'ಸಂಕ್ರಾಂತಿಕಿ ವಸ್ತುನ್ನಾಂ' ಸಕ್ಸಸ್ ಬೆನ್ನಲ್ಲೇ 100% ರಷ್ಟು ಸಂಭಾವನೆ ಹೆಚ್ಚಿಸಿದ ವೆಂಕಟೇಶ್
ಚಿತ್ರರಂಗದಲ್ಲಿ ಒಂದು ಗೆಲುವು, ಒಂದು ಸೋಲು ಸಾಕಷ್ಟು ಬದಲಾವಣೆಗಳಿಗೆ ಕಾರಣವಾಗುತ್ತದೆ. ಹಿಟ್ ಆಗಿಬಿಟ್ಟರೆ ನಿರ್ಮಾಪಕರಿಗೆ ಲಾಭ, ನಟ- ನಿರ್ದೇಶಕನಿಗೆ ಹೆಸರು ಬರುತ್ತದೆ. ಸೋತಾಗ ಮಾತ್ರ ಎಲ್ಲರಿಗೂ ಹಿನ್ನಡೆಯೇ ಸರಿ. ಆದರೆ ಸಿನಿಮಾ ಗೆದ್ದ ಬಳಿಕ ಕಲಾವಿದರು, ತಂತ್ರಜ್ಞರ ಸಂಭಾವನೆ ಹೆಚ್ಚಾಗುತ್ತದೆ.
ಸದ್ಯ ಪ್ಯಾನ್ ಇಂಡಿಯಾ ಟ್ರೆಂಡ್ ನಡೀತಿದೆ. ರಜನಿಕಾಂತ್, ಪ್ರಭಾಸ್, ಅಲ್ಲು ಅರ್ಜುನ್, ದಳಪತಿ ವಿಜಯ್ ರೀತಿಯ ಸ್ಟಾರ್ ನಟರು ಚಿತ್ರವೊಂದಕ್ಕೆ 100 ಕೋಟಿ ರೂ.ಗೂ ಅಧಿಕ ಸಂಭಾವನೆ ಪಡೆಯುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಸಿನಿಮಾಗಳು ಗೆಲ್ಲುವುದು ಕಷ್ಟ ಎನ್ನುವಂತಾಗಿದೆ. ಇಂತಹ ಸಮಯದಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಕೊಟ್ಟರೆ ಏಕ್‌ದಮ್ ನಾಯಕ ನಟರ ಸಂಭಾವನೆ ಹೆಚ್ಚುತ್ತದೆ. ತೆಲುಗು ನಟ ವಿಕ್ಟರಿ ವೆಂಕಟೇಶ್ ಸಂಭಾವನೆ ಬಗ್ಗೆ ಫಿಲ್ಮ್ ನಗರ್‌ನಲ್ಲಿ ಭಾರೀ ಚರ್ಚೆ ನಡೀತಿದೆ.

ಚಿರಂಜೀವಿ ನಟನೆಯ 'ಮನ ಶಂಕರವರಪ್ರಸಾದ್ ಗಾರು' ಚಿತ್ರದ ವಿಶೇಷ ಪಾತ್ರದಲ್ಲಿ ವೆಂಕಟೇಶ್ ನಟಿಸಿ ಗೆದ್ದಿದ್ದಾರೆ. ಅನಿಲ್ ರಾವಿಪುಡಿ ನಿರ್ದೇಶನದ ಕಾಮಿಡಿ ಎಂಟರ್‌ಟೈನರ್ ಸಿನಿಮಾ 350 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ವೆಂಕಿ ಕೂಡ ಚಿರು ಜೊತೆ ಕೈಜೋಡಿಸಿದ್ದು ಚಿತ್ರಕ್ಕೆ ಪ್ಲಸ್ ಆಗಿತ್ತು. ಕಳೆದ ವರ್ಷ ಅನಿಲ್ ರಾವಿಪುಡಿ ನಿರ್ದೇಶನದ 'ಸಂಕ್ರಾಂತಿಕಿ ವಸ್ತುನ್ನಾಂ' ಚಿತ್ರದಲ್ಲಿ ಹೀರೊ ಆಗಿ ವೆಂಕಟೇಶ್ ಗೆಲುವಿನ ನಗೆ ಬೀರಿದ್ದರು.
ಚಿರಂಜೀವಿ, ಬಾಲಕೃಷ್ಣ, ನಾಗಾರ್ಜುನ ಸಾಲಿಗೆ ಸೇರುವ ನಟ ವೆಂಕಟೇಶ್. ಒಂದ್ಕಾಲದಲ್ಲಿ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಮನೆ ಮಾತಾಗಿದ್ದರು. ಬಳಿಕ ಆಕ್ಷನ್ ಸಿನಿಮಾಗಳ ಕಡೆ ಮುಖ ಮಾಡಿ ಸೋಲು, ಗೆಲುವು ಎರಡನ್ನೂ ನೋಡಿದ್ದರು. ಇತ್ತೀಚಿನ ವರ್ಷಗಳಲ್ಲಿ ಮತ್ತೆ ಕಾಮಿಡಿ ಡ್ರಾಮಾ ಸಿನಿಮಾಗಳ ಕಡೆ ಮುಖ ಮಾಡಿದ್ದಾರೆ. ಅದರಲ್ಲೂ ಅನಿಲ್ ರಾವಿಪುಡಿ ನಿರ್ದೇಶನದಲ್ಲಿ ನಟಿಸಿದ 'F2', 'F3' ಹಾಗೂ 'ಸಂಕ್ರಾಂತಿಕಿ ವಸ್ತುನ್ನಾಂ' ಚಿತ್ರಗಳು ಹಿಟ್ ಲಿಸ್ಟ್ ಸೇರಿವೆ. ಸದ್ಯ ವೆಂಕಿ ಗಣನೀಯವಾಗಿ ತಮ್ಮ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಎಂದು ಗುಲ್ಲಾಗಿದೆ.

ಈ ಹಿಂದೆ 10-12 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದ ವೆಂಕಟೇಶ್ 'ಸಂಕ್ರಾಂತಿಕಿ ವಸ್ತುನ್ನಾಂ' ಸಿನಿಮಾ ಬಳಿಕ ಡಬಲ್ ಚಾರ್ಜ್ ಮಾಡುತ್ತಿದ್ದಾರೆ ಎನ್ನಲಾಗ್ತಿದೆ. 'ಆದರ್ಶ ಕುಟುಂಬಂ' ಎಂಬ ಚಿತ್ರದಲ್ಲಿ ವೆಂಕಿ ಬಣ್ಣ ಹಚ್ಚಿದ್ದಾರೆ. ಚಿತ್ರಕ್ಕಾಗಿ 25 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎಂದು ಟಾಲಿವುಡ್ ಅಂಗಳದಲ್ಲಿ ಚರ್ಚೆ ನಡೀತಿದೆ. ಅಂದರೆ ಡಬಲ್ ಹೆಚ್ಚು ಕಮ್ಮಿ 100%ರಷ್ಟು ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಎಂದು ಹೇಳಲಾಗ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.
ಚಿತ್ರರಂಗದಲ್ಲಿ ಬ್ಲ್ಯಾಕ್ ಮನಿ ಚಲಾವಣೆ ಆಗುತ್ತದೆ, ಸ್ಟಾರ್ ನಟರು ವೈಟ್ ಹಾಗೂ ಬ್ಲ್ಯಾಕ್ ರೂಪದಲ್ಲಿ ಸಂಭಾವನೆ ಪಡೆಯುತ್ತಾರೆ ಎನ್ನುವ ಊಹಾಪೋಹ ಇದೆ. ಈ ಹಿಂದೆ ಸುದ್ದಿಗೋಷ್ಠಿಯಲ್ಲಿ ವೆಂಕಟೇಶ್ ಅವರಿಗೆ ಈ ಬಗ್ಗೆ ನೇರವಾಗಿ ಪ್ರಶ್ನೆ ಎದುರಾಗಿತ್ತು. ಅದಕ್ಕೆ ಪ್ರತಿಕ್ರಿಯಿಸಿ "ನಾನು ತಗೊಳ್ಳೋದೇ ಕಮ್ಮಿ ಸಂಭಾವನೆ. ಅದು ಕೂಡ ಫುಲ್ ವೈಟ್. ಹಾಗಾಗಿ ನನಗೆ ಈ ಬ್ಲ್ಯಾಕ್ ಮನಿ ವ್ಯವಹಾರದ ಬಗ್ಗೆ ಗೊತ್ತಿಲ್ಲ" ಎಂದಿದ್ದರು.
ತೆಲುಗಿನ ಖ್ಯಾತ ಚಿತ್ರ ನಿರ್ಮಾಪಕ ಡಿ. ರಾಮಾನಾಯ್ಡು ಪುತ್ರ ವೆಂಕಟೇಶ್ ಚಿತ್ರರಂಗ ಪ್ರವೇಶ ಕಷ್ಟವಾಗಲಿಲ್ಲ. ಒಂದೆರಡು ಚಿತ್ರಗಳಲ್ಲಿ ಬಾಲನಟನಾಗಿ ಮಿಂಚಿದ್ದ ವೆಂಕಿ 1986ರಲ್ಲಿ ಹೀರೊ ಆಗಿ ಚಿತ್ರರಂಗಕ್ಕೆ ಬಂದಿದ್ದರು. 'ಕಲಿಯುಗ ಪಾಂಡವುಲು' ಅವರು ಹೀರೊ ಆಗಿ ನಟಿಸಿದ ಮೊದಲ ಸಿನಿಮಾ. ಮುಂದೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಾ ಬಂದರು. ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಮೋಡಿ ಮಾಡಿದರು. 'ಮನ ಶಂಕರವರ ಪ್ರದಾದ್ ಗಾರು' ಚಿತ್ರದ ಅತಿಥಿ ಪಾತ್ರಕ್ಕೆ ವೆಂಕಟೇಶ್ 10 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗ್ತಿದೆ.


Click it and Unblock the Notifications











