"ರಶ್ಮಿಕಾಳಂತಹ ಮಗಳು ನನಗೆ ಇರಬೇಕಿತ್ತು"- ಖ್ಯಾತ ನಿರ್ಮಾಪಕನ ಹೇಳಿಕೆ ವೈರಲ್
ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಈಗ ಬಹುಬೇಡಿಕೆಯ ನಟಿಯಾಗಿ ಗುರ್ತಿಸಿಕೊಂಡಿದ್ಧಾರೆ. ಸ್ಟಾರ್ ನಟರ ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸುತ್ತಿದ್ದಾರೆ. ಆಕೆ ನಟಿಸಿದ ಸಿನಿಮಾಗಳು ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ರಶ್ಮಿಕಾ ಕೆಲಸದ ಬಗ್ಗೆ ಸಾಕಷ್ಟು ಜನ ಕೊಂಡಾಡುತ್ತಾರೆ. ಸದ್ಯ ಆಕೆ ನಟಿಸಿರುವ 'ದಿ ಗರ್ಲ್ ಫ್ರೆಂಡ್' ಚಿತ್ರದ ಟ್ರೈಲರ್ ರಿಲೀಸ್ ಆಗಿದೆ.
ಸದ್ಯ ರಶ್ಮಿಕಾ ಟಾಲಿವುಡ್ ಹಾಗೂ ಬಾಲಿವುಡ್ ಕಡೆ ಹೆಚ್ಚು ಫೋಕಸ್ ಮಾಡುತ್ತಿದ್ದಾರೆ. ಆಗೊಮ್ಮೆ ಈಗೊಮ್ಮೆ ಕಾಲಿವುಡ್ ಕಥೆಗಳನ್ನು ಕೇಳುತ್ತಿದ್ದಾರೆ. ಗೀತಾ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ರಾಹುಲ್ ರವಿಂದ್ರನ್ 'ದಿ ಗರ್ಲ್ ಫ್ರೆಂಡ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಕನ್ನಡ ನಟ ದೀಕ್ಷಿತ್ ಶೆಟ್ಟಿ ಚಿತ್ರದಲ್ಲಿ ಹೀರೊ ಆಗಿ ನಟಿಸಿರುವುದು ವಿಶೇಷ. ಕನ್ನಡ ನಟ, ನಟಿ ಒಟ್ಟಿಗೆ ಕಾಣಿಸಿಕೊಂಡಿರುವ ತೆಲುಗು ಸಿನಿಮಾ ಇದು.

ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ 'ದಿ ಗರ್ಲ್ ಫ್ರೆಂಡ್' ಸಿನಿಮಾ ತೆರೆಗೆ ಬರ್ತಿದೆ. ಟ್ರಯಾಂಗಲ್ ಲವ್ ಸ್ಟೋರಿ ಇರುವ ಈ ಸಿನಿಮಾ ನವೆಂಬರ್ 7ರಂದು ಬಿಡುಗಡೆ ಆಗುತ್ತಿದೆ. ಟ್ರೈಲರ್ ಸಖತ್ತಾಗಿದ್ದು ನೋಡುಗರ ಗಮನ ಸೆಳೆದಿದೆ. ಎಮೋಷನಲ್ ಲವ್ ಸ್ಟೋರಿ ಎನ್ನುವುದು ಗೊತ್ತಾಗುತ್ತಿದ್ದು ಕನ್‌ಫ್ಯೂಸ್ ಆಗುವಂತೆ ಟ್ರೈಲರ್ ಕಟ್ ಮಾಡಿದ್ದಾರೆ.
ರಶ್ಮಿಕಾ, ದೀಕ್ಷಿತ್ ಜೊತೆ ಅನು ಇಮಾನ್ಯುಯೆಲ್ ಮತ್ತೊಂದು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹೈದರಾಬಾದ್‌ನಲ್ಲಿ ಚಿತ್ರದ ಟ್ರೈಲರ್ ಲಾಂಚ್ ಈವೆಂಟ್ ನಡೀತು. ರಶ್ಮಿಕಾ ಸೇರಿ ಇಡೀ ಚಿತ್ರತಂಡ ಅಲ್ಲಿತ್ತು. ಅಂದಹಾಗೆ 'ದಿ ಗರ್ಲ್ ಫ್ರೆಂಡ್' ಚಿತ್ರವನ್ನು ನಟ ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ನಿರ್ಮಾಣ ಮಾಡಿದ್ದಾರೆ. ರಶ್ಮಿಕಾ ನಟನೆ ಹಾಗೂ ಸಹಕಾರದ ಬಗ್ಗೆ ಮಾತನಾಡುತ್ತಾ ಇಂತಹ ಮಗಳು ನನಗೆ ಬೇಕು ಎಂದು ನಿರ್ಮಾಪಕ ಅರವಿಂದ್ ಹೇಳಿರುವುದು ವೈರಲ್ ಆಗ್ತಿದೆ.
"ಇಂತಾದೊಂದು ಪಾತ್ರ ಮಾಡಲು ನಮ್ಮ ರಶ್ಮಿಕಾಗೆ ಮಾತ್ರ ಸಾಧ್ಯ. ಅತ್ಯುತ್ತಮ ನಟಿ ಪ್ರಶಸ್ತಿ ಬಂದರೂ ಅಚ್ಚರಿ ಪಡಬೇಕಿಲ್ಲ. ಆಕೆ ಅಷ್ಟು ಚೆನ್ನಾಗಿ ನಟಿಸಿದ್ದಾರೆ. ಇಂತಹ ಮಗಳು ನನಗಿದ್ದರೆ ಚೆನ್ನಾಗಿರುತ್ತಿತ್ತು ಅನಿಸುತ್ತದೆ. ನನಗೆ ಹೆಣ್ಣು ಮಕ್ಕಳು ಇಲ್ಲ, ಅದಕ್ಕೆ ಹೀಗೆ ಹೇಳ್ತಿದ್ದೀನಿ ಎಂದಿದ್ದಾರೆ. ಪ್ರೀ ರಿಲೀಸ್ ಈವೆಂಟ್‌ನಲ್ಲಿ ಈ ಬಗ್ಗೆ ಇನ್ನಷ್ಟು ಮಾತನಾಡ್ತೀವಿ. ವಿಜಯ್ ದೇವರಕೊಂಡ ಅವರನ್ನು ಅಲ್ಲಿಗೆ ಕರೆದುಕೊಂಡು ಬರುವ ಪ್ರಯತ್ನ ಮಾಡ್ತೀನಿ. ಬಂದರೆ ಚೆನ್ನಾಗಿರುತ್ತದೆ ಅಲ್ಲವೇ" ಎಂದು ಅಲ್ಲು ಅರವಿಂದ್ ಹೇಳಿದ್ದಾರೆ.
ದೀಕ್ಷಿತ್ ಶೆಟ್ಟಿ ಎಂತಹ ಇಂಟೆನ್ಸ್ ನಟ ಎನ್ನುವುದು ಈ ಚಿತ್ರದಲ್ಲಿ ನಿಮಗೆ ಗೊತ್ತಾಗುತ್ತದೆ ಎಂದು ಅರವಿಂದ್ ಹೇಳಿದ್ದಾರೆ. ಕುಂದಾಪುರ ಮೂಲಕ ದೀಕ್ಷಿತ್ ಈಗಾಗಲೇ ತೆಲುಗು ಸಿನಿಮಾಗಳಲ್ಲಿ ನಟಿಸಿ ಗೆದ್ದಿದ್ದಾರೆ. ಕನ್ನಡದಲ್ಲಿ 'ದಿಯಾ' ಸಿನಿಮಾ ಬಳಿಕ 'ಮುಗ್ಗುರು ಮೊನಗಾಳ್ಳು' ಎಂಬ ತೆಲುಗು ಚಿತ್ರದಲ್ಲಿ ನಟಿಸಿದ್ದರು. ನಾನಿ ಜೊತೆ ನಟಿಸಿದ 'ದಸರಾ' ಸಿನಿಮಾ ಒಳ್ಳೆ ಹೆಸರು ತಂದುಕೊಟ್ಟಿತ್ತು. ಇದೀಗ ' ದಿ ಗರ್ಲ್‌ಫ್ರೆಂಡ್' ಚಿತ್ರದ ಮೂಲಕ ಮತ್ತೆ ತೆಲುಗು ಪ್ರೇಕ್ಷಕರ ಮುಂದೆ ಹೋಗುತ್ತಿದ್ದಾರೆ.
ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ನಟನೆಯ 'ಗೀತಾಗೋವಿಂದಂ' ಚಿತ್ರವನ್ನು ಕೂಡ ಅಲ್ಲು ಅರವಿಂದ್ ನಿರ್ಮಾಣ ಮಾಡಿದ್ದರು. ಆ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಇದೀಗ ದಿ 'ಗರ್ಲ್ ಫ್ರೆಂಡ್' ಸಿನಿಮಾ ನಿರೀಕ್ಷೆ ಮೂಡಿಸಿದೆ. ರಶ್ಮಿಕಾ ನಟಿಸಿದ 'ಛಾವ' ಸಿನಿಮಾ ಈ ವರ್ಷ ಗೆದ್ದಿತ್ತು. 'ಸಿಕಂದರ್' ಸೋತಿತ್ತು. ದೀಪಾವಳಿ ಸಂಭ್ರಮದಲ್ಲಿ ಬಂದ 'ಥಮ್ಮ' ಸಿನಿಮಾ ಯಶಸ್ವಿ ಪ್ರದರ್ಶನ ಕಾಣ್ತಿದೆ. ಇದೆಲ್ಲದರ ನಡುವೆ ಶೀಘ್ರದಲ್ಲೇ ಗರ್ಲ್ ಫ್ರೆಂಡ್ ಆಗಿ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ.


Click it and Unblock the Notifications











