ಅಪ್ಪು ಮಾದರಿಯಲ್ಲೇ ಹಾಲಿವುಡ್ ಆಗಸದಲ್ಲಿ Jr. NTR ಫ್ಯಾನ್ಸ್ ಅಭಿಮಾನ ಪ್ರದರ್ಶನ: ತಾರಕ್‌ಗೆ ಸರ್ಪ್ರೈಸ್
ಯಂಗ್ ಟೈಗರ್ ಎನ್‌ಟಿಆರ್‌ಗೆ ದೇಶ ವಿದೇಶದಲ್ಲಿ ದೊಡ್ಡ ಅಭಿಮಾನಿ ಬಳಗ ಇದೆ. 'RRR' ಚಿತ್ರದ ಕೋಮುರಂ ಭೀಮ್ ಆಗಿ ತಾರಕ್ ಹೆಸ್ರು ಮತ್ತೊಮ್ಮೆ ಅಂತರಾಷ್ಟ್ರೀಯಮಟ್ಟದಲ್ಲಿ ಸದ್ದು ಮಾಡ್ತಿದೆ. 'RRR' ಚಿತ್ರದ 'ನಾಟು ನಾಟು' ಸಾಂಗ್‌ಗೆ ಆಸ್ಕರ್ ಪ್ರಶಸ್ತಿ ಲಭಿಸಿತ್ತು. ಈ ವೇಳೆ ಅಮೆರಿಕಾಗೆ ಹೋಗಿದ್ದ ತಾರಕ್ ಅಲ್ಲಿನ ಅಭಿಮಾನಿಗಳನ್ನು ಭೇಟಿ ಮಾಡಿದ್ದರು. ಅದಕ್ಕೆ ಅಭಿಮಾನಿಗಳು ವಿಭಿನ್ನ ಥ್ಯಾಂಕ್ಸ್ ಹೇಳಿದ್ದಾರೆ.
ಜ್ಯೂ. ಎನ್‌ಟಿಆರ್‌ಗೆ ಅಮೆರಿಕಾದ ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ಸರ್‌ಪ್ರೈಸ್ ನೀಡಿದ್ದಾರೆ. ಆಗಸದೆತ್ತರದಲ್ಲಿ ಧನ್ಯವಾದ ತಿಳಿಸಿದ್ದಾರೆ. ಕಳೆದ ವರ್ಷ 'ಜೇಮ್ಸ್' ಸಿನಿಮಾ ರಿಲೀಸ್ ವೇಳೆ ಚಿತ್ರತಂಡ ಪುನೀತ್ ರಾಜ್‌ಕುಮಾರ್‌ಗೆ ಇದೇ ರೀತಿ ಟ್ರಿಬ್ಯೂಟ್ ಮಾಡಿತ್ತು. ಅಪ್ಪು ಹುಟ್ಟುಹಬ್ಬದ ದಿನವೇ 'ಜೇಮ್ಸ್' ಸಿನಿಮಾ ರಿಲೀಸ್ ಆಗಿತ್ತು. ಅಂದು "ಹ್ಯಾಪಿ ಬರ್ತ್‌ಡೇ ಪವರ್ ಸ್ಟಾರ್" ಎನ್ನುವ ಬ್ಯಾನರ್ ಹಿಡಿದ ಪುಟಾಣಿ ಜೆಟ್ ಬೆಂಗಳೂರು ಸುತ್ತಾಮುತ್ತಾ ಸುತ್ತಾಡಿತ್ತು. ಇದೀಗ ಅದೇ ರೀತಿ ಹಾಲಿವುಡ್‌ನಲ್ಲಿ ಎನ್‌ಟಿಆರ್ ಅಭಿಮಾನಿಗಳು ನೆಚ್ಚಿನ ನಟನಿಗೆ ಸರ್‌ಪ್ರೈಸ್ ನೀಡಿದ್ದಾರೆ.

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನಲ್ಲಿರುವ ಮೌಂಟ್ ಲೀ ಬೆಟ್ಟದ ಸುತ್ತಾ ಸಣ್ಣ ಜೆಟ್‌ನಲ್ಲಿ ಬ್ಯಾನರ್ ಹಾರಿಸಿ ಜ್ಯೂ. ಎನ್‌ಟಿಆರ್ ಅಭಿಮಾನಿಗಳು ಧನ್ಯವಾದ ತಿಳಿಸಿದ್ದಾರೆ. 'RRR' ಚಿತ್ರಕ್ಕಾಗಿ ತಾರಕ್ ಹಾಕಿದ ಶ್ರಮಕ್ಕೆ ಧನ್ಯವಾದ ತಿಳಿಸಿರುವ ಅಭಿಮಾನಿಗಳು 'NTR30' ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿರುವುದಾಗಿ ಹೇಳಿದ್ದಾರೆ. ಸದ್ಯ ಆಗಸದಲ್ಲಿ ಬ್ಯಾನರ್ ಹಿಡಿದು ಸುತ್ತಾಡಿದ ಜೆಟ್ ವಿಡಿಯೋ ಸಖತ್ ಸದ್ದು ಮಾಡ್ತಿದೆ. ಹಾಲಿವುಡ್ ಸೈನ್ ಇರುವ ಮೌಂಟ್ ಲೀ ಬೆಟ್ಟದ ಸುತ್ತಾ ಜೆಟ್ ಹಾರಾಟ ನಡೆಸಿದೆ.
ಪುನೀತ್ ರಾಜ್‌ಕುಮಾರ್, ಜ್ಯೂ. ಎನ್‌ಟಿಆರ್ ಆತ್ಮೀಯ ಸ್ನೇಹಿತರಾಗಿದ್ದರು. ಅಂದು ಅಪ್ಪುಗೂ 'ಜೇಮ್ಸ್' ಸಿನಿಮಾ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಇದೇ ರೀತಿ ಸ್ಪೆಷಲ್ ಆಗಿ ವಿಶ್ ಮಾಡಿದ್ದರು ಎಂದು ಕೆಲವರು ನೆನಪಿಸಿಕೊಂಡಿದ್ದಾರೆ. ಪುನೀತ್ ರಾಜ್‌ಕುಮಾರ್ ಅಭಿಮಾನಿಗಳಲ್ಲಿ ಒಬ್ಬರಾಗಿರುವ ಕಿಶೋರ್ ಅಂದು ನೆಚ್ಚಿನ ನಟನಿಗೆ ಈ ರೀತಿ ಸರ್‌ಪ್ರೈಸ್ ನೀಡಿದ್ದರು. ಅಂದು ಅಪ್ಪುಗೆ ಹುಟ್ಟುಹಬ್ಬದ ಶುಭಾಶಯದ ಬ್ಯಾನರ್ ಹಿಡಿದ ಜೆಟ್ ಜಕ್ಕೂರಿನಿಂದ ಹೊರಟು ಡಾ. ರಾಜ್ ಸಮಾಧಿ, ಒರಾಯನ್ ಮಾಲ್, ಸದಾಶಿವನಗರ, ಮಲ್ಲೇಶ್ವರಂ, ಮೆಜೆಸ್ಟಿಕ್, ಗಾಂಧಿನಗರ, ಕೆ. ಆರ್ ಮಾರ್ಕೆಟ್, ಸಿಲ್ಕ್‌ಬೋರ್ಡ್, ದೊಮ್ಮಲೂರು, ಬಾಸನವಾಡಿ ಸೇರಿದಂತೆ ಹಲವೆಡೆ ಆಗಸದಲ್ಲಿ ಸುತ್ತಾಡಿತ್ತು.
ಸದ್ಯ ಅಮೆರಿಕಾದ ಅಭಿಮಾನಿಗಳು ಜ್ಯೂ. ಎನ್‌ಟಿಆರ್ ಮೇಲಿನ ಅಭಿಮಾನವನ್ನು ಆಗಸದೆತ್ತರದಲ್ಲಿ ಪ್ರದರ್ಶಿಸಿರುವುದು ಇಲ್ಲಿನ ಅಭಿಮಾನಿಗಳಿಗೂ ಖುಷಿ ತಂದಿದೆ. ಡಾ. ರಾಜ್‌ಕುಮಾರ್ ಹಾಗೂ ತೆಲುಗಿನ ನಂದಮೂರಿ ಫ್ಯಾಮಿಲಿ ನಡುವೆ ಆತ್ಮೀತ ಒಡನಾಟವಿದೆ. ಪುನೀತ್- ತಾರಕ್ ಆಪತ್ರಮಿತ್ರರಾಗಿದ್ದರು. ಅಪ್ಪು ನಟನೆಯ 'ಚಕ್ರವ್ಯೂಹ' ಚಿತ್ರದ 'ಗೆಳೆಯಾ ಗೆಳೆಯಾ' ಹಾಡನ್ನು ಟಾಲಿವುಡ್ ಯಂಗ್ ಟೈಗರ್ ಹಾಡಿದ್ದರು. ಪುನೀತ್ ರಾಜ್‌ಕುಮಾರ್‌ಗೆ ಕರ್ನಾಟಕ ಸರ್ಕಾರ ಕರ್ನಾಟಕ ರತ್ನ ನೀಡಿದಾಗ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ತಾರಕ್ ಬೆಂಗಳೂರಿಗೆ ಬಂದಿದ್ದರು. ಕನ್ನಡದಲ್ಲೇ ಮಾತನಾಡಿ ಸ್ನೇಹಿತನನ್ನು ನೆನೆದಿದ್ದರು.

'RRR' ಸಿನಿಮಾ ರಿಲೀಸ್ ಆಗಿ ವರ್ಷ ಕಳೆಯುತ್ತಾ ಬಂದರೂ ಜ್ಯೂ. ಎನ್‌ಟಿಆರ್ ಹೊಸ ಸಿನಿಮಾ ಶುರುವಾಗಿಲ್ಲ. ಕೊರಟಾಲ ಶಿವ ನಿರ್ದೇಶನದ 'NTR30' ಸಿನಿಮಾ ಕಾರಣಾಂತರಗಳಿಂದ ತಡವಾಗುತ್ತಲೇ ಇದೆ. ಇದೇ ಗುರುವಾರ ಚಿತ್ರಕ್ಕೆ ಮುಹೂರ್ತ ನೆರವೇರಿಸಲಾಗುತ್ತಿದೆ. ಚಿತ್ರದಲ್ಲಿ ತಾರಕ್ ಜೋಡಿಯಾಗಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ನಟಿಸೋದು ಕನ್ಫರ್ಮ್ ಆಗಿದೆ. ಬಹುಕೋಟಿ ವೆಚ್ಚದಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ಸಿನಿಮಾ ಮುಗಿದ ನಂತರ ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರದಲ್ಲಿ ತಾರಕ್ ನಟಿಸಲಿದ್ದಾರೆ.


Click it and Unblock the Notifications











