ್ದರು.


Click it and Unblock the Notifications











