'ಕಲ್ಕಿ' ಸೀಕ್ವೆಲ್‌ನಿಂದ ದೀಪಿಕಾ ಹೊರಕ್ಕೆ; ಆ ಪಾತ್ರಕ್ಕೆ ಮತ್ತೊಬ್ಬ ಚೆಲುವೆ ಆಯ್ಕೆ!
ಪ್ರಭಾಸ್ ನಟನೆಯ 'ಕಲ್ಕಿ 2898AD' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಸದ್ಯ ಸೀಕ್ವೆಲ್ ಕೆಲಸಗಳು ಆರಂಭವಾಗಲಿದೆ. ಶೀಘ್ರದಲ್ಲೇ ಚಿತ್ರೀಕರಣ ಕೂಡ ಶುರುವಾಗಬೇಕಿದೆ. ಅಷ್ಟರಲ್ಲಿ ನಟಿ ದೀಪಿಕಾ ಪಡುಕೋಣೆ ಹೊರ ಬಂದಿದ್ದರು. ಕೆಲ ಭಿನ್ನಾಭಿಪ್ರಾಯಗಳಿಂದ ಆಕೆಗೆ ಚಿತ್ರತಂಡ ಕೊಕ್ ಕೊಟ್ಟಿದೆ. ಅಧಿಕೃತವಾಗಿ ಈ ಬಗ್ಗೆ ಸ್ಪಷ್ಟನೆ ಸಿಕ್ಕಿದೆ.
ದೀಪಿಕಾ ಪಡುಕೋಣೆ ಇಟ್ಟ ಷರತ್ತುಗಳಿಗೆ ಕಲ್ಕಿ ಚಿತ್ರತಂಡ ಶಾಕ್ ಆಗಿತ್ತು. ಹಾಗಾಗಿ ಚಿತ್ರದಿಂದ ಆಕೆಯನ್ನು ಕೈಬಿಡಲು ಚಿತ್ರತಂಡ ನಿರ್ಧರಿಸಿದೆ ಎನ್ನಲಾಗಿತ್ತು. ಆದರೆ ಆ ಷರತ್ತುಗಳು ಏನು ಎನ್ನುವ ಬಗ್ಗೆ ಖಚಿತ ಮಾಹಿತಿ ಸಿಗಲಿಲ್ಲ. ಒಂದು ಮಗುವಿನ ತಾಯಿಯಾಗಿರುವ ಕಾರಣ ದಿನಕ್ಕೆ 8 ಗಂಟೆ ಮಾತ್ರ ನಟಿಸುತ್ತೇನೆ ಎಂದು ದೀಪಿಕಾ ಹೇಳಿದ್ದಾರೆ, ಸಾಲದಕ್ಕೆ ಹೆಚ್ಚು ಸಂಭಾವನೆ ಕೇಳುತ್ತಿದ್ದಾರೆ. ಇದು ಚಿತ್ರತಂಡಕ್ಕೆ ಇಷ್ಟವಾಗಲಿಲ್ಲ ಎನ್ನಲಾಗ್ತಿದೆ.

ಸದ್ಯ ದೀಪಿಕಾ ಪಡುಕೋಣೆ ಮಾಡಿದ್ದ ಪಾತ್ರವನ್ನು ಸೀಕ್ವೆಲ್‌ನಲ್ಲಿ ಆಲಿಯಾ ಭಟ್ ಮಾಡುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಲಭ್ಯವಿಲ್ಲ. ಅಮಿತಾಬ್ ಬಚ್ಚನ್, ಕಮಲ್ ಹಾಸನ್ ಸೇರಿ ದೊಡ್ಡ ತಾರಾಗಣ 'ಕಲ್ಕಿ' ಸರಣಿ ಸಿನಿಮಾಗಳಲ್ಲಿ ಇದೆ. ಶೀಘ್ರದಲ್ಲೇ ಕಮಲ್ ಹಾಸನ್ ಚಿತ್ರೀಕರಣದಲ್ಲಿ ಭಾಗಿ ಆಗುತ್ತಾರೆ ಎನ್ನುವ ಚರ್ಚೆ ಶುರುವಾಗಿದೆ. ಕಮಲ್ ಜೊತೆಗೆ ದೀಪಿಕಾ ನಟಿಸಬೇಕಿದ್ದ ದೃಶ್ಯಗಳನ್ನು ಸೆರೆಹಿಡಿಯಲು ನಾಗ್ ಅಶ್ವಿನ್ ಮುಂದಾಗಿದ್ದರು. ಅದಕ್ಕಾಗಿ ದೀಪಿಕಾ ಕಾಲ್‌ಶೀಟ್ ಕೇಳಿದ್ದಕ್ಕೆ ಇಷ್ಟೆಲ್ಲಾ ಕಿರಿಕ್ ಆಗಿದೆ ಎಂದು ಹೇಳಲಾಗ್ತಿದೆ.
'ಕಲ್ಕಿ 2898AD' ಚಿತ್ರದಲ್ಲಿ SUM-80 ಅಲಿಯಾಸ್ ಸುಮತಿ ಪಾತ್ರದಲ್ಲಿ ದೀಪಿಕಾ ನಟಿಸಿದ್ದರು. ಕೆಲವೇ ಸನ್ನಿವೇಶಗಳಲ್ಲಿ ಕಾಣಿಸಿಕೊಂಡಿದ್ದರೂ ಆ ಪಾತ್ರಕ್ಕೆ ಹೆಚ್ಚಿನ ಮಹತ್ವ ಇತ್ತು. ಚಿತ್ರದಲ್ಲಿ ಗರ್ಭಿಣಿಯಾಗಿ ಕಾಣಿಸಿಕೊಂಡಿದ್ದರು. ತಾವು ನಿಜಜೀವನದಲ್ಲಿ ಗರ್ಭಿಣಿಯಾಗಿದ್ದರೂ ಚಿತ್ರದ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗಿ ಆಗಿದ್ದರು. ಹೆಣ್ಣು ಮಗುವಿಗೆ ಡಿಪ್ಪಿ ಜನ್ಮ ನೀಡಿದ್ದರು.

ಚಿತ್ರದಿಂದ ಹೊರ ಬಂದ ಬಗ್ಗೆ ದೀಪಿಕಾ ನೇರವಾಗಿ ಮಾತನಾಡಲಿಲ್ಲ. ಕೆಲ ದಿನಗಳ ಹಿಂದೆ 'ಕಿಂಗ್' ಸಿನಿಮಾ ಚಿತ್ರೀಕರಣಕ್ಕೆ ಹಾಜರಾಗುವ ವೇಳೆ ಪರೋಕ್ಷವಾಗಿ ಈ ಬಗ್ಗೆ ಪೋಸ್ಟ್ ಮಾಡಿದ್ದರು. "ಯಾವುದೇ ಚಿತ್ರದಲ್ಲಿ ನಟಿಸುವ ಅನುಭವ ಹಾಗೂ ನೀವು ಯಾರ ಜೊತೆ ನಟಿಸುತ್ತಿದ್ದೀನಿ ಎನ್ನುವುದು ಅದರ ಯಶಸ್ಸಿಗಿಂತಲೂ ಮುಖ್ಯ. 18 ವರ್ಷಗಳ ಹಿಂದೆ 'ಓಂ ಶಾಂತಿ ಓಂ' ಚಿತ್ರೀಕರಣದ ಸಮಯದಲ್ಲಿ ಅವರು (ಶಾರುಖ್ ಖಾನ್) ನನಗೆ ಕಲಿಸಿದ ಮೊದಲ ಪಾಠ ಇದು. ಅಂದಿನಿಂದ ನಾನು ತೆಗೆದುಕೊಂಡ ಪ್ರತಿಯೊಂದು ನಿರ್ಧಾರಕ್ಕೂ ಆ ಕಲಿಕೆ ಅನ್ವಯಿಸಿದ್ದೇನೆ. ಅದೇ ಕಾರಣಕ್ಕೆ ಇರಬೇಕು, ನಾವು 6ನೇ ಸಿನಿಮಾದಲ್ಲಿ ಒಟ್ಟಿಗೆ ನಟಿಸುತ್ತಿದ್ದೇವೆ ಎನಿಸುತ್ತದೆ" ಎಂದು ಬರೆದುಕೊಂಡಿದ್ದರು.
ಆಲಿಯಾ ಭಟ್ ಕೂಡ ಮಗಳ ಲಾಲನೆ ಪಾಲನೆಯಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಹಾಗಾಗಿ ಹೆಚ್ಚು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. 'ಕಲ್ಕಿ' ಸರಣಿಯ 2ನೇ ಸಿನಿಮಾದಲ್ಲಿ ದೀಪಿಕಾ ಜಾಗವನ್ನು ಆಲಿಯಾ ತುಂಬುತ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಈ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ಬಾಲಿವುಡ್ ಬಿಟ್ಟರೆ ದಕ್ಷಿಣದಲ್ಲಿ ಆಲಿಯಾ ಭಟ್ ನಟಿಸಿರುವುದು ಕಮ್ಮಿ. 'RRR' ಚಿತ್ರದ ಸಣ್ಣ ಪಾತ್ರದಲ್ಲಿ ಮಾತ್ರ ಮಿಂಚಿದ್ದರು.
ವೈಜಯಂತಿ ಮೂವೀಸ್ ಬ್ಯಾನರ್ ಅಡಿಯಲ್ಲಿ 'ಕಲ್ಕಿ' ಸರಣಿ ಸಿನಿಮಾಗಳು ನಿರ್ಮಾಣವಾಗ್ತಿವೆ. ಮೊದಲ ಭಾಗ 1000 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದು ಸೀಕ್ವೆಲ್ ಮೇಲೆ ನಿರೀಕ್ಷೆ ಹೆಚ್ಚಿದೆ. ಸಿನಿಮಾ ತೆರೆಗೆ ಬರಲು ಇನ್ನು 2 ವರ್ಷ ಬೇಕಾಗಬಹುದು. ಪ್ರಭಾಸ್ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.


Click it and Unblock the Notifications











