ಕನ್ನಡ ಸಿನಿಮಾಗೆ ಕಥೆ ಬರೆಯುತ್ತಿದ್ದಾರಂತೆ 'ಬಾಹುಬಲಿ' ಖ್ಯಾತಿಯ ವಿಜಯೇಂದ್ರ ಪ್ರಸಾದ್; ಯಾವ ಸಿನಿಮಾ?
ಭಾರತೀಯ ಸಿನಿಮಾರಂಗದಲ್ಲಿ ದಾಖಲೆ ಬರೆದ ಬಾಹುಬಲಿ, ಭಜರಂಗಿ ಭಾಯಿಜಾನ್ ಸೇರಿದಂತೆ ಸಾಕಷ್ಟು ಸಿನಿಮಾಗಳಿಗೆ ಕಥೆ ಬರೆದಿರುವ ನಿರ್ದೇಶಕ ರಾಜಮೌಳಿ ಅವರ ತಂದೆ ವಿಜಯೇಂದ್ರ ಪ್ರಸಾದ್ ಇದೀಗ ಮತ್ತೆ ಕನ್ನಡ ಸಿನಿಮಾಗೆ ಕಥೆ ಬರೆಯುತ್ತಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ.
ಕನ್ನಡದಲ್ಲಿ ನಿಖಿಲ್ ಕುಮಾರ್ ಅಭಿನಯದ ಜಾಗ್ವಾರ್ ಸಿನಿಮಾಗೆ ಕೊನೆಯದಾಗಿ ವಿಜಯೇಂದ್ರ ಪ್ರಸಾದ್ ಕಥೆ ಬರೆದಿದ್ದರು. ಇದೀಗ ಮತ್ತೆ ಕನ್ನಡದಲ್ಲಿ ಬರೆಯುತ್ತಿದ್ದಾರೆ ಎನ್ನುವ ಮಾತು ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಅಂದಹಾಗೆ ಪುತ್ತೂರಿನ ಯುವ ನಟ ಅವತಾರ್ ಎನ್ನುವವರಿಗೆ. ವಿಜಯೇಂದ್ರ ಪ್ರಸಾದ್ ಕಥೆ ಬರೆದುಕೊಡುವುದಾಗಿ ಹೇಳಿದ್ದಾರಂತೆ.
ನಟ ಅವತಾರ್ ಈ ಮೊದಲು ಮನೋಜ್ ಎನ್ನುವ ಹೆಸರಿನಲ್ಲಿ ಕೋಟಿಗೊಬ್ಬ-3, ಸೀತಾ ಸರ್ಕಲ್ ಮತ್ತು ಕುಡ್ಲಕೆಫೆ ಸಿನಿಮಾಗಳಲ್ಲಿ ನಟಿಸಿದ್ದರು. ತೆಲುಗು ಸಿನಿಮಾವೊಂದರಲ್ಲಿ ನಟಿಸಿರುವ ಅವರು ಹೈದರಾಬಾದ್ ನಲ್ಲಿ ಚಿತ್ರೀಕರಣ ಮಾಡುವ ಸಮಯದಲ್ಲಿ ವಿಜಯೇಂದ್ರ ಪ್ರಸಾದ್ ರನ್ನು ಭೇಟಿಯಾಗಿ ಸಿನಿಮಾ ವಿಚಾರ ಚರ್ಚೆ ಮಾಡಿದ್ದರಂತೆ.

ಆಗ ವಿಜಯೇಂದ್ರ ಪ್ರಸಾದ್ ಸಖತ್ ಥ್ರಿಲ್ಲಿಂಗ್ ಆಗಿರುವ ಕಥೆಯನ್ನು ಹೇಳಿದ್ದಾರೆ. ಕಥೆ ಕೇಳಿ ಅವತಾರ್ ಸಿನಿಮಾವ ಆಸಕ್ತಿ ತೋರಿದ್ದಾರಂತೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಮಾರ್ಚ್ ನಲ್ಲಿ ಸಿನಿಮಾ ಸೆಟ್ ಏರುವ ಸಾಧ್ಯತೆ ಇದೆ.
ಈ ಸಿನಿಮಾ ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ತುಳು ಭಾಷೆಯಲ್ಲೂ ರಿಲೀಸ್ ಮಾಡುವ ಪ್ಲಾನ್ ಮಾಡಿದ್ದಾರೆ. ವಿಜಯೇಂದ್ರ ಪ್ರಸಾದ್ ಸದ್ಯ ಆರ್ ಆರ್ ಆರ್ ಸಿನಿಮಾಗೆ ಕಥೆ ಬರೆದಿದ್ದಾರೆ. ಕನ್ನಡದಲ್ಲಿ ವಿಜಯೇಂದ್ರ ಪ್ರಸಾದ್ ಜಾಗ್ವಾರ್ ಸಿನಿಮಾಗೂ ಮೊದಲು ಕನ್ನಡದಲ್ಲಿ ಅಪ್ಪಾಜಿ, ಕುರುಬ ರಾಣಿ ಹಾಗೂ ಪಾಂಡು ರಂಗ ವಿಠಲ ಸಿನಿಮಾಗಳಿಗೆ ಕಥೆ ಬರೆದಿದ್ದರು.


Click it and Unblock the Notifications











