ಕರ್ನಾಟಕದಲ್ಲೇ 3.5 ಕೋಟಿ ಬಾಚಿದ ತಮಿಳಿನ ಈ ಚಿತ್ರದ ತೆಲುಗು ಡಬ್ ಕೂಡ ಕರ್ನಾಟಕದಲ್ಲಿ ಬಿಡುಗಡೆ!
ಚಿತ್ರಗಳಿಗೆ ರಾಜ್ಯದ ಬೌಂಡರಿ ಇಲ್ಲ ಎಂಬ ವಿಷಯ ಈ ಹಿಂದಿನಿಂದಲೂ ಹಲವಾರು ಭಾರಿ ಸಾಬೀತಾಗುತ್ತಲೇ ಬಂದಿದೆ. ಇನ್ನು ಇದು ಇತ್ತೀಚೆಗಿನ ದಿನಗಳಲ್ಲಿ ಪದೇ ಪದೇ ರುಜುವಾತಾಗಿದೆ. ಸಿನಿಮಾವೊಂದರ ಕಂಟೆಂಟ್ ಚೆನ್ನಾಗಿದ್ದರೆ ಸಾಕು ಆ ಚಿತ್ರ ತನ್ನ ಮೂಲ ರಾಜ್ಯದಿಂದಾಚೆಗೂ ತಲುಪಿ ಭರ್ಜರಿ ಗಳಿಕೆ ಮಾಡಿಬಿಡುತ್ತೆ. ಇದಕ್ಕೆ ತಾಜಾ ಉದಾಹರಣೆ ಈ ವರ್ಷ ತೆರೆಕಂಡ ಕೆಜಿಎಫ್ ಚಾಪ್ಟರ್ 2, ವಿಕ್ರಮ್ ಹಾಗೂ ಇತ್ತೀಚೆಗೆ ಬಿಡುಗಡೆಗೊಂಡ ಕಾಂತಾರ.
ಪ್ಯಾನ್ ಇಂಡಿಯಾ ಬಿಡುಗಡೆಗೊಂಡ ಚಿತ್ರಗಳು ಮಾತ್ರವಲ್ಲದೇ ಕೇವಲ ಒಂದೇ ಭಾಷೆಯಲ್ಲಿ ಬಿಡುಗಡೆಗೊಂಡು ಇತರೆ ರಾಜ್ಯಗಳಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ ಚಿತ್ರಗಳೂ ಕೂಡ ಈ ವರ್ಷ ಸಾಕಷ್ಟಿವೆ. ಮೊದಲಿಗೆ ಕಾಂತಾರ ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿದ್ದಾಗ ಇತರೆ ರಾಜ್ಯದ ಸಿನಿ ಪ್ರೇಕ್ಷಕರು ಚಿತ್ರವನ್ನು ಕನ್ನಡದಲ್ಲಿಯೇ ವೀಕ್ಷಿಸಿದ್ದರು. ಇನ್ನು ವಿಕ್ರಮ್ ಚಿತ್ರವನ್ನು ಡಬ್ ಮಾಡಿ ಬಿಡುಗಡೆ ಮಾಡಿದರೂ ಸಹ ಕನ್ನಡಕ್ಕಿಂತ ಹೆಚ್ಚಾಗಿ ತಮಿಳು ಭಾಷೆಯಲ್ಲಿಯೇ ವೀಕ್ಷಕರು ವೀಕ್ಷಿಸಿದರು.
ಹೀಗೆ ಹೆಸರು ಮಾಡಿರುವ ನಟರು ಹಾಗೂ ದೊಡ್ಡ ಪ್ರೊಡಕ್ಷನ್ ಸಂಸ್ಥೆಯಡಿ ಬಿಡುಗಡೆಯಾದ ಚಿತ್ರಗಳು ಮಾತ್ರವಲ್ಲದ ಯುವ ನಟನ ಚಿತ್ರವೊಂದು ಈ ವರ್ಷ ಬಾಕ್ಸ್ ಆಫೀಸನ್ನು ಚಿಂದಿ ಮಾಡಿದೆ. ಬಿಡುಗಡೆಯಾದ ಹದಿನಾಲ್ಕು ದಿನಗಳಲ್ಲಿಯೇ ಐವತ್ತು ಕೋಟಿ ಕ್ಲಬ್ ಸೇರುವ ಮೂಲಕ ಸೂಪರ್ ಬ್ಲಾಕ್‌ಬಸ್ಟರ್ ಆಗಿದೆ. ಹೌದು, ತಮಿಳಿನ ಲವ್ ಟುಡೇ ಎಂಬ ಸಿನಿಮಾ ಇಷ್ಟರ ಮಟ್ಟಿಗೆ ಸದ್ದು ಮಾಡಿದೆ. ಇನ್ನು ತಮಿಳಿನಲ್ಲಿ ಸಕ್ಸಸ್ ಕಂಡ ಈ ಚಿತ್ರವನ್ನು ಇದೀಗ ತೆಲುಗಿಗೂ ಸಹ ಡಬ್ ಮಾಡಿ ಬಿಡುಗಡೆ ಮಾಡಲಾಗಿದೆ. ಆದರೆ ಈ ಚಿತ್ರದ ಎರಡೂ ವರ್ಷನ್ ಸಹ ಕರ್ನಾಟಕ ನೆಲದಲ್ಲಿ ಬಿಡುಗಡೆಗೊಂಡಿದೆ.

ಮೊದಲು ತಮಿಳು, ಈಗ ತೆಲುಗು
ಮೊದಲು ತಮಿಳು ಭಾಷೆಯಲ್ಲಿ ಬಿಡುಗಡೆಗೊಂಡಿದ್ದ ಲವ್ ಟುಡೇ ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ ಕಾಂತಾರ ಅಬ್ಬರದ ನಡುವೆಯೂ ಒಳ್ಳೆಯ ಗಳಿಕೆ ಮಾಡಿತ್ತು. ರಾಜ್ಯದ ನೆಲದಲ್ಲಿ ಕಾಂತಾರದಂತಹ ದೈತ್ಯ ಅಬ್ಬರಿಸುತ್ತಿರುವಾಗ ಬೇರೆ ರಾಜ್ಯದ ಯುವ ನಟನ ಮೊದಲ ಚಿತ್ರ ಇಷ್ಟರ ಮಟ್ಟಿಗೆ ಅಬ್ಬರಿಸುವುದೆಂದರೆ ಸುಲಭದ ಮಾತಲ್ಲ. ಹೀಗೆ ಕರ್ನಾಟಕದಲ್ಲಿ ಅಬ್ಬರಿಸಿದ ಲವ್ ಟುಡೇ ತಮಿಳು ಅವತರಣಿಕೆ ರಾಜ್ಯದಲ್ಲಿ 3.45 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿತ್ತು. ಇದು ಇತ್ತೀಚೆಗೆ ಬಿಡುಗಡೆಯಾದ ಹಲವು ಕನ್ನಡ ಚಿತ್ರಗಳ ಕಲೆಕ್ಷನ್‌ಗಿಂತಲೂ ಹೆಚ್ಚು. ಹೀಗೆ ಅಬ್ಬರಿಸಿದ ಲವ್ ಟುಡೇ ಚಿತ್ರದ ತೆಲುಗು ಅವತರಣಿಕೆ ಇಂದು ( ನವೆಂಬರ್ 25 ) ಬಿಡುಗಡೆಯಾಗಿದ್ದು, ಈ ಚಿತ್ರ ಕೂಡ ಕರ್ನಾಟಕದಲ್ಲಿ ತೆರೆ ಕಂಡಿದೆ.

ಕನ್ನಡದಲ್ಲೂ ಡಬ್ ಮಾಡಬಹುದಿತ್ತು
ಇನ್ನು ಈ ಚಟುವಟಿಕೆಯ ಕುರಿತು ಕರ್ನಾಟಕದ ಕೆಲ ಸಿನಿ ರಸಿಕರು ಪ್ರತಿಕ್ರಿಯಿಸಿದ್ದು ಕರ್ನಾಟಕದಲ್ಲಿ ಚಿತ್ರ ಕೋಟಿ ಕೋಟಿ ಗಳಿಕೆ ಮಾಡಿರುವಾಗ ಆ ಚಿತ್ರವನ್ನು ಕನ್ನಡದಲ್ಲೂ ಡಬ್ ಮಾಡಿ ಬಿಡುಗಡೆ ಮಾಡಬಹುದಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತೆಲುಗಿಗೆ ಡಬ್ ಮಾಡಿ ಅದನ್ನು ಕರ್ನಾಟಕದಲ್ಲೂ ರಿಲೀಸ್ ಮಾಡುವುದಕ್ಕಿಂತ ಕನ್ನಡದಲ್ಲಿ ಡಬ್ ಮಾಡಿ ಬಿಡುಗಡೆ ಮಾಡಿದ್ದರೆ ಚೆನ್ನಾಗಿರುತ್ತಿತ್ತು ಎಂದು ಕಾಮೆಂಟ್‌ಗಳು ಬರತೊಡಗಿವೆ.

ಈಗಿನ ಜನರೇಶನ್‌ನ ಕತೆ
ಇನ್ನು ಲವ್ ಟುಡೇ ಚಿತ್ರದ ಕತೆ ಪಕ್ಕಾ ಈಗಿನ ಜನರೇಶನ್‌ನ ಹುಡುಗ ಹುಡುಗಿಯ ಲವ್ ಸ್ಟೋರಿಯ ಸುತ್ತ ಸುತ್ತಲಿದೆ. ಪ್ರೀತಿಯಲ್ಲಿ ಬಿದ್ದ ಇಬ್ಬರಿಗೂ ವಿವಾಹ ಮಾಡಿಸಬೇಕೆಂದರೆ ಇಬ್ಬರೂ ನಿಮ್ಮ ನಿಮ್ಮ ಮೊಬೈಲ್‌ಗಳನ್ನು ಒಂದು ದಿನ ಬದಲಾಯಿಸಿಕೊಂಡು ಉಪಯೋಗಿಸಿ, ಆನಂತರವೂ ನಿಮಗೆ ಮದುವೆ ಬೇಕೆಂದರೆ ನನಗೂ ಒಪ್ಪಿಗೆ ಎಂದು ಹುಡುಗಿಯ ತಂದೆ ಷರತ್ತು ವಿಧಿಸುತ್ತಾರೆ. ಈ ಷರತ್ತಿನಿಂದ ಏನೆಲ್ಲಾ ಅವಾಂತರವಾಗಲಿದೆ, ಈ ಷರತ್ತಿನಲ್ಲಿ ಗೆದ್ದು ಆ ಇಬ್ಬರೂ ವಿವಾಹವಾಗ್ತಾರಾ ಎಂಬುದೇ ಚಿತ್ರದ ಕತೆ. ಈ ಹಿಂದೆ ಕೊಮಾಲಿ ಎಂಬ ಸೂಪರ್ ಹಿಟ್ ಚಿತ್ರ ನಿರ್ದೇಶಿಸಿದ್ದ ಪ್ರದೀಪ್ ರಂಗನಾಥನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ತಾವೇ ನಟನೆಯನ್ನೂ ಸಹ ಮಾಡಿದ್ದಾರೆ. ನಟಿಯಾಗಿ ಇವಾನ ಬಣ್ಣ ಹಚ್ಚಿದ್ದಾರೆ.


Click it and Unblock the Notifications











