ವಿಚಿತ್ರ ಮೃಗದ ಅವತಾರದಲ್ಲಿ ಅಲ್ಲು ಅರ್ಜುನ್; ಅಟ್ಲಿ ನಿರ್ದೇಶನದ ಸಿನಿಮಾ ಪೋಸ್ಟರ್ ವೈರಲ್
ತೆಲುಗು ನಟ ಅಲ್ಲು ಅರ್ಜುನ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಕ್ಷಣಗಣನೆ ಆರಂಭಿದ್ದಾರೆ. 'ಪುಷ್ಪ-2' ಬಳಿಕ ಎರಡು ಸಿನಿಮಾಗಳಿಗೆ ಸ್ಟೈಲಿಶ್ ಸ್ಟಾರ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ತಮಿಳು ನಿರ್ದೇಶಕ ಅಟ್ಲಿ ನಿರ್ದೇಶನ ಸೈನ್ಸ್ ಫಿಕ್ಷನ್ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಅಲ್ಲು ಅರ್ಜುನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿವೀಲ್ ಆಗಲಿದೆ.
ಅಲ್ಲು ಅರ್ಜುನ್ ಹಾಗೂ ಅಟ್ಲಿ ಕಾಂಬಿನೇಷನ್ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಸೇರಿದಂತೆ ಘಟಾನುಘಟಿ ಕಲಾವಿದರು ನಟಿಸುತ್ತಿದ್ದಾರೆ. ಸನ್ ಪಿಕ್ಚರ್ಸ್ ನಿರ್ಮಾಣದಲ್ಲಿ ಹಾಲಿವುಡ್ ಸಿನಿಮಾಗಳನ್ನು ನೆನಪಿಸುವಂತೆ ಸಿನಿಮಾ ಕಟ್ಟಿಕೊಡಲಾಗ್ತಿದೆ. ಭರದಿಂದ ಚಿತ್ರೀಕರಣ ನಡೀತಿದೆ. ಚಿತ್ರದಲ್ಲಿ ಅಲ್ಲು ಅರ್ಜುನ್ ಪಾತ್ರ ಏನು? ನಾಯಕಿ ಯಾರು ಎನ್ನುವ ಚರ್ಚೆ ನಡೀತಿದೆ. ಇದು ರೆಗ್ಯುಲರ್ ಕಮರ್ಷಿಯಲ್ ಸಿನಿಮಾಗಳಿಗಿಂತ ಭಿನ್ನವಾದ ಸಿನಿಮಾ ಆಗಿರಲಿದೆ.

ಹಾಲಿವುಡ್ ವಿಎಫ್‌ಎಕ್ಸ್ ತಂಡ ಚಿತ್ರಕ್ಕಾಗಿ ಕೆಲಸ ಮಾಡ್ತಿದೆ. AA22x26 ಎನ್ನುವ ಟೈಟಲ್‌ನಲ್ಲಿ ಸಿನಿಮಾ ಕೆಲಸಗಳು ನಡೀತಿದೆ. ಅಲ್ಲು ಅರ್ಜುನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಟೈಟಲ್ ಸಮೇತ ಹೊಸ ಪೋಸ್ಟರ್ ರಿಲೀಸ್ ಆಗಲಿದೆ. ಅದಕ್ಕೂ ಮುನ್ನ ಪ್ರೀ-ಪೋಸ್ಟರ್ ಅನಾವರಣ ಮಾಡಿ ಚಿತ್ರತಂಡ ಕುತೂಹಲ ಮೂಡಿಸಿದೆ. ವಿಚಿತ್ರ ಜಂತುವಿನ ಕೈ ಆಕಾರವನ್ನು ಪೋಸ್ಟರ್‌ನಲ್ಲಿ ನೋಡಬಹುದು. ಈ ಮೂಲಕ ಅಲ್ಲು ಅರ್ಜುನ್ ಪಾತ್ರ, ಲುಕ್ ಬಗ್ಗೆ ನಿರೀಕ್ಷೆ ಹೆಚ್ಚುವಂತೆ ಮಾಡಲಾಗಿದೆ.
'ಜವಾನ್' ಬಳಿಕ ಅಟ್ಲಿ ಸೈಲೆಂಟ್ ಆಗಿದ್ದರು. 'ಪುಷ್ಪ'-2 ಸಿನಿಮಾ ತೆರೆಕಂಡು ಹಿಟ್ ಆಗುವವರೆಗೆ ಯಾವುದೇ ಚಿತ್ರವನ್ನು ಸ್ಟೈಲಿಶ್ ಸ್ಟಾರ್ ಒಪ್ಪಿಕೊಂಡಿರಲಿಲ್ಲ. ಬಳಿಕ ಇವರಿಬ್ಬರು ಜೊತೆಯಾಗಿ ಸಿನಿಮಾ ಘೋಷಿಸಿದ್ದರು. ಸಹಜವಾಗಿಯೇ ಕುತೂಹಲ ಮೂಡುವಂತಾಯಿತು. 'ಪುಷ್ಪ'-2 ಸಿನಿಮಾ 1600 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ. ಅದಕ್ಕಿಂತ ದೊಡ್ಡ ಸಿನಿಮಾ ಮಾಡಲು ಅಲ್ಲು ಅರ್ಜುನ್ ಈಗ ಅಟ್ಲಿ ಜೊತೆ ಕೈ ಜೋಡಿಸಿದ್ದಾರೆ.
ಅಂದಹಾಗೆ ಸಿನಿಮಾ ಟೈಟಲ್ ಏನು ಎನ್ನುವ ಬಗ್ಗೆ ಕೂಡ ಬಹಳ ಕುತೂಹಲ ಮೂಡಿದೆ. ಟೈಟಲ್ ಲೀಕ್ ಆಗದಂತೆ ಚಿತ್ರತಂಡ ಎಚ್ಚರ ವಹಿಸಿದ್ದು ಅಧಿಕೃತ ಪೋಸ್ಟರ್ ಸಮೇತ ಗೊತ್ತಾಗಲಿದೆ. ಈ ಹಿಂದೆ ಶಂಕರ್ ನಿರ್ದೇಶನದ 'I' ಚಿತ್ರದಲ್ಲಿ ಚಿಯಾನ್ ವಿಕ್ರಮ್ ಕೂಡ ಇದೇ ರೀತಿ ವಿಚಿತ್ರ ಅವತಾರದಲ್ಲಿ ದರ್ಶನ ಕೊಟ್ಟಿದ್ದರು. ಆದರೆ ಕೇವಲ ಒಂದು ಹಾಡಿನಲ್ಲಿ ಮಾತ್ರ ಅವರನ್ನು ಆ ರೀತಿ ತೋರಿಸಲಾಗಿತ್ತು. ಶಂಕರ್ ಸಿನಿಮಾಗಳಲ್ಲಿ ಸಹ ನಿರ್ದೇಶಕರಾಗಿ ಅಟ್ಲಿ ಕೆಲಸ ಮಾಡಿದ್ದರು. ಹಾಗಾಗಿ ಗುರುವಿನ ಸಿನಿಮಾದಿಂದ ಪ್ರೇರಣೆಗೊಂಡು ಈ ಚಿತ್ರ ಕಟ್ಟಿಕೊಡುತ್ತಿದ್ದಾರೆ ಎನ್ನುವ ಅನುಮಾನ ಶುರುವಾಗಿದೆ.


Click it and Unblock the Notifications











