RRR ಚಿತ್ರವನ್ನು ಹೊಗಳಿದ ಅಲ್ಲು ಅರ್ಜುನ್, ಮಹೇಶ್ ಬಾಬು!
'RRR' ಸಿನಿಮಾ ಚಿತ್ರರಂಗದಲ್ಲಿ ಬಿರುಗಾಳಿ ಎಬ್ಬಿಸಿದೆ. ಈ ಚಿತ್ರದ ಬಗ್ಗೆ ಪ್ರೇಕ್ಷಕರು ಮಾತ್ರ ಅಲ್ಲ, ಟಾಲಿವುಡ್ನ ನಟರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಸಾಕಷ್ಟು ನಟರು, ನಿರ್ದೇಶಕರು ರಾಜಮೌಳಿ ನಿರ್ದೇಶನದ RRR ಚಿತ್ರಕ್ಕೆ ಬೆಂಬಲ ನೀಡಿದ್ದಾರೆ. ಈ ಚಿತ್ರವನ್ನು, ಕಲಾವಿದರನ್ನು ಕೊಂಡಾಡುತ್ತಾ ಇದ್ದಾರೆ. ಚಿತ್ರವನ್ನು ನೋಡಿದ ಟಾಲಿವುಡ್ನ ಸ್ಟಾರ್ ನಟ ಅಲ್ಲು ಅರ್ಜುನ್ ಮತ್ತು ಮಹೇಶ್ ಬಾಬು ಮಾತನಾಡಿದ್ದಾರೆ.
ಅಲ್ಲು ಅರ್ಜುನ್ ಅವರು ತೆಲುಗು ಚಿತ್ರರಂಗದ ಟಾಪ್ ಸ್ಟಾರ್ ನಟ. ಅಲ್ಲು ಅರ್ಜುನ್ ಅನೇಕ ಬಾರಿ ಹಲವು ಸಿನಿಮಾಗಳನ್ನು ನೋಡಿ ಚಿತ್ರ ಹೇಗಿದೆ ಎನ್ನುವ ಬಗ್ಗೆ ಮಾತನಾಡಿದ್ದಾರೆ. ಈಗ 'RRR' ಚಿತ್ರವನ್ನು ವೀಕ್ಷಿಸಿದ್ದಾರೆ. ಸಿನಿಮಾ ನೋಡಿ ಅವರು ಖುಷಿಪಟ್ಟಿದ್ದಾರೆ, ಜೊತೆಗೆ ಚಿತ್ರದ ವಿಮರ್ಶೆ ಮಾಡಿದ್ದಾರೆ. ಈ ಬಗ್ಗೆ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ ನಟ ಅಲ್ಲು ಅರ್ಜುನ್.
"RRR ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಎಂತಹ ಅದ್ಭುತ ಚಿತ್ರ, ರಾಜಮೌಳಿ ಅವರ ದೃಷ್ಟಿಕೋನಕ್ಕೆ ನನ್ನ ಸಲಾಂ. ಅತ್ಯುತ್ತಮ ಪರ್ಫಾರ್ಮೆನ್ಸ್ ನೀಡಿದ ನನ್ನ ಸಹೋದರ ರಾಮ್ ಚರಣ್ ಬಗ್ಗೆ ತುಂಬಾ ಹೆಮ್ಮೆ ಇದೆ. ಜ್ಯೂ.ಎನ್‌ಟಿಆರ್ ಅದ್ಭುತ ನಟನೆಗೆ ನನ್ನ ವಿಶೇಷ ಗೌರವ ಇದೆ. ಅಜಯ್ ದೇವಗನ್ ಹಾಗೂ ಆಲಿಯಾ ಕೂಡ ಉತ್ತಮವಾಗಿ ಪಾತ್ರ ನಿರ್ವಹಣೆ ಮಾಡಿದ್ದಾರೆ. ಭಾರತೀಯ ಸಿನಿಮಾದ ಬಗ್ಗೆ ಹೆಮ್ಮೆ ಪಡುವಂತೆ ಮಾಡಿದ್ದಕ್ಕಾಗಿ 'RRR' ತಂಡದ ಎಲ್ಲರಿಗೂ ಧನ್ಯವಾದಗಳು" ಎಂದಿದ್ದಾರೆ ಅಲ್ಲು ಅರ್ಜುನ್. ಇದರ ಜೊತೆಗೆ ಸಿನಿಮಾ ತಾಂತ್ರಿಕ ವರ್ಗದಲ್ಲಿ ಕೆಲಸ ಮಾಡಿದವರ ಬಗ್ಗೆಯೂ ಅವರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

RRR ಚಿತ್ರದ ಬಗ್ಗೆ ನಟ ಮಹೇಶ್ ಬಾಬು ಕೂಡ ಮಾತನಾಡಿದ್ದಾರೆ. ಸಾಲು ಸಾಲು ಟ್ವೀಟ್ ಮಾಡಿ ಮಹೇಶ್ ಬಾಬು ಚಿತ್ರವನ್ನು ಕೊಂಡಾಡಿದ್ದಾರೆ. ರಾಜಮೌಳಿ ನಿರ್ದೇಶನ, ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಪಾತ್ರದ ಬಗ್ಗೆ ಮಾತನಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿ ಚಿತ್ರತಂಡಕ್ಕೆ ಶುಭಾಷಯ ಹೇಳಿದ್ದಾರೆ.
RRR ಚಿತ್ರ ಮೊದಲ ದಿನದ ಕಲೆಕ್ಷನ್ ಜೊತೆಗೆ ದಾಖಲೆ ಬರೆದಿದೆ. ಚಿತ್ರ 200 ಕೋಟಿಯ ಗಡಿ ದಾಟಿ ಸೈ ಎನಿಸಿಕೊಂಡಿದೆ. ಇನ್ನು, ಆಂಧ್ರ ಹಾಗೂ ತೆಲಂಗಾಣದಲ್ಲಿ ಸಿನಿಮಾ ಅಬ್ಬರಿಸಿ ಬೊಬ್ಬಿರಿದಿದೆ. ಈ ಚಿತ್ರ ಎರಡೂ ರಾಜ್ಯಗಳಿಂದ 120 ಕೋಟಿ ಕಲೆ ಹಾಕಿದೆ. ಇನ್ನು ಹಿಂದಿಯಲ್ಲಿ ಪ್ರತ್ಯೇಕವಾಗಿ 25 ಕೋಟಿ ರೂಪಾಯಿ ಕಲೆ ಹಾಕಿದೆ.


Click it and Unblock the Notifications











