ಗೋವಾದಲ್ಲಿ ಕನ್ನಡ ತಾರೆಯರಿಗೆ ಅವಮಾನ: "ನಮ್ಮನ್ನು ದೂಷಿಸಬೇಡಿ" ಎಂದ ಅಲ್ಲು ಅರವಿಂದ್
ಇತ್ತೀಚೆಗೆ ಗೋವಾದಲ್ಲಿ 'ಸಂತೋಷಂ ಅವಾರ್ಡ್ ಸೌತ್ ಇಂಡಿಯಾ ಫಿಲ್ಮ್ ಅವಾರ್ಡ್ಸ್' ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕಾಗಿ ನಟ ರಮೇಶ್ ಅರವಿಂದ್, ಸಪ್ತಮಿ ಗೌಡ, ರಾಜವರ್ಧನ್, ಬಿ. ಸುರೇಶ್, ಶೈಲಜಾ ನಾಗ್ ಸೇರಿದಂತೆ ಹಲವರು ಗೋವಾಗೆ ತೆರಳಿದ್ದರು. ಆದರೆ ಕನ್ನಡ ತಾರೆಯರಿಗೆ ಸರಿಯಾದ ವ್ಯವಸ್ಥೆ ಇಲ್ಲದೇ ಅವಮಾನ ಮಾಡಲಾಗಿತ್ತು.
ಅರ್ಧಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭದಿಂದ ಬಿಟ್ಟು ತಾರೆಯರು ಬೆಂಗಳೂರಿಗೆ ವಾಪಸ್ ಆಗಿದ್ದರು. ಈ ಬಗ್ಗೆ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾಹಿತಿ ಹಂಚಿಕೊಂಡಿದ್ದರು. ಪ್ರಶಸ್ತಿ ಪ್ರದಾನ ಸಮಾರಂಭ ಎಂದು ಕರೆದು ತಮಗೆ ಕಸಿವಿಸಿ ಉಂಟು ಮಾಡಿದ್ದರ ಬಗ್ಗೆ ಹೇಳಿಕೊಂಡಿದ್ದರು. ಹಲವು ವರ್ಷಗಳಿಂದ ಸುರೇಶ್ ಕೊಂಡೇಟಿ 'ಸಂತೋಷಂ ಅವಾರ್ಡ್ಸ್' ಪ್ರಶಸ್ತಿ ನೀಡುತ್ತಾ ಬರುತ್ತಿದ್ದಾರೆ.

ತೆಲುಗು ಜರ್ನಲಿಸ್ಟ್ ಆಗಿರುವ ಸುರೇಶ್ ಕೊಂಡೇಟಿ ನಿರ್ಮಾಪಕರಾಗಿಯೂ ಟಾಲಿವುಡ್‌ನಲ್ಲಿ ಗುರ್ತಿಸಿಕೊಂಡಿದ್ದಾರೆ. ನಟ ಚಿರಂಜೀವಿ ಪಿಆರ್‌ಓ ಎನ್ನುವಂತೆ ತಮ್ಮನ್ನು ತಾವು ಬಿಂಬಿಸಿಕೊಂಡಿದ್ದಾರೆ. ಇದರ ಆಧಾರದ ಮೇಲೆಯೇ ಪ್ರಾಯೋಜರನ್ನು ಹಿಡಿದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಸಿಕೊಂಡು ಬರುತ್ತಿದ್ದಾರೆ. ಗೋವಾದಲ್ಲಿ ತಮಗಾದ ಅವಮಾನಕ್ಕೆ ಕನ್ನಡ ಸಿನಿಮಾ ತಾರೆಯರು ಸುರೇಶ್ ಕೊಂಡೇಟಿ ವಿರುದ್ಧ ಬೇಸರ ವ್ಯಕ್ತಪಡಿಸಿದ್ದರು.
ಇದೀಗ ಅಲ್ಲು ಅರವಿಂದ್ ಮಾತನಾಡಿ "ಈ ಬಾರಿ ಗೋವಾದಲ್ಲಿ ಪ್ರಶಸ್ತಿ ಸಮಾರಂಭವನ್ನು ಆಯೋಜಿಸಿದ್ದರು. ಕೆಲವು ಕಾರಣಗಳಿಂದ ಸುರೇಶ್ ಕೊಂಡೇಟಿ ವಿಫಲನಾಗಿದ್ದಾರೆ. ಸರಿಯಾಗಿ ನಿರ್ವಹಿಸಲು ಸಾಧ್ಯವಾಗಲಿಲ್ಲ. ಅಲ್ಲಿಗೆ ಹೋದವರು ಪರದಾಡುವಂತಾಯಿತು. ಆದರೆ ಮಾಧ್ಯಮಗಳಲ್ಲಿ ಆತ ಚಿರಂಜೀವಿ ಅವರ ಪಿಆರ್‌ಒ ಎಂದು ಹೇಳಲಾಗುತ್ತಿದೆ. ಹಾಗಾಗಿ ನಮ್ಮ ಪಿಆರ್‌ಒಗೆ ಕರೆ ಮಾಡಿ ಆತ ಪಿಆರ್‌ಒ ಎಂದು ಹೇಳಿದ್ದಾರಾ? ಎಂದು ಕೇಳಿದೆ. ಆತ ಯಾವುದೋ ಕಾರ್ಯಕ್ರಮಗಳಲ್ಲಿ ಚಿರಂಜೀವಿ ಜೊತೆ ಕಾಣಿಸಿಕೊಂಡ ಮಾತ್ರಕ್ಕೆ ಪಿಆರ್‌ಒ ಎಂದು ಕರೆಯುವುದು ತಪ್ಪಾಗುತ್ತದೆ."
"ಆತ ವೈಯಕ್ತಿವಾಗಿ ಈ ಪ್ರಶಸ್ತಿ ಪ್ರದಾನ ಸಮಾರಂಭ ನಡೆಸಿ ವಿಫಲರಾಗಿದ್ದಾರೆ. ಇದರಿಂದ ಬೇರೆ ಭಾಷೆಯವರು ಕಷ್ಟ ಎದುರಿಸಿದರು. ಅವರು ಕೂಡ ತೆಲುಗು ಇಂಡಸ್ಟ್ರಿಯನ್ನೂ ಟೀಕಿಸುತ್ತಿದ್ದಾರೆ. ಇದು ಒಬ್ಬ ವ್ಯಕ್ತಿ ಮಾಡಿದ ತಪ್ಪು. ತೆಲುಗು ಇಂಡಸ್ಟ್ರಿಯವರು ಹೀಗೆ ಎಂದು ಮಾತನಾಡುತ್ತಿರುವವರನ್ನು ನೋಡಿ ನನಗೆ ಬೇಸರವಾಗಿದೆ. ಒಬ್ಬ ವ್ಯಕ್ತಿ ಮಾಡಿದ್ದಕ್ಕೆ ಎಲ್ಲರನ್ನು ಆಪಾದಿಸುವುದು ಸರಿಯಲ್ಲ. ಆತ ನಮ್ಮ ಕುಟುಂಬದ ಯಾರೊಬ್ಬರಿಗೂ ಪಿಆರ್‌ಓ ಅಲ್ಲ. ಇದು ಆತನ ವೈಯಕ್ತಿಕ ವೈಫಲ್ಯ. ದಯವಿಟ್ಟು ಇದನ್ನು ತೆಲುಗು ಇಂಡಸ್ಟ್ರಿ ಮೇಲೆ ತರಬೇಡಿ." ಎಂದು ಅಲ್ಲು ಅರವಿಂದ್ ಹೇಳಿದ್ದಾರೆ.
ಈ ಬಾರಿ ಕನ್ನಡದ ಕ್ರಾಂತಿ, ವೇದ ಹಾಗೂ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರಗಳಿಗೆ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಘೋಷಣೆಯಾಗಿತ್ತು. ಹಾಗಾಗಿ ಅದಕ್ಕೆ ಸಂಬಂಧಿಸಿದವರನ್ನು ಆಹ್ವಾನಿಸಲಾಗಿತ್ತು. ಆದರೆ ಗೋವಾಗೆ ಹೋಗಿದ್ದ ಕನ್ನಡ ಸಿನಿಮಾ ತಾರೆಯರಿಗೆ ಸರಿಯಾದ ಆತಿಥ್ಯ ನೀಡದೆ ಅಪಮಾನ ಮಾಡಲಾಗಿತ್ತು.
ಅವ್ಯವಸ್ಥೆ ನಡುವೆಯೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆದಿದೆ. 'ಕ್ರಾಂತಿ' ಚಿತ್ರಕ್ಕೆ ಪ್ರಶಸ್ತಿ ನೀಡುತ್ತಿದ್ದಂತೆ ವೇದಿಕೆಯಲ್ಲಿ ಕರೆಂಟ್ ಆಫ್ ಮಾಡಿ ಎಡವಟ್ಟು ಮಾಡಲಾಗಿದೆ. ಕೊನೆಗೆ ಬೇಸರಗೊಂಡ ಕನ್ನಡ ತಾರೆಯರು ಕಾರ್ಯಕ್ರಮ ಬಾಯ್ಕಾಟ್ ಮಾಡಿ ಬೆಂಗಳೂರಿಗೆ ಹೊರಟು ಬಂದಿದ್ದರು.
ಸುಮಾರು 30ರಿಂದ 35 ಮಂದಿ ಕನ್ನಡ ಸಿನಿಮಾ ತಾರೆಯರು ಕಾರ್ಯಕ್ರಮಕ್ಕಾಗಿ ಗೋವಾಗೆ ತೆರಳಿದ್ದರು. ಕನ್ನಡ ತಾರೆಯರನ್ನು ಈ ರೀತಿ ನಡೆಸಿಕೊಂಡ ಬಗ್ಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ತಮಿಳು ತಾರೆಯರು ಕೂಡ ಸಂತೋಷಂ ಫಿಲ್ಮ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಭಾಗಿಯಾಗದಿರಲು ನಿರ್ಧರಿಸಿದ್ದರು. ಆಯೋಜಕರ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಅಸಮಾಧಾನ ಹೊರ ಹಾಕಿದ್ದರು.


Click it and Unblock the Notifications











