ಸಮಂತಾಗಾಗಿ ತನ್ನ ಮನೆಯಲ್ಲೇ ದೇವಸ್ಥಾನ ಕಟ್ಟಿಸಿ ಹರಕೆ ಹೊತ್ತು ಯಾತ್ರೆ ಹೊರಟ ವೀರಾಭಿಮಾನಿ
ಸಿನಿಮಾ ನಟ ನಟಿಯರಿಗೆ ಅಭಿಮಾನಿಗಳು ಇರ್ತಾರೆ. ಅದರಲ್ಲಿ ಕೆಲವರು ವೀರಾಭಿಮಾನಿಗಳಾಗಿ ತಮ್ಮ ಅಭಿಮಾನ ಪ್ರದರ್ಶನ ಮಾಡುತ್ತಿರುತ್ತಾರೆ. ಸಾಮಾನ್ಯವಾಗಿ ನಾಯಕ ನಟರಿಗೆ ಅಭಿಮಾನಿಗಳು ಹೆಚ್ಚು. ನೆಚ್ಚಿನ ನಟನ ಹೆಸರನ್ನು ಟ್ಯಾಟೂ ಹಾಕಿಸಿಕೊಳ್ಳುವುದು ಹಲವು ರೀತಿಯಲ್ಲಿ ತಮ್ಮ ಅಭಿಮಾನ ತೋರ್ಪಡಿಸುತ್ತಿರುತ್ತಾರೆ. ಈ ಹಿಂದೆ ನಟಿ ಖುಷ್ಬುಗೆ ಅಭಿಮಾನಿಗಳು ದೇವಸ್ಥಾನ ಕಟ್ಟಿಸಿಬಿಟ್ಟಿದ್ದರು. ಇದೀಗ ನಟಿ ಸಮಂತಾ ದೇವಸ್ಥಾನ ನಿರ್ಮಾಣವಾಗ್ತಿದೆ.
ಹೌದು ಆಂಧ್ರದ ಅಭಿಮಾನಿಯೊಬ್ಬರು ತಮ್ಮ ಮನೆಯಲ್ಲಿ ನೆಚ್ಚಿನ ನಟಿಗಾಗಿ ದೇವಸ್ಥಾನ ಕಟ್ಟಿಸುತ್ತಿದ್ಧಾರೆ. ಈಗಾಗಲೇ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲು ಸ್ಯಾಮ್ ಮೂರ್ತಿ ಕೂಡ ಸಿದ್ದವಾಗಿದೆ. ಇದೇ ಶುಕ್ರವಾರ ದೇವಸ್ಥಾನ ಉದ್ಘಾಟನೆ ಕಾರ್ಯ ನಡೆಯಲಿದೆ. ಏಪ್ರಿಲ್ 28ರಂದು ಸಮಂತಾ ಹುಟ್ಟುಹಬ್ಬ. ಹಾಗಾಗಿ ನೆಚ್ಚಿನ ನಟಿಗೆ ಈ ಮೂಲಕ ವಿಶೇಷ ಉಡುಗೊರೆ ನೀಡಲು ಅಭಿಮಾನಿ ಮುಂದಾಗಿದ್ದಾನೆ. ಅಷ್ಟೇಅಲ್ಲ ಸದ್ಯ ಮಯೋಸೈಟಿಸ್ ಸಮಸ್ಯೆಯಿಂದ ಬಳಲುತ್ತಿರುವ ಸ್ಯಾಮ್ ಬೇಗ ಚೇತರಿಸಿಕೊಳ್ಳಲಿ ಎಂದು ತೀರ್ಥಕ್ಷೇತ್ರಗಳಿಗೆ ಯಾತ್ರೆ ಕೈಗೊಂಡಿದ್ದಾನೆ.

ಆಂಧ್ರ ಪ್ರದೇಶದ ಬಾಪಟ್ಟಿ ಜಿಲ್ಲೆಯ ಆಲಪಾಡಿ ಮೂಲದ ಸಂದೀಪ್ ನಟಿ ಸಮಂತಾ ವೀರಾಭಿಮಾನಿ. ಈ ವರ್ಷ ಸಮಂತಾ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಗಿಫ್ಟ್ ನೀಡಬೇಕು ಎಂದು ತಮ್ಮ ಮನೆಯ ಕಾಂಪೌಂಡ್‌ನಲ್ಲೇ ದೇವಸ್ಥಾನ ನಿರ್ಮಾಣ ಮಾಡುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೊಗಳು, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಈ ಹಿಂದೆ ಕೂಡ ನಟ ನಟಿಯರಿಗೆ ಅಭಿಮಾನಿಗಳು ದೇವಸ್ಥಾನಗಳನ್ನು ಕಟ್ಟಿ ಆರಾಧಿಸಿದ್ದರು.
90ರ ದಶಕದಲ್ಲಿ ನಟಿ ಖುಷ್ಬುಗೆ ತಮಿಳುನಾಡಿನಲ್ಲಿ ಅಭಿಮಾನಿಗಳು ದೇವಸ್ಥಾನ ಕಟ್ಟಿ ಆಕೆಯ ಪ್ರತಿಮೆಗೆ ಹಾಲಿನ ಅಭಿಷೇಕ ಮಾಡಿದ್ದು ಭಾರೀ ಸುದ್ದಿ ಆಗಿತ್ತು. ನಟಿಯೊಬ್ಬರಿಗೆ ಅಭಿಮಾನಿಗಳು ದೇವಾಲಯ ಕಟ್ಟಿಸಿದ್ದು ಅದೇ ಮೊದಲು. ನಂತರ ನಟಿಯರಾದ ನಮಿತಾ, ನಯನತಾರಾ, ನಿಧಿ ಅಗರ್‌ವಾಲ್‌ಗೂ ಅಭಿಮಾನಿಗಳು ದೇವಸ್ಥಾನ ಕಟ್ಟಿಸಿ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸಿದ್ದರು. ಇದೀಗ ಆ ಸಾಲಿಗೆ ಸಮಂತಾ ಕೂಡ ಸೇರಿಕೊಂಡಂತಾಗಿದೆ. ಕೆಲ ದಿನಗಳ ಹಿಂದೆ ಸುದೀಪ್ ಅಭಿಮಾನಿಗಳು ಕೂಡ ರಾಯಚೂರಿನಲ್ಲಿ ನೆಚ್ಚಿನ ನಟನಿಗಾಗಿ ದೇವಸ್ಥಾನ ಕಟ್ಟಿಸಿದ್ದರು.
ದೇವಸ್ಥಾನದ ಉದ್ಘಾಟನೆಗೆ ಅಭಿಮಾನಿಗಳು ಸ್ವತಃ ಸುದೀಪ್ ಅವರನ್ನೇ ಆಹ್ವಾನಿಸಿದ್ದರು. ಆದರೆ ಸುದೀಪ್ ಇದಕ್ಕೆ ನಿರಾಕರಿಸಿದ್ದರು. ನನ್ನ ಪ್ರತಿಮೆ ಬದಲು ವೀರ ಮದಕರಿ ನಾಯಕರ ಪ್ರತಿಮೆ ಪ್ರತಿಷ್ಠಾಪಿಸುವಂತೆ ಹೇಳಿದ್ದರು. ಒಟ್ನಲ್ಲಿ ಈಗ ಆಂಧ್ರ ವೀರಾಭಿಮಾನಿ ಸಮಂತಾಗಾಗಿ ದೇವಸ್ಥಾನ ಕಟ್ಟಿಸಿರುವುದು ಭಾರೀ ಸುದ್ದಿ ಆಗುತ್ತಿದೆ. ಇನ್ನು ಸಮಂತಾ ನಟನೆಯ 'ಶಾಕುಂತಲಂ' ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಸೋಲುಂಡಿದೆ. ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದ ಸಿನಿಮಾ ಪ್ರೇಕ್ಷಕರ ಮನಗೆಲ್ಲುವಲ್ಲಿ ವಿಫಲವಾಗಿದೆ.
ಮಯೋಸೈಟಿಸ್ ಸಮಸ್ಯೆಯಿಂದ ಬಳಲುತ್ತಿರುವ ಸಮಂತಾ ಇತ್ತೀಚೆಗೆ ಸಿನಿಮಾಗಳಲ್ಲಿ ನಟಿಸುವುದು ಕಮ್ಮಿ ಆಗಿದೆ. ಹೊಸ ಸಿನಿಮಾಗಳನ್ನು ಕೂಡ ಒಪ್ಪಿಕೊಳ್ಳುತ್ತಿಲ್ಲ. ಸದ್ಯ ಬಾಲಿವುಡ್‌ನ 'ಸಿಟಾಡೆಲ್' ವೆಬ್ ಸೀರಿಸ್‌ನಲ್ಲಿ ಬಣ್ಣ ಹಚ್ಚಿದ್ದಾರೆ. ಇನ್ನುಳಿದಂತೆ ವಿಜಯ್ ದೇವರಕೊಂಡ ಜೊತೆ 'ಖುಷಿ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಸ್ಯಾಮ್ ಪ್ರಾಜೆಕ್ಟ್‌ಗಳ ಶೂಟಿಂಗ್ ತಡವಾಗುತ್ತಿದೆ.
ಇನ್ನು ಇತ್ತೀಚೆಗೆ ನಿರ್ಮಾಪಕರ ಚಿಟ್ಟಿಬಾಬು ಜೊತೆಗಿನ ಕಿರಿಕ್‌ನಿಂದ ಸಮಂತಾ ಸುದ್ದಿಯಲ್ಲಿ ಇದ್ದಾರೆ. ಸಮಂತಾ ಸ್ಟಾರ್‌ಡಮ್, ಕರಿಯರ್, 'ಶಾಕುಂತಲಂ' ಸಿನಿಮಾ ಬಗ್ಗೆ ಚಿಟ್ಟಿಬಾಬು ಟೀಕಿಸಿದ್ದರು. ಇದಕ್ಕೆ ಪರೋಕ್ಷವಾಗಿ ತಿರುಗೇಟು ನೀಡಿದ್ದರು. ಚಿಟ್ಟಿಬಾಬು ಅವರ ಕಿವಿಯಲ್ಲಿರುವ ಕೂದಲನ್ನು ಪ್ರಸ್ತಾಪಿಸಿ ಆಕೆ ಮಾಡಿದ್ದ ಪೋಸ್ಟ್ ಸಖತ್ ವೈರಲ್ ಆಗಿತ್ತು. ಆ ಪೋಸ್ಟ್ ಬಗ್ಗೆ ಕೂಡ ಚಿಟ್ಟಿಬಾಬು ಕೂಡ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ. ಇದಕ್ಕೆ ಸ್ಯಾಮ್ ಮತ್ತೆ ಕೌಂಟರ್ ಕೊಡುತ್ತಾರಾ ಕಾದು ನೋಡಬೇಕಿದೆ.


Click it and Unblock the Notifications











