'ಮಹಾವತಾರ್ ನರಸಿಂಹ' ಹಾದಿಯಲ್ಲಿ ಬರ್ತಿದ್ದಾನೆ 'ವಾಯುಪುತ್ರ'; ರಿಲೀಸ್ ಡೇಟ್ ಫಿಕ್ಸ್
ಆನಿಮೇಷನ್ ಸಿನಿಮಾ ಅಂದ್ರೆ ಕಾರ್ಟೂನ್ ಸಿನಿಮಾ ಎಂದೇ ಬಹುತೇಕರು ಭಾವಿಸಿದ್ದಾರೆ. ಆದರೆ ಹಾಲಿವುಡ್‌ನಲ್ಲಿ ಆನಿಮೇಷನ್ ಸಿನಿಮಾಗಳಿಗೆ ದೊಡ್ಡ ಮಾರ್ಕೆಟ್ ಇದೆ. ಕೆಲ ಹಾಲಿವುಡ್ ಆನಿಮೇಷನ್ ಸಿನಿಮಾಗಳು ಭಾರತದಲ್ಲಿ ಸದ್ದು ಮಾಡಿವೆ. ಇನ್ನು 'ಮಹಾವತಾರ್ ನರಸಿಂಹ' ಬಾಕ್ಸಾಫೀಸ್ ಶೇಕ್ ಮಾಡ್ತಿರೋದು ಗೊತ್ತೇಯಿದೆ.
ಹೊಂಬಾಳೆ ಫಿಲ್ಮ್ಸ್ ಬೆಂಬಲದೊಂದಿಗೆ ಕ್ಲೀಮ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣದ 'ಮಹಾವತಾರ್ ನರಸಿಂಹ' ಸಿನಿಮಾ ಧೂಳೆಬ್ಬಿಸಿದೆ. ದೊಡ್ಡಮಟ್ಟದಲ್ಲಿ ಸಿನಿಮಾ ಹಿಟ್ ಆಗಿ ದಾಖಲೆ ಬರೆದಿದೆ. ಈಗಾಗಲೇ ಕಲೆಕ್ಷನ್ 300 ಕೋಟಿ ರೂ. ದಾಟಿದೆ. ಜುಲೈ 25ಕ್ಕೆ ತೆರೆಗೆ ಬಂದ ಸಿನಿಮಾ ಉತ್ತಮ ಪ್ರದರ್ಶನ ಮುಂದುವರೆಸಿದೆ. 'ಮಹಾವತಾರ್ ನರಸಿಂಹ' ಸಿನಿಮಾ ಬಿಡುಗಡೆಗೂ ಮುನ್ನ 7 ಸಿನಿಮಾಗಳನ್ನು ತಂಡ ಘೋಷಣೆ ಮಾಡಿತ್ತು.

ಇದೀಗ ತೆಲುಗು ಚಿತ್ರರಂಗದಿಂದ 'ವಾಯುಪುತ್ರ' ಎಂಬ ಆನಿಮೇಷನ್ ಸಿನಿಮಾ ತೆರೆಗಪ್ಪಳಿಸಲು ಸಜ್ಜಾಗಿದೆ. ಮುಂದಿನ ವರ್ಷ ದಸರಾ ಸಂಭ್ರಮದಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ಸಿತಾರಾ ಎಂಟರ್‌ಟೈನ್‌ಮೆಂಟ್ ಸಂಸ್ಥೆ ಸಿನಿಮಾ ಪ್ರೇಕ್ಷಕರ ಮುಂದೆ ತರ್ತಿದೆ. ರಾಮಾಯಣದ ಹನುಮಂತನ ಸಾಹಸಗಳ ಕಥೆಯನ್ನು ಇದರಲ್ಲಿ ಹೇಳಲಾಗ್ತಿದೆ. 2ಡಿ ಜೊತೆಗೆ 3ಡಿಯಲ್ಲಿ ಕೂಡ ಸಿನಿಮಾ ಬಿಡುಗಡೆ ಆಗಲಿದೆ.
ಮಕ್ಕಳಿಗೆ ದಸರಾ ಹಬ್ಬದ ರಜೆ ಇರುವಾಗ 'ವಾಯುಪುತ್ರ' ಚಿತ್ರವನ್ನು ತೆರೆಗೆ ತರುವುದು ಉತ್ತಮ ಎಂದು ತಂಡ ನಿರ್ಧರಿಸಿದೆ. 'ಕಾರ್ತಿಕೇಯ', 'ಕಾರ್ತಿಕೇಯ-2' ಹಾಗೂ 'ತಂಡೇಲ್' ಚಿತ್ರಗಳನ್ನು ಕಟ್ಟಿಕೊಟ್ಟಿದ್ದ ಚಂದೂ ಮುಂದೇಟಿ ಈ ಚಿತ್ರದ ಸಾರಥ್ಯ ವಹಿಸಿಕೊಂಡಿದ್ದಾರೆ.
ನಮ್ಮ ಪುರಾಣಗಳಲ್ಲಿ ಹನುಮಂತನಿಗೆ ಪ್ರತ್ಯೇಕ ಸ್ಥಾನವಿದೆ. ಆತನ ಸಾಹಸಗಳ ಬಗ್ಗೆ ಸಾಕಷ್ಟು ಕಥೆಗಳಿವೆ. ಭಾರತೀಯ ಸಂಸ್ಕೃತಿಯಲ್ಲಿ ಹನುಮಂತ ನಿಜವಾದ ಸೂಪರ್ ಹೀರೋ ಆಗಿದ್ದಾನೆ. ಅಷ್ಟೇ ಅಲ್ಲ ಶ್ರೀರಾಮನ ಬಗ್ಗೆ ತನ್ನ ಭಕ್ತಿ ಶ್ರದ್ಧೆಯಿಂದಲೂ ಆತ ಗಮನ ಸೆಳೆದಿದ್ದಾನೆ. ಸದ್ಯ ತೆಲುಗು ಜೊತೆಗೆ ಕನ್ನಡ, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ 'ವಾಯುಪುತ್ರ' ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ. ಚಿತ್ರದ ಪೋಸ್ಟರ್‌ಗಳು ವೈರಲ್ ಆಗ್ತಿದೆ.
'ಮಹಾವತಾರ್ ನರಸಿಂಹ' ಸಿನಿಮಾ ಬರುವವರೆಗೂ ಭಾರತದಲ್ಲಿ ಆನಿಮೇಷನ್ ಸಿನಿಮಾ ಈ ಪಾಟಿ ಸದ್ದು ಮಾಡುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಸ್ಟಾರ್ ನಟರು ಇಲ್ಲದೇ ಭಾರೀ ಪ್ರಚಾರ ಇಲ್ಲದೇ ಬರೀ ಮೌತ್ ಟಾಕ್‌ನಿಂದಲೇ ಸಿನಿಮಾ ಅದ್ಭುತಗಳನ್ನು ಸೃಷ್ಟಿಸಿದೆ. ಈಗಾಗಲೇ ಸಾಕಷ್ಟು ಬಾರಿ ಕೇಳಿರುವ, ನೋಡಿರುವ ಕಥೆಯನ್ನೇ ಹೊಸ ರೂಪದಲ್ಲಿ ತೆರೆಗೆ ತಂದು ತಂಡ ಗೆದ್ದಿದೆ. ಹಿರಣ್ಯ ಕಶ್ಯಪುನನ್ನು ನರಸಿಂಹ ಸಂಹಾರ ಮಾಡುವ ಕಥೆ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸುತ್ತಿದೆ. ಅಷ್ಟರಮಟ್ಟಿಗೆ ಈ ದೃಶ್ಯಕಾವ್ಯ ತೆರೆಮೇಲೆ ಮ್ಯಾಜಿಕ್ ಕ್ರಿಯೇಟ್ ಮಾಡಿದೆ.
'ಮಹಾವತಾರ್ ನರಸಿಂಹ' ಬಳಿಕ 'ಮಹಾವತಾರ್ ಪರಶುರಾಮ' (2027) ಚಿತ್ರಕ್ಕೆ ಪ್ಲ್ಯಾನ್ ಮಾಡಲಾಗ್ತಿದೆ. ಮುಂದೆ 'ಮಹಾವತಾರ್ ರಘುನಂದನ್' (2029), 'ಮಹಾವತಾರ್ ದ್ವಾರ್ಕದೇಶ್' (2031), 'ಮಹಾವತಾರ್ ಗೋಕುಲನಂದ' (2033), 'ಮಹಾವತಾರ್ ಕಲ್ಕಿ ಪಾರ್ಟ್ 1' (2035) ಹಾಗೂ 'ಮಹಾವತಾರ್ ಕಲ್ಕಿ ಪಾರ್ಟ್ 2' (2037) ಹೀಗೆ ವರ್ಷಕ್ಕೊಂದರಂತೆ ಆನಿಮೇಷನ್ ಸಿನಿಮಾಗಳನ್ನು ಹೊಂಬಾಳೆ ಸಂಸ್ಥೆ ಘೋಷಿಸಿದೆ.
ಒಟ್ಟಾರೆ 'ಮಹಾವತಾರ್ ನರಸಿಂಹ' ಚಿತ್ರದ ಸ್ಫೂರ್ತಿಯಿಂದ ಫಿಲ್ಮ್ ಮೇಕರ್ಸ್ ಇಂತಹ ಮತ್ತಷ್ಟು ಸಿನಿಮಾಗಳನ್ನು ತೆರೆಗೆ ತರುವ ಲೆಕ್ಕಾಚಾರದಲ್ಲಿದ್ದಾರೆ. ಇನ್ನೆರಡು ವರ್ಷಗಳಲ್ಲಿ ಭಾರತದಲ್ಲಿ ಆನಿಮೇಷನ್ ಸಿನಿಮಾಗಳ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ. ತಂತ್ರಜ್ಞಾನ ಬೆಳೆದಂತೆ ತೆರೆಮೇಲೆ ಮತ್ತಷ್ಟು ಅದ್ಭುತಗಳನ್ನು ಸೃಷ್ಟಿಸುವ ಪ್ರಯತ್ನ ನಡೆಯಲಿದೆ.


Click it and Unblock the Notifications











