ಅಲ್ಲು ಅರ್ಜುನ್- ರಾಮ್‌ಚರಣ್ ಮಲ್ಟಿಸ್ಟಾರರ್‌ಗೆ ಅಲ್ಲು ಅರವಿಂದ್ ಪ್ಲ್ಯಾನ್: ಸಿನಿಮಾ ಟೈಟಲ್ ಕೇಳಿ ಥ್ರಿಲ್ಲಾದ ಫ್ಯಾನ್ಸ್!
ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ಮೆಗಾ ಪವರ್ ಸ್ಟಾರ್ ರಾಮ್‌ಚರಣ್ ತೇಜಾಗೆ ದೊಡ್ಡ ಅಭಿಮಾನಿಗಳ ಬಳಗ ಇದೆ. 'ಪುಷ್ಪ' ಮತ್ತು 'RRR' ಸಕ್ಸಸ್ ನಂತರ ಇಬ್ಬರು ಪ್ಯಾನ್ ಇಂಡಿಯಾ ಸ್ಟಾರ್‌ಗಳಾಗಿ ಮಿಂಚು ತ್ತಿದ್ದಾರೆ. ಇವರಿಬ್ಬರು ಒಂದೇ ಸಿನಿಮಾದಲ್ಲಿ ನಟಿಸಿದರೆ ಹೇಗಿರುತ್ತೆ? ಈ ಸುದ್ದಿ ಕೇಳಿಯೇ ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ. ಆದರೆ ಇಂತಾದೊಂದು ಮಲ್ಟಿಸ್ಟಾರರ್ ಚಿತ್ರಕ್ಕೆ ಖುದ್ದು ಅಲ್ಲು ಅರ್ಜುನ್ ತಂದೆ ನಿರ್ಮಾಪಕ ಅಲ್ಲು ಅರವಿಂದ್ ಮನಸ್ಸು ಮಾಡಿದ್ದಾರೆ.
ಈ ಹಿಂದೆ 'ಯವಡು' ಚಿತ್ರದಲ್ಲಿ ಅಲ್ಲು ಅರ್ಜುನ್ ಹಾಗೂ ರಾಮ್‌ಚರಣ್ ಒಟ್ಟಿಗೆ ನಟಿಸಿದ್ದರು. ವಂಶಿ ಪೈಡಿಪಲ್ಲಿ ನಿರ್ದೇಶನದ ಆ ಚಿತ್ರದಲ್ಲಿ ಬನ್ನಿ ಗೆಸ್ಟ್ ಅಪಿಯರೆನ್ಸ್ ಮಾಡಿದ್ದರು. ಒಂದೇ ಸಿನಿಮಾದಲ್ಲಿ ನಟಿಸಿದರೂ ಕೂಡ ಇಬ್ಬರಿಗೂ ಒಟ್ಟಿಗೆ ತೆರೆ ಹಂಚಿಕೊಳ್ಳುವ ಅವಕಾಶ ಸಿಕ್ಕಿರಲಿಲ್ಲ. 'ಮಗಧೀರ', 'ಸರೈನೋಡು', 'ಧ್ರುವ', 'ಅಲಾ ವೈಕುಂಠಪುರಂಲೋ' ರೀತಿಯ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಿಸಿದ ಅಲ್ಲು ಅರವಿಂದ್ ಸದ್ಯ ಬಾಲಿವುಡ್ ಪ್ರಾಜೆಕ್ಟ್‌ಗಳಿಗೂ ಕೈ ಹಾಕಿದ್ದಾರೆ. ಆದರೆ ಕಳೆದ 10 ವರ್ಷಗಳಿಂದ ಅಲ್ಲು ಅರ್ಜುನ್ ಹಾಗೂ ರಾಮ್‌ಚರಣ್ ಮಲ್ಟಿಸ್ಟಾರರ್ ಸಿನಿಮಾ ಮಾಡಲು ಪ್ರಯತ್ನದಲ್ಲಿದ್ದಾರೆ.
ಟಾಲಿವುಡ್ ಸೂಪರ್ ಸ್ಟಾರ್‌ಗಳಿಬ್ಬರನ್ನು ಒಟ್ಟಿಗೆ ಸೇರಿಸಿ ಸಿನಿಮಾ ಮಾಡುವ ಬಗ್ಗೆ ಸ್ವತಃ ಅಲ್ಲು ಅರವಿಂದ್ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಕಳೆದ 10 ವರ್ಷಗಳಿಂದ ಇಂತಾದೊಂದು ಆಸೆ ಇದೆ. ನಮ್ಮದೇ ಗೀತಾ ಆರ್ಟ್ಸ್ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣ ಮಾಡುತ್ತೇನೆ ಎಂದು ಹೇಳಿದ್ದಾರೆ.

'ಚರಣ್ ಅರ್ಜುನ್' ಟೈಟಲ್ ರಿಜಿಸ್ಟರ್
ಅಲ್ಲು ಅರ್ಜುನ್ ಹಾಗೂ ರಾಮ್‌ಚರಣ್ ಮಲ್ಟಿಸ್ಟಾರರ್ ಚಿತ್ರಕ್ಕೆ 'ಚರಣ್ ಅರ್ಜುನ್' ಎನ್ನುವ ಟೈಟಲ್‌ನ ಕೂಡ ಫೈನಲ್ ಮಾಡಿದ್ದಾರೆ. "10 ವರ್ಷಗಳ ಹಿಂದೆಯೇ ಫಿಲ್ಮ್ ಚೇಂಬರ್‌ನಲ್ಲಿ ಈ ಟೈಟಲ್ ರಿಜಿಸ್ಟರ್ ಮಾಡಿಸಿದ್ದೀನಿ. ಪ್ರತಿ ವರ್ಷ ಅದನ್ನು ರಿನೀವಲ್ ಮಾಡಿಸುತ್ತಿದ್ದೀನಿ, ಒಂದಲ್ಲ ಒಂದು ದಿನ ಈ ಪ್ರಾಜೆಕ್ಟ್ ಶುರುವಾಗುತ್ತದೆ ಎನ್ನುವ ನಿರೀಕ್ಷೆಯಲ್ಲಿ ಕಾಯುತ್ತಿದ್ದೇನೆ" ಎಂದು ಅಲ್ಲು ಅರವಿಂದ್ ಹೇಳಿದ್ದಾರೆ. ಅಭಿಮಾನಿಗಳು 'ಚರಣ್ ಅರ್ಜುನ್' ಟೈಟಲ್ ಸೂಪರ್ ಎನ್ನುತ್ತಿದ್ದು, ಆದಷ್ಟು ಬೇಗ ಈ ಸಿನಿಮಾ ಸೆಟ್ಟೇರಲಿ ಎಂದು ಹಾರೈಸುತ್ತಿದ್ದಾರೆ.

'ರಾಮಾಯಣ' ಚಿತ್ರಕ್ಕಾಗಿ ಪ್ರಯತ್ನ ನಡೀತಿದೆ
ಈಗಾಗಲೇ ಮಧು ಮಂತೇನಾ ಜೊತೆಗೂಡಿ ಅಲ್ಲು ಅರವಿಂದ್ ಮಹಾಭಾರತ ವೆಬ್ ಸೀರಿಸ್ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಈ ಪ್ರಾಜೆಕ್ಟ್ ಸಿದ್ಧವಾಗ್ತಿದೆ. ಡಿಸ್ನಿ ಹಾಟ್‌ಸ್ಟರ್‌ನಲ್ಲಿ ಇದು ಸ್ಟ್ರೀಮಿಂಗ್ ಆಗಲಿದೆ. ಇನ್ನು ಮಹಾಭಾರತ ವೆಬ್ ಸೀರಿಸ್ ಜೊತೆಗೆ ರಾಮಾಯಣ ಕಾವ್ಯ ಆಧರಿಸಿ ಸಿನಿಮಾ ನಿರ್ಮಾಣಕ್ಕೂ ಅಲ್ಲು ಅರವಿಂದ್ ತಯಾರಿ ನಡೆಸುತ್ತಿದ್ದಾರೆ. ಕಳೆದ 3 ವರ್ಷಗಳಿಂದ ಈ ಬಗ್ಗೆ ಚರ್ಚೆ ನಡೀತಿದ್ದು, ಕಳೆದೊಂದು ವರ್ಷದಿಂದ ಪ್ರೀ ಪ್ರೊಡಕ್ಷನ್ ಶುರುವಾಗಿದೆ. ಇನ್ನೊಂದು ವರ್ಷದಲ್ಲಿ ಸಿನಿಮಾ ಶುರುವಾಗಲಿದೆ. ಇದು ಭಾರತೀಯ ಚಿತ್ರರಂಗದಲ್ಲೇ ಅತಿ ಹೆಚ್ಚು ಬಜೆಟ್ ಸಿನಿಮಾ ಆಗುತ್ತೆ ಎಂದಿದ್ದಾರೆ.

'ಗೀತಾ ಆರ್ಟ್ಸ್ ಬ್ಯಾನರ್'ನ ಗೀತಾ ಯಾರು?
ಅಲ್ಲು ಅರವಿಂದ್ 'ಗೀತಾ ಆರ್ಟ್ಸ್' ಬ್ಯಾನರ್‌ನಲ್ಲಿ 45 ವರ್ಷಗಳಿಂದ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಾ ಬರ್ತಿದ್ದಾರೆ. ತೆಲುಗು ಮಾತ್ರವಲ್ಲದೇ ಕನ್ನಡ, ಹಿಂದಿ, ತಮಿಳು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಅವರ ಕುಟುಂಬದಲ್ಲಿ ಗೀತಾ ಹೆಸರಿನವರು ಯಾರು ಇಲ್ಲ. ಆದರೂ ಬ್ಯಾನರ್‌ಗೆ ಈ ಹೆಸರು ಹೇಗೆ ಬಂತು ಎನ್ನುವ ಪ್ರಶ್ನೆಗೆ ಅಲ್ಲು ಅರವಿಂದ್ ಉತ್ತರಿಸಿದ್ದಾರೆ. ಅಲ್ಲು ಅರವಿಂದ್ ತಂದೆ ಅಲ್ಲು ರಾಮಲಿಂಗಯ್ಯ ತೆಲುಗು ಸಿನಿಮಾ ಹಾಸ್ಯ ನಟರಾಗಿ ಸಕ್ಸಸ್ ಕಂಡಿದ್ದರು. ಅವರು ಭಗವದ್ಗೀತೆ ಓದುತ್ತಿದ್ದರಂತೆ. "ಗೀತೆಯಲ್ಲಿ ಕರ್ಮವನ್ನು ನೀನು ಮಾಡು, ಅದರ ಫಲಾಫಲ ದೇವರಿಗೆ ಬಿಟ್ಟಿದ್ದು ಎಂದು ಕೃಷ್ಣ ಹೇಳುತ್ತಾನೆ. ಅದೇ ರೀತಿ ಸಿನಿಮಾ ಮಾಡುವುದು ಮಾತ್ರ ನಮ್ಮ ಕೈಯಲ್ಲಿದೆ, ಗೆಲ್ಲಿಸುವುದು ಪ್ರೇಕ್ಷಕರಿಗೆ ಬಿಟ್ಟದ್ದು ಎಂದು ಈ ಟೈಟಲ್ ಹೇಳಿದರು. ಹಾಗಾಗಿ ಗೀತಾ ಆರ್ಟ್ಸ್ ಹೆಸರಿನಲ್ಲಿ ಬ್ಯಾನರ್ ಶುರುವಾಯಿತು. ಇನ್ನು ನಾನು ಓದುವ ಸಮಯದಲ್ಲಿ ನನಗೆ ಗೀತಾ ಎನ್ನುವ ಗರ್ಲ್‌ಫ್ರೆಂಡ್ ಇದ್ದಳು. ಹಾಗಾಗಿ ಸ್ನೇಹಿತರು ಈ ಹೆಸರು ಬಹಳ ರೇಗಿಸುತ್ತಿದ್ದರು" ಎಂದು ನಕ್ಕಿದ್ದಾರೆ.

'ಕಾಂತಾರ' ಚಿತ್ರದಿಂದ ಭರ್ಜರಿ ಲಾಭ
ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರೋ 'ಕಾಂತಾರ' ಸಿನಿಮಾ ತೆಲುಗಿಗೂ ಡಬ್ ಆಗಿ ಭರ್ಜರಿ ಸದ್ದು ಮಾಡ್ತಿದೆ. ವಿಶೇಷ ಅಂದರೆ ಈ ಚಿತ್ರದ ತೆಲುಗು ವಿತರಣೆ ರೈಟ್ಸ್ ಅಲ್ಲು ಅರವಿಂದ್ ಪಾಲಾಗಿದೆ. ಬಹಳ ಕಡಿಮೆ ಮೊತ್ತಕ್ಕೆ ರೈಟ್ಸ್ ಖರೀದಿಸಿದ್ದು, ಸಿನಿಮಾ ಈಗಾಗಲೇ 13 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿರುವ ಅಂದಾಜಿದೆ. ಹಾಗಾಗಿ ವಿತರಕರಾದ ಅಲ್ಲು ಅರವಿಂದ್‌ಗೆ ಸಿನಿಮಾ ಭಾರೀ ಲಾಭ ತಂದಿದೆ.


Click it and Unblock the Notifications











