Prabhas: 'ಕಣ್ಣಪ್ಪ' ಚಿತ್ರದಲ್ಲಿ ಶಿವನಾಗಿ ಪ್ರಭಾಸ್: ಫೋಟೊಗಳು ವೈರಲ್
ದೊಡ್ಡ ದೊಡ್ಡ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಹೀರೊ ಆಗಿ ನಟಿಸುತ್ತಿರುವ ಪ್ರಭಾಸ್ 'ಕಣ್ಣಪ್ಪ' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸೋಕೆ ಒಪ್ಪಿಕೊಂಡಿದ್ದಾರೆ. ಅದಕ್ಕೆ ಬಲವಾದ ಕಾರಣ ಕೂಡ ಇದೆ. ಹಿಂದಿ ನಿರ್ದೇಶಕ ಮುಖೇಶ್ ಕುಮಾರ್ ಸಿಂಗ್ ಈ ಭಕ್ತಿಪ್ರಧಾನ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದು ಟೈಟಲ್ ರೋಲ್‌ನಲ್ಲಿ ಮಂಚು ವಿಷ್ಣು ನಟಿಸುತ್ತಿದ್ದಾರೆ.
ಮಂಚು ವಿಷ್ಣು ತಂದೆ ಮೋಹನ್ ಬಾಬು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. 100 ಕೋಟಿ ರೂ. ಬಜೆಟ್‌ನಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ಕಟ್ಟಿಕೊಡಲಾಗುತ್ತಿದೆ. ಬಹುತೇಕ ಚಿತ್ರೀಕರಣ ನ್ಯೂಜಿಲೆಂಡ್‌ನಲ್ಲಿ ನಡೆಯಲಿದೆ. ಈಗಾಗಲೇ 7 ಕಂಟೇನರ್‌ಗಳಲ್ಲಿ ಚಿತ್ರೀಕರಣಕ್ಕೆ ಬೇಕಾದ ಸೆಟ್ ಪರಿಕರಗಳನ್ನು ನ್ಯೂಜಿಲೆಂಡ್‌ಗೆ ಹೊತ್ತೊಯ್ಯಲಾಗಿದೆ. ಒಬ್ಬ ನಾಸ್ತಿಕ ಬೇಡ ಹೇಗೆ ಶಿವನ ಪರಮಭಕ್ತನಾದ ಎನ್ನುವ ಕಣ್ಣಪ್ಪನ ಕತೆಯನ್ನು ಈ ಚಿತ್ರದಲ್ಲಿ ತೆರೆಗೆ ತರಲಾಗುತ್ತಿದೆ.

ಪ್ರಭಾಸ್ ಚಿತ್ರದಲ್ಲಿ ಶಿವನ ಪಾತ್ರದಲ್ಲಿ ನಟಿಸುತ್ತಾರೆ ಎನ್ನಲಾಗ್ತಿದೆ. ಯಂಗ್ ರೆಬಲ್ ಸ್ಟಾರ್ ಚಿತ್ರದಲ್ಲಿ ನಟಿಸುವ ವಿಚಾರವನ್ನು ಚಿತ್ರತಂಡ ಘೋಷಿಸಿದೆ. ಆದರೆ ಯಾವ ಪಾತ್ರ ಅನ್ನೋದು ರಿವೀಲ್ ಮಾಡಿಲ್ಲ. ಚಿತ್ರದಲ್ಲಿ ನಾಯಕ ಕಣ್ಣಪ್ಪನ ಪಾತ್ರ ಬಿಟ್ಟರೆ ಕೆಲವೇ ಮುಖ್ಯ ಪಾತ್ರಗಳಿವೆ. ಅದರಲ್ಲಿ ಕಣ್ಣಪ್ಪನ ಭಕ್ತಿಗೆ ಒಲಿಯುವ ಶಿವನ ಪಾತ್ರವೂ ಮಹತ್ವದ್ದು. ಅದೇ ಪಾತ್ರದಲ್ಲಿ ಪ್ರಭಾಸ್ ನಟಿಸುತ್ತಾರೆ ಎನ್ನಲಾಗ್ತಿದೆ. 'ಆದಿಪುರುಷ್' ಚಿತ್ರದಲ್ಲಿ ಶ್ರೀರಾಮನಾಗಿ ನಟಿಸಿ ಪ್ರಭಾಸ್ ಗೆದ್ದಿದ್ದರು.
ಶಿವನ ಅವತಾರದಲ್ಲಿ ಪ್ರಭಾಸ್ ಹೇಗೆ ಕಾಣಿಸುತ್ತಾರೆ ಎನ್ನುವ AI ಫೋಟೊಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಅಭಿಮಾನಿಗಳು ತಂತ್ರಜ್ಞಾನದ ಸಹಾಯದಿಂದ ಶಿವನ ರೂಪದಲ್ಲಿ ಪ್ರಭಾಸ್ ಪೋಸ್ಟರ್‌ಗಳನ್ನು ಡಿಸೈನ್ ಮಾಡಿ ಶೇರ್ ಮಾಡುತ್ತಿದ್ದಾರೆ. ಜಟಧಾರಿಯಾಗಿ ಶಿವನ ವೇಷದಲ್ಲಿ ಪ್ರಭಾಸ್ ಲುಕ್ ನೋಡಿದವರು ಹುಬ್ಬೇರಿಸಿದ್ದಾರೆ. ಇದೇ ರೀತಿ ಸಿನಿಮಾದಲ್ಲಿ ಶಿವನಾಗಿ ಪ್ರಭಾಸ್‌ನ ತೋರಿಸಿ ಚೆನ್ನಾಗಿರುತ್ತದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
'ಬೇಡರ ಕಣ್ಣಪ್ಪ' ಚಿತ್ರದಲ್ಲಿ ಮೊದಲಿಗೆ ಡಾ. ರಾಜ್‌ಕುಮಾರ್ ನಟಿಸಿದ್ದರು. ಈ ಸಿನಿಮಾ ಮೂಲಕ ಅಣ್ಣಾವ್ರು ಚಿತ್ರರಂಗಕ್ಕೆ ಬಂದಿದ್ದರು. ಬಳಿಕ ಶಿವಣ್ಣ ಕೂಡ ಇದೇ ಕತೆ ಆಧರಿಸಿದ ಚಿತ್ರದಲ್ಲಿ ಮಿಂಚಿದ್ದರು. ಆ ಚಿತ್ರದಲ್ಲಿ ಡಾ. ರಾಜ್ ಶಿವನ ಪಾತ್ರ ಮಾಡಿದ್ದರು. ಇನ್ನು ತೆಲುಗಿನಲ್ಲಿ ಪ್ರಭಾಸ್ ಚಿಕ್ಕಪ್ಪ ಕೃಷ್ಣರಾಜು ಈ ಕಥೆಯಲ್ಲಿ ಸಿನಿಮಾ ಮಾಡಿದ್ದರು. ಇದೇ ಚಿತ್ರದಲ್ಲಿ ಪ್ರಭಾಸ್ ನಟಿಸಬೇಕು ಎನ್ನುವ ಕೃಷ್ಣಂರಾಜು ಆಸೆಯಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಇದೀಗ ಮಂಚು ವಿಷ್ಣು ಆ ಸಾಹಸ ಮಾಡುತ್ತಿದ್ದು ಕೊನೆ ಪಕ್ಷ ಆ ಚಿತ್ರದ ಒಂದು ಪಾತ್ರದಲ್ಲಾದರೂ ನಟಿಸಬೇಕು ಎಂದು ಪ್ರಭಾಸ್ ನಿರ್ಧರಿಸಿದ್ದಾರೆ.

ಇನ್ನು 'ಕಣ್ಣಪ್ಪ' ಚಿತ್ರದಲ್ಲಿ ಪ್ರಭಾಸ್ ಶಿವನಾಗಿ ನಟಿಸಿದರೆ ನಯನತಾರಾ ಪಾರ್ವತಿಯಾಗಿ ಕಾಣಿಸಿಕೊಳ್ಳುತ್ತಾರೆ ಎನ್ನಲಾಗ್ತಿದೆ. ಆಕೆ ಈಗಾಗಲೇ ಒಂದೆರಡು ಸಿನಿಮಾಗಳಲ್ಲಿ ಪೌರಾಣಿಕ ಪಾತ್ರಗಳಲ್ಲಿ ನಟಿಸಿದ್ದರು. ಅದೇ ಕಾರಣಕ್ಕೆ ಆಕೆಯನ್ನು ಆಯ್ಕೆ ಮಾಡಿಕೊಳ್ಳಲಾಗ್ತಿದೆ. 'ಯೋಗಿ' ಚಿತ್ರದಲ್ಲಿ ಪ್ರಭಾಸ್- ನಯನ್ ಒಟ್ಟಿಗೆ ನಟಿಸಿದ್ದರು. ಇದೀಗ ಮತ್ತೆ ಜೊತೆಯಾಗುತ್ತಿದ್ದಾರೆ.
ಪ್ರಭಾಸ್ ಬಳಿಕ ಮಾಲಿವುಡ್ ನಟ ಮೋಹನ್ ಬಾಬು ಕೂಡ 'ಕಣ್ಣಪ್ಪ' ಚಿತ್ರದಲ್ಲಿ ನಟಿಸುವುದು ಖಚಿತವಾಗಿದೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಎಲ್ಲಾ ಭಾಷೆಗಳ ಸ್ಟಾರ್ ಕಲಾವಿದರನ್ನು ಸೇರಿಸಿ ಸಿನಿಮಾ ಮಾಡುವ ಪ್ರಯತ್ನ ಮಾಡುತ್ತಿರುವಂತೆ ಕಾಣುತ್ತಿದೆ. 5 ತಿಂಗಳ ಕಾಲ ಇಡೀ ಚಿತ್ರತಂಡ ನ್ಯೂಜಿಲೆಂಡ್‌ನಲ್ಲಿ ಬೀಡು ಬಿಟ್ಟು ಸಿನಿಮಾ ಚಿತ್ರೀಕರಣ ನಡೆಸಲಿದೆ.
'ಕಣ್ಣಪ್ಪ' ಚಿತ್ರದ ಬಹುತೇಕ ಕತೆ ಅರಣ್ಯದಲ್ಲೇ ನಡೆಯುತ್ತದೆ. ಭಾರತದ ಕಾಡುಗಳಲ್ಲಿ ಮಳೆ, ಬಿಸಿಲಿನ ನಡುವೆ ಚಿತ್ರೀಕರಣ ಕಷ್ಟ ಎನ್ನುವ ಕಾರಣಕ್ಕೆ ನ್ಯೂಜಿಲ್ಯಾಂಡ್‌ನಲ್ಲಿ ಸಿನಿಮಾ ಚಿತ್ರೀಕರಣ ಮಾಡಲು ಚಿತ್ರತಂಡ ನಿರ್ಧರಿಸಿದೆ. ಶೀಘ್ರದಲ್ಲೇ ಸಿನಿಮಾ ಚಿತ್ರೀಕರಣ ಶುರುವಾಗಲಿದೆ. ಮುಂದಿನ ವರ್ಷ ಕಣ್ಣಪ್ಪ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ.


Click it and Unblock the Notifications