2 ವರ್ಷಗಳಾದ್ರೂ ಬಿಡುಗಡೆಯಾಗಿರಲಿಲ್ಲ ಮೊದಲ ಚಿತ್ರ; ಹೆಸರು ಬದಲಿಸಿಕೊಂಡ ಕೂಡಲೇ ಬಂತು ಅದೃಷ್ಟ!

ವಿಶ್ವಕ್ ಸೇನ್.. ತೆಲುಗು ಚಿತ್ರರಂಗದ ಪ್ರತಿಭಾವಂತ ನಟ. ತನ್ನ ವಿಭಿನ್ನ ನಟನೆ, ಡೈಲಾಗ್ ಡೆಲಿವರಿಯಿಂದ ಯುವ ತೆಲುಗು ಸಿನಿ ರಸಿಕರ ಮನ ಗೆದ್ದಿರುವ ಹಾಗೂ ಅಭಿಮಾನಿ ಬಳಗವನ್ನು ಸಂಪಾದಿಸುತ್ತಿರುವ ನಟ.
ವೆಳ್ಳಿಪೋಮಾಕೆ ಎಂಬ ಚಿತ್ರದ ಮೂಲಕ 2017ರಲ್ಲಿ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟ ವಿಶ್ವಕ್ ಸೇನ್ ಇದೀಗ ತಮ್ಮ ಸಿನಿಮಾಗಳೆಂದರೆ ಮನರಂಜನೆ ಪಕ್ಕಾ ಎಂದು ವೀಕ್ಷಕರು ಚಿತ್ರಮಂದಿರಗಳಿಗೆ ಬರುವಷ್ಟು ಭರವಸೆಯ ನಟನಾಗಿ ನೆಲೆಯೂರಿದ್ದಾರೆ.
ಹೀಗೆ ಚಿತ್ರರಂಗಕ್ಕೆ ಕಾಲಿಟ್ಟು 6 ವರ್ಷಗಳನ್ನು ಪೂರೈಸಿರುವ ನಟ ವಿಶ್ವಕ್ ಸೇನ್ ಒಟ್ಟು 9 ಚಿತ್ರಗಳಲ್ಲಿ ನಟಿಸಿದ್ದು, ಈತನ ಚಿತ್ರಗಳು ಹಾಕಿದ್ದ ಬಂಡವಾಳವನ್ನು ವಾಪಸ್ ತೆಗೆಯಬಲ್ಲ ಸಾಮರ್ಥ್ಯವನ್ನು ಹೊಂದಿವೆ. ಇನ್ನು ಮೊದಲ ಚಿತ್ರದಲ್ಲಿಯೇ ಹಿನ್ನಡೆ ಅನುಭವಿಸಿದ್ದ ವಿಶ್ವಕ್ ಸೇನ್ ಲಕ್ ಎರಡನೇ ಚಿತ್ರ ಈ ನಗರಾನಿಕಿ ಏಮೈಂದಿ ಮೂಲಕ ಬದಲಾಗಿ ಹೋಯಿತು.
ಹೌದು, ಈ ಚಿತ್ರ ಪಡೆದುಕೊಂಡ ಯಶಸ್ಸು ಹಾಗೂ ಇದರಿಂದ ವಿಶ್ವಕ್ ಸೇನ್ ಪಡೆದ ಗುರುತಿಸುವಿಕೆ ಪ್ರತಿಯೊಬ್ಬ ನಟನಿಗೂ ಸಹ ಡ್ರೀಮ್ ಎಂದೇ ಹೇಳಬಹುದು. ಈ ಚಿತ್ರದಲ್ಲಿ ವಿವೇಕ್ ಎಂಬ ಪಾತ್ರದ ಮೂಲಕ ಯುವ ಸಿನಿ ರಸಿಕರಿಗೆ ಸಿಕ್ಕಾಪಟ್ಟೆ ಹತ್ತಿರವಾಗಿದ್ದ ವಿಶ್ವಕ್ ಸೇನ್ ಅಂದಿನಿಂದ ಮುನ್ನೆಲೆಗೆ ಬಂದರು.
ಹೀಗೆ ಎರಡನೇ ಚಿತ್ರದಲ್ಲಿ ಶೂರ್ ಶಾಟ್ ಬಾರಿಸಿದ ವಿಶ್ವಕ್ ಸೇನ್ ಬಳಿಕ ಮೂರನೇ ಚಿತ್ರದ ಮೂಲಕ ನಿರ್ದೇಶಕನವೂ ಸಹ ಆಗಿಬಿಟ್ಟರು. ಮಲಯಾಳಂನ ಸೂಪರ್ ಹಿಟ್ ಚಲನಚಿತ್ರ ಅಂಗಮಲೈ ಡೈರೀಸ್ ಮೇಲೆ ಆಧಾರವಾಗಿದ್ದ 'ಫಲಾಕ್ನುಮಾ ದಾಸ್' ಎಂಬ ಚಿತ್ರವನ್ನು ವಿಶ್ವಕ್ ಸೇನ್ ನಿರ್ದೇಶನ ಮಾಡಿದ್ದರು ಹಾಗೂ ತಾವೇ ನಾಯಕನ ಪಾತ್ರದಲ್ಲಿಯೂ ನಟಿಸಿದ್ದರು.
ಈ ಚಿತ್ರಗಳಲ್ಲಿ ಹೆಚ್ಚಿಗೆ ಡೈಲಾಗ್ ಇರುವ, ಕುಡಿತದ ಚಟ ಇರುವ ಯುವಕನ ಪಾತ್ರದಲ್ಲಿ ಸಿನಿ ರಸಿಕರಿಗೆ ಮನರಂಜನೆ ನೀಡಿದ್ದ ವಿಶ್ವಕ್ ಸೇನ್ ನಂತರ ಹಿಟ್ ದ ಫಸ್ಟ್ ಕೇಸ್ ಎಂಬ ಸಿನಿಮಾದಲ್ಲಿ ಪೊಲೀಸ್ ಪಾತ್ರದಲ್ಲಿ ನಟಿಸಿ ತಾನು ಯಾವುದೇ ಪಾತ್ರವಿದ್ದರೂ ಜನರ ಮನಸ್ಸನ್ನು ಗೆಲ್ಲಬಲ್ಲೆ ಎಂದು ತಿಳಿಸಿಕೊಟ್ಟರು.
ಇಷ್ಟೆಲ್ಲಾ ಸಾಧನೆ ಮಾಡಿರುವ ವಿಶ್ವಕ್ ಸೇನ್ ಯಾವುದೇ ಫ್ಯಾಮಿಲಿ ಬ್ಯಾಕ್‌ಗ್ರೌಂಡ್ ಇಲ್ಲದೇ ಚಿತ್ರರಂಗ ಪ್ರವೇಶಿಸಿದವರು. ತೆಲುಗು ಚಿತ್ರರಂಗದಲ್ಲಿ ಫ್ಯಾಮಿಲಿ ಬ್ಯಾಕ್‌ಗ್ರೌಂಡ್ ಇಲ್ಲದೇ ಬೆಳೆಯುವುದು ಎಂದರೆ ಸಾಮಾನ್ಯದ ವಿಷಯ ಅಲ್ಲವೇ ಅಲ್ಲ. ಆದರೆ ವಿಶ್ವಕ್ ಟಾಲಿವುಡ್ ಪ್ರವೇಶ ಸುಲಭದ್ದಾಗಿರಲಿಲ್ಲ. ತಮ್ಮ ಮೊದಲ ಸಿನಿಮಾ ಬಿಡುಗಡೆ ಬರೋಬ್ಬರಿ ಎರಡು ವರ್ಷಗಳವರೆಗೆ ಮುಂದೂಡಲ್ಪಟ್ಟಿದ್ದನ್ನು ಸ್ವತಃ ವಿಶ್ವಕ್ ಸೇನ್ ಬಿಚ್ಚಿಟ್ಟಿದ್ದಾರೆ.
ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ ವಿಶ್ವಕ್ ಸೇನ್ ಹೆಸರು ಬದಲಿಸಿದ ನಂತರ ತಮ್ಮ ಲಕ್ ಬದಲಾಗಿದ್ದರ ಬಗ್ಗೆ ಮಾತನಾಡಿದ್ದಾರೆ. "ನನ್ನ ಮೊದಲ ಸಿನಿಮಾ ವೆಳ್ಳಿಪೋಮಾಕೆ ಎರಡು ವರ್ಷಗಳವರೆಗೂ ಮುಂದೂಡಲ್ಪಟ್ಟಿತ್ತು. ಆಗ ಮನೆಯವರು ಹೆಸರಿನಲ್ಲಿ ದೋಷ ಇದೆ ಎಂಬುದನ್ನು ತಿಳಿಸಿದರು. ದಿನೇಶ್ ನಾಯ್ಡು ಎಂಬ ಹೆಸರೇ ಇದ್ದರೆ ಚಿತ್ರರಂಗದಲ್ಲಿ ನಾನು ಯಶಸ್ಸು ಗಳಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಬಳಿಕ ನನಗೆ ಹೆಸರು ಬದಲಿಸಿಕೊಳ್ಳಲು ನಾಲ್ಕು ಆಯ್ಕೆಗಳನ್ನು ನೀಡಿದರು. ನಾನು ವಿಶ್ವಕ್ ಸೇನ್ ಎಂಬ ಹೆಸರನ್ನು ಆರಿಸಿಕೊಂಡೆ. ಹೀಗೆ ಹೆಸರು ಬದಲಿಸಿದ ಒಂದೇ ತಿಂಗಳಿನಲ್ಲಿ ವೆಳ್ಳಿಪೋಮಾಕೆ ಚಿತ್ರ ಬಿಡುಗಡೆಗೊಂಡಿತು. ಇದಾದ ಮೂರೇ ದಿನಗಳಲ್ಲಿ ನಾನು ತರುಣ್ ಭಾಸ್ಕರ್ ಅವರಿಗೆ ಆಡಿಷನ್ ನೀಡಿ ಈ ನಗರಾನಿಕಿ ಏಮೈಂದಿ ಚಿತ್ರಕ್ಕೆ ಆಯ್ಕೆಯಾದೆ" ಎಂದು ತಿಳಿಸಿದರು.


Click it and Unblock the Notifications











