ಮದ್ವೆ ಆದ್ರೆ ಮನೇಲಿ ಕೂರಬೇಕಾ? ಅದಕ್ಕೂ ಮದ್ವೆಗೂ ಏನ್ ಸಂಬಂಧ?; ನಿಹಾರಿಕಾ ಕೋನಿದೇಲ
ಮೆಗಾ ಡಾಟರ್ ನಿಹಾರಿಕಾ ಕೋನಿದೇಲ ಕಳೆದ ವರ್ಷ ಡಿವೋರ್ಸ್ ಪಡೆದು ಪತಿಯಿಂದ ದೂರಾಗಿದ್ದರು. ಚೈತನ್ಯಾ ಜೊನ್ನಲಗಡ್ಡ ಎಂಬುವವರ ಜೊತೆ ತೆಲುಗು ನಟ ಚಿರಂಜೀವಿ ಸಹೋದರ ನಾಗಬಾಬು ಪುತ್ರಿ ನಿಹಾರಿಕಾ ಮದುವೆ ಆಗಿದ್ದರು. ಕೆಲ ಭಿನ್ನಾಭಿಪ್ರಾಯಗಳಿಂದ ಡಿವೋರ್ಸ್ ಪಡೆದಿದ್ದರು.
ಗುಂಟೂರು ರೇಂಜ್ ಐಜಿ ಜೊನ್ನಲಗಡ್ಡ ಪ್ರಭಾಕರ್ ರಾವ್ ಪುತ್ರ ಚೈತನ್ಯ ಜೊತೆ 2020ರಲ್ಲಿ ನಿಹಾರಿಕಾ ಹಸೆಮಣೆ ಏರಿದ್ದರು. ರಾಜಸ್ಥಾನದ ಉದಯ್‌ಪುರ ಉದಯ್ ವಿಲಾಸ್ ಪ್ಯಾಲೇಸ್‌ನಲ್ಲಿ ಅದ್ಧೂರಿಯಾಗಿ ಮದುವೆ ನಡೆದಿತ್ತು. ಆದರೆ ಮದುವೆ ಆದ ಕೆಲವೇ ದಿನಗಳಲ್ಲಿ ದಂಪತಿ ನಡುವೆ ಎಲ್ಲವೂ ಸರಿಯಾಗಿಲ್ಲ ಎನ್ನುವ ಮಾತುಗಳು ಕೇಳಿಬಂದಿತ್ತು. ಬಳಿಕ ಇಬ್ಬರೂ ದೂರಾವೇ ವಾಸಿಸಲು ಆರಂಭಿಸಿದರು.

ಇಬ್ಬರು ದೂರಾಗುವ ಬಗ್ಗೆ ಗುಸುಗುಸು ಶುರುವಾಗಿತ್ತು. ಕಳೆದ ವರ್ಷ ಜೂನ್‌ನಲ್ಲಿ ನ್ಯಾಯಾಲಯ ನಿಹಾರಿಕಾ-ಚೈತನ್ಯಗೆ ಡಿವೋರ್ಸ್ ನೀಡಿತ್ತು. ಮದುವೆ ಬಳಿಕ ಸಿನಿಮಾಗಳಿಂದ ದೂರಾಗಿದ್ದ ನಿಹಾರಿಕಾ ಮತ್ತೆ ಸಿನಿಮಾಗಳಲ್ಲಿ ನಟಿಸಲು ಮುಂದಾಗಿದ್ದಾರೆ. ಶೀಘ್ರದಲ್ಲೇ ತಮಿಳು ಸಿನಿಮಾ ಆರಂಭವಾಗಲಿದೆ ಎಂದಿದ್ದಾರೆ. ಮದುವೆ ಆದರೆ ಸಿನಿಮಾಗಳಲ್ಲಿ ನಟಿಸಬಾರದು ಎಂದುಕೊಳ್ಳುತ್ತಾರೆ. ಈ ಮನಸ್ಥಿತಿ ಬದಲಾಗಬೇಕು ಎಂದು ನಿಹಾರಿಕಾ ಹೇಳಿದ್ದಾರೆ.
"ಇನ್ನು ಮುಂದೆ ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳಲ್ಲ. ಸ್ಲೋ ಅಂಡ್ ಸ್ಟೆಡಿಯಾಗಿ ಮುಂದುವರೆಯುತ್ತೇನೆ. ಸದ್ಯ ಪ್ರೊಡಕ್ಷನ್, ಆಕ್ಟಿಂಗ್ ಅಂತೆಲ್ಲಾ ಬಹಳ ಬ್ಯುಸಿಯಾಗಿದ್ದೀನಿ. ಮುಂದಿನ ತಿಂಗಳು ತಮಿಳು ಸಿನಿಮಾ ಶುರುವಾಗುತ್ತಿದೆ. ಅದರಲ್ಲಿ ನಟಿಸುತ್ತಿದ್ದೇನೆ. ಪ್ರೊಡಕ್ಷನ್ ಕೂಡ ಮಾಡುತ್ತಿದ್ದೇನೆ. ಐದು ವರ್ಷಗಳ ನಂತರ ಮತ್ತೆ ಸಿನಿಮಾ ಮಾಡುತ್ತಿದ್ದೇನೆ. ನನ್ನನ್ನು ನಾನು ಥಿಯೇಟರ್‌ಗಳಲ್ಲಿ ನೋಡಿ ಐದು ವರ್ಷಗಳಾಗಿವೆ. 'ಸೂರ್ಯಕಾಂತಂ' ನಾನು ಕೊನೆಯದಾಗಿ ನಟಿಸಿದ ಸಿನಿಮಾ" ಎಂದಿದ್ದಾರೆ.
"ಮದುವೆ ಕಾರಣಕ್ಕೆ ಕೊಂಚ ಗ್ಯಾಪ್ ಆಯಿತು. ನನ್ನ ಮದುವೆಯ ನಂತರ ಸಿನಿಮಾ ಮಾಡುವುದನ್ನು ನಿಲ್ಲಿಸಬೇಕು ಅಂತ ಸಾಕಷ್ಟು ಜನ ಅಂದುಕೊಂಡರು. ನಟಿ ಮದುವೆಯಾದರೆ ಸಿನಿಮಾಗಳಲ್ಲಿ ನಟಿಸುವುದಿಲ್ಲವೇನೋ ಎಂದು ಇಂಡಸ್ಟ್ರಿಯಲ್ಲಿ ಅಂದುಕೊಳ್ಳುತ್ತಾರೆ. ಅಸಲಿಗೆ ಯಾಕೆ ನಿಲ್ಲಸಬೇಕು? ನಮ್ಮ ಅತ್ತಿಗೆಯನ್ನು ಕೆಲವರು ಇದೇ ರೀತಿ ಕೇಳಿದರು. ಮದುವೆ ಆದರೆ ನಟಿಸುವುದನ್ನು ನಿಲ್ಲಿಸುತ್ತಾರಾ? ಸಿನಿಮಾಗೂ ಪರ್ಸನಲ್ ಲೈಫ್‌ಗೂ ಏನು ಸಂಬಂಧ? ಎಂದು ನಿಹಾರಿಕಾ ಪ್ರಶ್ನಿಸಿದ್ದಾರೆ.

"ಸಿನಿಮಾ ಪ್ರೊಡಕ್ಷನ್ ವೇಳೆ ಸಾಕಷ್ಟು ಸಮಯ ವ್ಯರ್ಥವಾಯಿತು. ಹಾಗಾಗಿಯೇ ಸಿನಿಮಾಗಳಲ್ಲಿ ನಟಿಸುವುದು ಕಮ್ಮಿ ಆಯಿತು. 5 ವರ್ಷಗಳ ನಂತರ ನನ್ನನ್ನು ನಾನು ತೆರೆಮೇಲೆ ನೋಡಿಕೊಳ್ಳಲು ಖುಷಿಯಾಗುತ್ತದೆ. ನನಗೆ ನಟನೆ ಮೇಲೆ ಬಹಳ ಆಸಕ್ತಿ ಇತ್ತು. ಅದಕ್ಕೆ ಇಂಡಸ್ಟ್ರಿಗೆ ಬಂದೆ. ಹಾಗಾಗಿ ಮತ್ತೆ ನಟಿಸಲು ಕಾಯುತ್ತಿದ್ದೇನೆ" ಎಂದಿದ್ದಾರೆ.
ನಾಗಬಾಬು ಮುದ್ದಿನ ಮಗಳು ನಿಹಾರಿಕಾ 8 ವರ್ಷಗಳ ಹಿಂದೆ ಚಿತ್ರರಂಗಕ್ಕೆ ಬಂದರು. 'ಒಕ ಮನಸು' ಸಿನಿಮಾ ಮೂಲಕ ನಟನೆ ಆರಂಭಿಸಿದರು. ಮೆಗಾ ಫ್ಯಾಮಿಲಿಯಿಂದ ಬಂದ ಮೊದಲ ನಟಿ ಈಕೆ. ಬಳಿಕ ಒಂದು ತಮಿಳು ಚಿತ್ರದಲ್ಲಿ ನಟಿಸಿದರು. 'ಹ್ಯಾಪಿ ವೆಡ್ಡಿಂಗ್' ಹಾಗೂ 'ಸೂರ್ಯಕಾಂತಂ' ಸಿನಿಮಾಗಳಲ್ಲಿ ನಟಿಸಿದ ಬಳಿಕ ದೊಡ್ಡಪ್ಪನ ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡಿದ್ದರು.
ಹಿರಿತೆರೆ ಮಾತ್ರವಲ್ಲದೇ ಕಿರುತೆರೆಯಲ್ಲೂ ನಟಿಯಾಗಿ, ನಿರ್ಮಾಪಕಿಯಾಗಿ ನಿಹಾರಿಕಾ ಕೋನಿದೇಲ ಗುರ್ತಿಸಿಕೊಂಡಿದ್ದಾರೆ. ಕೆಲ ವೆಬ್ ಸೀರಿಸ್‌ಗಳನ್ನು ನಿರ್ಮಿಸಿದ್ದಾರೆ. ನಟಿಸಿದ್ದಾರೆ ಕೂಡ. ಪಿಂಕ್ ಎಲಿಪ್ಯಾಂಟ್ ಪಿಕ್ಚರ್ಸ್ ಬ್ಯಾನರ್‌ನಲ್ಲಿ ವೆಬ್ ಸೀರಿಸ್‌ಗಳ ನಿರ್ಮಾಣ ಮುಂದುವರೆದಿದ್ದಾರೆ.


Click it and Unblock the Notifications










