ಕಾಲ್ತುಳಿತದಿಂದ ಮಹಿಳೆ ನಿಧನ, ಅಭಿಮಾನಿಯ ಸಾವನ್ನು ಸಂಭ್ರಮಿಸಿದ್ರಾ ಅಲ್ಲು ಅರ್ಜುನ್...?
ಕೇವಲ ದಕ್ಷಿಣ ಭಾರತದಲ್ಲಿ ಮಾತ್ರ ಅಲ್ಲ ಉತ್ತರ ಭಾರತದಲ್ಲಿ ಕೂಡ ಅಪಾರವಾದ ಅಭಿಮಾನಿ ಬಳಗವನ್ನೊಂದಿರುವವರು ಅಲ್ಲು ಅರ್ಜುನ್. ಇದಕ್ಕೆ ಕೈಗನ್ನಡಿ ಎಂಬಂತೆ ಆ ಕಾಲದಲ್ಲಿಯೇ ಅಲ್ಲು ಅರ್ಜುನ್ ಅಭಿನಯದ ' ನಾ ಪೇರು ಸೂರ್ಯ' ಚಿತ್ರ ಹಿಂದಿಗೆ ' ಸೂರ್ಯ ದಿ ಸೋಲ್ಜರ್' ಹೆಸರಿನಲ್ಲಿ ಯೂಟ್ಯೂಬ್‌ನಲ್ಲಿ ಬಿಡುಗಡೆಯಾದಾಗ ಕೇವಲ ಮೂರೇ ದಿನದಲ್ಲಿ ಒಂದು ಕೋಟಿ ಜನ ಈ ಚಿತ್ರವನ್ನು ನೋಡಿದ್ದರು. ಕೇವಲ ಇದೊಂದೇ ಚಿತ್ರ ಅಲ್ಲ ಅಲ್ಲು ಅರ್ಜುನ್ ಅಭಿನಯದ 'ದುವ್ವಾಡ ಜಗನ್ನಾಥಂ' ಮತ್ತು 'ಸರೈನೋಡು' ಹಿಂದಿ ಡಬ್ಬಿಂಗ್ ವರ್ಷನ್‌ಗಳೂ ಅಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿದ್ದವು. 'ನಾ ಪೇರು ಸೂರ್ಯ' ಕೂಡ ದಾಖಲೆ ಬರೆದಿತ್ತು.
ಇಂಥಾ ಅಲ್ಲು ಅರ್ಜುನ್ ಈಗ ಪುಷ್ಪ 2 ಚಿತ್ರದ ಮೂಲಕ ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ದಾರೆ. ಬೆಳ್ಳಿ ತೆರೆಯಲ್ಲಿ ಪುಷ್ಪರಾಜ್ ರೂಪದಲ್ಲಿ ಧಗಧಗಿಸುತ್ತಿದ್ದಾರೆ. ಬಾಕ್ಸಾಫೀಸ್‌ನಲ್ಲಿ ಇಲ್ಲಿಯವರೆಗೆ 1000 ಕೋಟಿ ಪ್ಲಸ್ ಹಣವನ್ನು ಕೂಡ ದೋಚಿದ್ದಾರೆ. ಆದರೆ, ದುರ್ದೈವ ಪುಷ್ಪ 2 ಚಿತ್ರದ ಗೆಲುವನ್ನು ಆಚರಿಸುವ ಅವಕಾಶ ತೆಲುಗು ಚಿತ್ರರಂಗಕ್ಕೆ ಸಿಕ್ತಿಲ್ಲ. ಅಲ್ಲು ಅರ್ಜುನ್ ಅವರಿಗೆ ನೆಮ್ಮದಿಯ ನಿದ್ದೆಯನ್ನು ಮಾಡಲು ಹೈದ್ರಾಬಾದ್‌ನ ಪೊಲೀಸರು ಮತ್ತು ತೆಲಂಗಾಣ ಸರ್ಕಾರ ಬಿಡುತ್ತಿಲ್ಲ ಇದಕ್ಕೆ ಇನ್ನೊಂದು ಪುರಾವೆ ಎನ್ನುವಂತೆ ಅಲ್ಲು ಅರ್ಜುನ್ ವಿರುದ್ಧ ಈಗ ಎಐಎಂಐಎಂ ಶಾಸಕ ಅಕ್ಬರುದ್ದೀನ್ ಓವೈಸಿ ಮಾತನಾಡಿದ್ದಾರೆ. ಗಂಭೀರವಾದ ಆರೋಪವನ್ನು ಕೂಡ ಮಾಡಿದ್ದಾರೆ.

ಹೌದು, ಪುಷ್ಪ 2 ಚಿತ್ರದ ಪ್ರದರ್ಶನದ ಸಮಯದಲ್ಲಿ ನಡೆದ ಕಾಲ್ತುಳಿತ ಪ್ರಕರಣದ ಕುರಿತು ಇಂದು ತೆಲಂಗಾಣ ವಿಧಾನಸಭೆಯಲ್ಲಿ ಮಾತನಾಡಿರುವ ಅಕ್ಬರುದ್ದೀನ್ ಓವೈಸಿ, ಅಲ್ಲು ಅರ್ಜುನ್ ಅವರ ಹೆಸರನ್ನು ಹೇಳದೇ ವಾಗ್ದಾಳಿಯನ್ನು ಪರೋಕ್ಷವಾಗಿ ನಡೆಸಿದ್ದಾರೆ.
ನಾನು ಆ ಖ್ಯಾತ ಸ್ಟಾರ್ ನ ಹೆಸರು ತೆಗೆದುಕೊಳ್ಳಲು ಇಚ್ಚಿಸುವುದಿಲ್ಲ ಎಂದಿರುವ ಅಕ್ಬರುದ್ದೀನ್ ಓವೈಸಿ ನನಗೆ ಬಂದ ಮಾಹಿತಿಯ ಪ್ರಕಾರ ಆ ಸಿನಿಮಾ ಸ್ಟಾರ್ ಚಿತ್ರಮಂದಿರಕ್ಕೆ ಚಿತ್ರವನ್ನು ನೋಡಲು ಹೋದರು ಕುಳಿತು ಚಿತ್ರವನ್ನು ನೋಡಿದರು. ಆದರೆ ಇದೇ ಸಮಯದಲ್ಲಿ ಅಲ್ಲಿ ಅವಘಡ ನಡೆಯಿತು ಆಗ ಪೊಲೀಸರು ಬಂದು ನಡೆದ ಘಟನೆಯನ್ನು ಹೇಳಿದರು ಎಂದಿದ್ದಾರೆ. ಕಾಲ್ತುಳಿತದಿಂದ ಮಹಿಳೆ ಸಾವನ್ನಪ್ಪಿರುವ ವಿಚಾರ ಮತ್ತು ಆಕೆಯ ಮಗ ಆಸ್ಪತ್ರೆಯಲ್ಲಿ ದಾಖಲಾದ ವಿಚಾರವನ್ನು ತಿಳಿದ ನಂತರ ಕೂಡ ಯಾವುದೇ ಪ್ರಾಯಶ್ಚಿತ ಭಾವ ಇಲ್ಲದೇ ಈ ಚಿತ್ರ ಗ್ಯಾರಂಟಿ ಹಿಟ್ ಆಗುತ್ತೆ ಎಂದು ಆ ಸ್ಟಾರ್ ನಸುನಕ್ಕಿದ್ದರು ಎಂದು ಕಿಡಿ ಕಾರಿದ್ದಾರೆ.
ಇನ್ನೂ ಕಾಲ್ತುಳಿತ ಪ್ರಕರಣದ ಕುರಿತು ವಿಚಾರ ಗೊತ್ತಾದ ಮೇಲೆ ಕೂಡ ಆ ಸ್ಟಾರ್ ನೆಮ್ಮದಿಯಿಂದ ಕುಳಿತು ಚಿತ್ರವನ್ನು ನೋಡಿದ್ದಾರೆ ಎಂದಿರುವ ಅಕ್ಬರುದ್ದೀನ್ ಓವೈಸಿ ಚಿತ್ರ ಮುಗಿದ ನಂತರ ಕೂಡ ಮೃತರ ಕುಟುಂಬದ ಬಳಿ ಆ ಸ್ಟಾರ್ ತೆರಳಲಿಲ್ಲ ಬದಲಿಗೆ ಕೈ ಬೀಸುತ್ತಾ ಚಿತ್ರಮಂದಿರದಿಂದ ಹೊರ ನಡೆದಿದ್ದಾರೆ ಎಂದು ಹೇಳಿದ್ದಾರೆ. ನಾನು ಹೇಳುತ್ತಿರುವುದು ಸರೀನಾ ತಪ್ಪಾ ನೀವೆ ಹೇಳಿ ಎಂದು ಪ್ರಶ್ನೆಯನ್ನು ಕೇಳಿದ್ಧಾರೆ.
ಮುಂದುವರೆದು ಸರ್ಕಾರವನ್ನು ಪ್ರಶ್ನೆ ಮಾಡುವ ಇವರಿಗೆ ಮನುಷ್ಯತ್ವ ಇದೆಯಾ ಎಂದು ಪ್ರಶ್ನೆ ಕೇಳಿರುವ ಅಕ್ಬರುದ್ದೀನ್ ಓವೈಸಿ ನಾನು ರ್ಯಾಲಿಗಳನ್ನು ಮಾಡುತ್ತೇನೆ ನನ್ನ ರ್ಯಾಲಿಯಲ್ಲಿ ಕೂಡ ಹಲವಾರು ಜನ ಬರುತ್ತಾರೆ ಆದರೆ ಅವರ ಪ್ರಾಣಕ್ಕೆ ಹಾನಿಯಾಗದಂತೆ ನಾನು ಕಾಳಜಿಯನ್ನು ವಹಿಸುತ್ತೇನೆ ಎಂದು ಹೇಳಿದ್ದಾರೆ. ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಾ ಚಿತ್ರಮಂದಿರದ ಆವರಣದಲ್ಲಿ ನಡೆದ ಕಾಲ್ತುಳಿತವನ್ನು ಖಂಡಿಸಿದ್ದಾರೆ. ಸ್ಟಾರ್ ಅಂದು ತೋರಿದ ಬೇಜವಾಬ್ಧಾರಿತನವನ್ನು ಪ್ರಶ್ನೆ ಮಾಡಿದ್ದಾರೆ. ತೆಲಂಗಾಣದ ಮುಖ್ಯಮಂತ್ರಿ ರೇವಂತಿ ರೆಡ್ಡಿ ಅವರಿಗೆ ಮುಂದೆ ಈ ವಿಚಾರದ ಕುರಿತು ಮಾತನಾಡಲು ಈ ಮೂಲಕ ಪ್ರೇರೆಪಿಸಿದ್ದಾರೆ.


Click it and Unblock the Notifications











