ರಾಜಮೌಳಿ ಚಿತ್ರಕ್ಕೆ ದಾರಿ ಬಿಟ್ಟ ಸಂಜಯ್‌ಲೀಲಾ ಬನ್ಸಾಲಿ ಚಿತ್ರ!
ನಟಿ ಆಲಿಯಾ ಭಟ್ ಎರಡು ದೊಡ್ಡ ಸಿನಿಮಾಗಳ ಮೂಲಕ ಬೆಳ್ಳಿ ಪದರೆ ಮೇಲೆ ಅಬ್ಬರಿಸಲು ಬರ್ತಿದ್ದಾರೆ. ಸದ್ಯ ಆಲಿಯಾ ಭಟ್ ಅಭಿನಯದ ಮುಂದಿನ ಸಿನಿಮಾ 'ಗಂಗೂಬಾಯಿ ಕಥಿಯಾವಾಡಿ' ರಿಲೀಸ್ ಮುಂದೆ ಹೋಗಿದೆ. ಇದು ಬಾಲಿವುಡ್‌ನ ಬಹು ನಿರೀಕ್ಷೆಯ ಸಿನಿಮಾಗಳಲ್ಲಿ ಒಂದು. ಈ ಚಿತ್ರವನ್ನು ಹೆಸರಾಂತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಮಾಡಿದ್ದಾರೆ. 'ಗಂಗೂಬಾಯಿ ಕಥಿಯಾವಾಡಿ' ಸಿನಿಮಾ ರಿಲೀಸ್‌ಗೆ ರೆಡಿಯಾಗಿ ಸಾಕಷ್ಟು ದಿನಗಳು ಕಳೆದಿವೆ. ಜೊತೆಗೆ ಹಲವು ಬಾರಿ ಚಿತ್ರದ ರಿಲೀಸ್ ಡೇಟ್ ಬದಲಾಯಿಸಲಾದೆ. ಕಳೆದ ವರ್ಷವೇ ಸಿನಿಮಾ ತೆರೆಗೆ ಬರಬೇಕಿತ್ತು. ಕೊರೊನಾ ಕಾರಣದಿಂದಾಗಿ ಚಿತ್ರದ ರಿಲೀಸ್ ಡೇಟ್ ಮುಂದೂಡಲಾಗಿತ್ತು. ಆದರೆ ಕೊರೊನಾ ಹಾವಳಿ ಕುಗ್ಗುತ್ತಾ ಇದ್ದ ಹಾಗೆ ಚಿತ್ರರಂಗ ಗರಿಗೆದರಿದೆ. ಹಾಗಾಗಿ ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ 2022 ಜನವರಿ 6ರಂದು 'ಗಂಗೂಬಾಯಿ ಕಥಿಯಾವಾಡಿ' ಸಿನಿಮಾ ರಿಲೀಸ್ ಮಾಡಲು ಆಯ್ಕೆ ಮಾಡಿದ್ದರು. ಆದರೆ ಈಗ ಈ ಚಿತ್ರದ ರಿಲೀಸ್ ದಿನಾಂಕ ಮತ್ತೆ ಬದಲಾಗಿದೆ.
ಆಲಿಯಾ ಭಟ್ ಅಭಿನಯದ ಈ ಸಿನಿಮಾ ಇನ್ನೂ ಒಂದು ತಿಂಗಳು ಮುಂದೆ ಹೋಗಿದೆ. ಇದಕ್ಕೆ ಕಾರಣ ದಕ್ಷಿಣ ಭಾರತದ ಬಹುದೊಡ್ಡ ಸಿನಿಮಾ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ವಿಶ್ವಮಟ್ಟದಲ್ಲಿ ಸದ್ದು ಮಾಡಲು ಸಿದ್ಧವಾಗಿದೆ. ಈ ಸಿನಿಮಾಗಾಗಿ ವಿಶ್ವದಾದ್ಯಂತ ಪ್ರೇಕ್ಷಕರು ಕಾದು ಕುಳಿತಿದ್ದಾರೆ. ಈ ಸಿನಿಮಾ ಸಹ 2022ರ ಜನವರಿ 6 ಬಿಡುಗಡೆ ಆಗಲಿದೆ. ಗಂಗೂಬಾಯಿ ಚಿತ್ರದ ರಿಲೀಸ್ ಡೇಟ್ ಪ್ರಕಟಿಸಿದ ಆದ ಬಳಿಕ ತ್ರಿಬಲ್ ಆರ್ ಚಿತ್ರ ತಂಡ 2022 ಜನವರಿ 6ರಂದು ಚಿತ್ರವನ್ನು ರಿಲೀಸ್ ಮಾಡುವ ಬಗ್ಗೆ ಹೇಳಿಕೊಂಡಿದೆ. ಆದರೆ ಅತ್ತ ಬಾಲಿವುಡ್ ನ ನಿರೀಕ್ಷೆಯ ಸಿನಿಮಾ ಗಂಗೂಬಾಯಿ ಒಂದು ಕಡೆಯಾದರೆ. ಇತ್ತ ತ್ರಿಬಲ್ ಆರ್ ಸಿನಿಮಾ ಮತ್ತೊಂದು ಕಡೆ. ಎರಡು ಚಿತ್ರಗಳು ಒಂದೇ ದಿನಾಂಕಕ್ಕೆ ರಿಲೀಸ್ ಆದರೆ ಆಲಿಯಾ ಭಟ್ ಗಂಗೂಬಾಯಿ ಚಿತ್ರಕ್ಕೆ ಕೊಂಚ ಹೊಡೆತ ಬೀಳುವ ಸಾಧ್ಯತೆ ಇದೆ.
ತ್ರಿಬಲ್ ಆರ್ ಸಿನಿಮಾ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಸುವುದರ ಜೊತೆಗೆ ಬಹು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಈ ಚಿತ್ರ ಹಿಂದಿಯಲ್ಲೂ ಕೂಡ ರಿಲೀಸ್ ಆಗಿ ಅಲ್ಲಿನ ಪ್ರೇಕ್ಷಕರಿಗೆ ರಸದೌತಣ ಬಡಿಸುವುದಕ್ಕೆ ರೆಡಿಯಾಗಿದೆ. ಇನ್ನು ಎರಡೂ ಸಿನಿಮಾಗಳ ಆಳ ಅಗಲ ಬೇರೆ, ಬೇರೆ ಆದರೂ ಒಟ್ಟಿಗೆ ರಿಲೀಸ್ ಅದರೆ ತೊಡಕುಗಳು ಎದುರಾಗುವುದು ಖಚಿತ. ಹಾಗಾಗಿ ಗಂಗೂಬಾಯಿ ಚಿತ್ರ ತ್ರಿಬಲ್ ಆರ್ ಸಿನಿಮಾದೊಂದಿಗೆ ಸ್ಪರ್ಧೆಗಿಳಿಯುವುದು ಅಷ್ಟು ಸೂಕ್ತವಲ್ಲ ಎನ್ನುವ ಲೆಕ್ಕಾಚಾರದೊಂದಿಗೆ ದಿನಾಂಕ ಮುಂದೂಡಲಾಗಿದೆ.

'ಗಂಗೂಬಾಯಿ ಕಾಥಿಯಾವಾಡಿ' ಚಿತ್ರ 2022 ಫೆಬ್ರವರಿ 18ರಂದು ತೆರೆಗೆ ಬರಲಿದೆ. ಇದೇ ದಿನಾಂಕವನ್ನು ಚಿತ್ರ ತಂಡ ಅಧಿಕೃತಗೊಳಿಸಿದೆ. ಇನ್ನು ಈ ವಿಚಾರವಾಗಿ ನಿರ್ದೇಶಕ ರಾಜಮೌಳಿ 'ಗಂಗೂಬಾಯಿ ಕಾಥಿಯಾವಾಡಿ' ಚಿತ್ರತಂಡಕ್ಕೆ ಧನ್ಯವಾದವನ್ನು ತಿಳಿಸಿದ್ದಾರೆ. ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರು ತೆಗೆದುಕೊಂಡಿರುವ ನಿರ್ಧಾರಕ್ಕೆ ಧನ್ಯವಾದಗಳು ಎಂದು ರಾಜಮೌಳಿ ಟ್ವೀಟ್ ಮಾಡಿದ್ದಾರೆ. ಜೊತೆಗೆ ಗಂಗೂಬಾಯಿ ಚಿತ್ರಕ್ಕೂ ಶುಭಕೋರಿದ್ದಾರೆ.

ಇನ್ನು ಮತ್ತೊಂದು ವಿಶೇಷ ಅಂದರೆ ಆಲಿಯಾ ಭಟ್ ಈ ಎರಡೂ ಸಿನಿಮಾದ ಪ್ರಮುಖ ಪಾತ್ರಧಾರಿ. ಆಲಿಯಾ ಭಟ್ ಪ್ರಮುಖ ಪಾತ್ರದಲ್ಲಿರುವ 2 ಸಿನಿಮಾಗಳು ಒಂದೇ ದಿನ ತೆರೆಗೆ ಬಂದರೆ ಅದು ಆಲಿಯಾಗು ಕೂಡ ಹಿನ್ನೆಡೆ ಆಗುವ ಸಾಧ್ಯತೆ ಇದೆ. ತ್ರಿಬಲ್ ಆರ್ ಸಿನಿಮಾದಲ್ಲಿ ಸೀತೆಯಾಗಿ ಕಾಣಿಸಿಕೊಂಡಿರುವ ಆಲಿಯಾ ಭಟ್, 'ಗಂಗೂಬಾಯಿ ಕಥಿಯಾವಾಡಿ' ಸಿನಿಮಾದಲ್ಲಿ ಗಂಗೂಬಾಯಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಖ್ಯಾತ ಬರಹಗಾರ ಹುಸೇನ್ ಝೈದಿ ಅವರ 'ಮಾಫಿಯಾ ಕ್ವೀನ್ಸ್ ಆಫ್ ಮುಂಬೈ' ಎನ್ನುವ ಪುಸ್ತಕದಿಂದ ಈ ಕಥೆಯನ್ನು ಬನ್ಸಾಲಿ ಆಯ್ಕೆ ಮಾಡಿಕೊಂಡಿದ್ದಾರೆ. ಇಲ್ಲಿ ಆಲಿಯಾ ಭಟ್ ಗಂಗೂಬಾಯಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸದ್ಯ ಆಲಿಯಾ ಭಟ್ ಅಭಿನಯದ ಮಹತ್ತರ 2 ಸಿನಿಮಾಗಳು ಒಂದು ತಿಂಗಳ ಅಂತರದಲ್ಲಿ ತೆರೆಗೆ ಬರುತ್ತಿದೆ. ಜನವರಿಯಲ್ಲಿ ಆರ್ ಆರ್ ಆರ್ ಸಿನಿಮಾದಲ್ಲಿ ಸೀತೆ ಆಗಿ ಕಾಣಿಸಿಕೊಂಡರೆ. ಫೆಬ್ರವರಿಯಲ್ಲಿ ಗಂಗೂಬಾಯಿ ಆಗಿ ಅಬ್ಬರಿಸಲಿದ್ದಾರೆ.


Click it and Unblock the Notifications











