ಬಾಲಯ್ಯ 'ಅಖಂಡ- 2' ಚಿತ್ರಕ್ಕೆ ಮತ್ತೆ ಶಾಕ್; ಕೋರ್ಟ್‌ನಲ್ಲಿ ಹೊಸ ಪಿಟಿಷನ್ ದಾಖಲು
ನಂದಮೂರಿ ಬಾಲಕೃಷ್ಣ ನಟನೆಯ 'ಅಖಂಡ- 2' ಚಿತ್ರಕ್ಕೆ ಭಾರೀ ವಿಘ್ನಗಳು ಎದುರಾಗ್ತಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಕಳೆದ ವಾರವೇ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ವಿವಾದದಲ್ಲಿ ಸಿಲುಕಿಕೊಂಡ ಚಿತ್ರ ಬಿಡುಗಡೆ ಮಾಡದಂತೆ ಕೋರ್ಟ್ ಆದೇಶ ನೀಡಿತ್ತು. ಹಾಗಾಗಿ ರಿಲೀಸ್ ತಡವಾಗಿತ್ತು. ಸಂಕಷ್ಟದಿಂದ ಪಾರಾಗಿ ಈ ವಾರ ಸಿನಿಮಾ ಬಿಡುಗಡೆ ಆಗಬೇಕಿದೆ.
ಬೋಯಪಾಟಿ ಶ್ರೀನು ನಿರ್ದೇಶನದ ಆಕ್ಷನ್ ಥ್ರಿಲ್ಲರ್ 'ಅಖಂಡ-2' ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. ಈಗಾಗಲೇ ಟ್ರೈಲರ್ ಸಾಂಗ್ ಹಿಟ್ ಆಗಿದೆ. ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದ್ದು ಅಡ್ವಾನ್ಸ್ ಬುಕ್ಕಿಂಗ್ ಕೂಡ ಜೋರಾಗಿದೆ. ಆದರೆ ಟಿಕೆಟ್ ದರ ಹೆಚ್ಚಳ ಹಾಗೂ ಪ್ರೀಮಿಯರ್ ಶೋಗಳನ್ನು ಪ್ರಶ್ನಿಸಿ ಸತೀಶ್ ಕಮಲ್ ಎಂಬುವವರು ಅರ್ಜಿ ಸಲ್ಲಿಸಿದ್ದಾರೆ.

ಡಿಸೆಂಬರ್ 3ರಂದು 'ಅಖಂಡ- 2' ಬಿಡುಗಡೆಗೆ ಮದ್ರಾಸ್ ಕೋರ್ಟ್ ತಡೆ ನೀಡಿತ್ತು. ಬಾಲಿವುಡ್ ನಿರ್ಮಾಣ ಸಂಸ್ಥೆ ಎರೋಸ್ ಇಂಟರ್ನ್ಯಾಷನಲ್ ಚಿತ್ರದ ನಿರ್ಮಾಣ ಕಂಪನಿ 14 ರೀಲ್ಸ್ ಪ್ಲಸ್ ತಮಗೆ ಹಣವನ್ನು ಪಾವತಿಸುವವರೆಗೆ ಚಿತ್ರದ ಬಿಡುಗಡೆಯನ್ನು ಸ್ಥಗಿತಗೊಳಿಸುವಂತೆ ಕೋರ್ಟ್ ಮೆಟ್ಟಿಲೇರಿದ್ದರು. ತೀರ್ಪು ಅವರ ಪರವಾಗಿ ಬಂದು ಸಿನಿಮಾ ಬಿಡುಗಡೆ ರದ್ದಾಗಿತ್ತು. ಸದ್ಯ ಸಮಸ್ಯೆ ಬಗೆಹರಿದು ಸಿನಿಮಾ ಬಿಡುಗಡೆಗೆ ಸಿದ್ಧತೆ ನಡೆದಿದೆ. ಇಂದು(ಡಿಸೆಂಬರ್ 11) ರಾತ್ರಿ ಪ್ರೀಮಿಯರ್ ಶೋಗಳು ಶುರುವಾಗಲಿದೆ. ಆದರೆ ಟಿಕೆಟ್ ದರ ಹೆಚ್ಚಳ ವಿಚಾರ ಈಗ ಚರ್ಚೆಗೆ ಬಂದಿದೆ.
ದೊಡ್ಡ ದೊಡ್ಡ ಸಿನಿಮಾಗಳನ್ನು ಬಿಡುಗಡೆ ಮಾಡುವ ವೇಳೆ ಆಂಧ್ರ, ತೆಲಂಗಾಣ ಸರ್ಕಾರದಿಂದ ಅನುಮತಿ ಪಡೆದು ಟಿಕೆಟ್ ದರ ಹೆಚ್ಚಿಸಲಾಗುತ್ತಿದೆ. ಅದೇ ರೀತಿ 'ಅಖಂಡ- 2' ಚಿತ್ರದ ಟಿಕೆಟ್ ದರ ಹೆಚ್ಚಿಸಲು ಅವಕಾಶ ಸಿಕ್ಕಿದೆ. ತೆಲಂಗಾಣದ ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಲ್ಲಿ 50 ರೂ. ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ 100 ರೂ. ಟಿಕೆಟ್ ದರ ಹೆಚ್ಚಿಸಲು ಅನುಮತಿ ಸಿಕ್ಕಿದೆ. ಪ್ರೀಮಿಯರ್ ಶೋಗಳ ಟಿಕೆಟ್ ದರ 600 ರೂ.ಗೆ ಏರಿಸಬಹುದು ಎಂದು ಅಲ್ಲಿನ ಸರ್ಕಾರ ಹೇಳಿದೆ. ಇದಕ್ಕೆ ವಿರೋಧ ವ್ಯಕ್ತವಾಗ್ತಿದೆ.
'ಅಖಂಡ'-2 ಟಿಕೆಟ್ ದರ ಹೆಚ್ಚಳ ಆದೇಶ ಹಿಂಪಡೆಯಬೇಕು ಹಾಗೂ ಪ್ರೀಮಿಯರ್ ಶೋ ರದ್ದು ಮಾಡಬೇಕು ಎಂದು ಸತೀಶ್ ಕಮಲ್ ಎಂಬ ವ್ಯಕ್ತಿ ತೆಲಂಗಾಣ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಕೆಲವೇ ನಿಮಿಷಗಳಲ್ಲಿ ಈ ಅರ್ಜಿಯ ವಿಚಾರಣೆ ನಡೆಯಲಿದೆ. ವಿಚಾರಣೆ ಬಳಿಕ ನ್ಯಾಯಾಲಯ ಯಾವ ತೀರ್ಮಾನಕ್ಕೆ ಬರುತ್ತದೆ ಎಂದು ಕಾದು ನೋಡಬೇಕಿದೆ. 3 ವರ್ಷಗಳ ಹಿಂದೆ ಬಂದಿದ್ದ 'ಅಖಂಡ' ಸಿನಿಮಾ ಗೆದ್ದಿತ್ತು. ಹಾಗಾಗಿ ಸೀಕ್ವೆಲ್ ಬಗ್ಗೆ ನಿರೀಕ್ಷೆ ಹೆಚ್ಚಿದೆ.
ಚಿತ್ರದಲ್ಲಿ ಬಾಲಯ್ಯ ದ್ವಿಪಾತ್ರದಲ್ಲಿ ಅಬ್ಬರಿಸಿದ್ದಾರೆ. ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಿದೆ. ಚಿತ್ರಕ್ಕಾಗಿ ಬಾಲಕೃಷ್ಣ 40 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗ್ತಿದೆ. ಹೈದರಾಬಾದ್, ಕಾಶ್ಮೀರ, ತ್ರಿವೇಣಿ ಸಂಗಮದ ಕುಂಭಮೇಳದಲ್ಲಿ ಕೂಡ ಚಿತ್ರದ ಚಿತ್ರೀಕರಣ ಮಾಡಿದ್ದಾರೆ. ಸಂಯುಕ್ತಾ, ಆದಿ ಪಿನಿಶೆಟ್ಟಿ, ಜಗಪತಿ ಬಾಬು, ಕಬೀರ್ ದುಹಾನ್ ಸಿಂಗ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಚಿತ್ರಕ್ಕೆ ಎಸ್. ತಮನ್ ಸಂಗೀತ ಸಂಯೋಜನೆ ಮಾಡಿದ್ದಾರೆ.
ಚಿಕ್ಕಬಳ್ಳಾಪುರದ ಬಳಿ 'ಅಖಂಡ'-2 ಚಿತ್ರದ ಟ್ರೈಲರ್ ರಿಲೀಸ್ ಕಾರ್ಯಕ್ರಮ ನಡೆದಿತ್ತು. ಕನ್ನಡ ನಟ ಶಿವರಾಜ್‌ಕುಮಾರ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಹೋಗಿ ಚಿತ್ರಕ್ಕೆ ಶುಭ ಕೋರಿದ್ದರು. ಕನ್ನಡಕ್ಕೂ ಡಬ್ ಆಗಿ ಸಿನಿಮಾ ಬಿಡುಗಡೆ ಆಗಲಿದೆ. ತೆರೆಮೇಲೆ ಬಾಲಯ್ಯ ಆರ್ಭಟ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.


Click it and Unblock the Notifications











