'ಕಾಂತಾರ- 1' ಬಳಿಕ ಹೊಸ ಚಿತ್ರಕ್ಕೆ 6 ತಿಂಗಳು ಕಾಲ್‌ಶೀಟ್ ಕೊಟ್ಟ ರಿಷಬ್ ಶೆಟ್ಟಿ
ರಿಷಬ್ ಶೆಟ್ಟಿ ಅಂತೂ ಇಂತೂ 'ಕಾಂತಾರ' ಗುಂಗಿನಿಂದ ಹೊರ ಬಂದಿದ್ದಾರೆ. 5 ವರ್ಷಗಳಿಂದ ಇದೊಂದೇ ಚಿತ್ರದಲ್ಲಿ ಅವರು ಮುಳುಗಿದ್ದರು. 3 ವರ್ಷಗಳ ಹಿಂದೆ 'ಕಾಂತಾರ' ಸಿನಿಮಾ ಬಂದು ಗೆದ್ದಿತ್ತು. ಇತ್ತೀಚೆಗೆ ಪ್ರೀಕ್ವೆಲ್ ಬಂದು ಬಾಕ್ಸಾಫೀಸ್ ಶೇಕ್ ಮಾಡಿತ್ತು. ನಡುವೆ ಯಾವುದೇ ಸಿನಿಮಾ ಮಾಡಲಿಲ್ಲ.
'ಕಾಂತಾರ' ಚಿತ್ರಕ್ಕೂ ಮುನ್ನ ಒಪ್ಪಿಕೊಂಡಿದ್ದ ಸಿನಿಮಾಗಳನ್ನು ರಿಷಬ್ ಶೆಟ್ಟಿ ಕೈ ಬಿಟ್ಟಿದ್ದಾರೆ. ಬರೀ ಪ್ಯಾನ್ ಇಂಡಿಯಾ ಸಿನಿಮಾಗಳತ್ತ ಮುಖ ಮಾಡಿದ್ದಾರೆ. 'ಜೈ ಹನುಮಾನ್' ಹಾಗೂ ಶಿವಾಜಿ ಬಯೋಪಿಕ್ ಸಿನಿಮಾಗಳಲ್ಲಿ ರಿಷಬ್ ನಟಿಸುವುದು ಪಕ್ಕಾ ಆಗಿದೆ. ಸದ್ಯ 'ಕಾಂತಾರ' ಪ್ರಪಂಚದಿಂದ ಹೊರ ಬಂದು ಡಿವೈನ್ ಸ್ಟಾರ್ ವಿಶ್ರಾಂತಿ ಪಡೆಯುತ್ತಿದ್ದಾರೆ. ಇದೆಲ್ಲದರ ನಡುವೆ ತಮ್ಮ ಮುಂದಿನ ಚಿತ್ರಕ್ಕೆ 6 ತಿಂಗಳು ಕಾಲ್‌ಶೀಟ್ ಕೊಟ್ಟಿದ್ದಾರೆ ಎಂದು ಫಿಲ್ಮ್ ನಗರ್‌ನಲ್ಲಿ ಚರ್ಚೆ ಆಗ್ತಿದೆ.

ಬಹಳ ಹಿಂದೆಯೇ ತೆಲುಗು ನಿರ್ದೇಶನದ ಪ್ರಶಾಂತ್ ವರ್ಮಾ ನಿರ್ದೇಶನದಲ್ಲಿ ರಿಷಬ್ ಶೆಟ್ಟಿ ನಟಿಸೋಕೆ ಒಪ್ಪಿದ್ದರು. ಫೋಟೊಶೂಟ್ ಕೂಡ ಮಾಡಿ ಅಧಿಕೃತವಾಗಿ 'ಜೈ ಹನುಮಾನ್' ಸಿನಿಮಾ ಘೋಷಿಸಿದ್ದರು. ಇದೇ ಚಿತ್ರದಲ್ಲಿ ನಟಿಸೋಕೆ ರಿಷಬ್ ಸಿದ್ಧರಾಗುತ್ತಿದ್ದಾರೆ. ಜನವರಿಯಲ್ಲಿ ಚಿತ್ರೀಕರಣ ಆರಂಭವಾಗುತ್ತದೆ ಎಂದು ಚರ್ಚೆ ಶುರುವಾಗಿದೆ.
ಜನವರಿಯಿಂದ ಜೂನ್‌ವರೆಗೆ 6 ತಿಂಗಳ ಕಾಲ 'ಜೈ ಹನುಮಾನ್' ಚಿತ್ರದಲ್ಲಿ ನಟಿಸಲು ರಿಷಬ್ ಶೆಟ್ಟಿ ಮನಸ್ಸು ಮಾಡಿದ್ದಾರೆ. ಈಗಾಗಲೇ ಈ ಬಗ್ಗೆ ಮಾತುಕತೆ ಸಹ ನಡೆದಿದೆ ಎನ್ನಲಾಗ್ತಿದೆ. ಚಿತ್ರದಲ್ಲಿ ಹನುಮಂತನಾಗಿ ರಿಷಬ್ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ ಬಿಡುಗಡೆ ಮಾಡಿದ್ದ ಪೋಸ್ಟರ್ ಕೂಡ ವಿವಾದಕ್ಕೆ ಕಾರಣವಾಗಿತ್ತು. ಹನುಮಂತನನ್ನು ತಪ್ಪಾಗಿ ತೋರಿಸುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು. ಹನುಮಂತ ವಾನರ. ಆದರೆ ಈ ಚಿತ್ರದಲ್ಲಿ ಆತನನ್ನು ಸಾಮಾನ್ಯ ಮಾನವನ ರೀತಿ ತೋರಿಸುವ ಪ್ರಯತ್ನ ಮಾಡ್ತಿದ್ದಾರೆ. ಇದರಿಂದ ಹನುಮಂತನ ನೈಜ ಸ್ವರೂಪದ ಬಗ್ಗೆ ಮುಂದಿನ ಪೀಳಿಗೆಯ ದಾರಿ ತಪ್ಪಿಸಿದಂತಾಗುತ್ತದೆ ಎಂದು ವಕೀಲರಾದ ಮಾಮಿದಾಳ್ ತಿರುಮಲ್ ರಾವ್ ದೂರು ದಾಖಲಿಸಿದ್ದರು.

ಇತ್ತೀಚೆಗೆ ನಿರ್ದೇಶಕ ಪ್ರಶಾಂತ್ ವರ್ಮಾ ಬಗ್ಗೆ ಕೂಡ ಸಾಕಷ್ಟು ಆರೋಪ ಕೇಳಿಬಂದಿತ್ತು. 'ಹನುಮಾನ್' ಸಿನಿಮಾ ಗೆದ್ದ ಬೆನ್ನಲ್ಲೇ ನಿರ್ಮಾಪಕರಿಗೆ ಅಡ್ವಾನ್ಸ್ ಹಣ ಪಡೆದು ಹೊಸ ಹೊಸ ಸಿನಿಮಾ ಘೋಷಣೆ ಮಾಡುತ್ತಿದ್ದಾರೆ. ಆದರೆ ಯಾವುದೇ ಸಿನಿಮಾ ಚಿತ್ರೀಕರಣ ಆರಂಭಿಸಿಲ್ಲ ಎನ್ನುವ ಆರೋಪ ಕೇಳಿಬಂದಿತ್ತು. ರಿಷಬ್ ಶೆಟ್ಟಿಗಾಗಿಯೇ ಪ್ರಶಾಂತ್ ಕಾಯುತ್ತಿದ್ದರು. 'ಕಾಂತಾರ' ಸಿನಿಮಾ ನಿರ್ದೇಶಿಸಿ, ನಟಿಸಿದ್ದ ರಿಷಬ್ ಬಳಿಕ ಪ್ರಚಾರ, ವಿಜಯಯಾತ್ರೆ ಎಂದು ಬ್ಯುಸಿಯಾಗಿದ್ದರು. ಹಾಗಾಗಿ 'ಜೈ ಹನುಮಾನ್' ಸಿನಿಮಾ ಶುರುವಾಗುವುದು ತಡವಾಗಿತ್ತು.
'ಪುಷ್ಪ' ಸರಣಿ ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ನಿರ್ಮಿಸಿದ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ 'ಜೈ ಹನುಮಾನ್' ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ. ಈ ಪಾತ್ರಕ್ಕೆ ನೀವೇ ಬೇಕು ಎಂದು ಪ್ರಶಾಂತ್ ವರ್ಮಾ ಕುಂದಾಪುರದಲ್ಲಿ 'ಕಾಂತಾರ-1' ಸೆಟ್‌ಗೆ ಬಂದು ಕಥೆ ಹೇಳಿದ್ರು. ಹಾಗಾಗಿ ಒಪ್ಪಿಕೊಂಡೆ ಎಂದು ರಿಷಬ್ ಶೆಟ್ಟಿ 'ಜೈ ಹನುಮಾನ್' ಚಿತ್ರದ ಬಗ್ಗೆ ಮಾತನಾಡಿದ್ದರು.
ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್‌ನಲ್ಲೇ 'ಜೈ ಹನುಮಾನ್' ಕಥೆ ಕೂಡ ಬರಲಿದೆ. ಕಳೆದ ವರ್ಷ ಅವರು ಕಟ್ಟಿಕೊಟ್ಟ 'ಹನುಮಾನ್' ಸಿನಿಮಾ 100 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಹೊಸ ಕಲಾವಿದರನ್ನು ಬಳಸಿಕೊಂಡು ಬಾಕ್ಸಾಫೀಸ್ ಶೇಕ್ ಮಾಡಿದ್ದರು. ಕಡಿಮೆ ಬಜೆಟ್‌ನಲ್ಲಿ ಚಿತ್ರದ ಔಟ್‌ಫುಟ್ ನೋಡಿದವರು ಹುಬ್ಬೇರಿಸಿದ್ದರು. ಹಾಗಾಗಿ ರಿಷಬ್ ಶೆಟ್ಟಿ ಹಾಗೂ ಪ್ರಶಾಂತ್ ವರ್ಮಾ ಕಾಂಬಿನೇಷನ್ ನಿರೀಕ್ಷೆ ಹೆಚ್ಚಿಸಿದೆ.


Click it and Unblock the Notifications











